ಸಂಪೂರ್ಣ ಹದಗೆಟ್ಟ ಶೇವಾಳಿ ರಸ್ತೆ
Team Udayavani, Jul 21, 2020, 9:42 AM IST
ಜೋಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇವಾಳಿ ಗ್ರಾಮದ ಕಡೀಕರಣ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡಮಯವಾದ ಕೆಸರಿನ ಗದ್ದೆಯಂತಾಗಿ ಸಾರ್ವಜನಿಕರ ಓಡಾಡಲು ತುಂಬಾ ಕಷ್ಟಕರವಾಗಿ ಪರಿಣಮಿಸಿದೆ.
ಯರಮುಖದಿಂದ 1.2 ಕಿ.ಮೀ. ದೂರವಿರುವ ಈ ರಸ್ತೆಗೆ ಕಳೆದ ನಾಲ್ಕುವರ್ಷದ ಹಿಂದೆ 5 ಲಕ್ಷ ರೂ. ಖರ್ಚುಮಾಡಿ ಖಡೀಕರಣ ಮಾಡಲಾಗಿತ್ತು. ಆದರೆ ಈ ಖಡಿಗಳು ಈಗ ಮೇಲೆದ್ದು ಸಂಪೂರ್ಣ ರಸ್ತೆ ಹೊಂಡಮಯವಾಗಿದೆ. ರಸ್ತೆ ಕೆಸರು ತುಂಬಿಕೊಂಡು ವಾಹನ ಸವಾರರು ಓಡಾಡುವುದು ತುಂಬಾ ಕಷ್ಟಸಾಧ್ಯವಾಗಿದೆ.
ಈ ಬಗ್ಗೆ ಕಳೆದ ಬಾರಿಯ ಸರಕಾರದ ಅವಧಿಯಲ್ಲಿ ಗ್ರಾಮಸ್ಥರು ಅಂದಿನ ಸಚಿವರಾಗಿದ್ದ ಹಾಗೂ ಹಾಲಿ ಶಾಸಕರೂ ಆಗಿರುವ ಆರ್ .ವಿ. ದೇಶಪಾಂಡೆ ಅವರಿಗೆ ಮನವಿ ಮಾಡಿದ್ದರು. ಅದರಂತೆ ಸಚಿವರು ಅಂದು ಈ ರಸ್ತೆಗೆ 10 ಲಕ್ಷ ರೂ. ಮಂಜೂರಿ ಕೂಡಾ ನೀಡಿದ್ದರು. ಅನುದಾನ ಮಂಜೂರಿಯಾಗಿದ್ದ ಬಗ್ಗೆ ಅಂದಿನ ಪಂಚಾಯತ್ ರಾಜ ಇಂಜಿನಿಯರಿಂಗ್ ಉಪವಿಭಾಗದ ಅಧಿಕಾರಿ ಎ.ವೈ. ತೆಗ್ಗಿ ಕೂಡಾ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಶೀಘ್ರ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರು. ಇನ್ನಷ್ಟೆ ಕಾಮಗಾರಿ ಚಾಲನೆ ಆಗಲಿದೆ ಎನ್ನುವ ಆಶೆಯಲ್ಲಿದ್ದ ಗ್ರಾಮಸ್ಥರ ಕನಸು ಇನ್ನು ನನಸಾಗಲೇ ಇಲ್ಲ.
ಕಳೆದೆರಡು ವರ್ಷಗಳಿಂದ ಕಾಮಗಾರಿ ಆಗದೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿದ್ದ ಈ ರಸ್ತೆ ಕೆರೆತೋಟ, ಶೆವಾಳಿ, ಕಾರೇಮನೆ, ರಾಂಪಾಲಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ಯಾವ ವಾಹನ ಸವಾರರು ಓಡಾಡಲಾಗದೆ ಕೆಲಸ ಬಿಟ್ಟು ಮನೆಯಲ್ಲಿ ಗಾಡಿಗಳನ್ನು ನಿಲ್ಲಿಸಿಡುವಂತಾಗಿದೆ. ವಿದ್ಯಾರ್ಥಿಗಳು, ಮಹಿಳೆಯರು ಈ ರಸ್ತೆಯಲ್ಲಿ ಮಳೆಯ ಅಬ್ಬರದ ನಡುವೆ ಸಂಚರಿಸಲಾಗದೆ ಕಷ್ಟಪಡುವಂತಾಗಿದೆ. ಈ ದುಸ್ಥಿತಿ ಬಗ್ಗೆ ಸ್ಥಳಿಯ ಶಾಕರಾದರು ಗಮನ ಹರಿಸಿ, ಈ ಅವ್ಯವಸ್ಥೆ ಸುಧಾರಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.