ಉತ್ತರ ಕನ್ನಡದಲ್ಲಿ ಪಕ್ಷಾಂತರವೇ ಸಿದ್ಧಾಂತ: ಕಾಲೆಳೆಯುವುದೇ ಕಾಯಕ
Team Udayavani, Apr 11, 2018, 12:41 PM IST
ಹೊನ್ನಾವರ: ಚುನಾವಣೆ ಬರುತ್ತಿದ್ದಂತೆ ಟಿಕೆಟಿಗಾಗಿ ಪೈಪೋಟಿ ಸಾಮಾನ್ಯ. ಯಾರೋ ಒಬ್ಬರು ಟಿಕೆಟ್ ಪಡೆಯುತ್ತಾರೆ. ಟಿಕೆಟ್ ಸಿಗದವರು ಪಕ್ಷದೊಳಗಿನ ಭಿನ್ನಾಭಿಪ್ರಾಯ, ತಾತ್ವಿಕ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಇತ್ಯಾದಿ ಮರ್ಯಾದೆ ಶಬ್ಧವನ್ನು ಬಳಸುತ್ತಾ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಚುನಾವಣೆಯಲ್ಲಿ ಗುಪ್ತವಾಗಿ, ಬಹಿರಂಗವಾಗಿಯೇ ಪ್ರಚಾರ ಮಾಡುತ್ತಾರೆ. ಚುನಾವಣೆ ನಂತರ ಎಲ್ಲ ಮರೆತು ಅಭಿವೃದ್ಧಿಗೆ ಕೈಜೋಡಿಸುತ್ತಾರೆ. ಉತ್ತರ ಕನ್ನಡದಲ್ಲಿ ಮಾತ್ರ ಈ ದ್ವೇಷ-ಪಕ್ಷದ್ರೋಹ ಗುಪ್ತಗಾಮಿನಿಯಾಗಿ ಹಲವು ದಶಕಗಳಾದರೂ ಹರಿಯುತ್ತಲೇ ಇರುತ್ತದೆ.
ವೈಯಕ್ತಿಕ ದ್ವೇಷ ಮರೆತು ಕಹಿನುಂಗಿ ಗೆದ್ದವರು, ಸೋತವರು ಒಟ್ಟಾಗಿ ಕೆಲಸ ಮಾಡುತ್ತಾ ಬಂದ ದಕ್ಷಿಣಕನ್ನಡ, ಧಾರವಾಡ, ಶಿವಮೊಗ್ಗಾ, ಮೊದಲಾದ ಜಿಲ್ಲೆಗಳು ಅಭಿವೃದ್ಧಿ ಕಂಡಿವೆ. ಜಿಲ್ಲೆಯಲ್ಲಿ ಪಕ್ಷಗಳ ನಡುವಿನ ದ್ವೇಷಕ್ಕಿಂತ ಪಕ್ಷಗಳೊಳಗಿನ ದ್ವೇಷಗಳು ಕಾಂಗ್ರೆಸ್, ಬಿಜೆಪಿಗೆ ಸೋಲುಣಿಸಿವೆ.
ಕಡವೆ ಶ್ರೀಪಾದ ಹೆಗಡೆ, ರಾಮಕೃಷ್ಣ ಹೆಗಡೆ ಇಬ್ಬರೂ ಕಾಂಗ್ರೆಸ್‌ನಲ್ಲಿದ್ದರೂ ಇವರ ರಾಜಕೀಯ ದ್ವೇಷ, ಸಾಧನೆ ಹಿಂದೆ ಮನೆಮಾತಾಗಿತ್ತು. ಮಾರ್ಗರೇಟ್ ಆಳ್ವಾ ಕೇಂದ್ರ, ದೇಶಪಾಂಡೆ ರಾಜ್ಯದ ರಾಜಕೀಯ ನೋಡಿಕೊಂಡಿದ್ದರೆ ಇಬ್ಬರೂ ಗೆಲ್ಲುತ್ತಿದ್ದರು. ಜಿಲ್ಲೆ ಉದ್ಧಾರ ಆಗುತ್ತಿತ್ತು. ಅನಂತಕುಮಾರ ಸತತ ಗೆಲುವಿಗೆ ಇವರೇ ಅನುಕೂಲ ಮಾಡಿಕೊಟ್ಟರು ಎಂಬುದು ಜಿಲ್ಲೆಯಿಂದ ದಿಲ್ಲಿಯ ತನಕ ಗೊತ್ತಿದೆ. ರಾಜ್ಯಪಾಲೆಯಾಗಿ ಹೋದ ಆಳ್ವಾ ಪುನಃ ಜಿಲ್ಲೆಯ ರಾಜಕೀಯದಲ್ಲಿ ಸಕ್ರೀಯರಾಗಿದ್ದು ತಮ್ಮ ಬಳಗಕ್ಕೆ ಅಥವಾ ದೇಶಪಾಂಡೆ ವಿರೋಧಿ ಗಳಿಗೆ ಟಿಕೆಟ್ ಕೊಡಿಸಲು ಯತ್ನಿಸಿದ್ದು
ಗುಪ್ತವೇನಲ್ಲ.
ಕಳೆದ ಚುನಾವಣೆಯಲ್ಲಿ ಜೆ.ಡಿ. ನಾಯ್ಕ ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಹಿರಿಯ ಕಾಂಗ್ರೆಸ್ಸಿಗರೇ ಅಡ್ಡಗಾಲು ಹಾಕಿಸಿದ್ದು ಎಲ್ಲರಿಗೂ ಗೊತ್ತು. ಸೋತ ಮೇಲೂ ಕಾಂಗ್ರೆಸ್‌ನಲ್ಲಿದ್ದ ಜೆ.ಡಿ. ನಾಯ್ಕರನ್ನು ಮೂಲೆಗೆ ತಳ್ಳಿದಾಗ ಬಿಜೆಪಿಗೆ ಹೋಗುವುದು ಅವರಿಗೆ ಅನಿವಾರ್ಯವಾಯಿತು.
ಕುಮಟಾದ ಡಾ| ಜಿ.ಜಿ. ಹೆಗಡೆ, ಯಲ್ಲಾಪುರ ಪ್ರಮೋದ ಹೆಗಡೆ ಇವರೆಲ್ಲಾ ಪರಿಣಿತ ರಾಜಕೀಯ ಆಟಗಾರರ ಪಾಲಿಗೆ ಅಥವಾ ಕಾಲಿಗೆ ಸಿಕ್ಕ ಚೆಂಡಿನಂತಾಗಿದ್ದಾರೆ. ಮಾಜಿ ಸಚಿವ ಆರ್.ಎನ್. ನಾಯ್ಕ ಬಿಜೆಪಿಗೆ ಹೋಗಿ ಕಾಂಗ್ರೆಸ್ಸಿಗೆ ಬಂದಿದ್ದಾರೆ. ಯಡಿಯೂರಪ್ಪನವರು ಕರೆದಾಗ ಜೆಡಿಎಸ್ ಬಿಡದಿದ್ದ ದಿನಕರ ಶೆಟ್ಟಿ ಈಗ ಬಿಜೆಪಿಗೆ ಹೋಗಿದ್ದಾರೆ.
ಆಗ ಸೋತಿದ್ದ ಸೂರಜ್‌ಗೆ ರಾಜಕೀಯ ಭವಿಷ್ಯ ಕಷ್ಟದಲ್ಲಿದೆ. ಎರಡು ಬಾರಿ ಶಾಸಕತ್ವ ಅನುಭವಿಸಿದ ಡಾ| ಎಂ.ಪಿ. ಕರ್ಕಿ ಶಶಿಭೂಷಣ ಹೆಗಡೆಗೆ ಟಿಕೇಟ್ ಸಿಕ್ಕಾಗ ಎರಡು ಬಾರಿ ಬಹಿರಂಗವಾಗಿಯೇ ವಿರೋಧಿ ಸಿ ಸೋಲಿಸಿದ ಕೀರ್ತಿ ಪಡೆದರು. ಶಶಿಭೂಷಣ ಈಗ ಜೆಡಿಎಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಹಿರಿಯ ಕಾಂಗ್ರೆಸ್ಸಿಗ ರಮಾನಂದ ನಾಯಕರನ್ನು ನಿಲ್ಲಿಸಿದವರು ಗೆಲ್ಲಿಸುವ ಪ್ರಯತ್ನಮಾಡಲಿಲ್ಲ.
ಇನ್ನೊಬ್ಬರು ತಲೆ ಎತ್ತದಂತೆ, ಯಾವ ಸಂಘಟನೆಗೂ ಮೂಗು ತೂರಿಸದಂತೆ ಪಕ್ಷದ ಕಾರ್ಯಕರ್ತರನ್ನು ಚದುರಂಗದ ದಾಳದಂತೆ ಬಳಸುತ್ತಿರುವ ಅನಂತಕುಮಾರ ಆಟ ಕಾಗೇರಿಯ ಹೊರತಾಗಿ ಎಲ್ಲೆಡೆ ಯಶಸ್ವಿ ನಡೆದಿದೆ. ಅಧಿಕಾರ ಇದ್ದಾಗ ಯೋಜನೆ ಸ್ವಾಗತಿಸುವ, ಅಧಿ ಕಾರ ಕಳೆದಾಗ ಯೋಜನೆ ವಿರೋಧಿ ಸುವ ಜಿಲ್ಲೆಯ ರಾಜಕಾರಣಿಗಳು ಇತ್ತೀಚಿನ ವರ್ಷದಲ್ಲಿ ಏನೇ ಆದರೂ ತಮಗೆ ಸಂಬಂಧವಿಲ್ಲ ಅನ್ನುವಂತಿದ್ದಾರೆ. ಒಂದು ಪಕ್ಷದಲ್ಲಿದ್ದು ಒಂದಲ್ಲ ಒಂದು ಅಧಿ ಕಾರ ಅನುಭವಿಸಿ ಮತ್ತೆ ಸಿಗದಿದ್ದರೆ ಆ ಪಕ್ಷಕ್ಕೆ ದ್ರೋಹಮಾಡಿ ಇನ್ನೊಂದು ಪಕ್ಷಕ್ಕೆ ಹಾರಿ ತತ್ವ ಸಿದ್ಧಾಂತದ ಮಾತನಾಡುತ್ತಾ ಹೊಸ ಪೀಳಿಗೆಯನ್ನು ನಿರಾಸೆಗೊಳಿಸಿವೆ.
ಕಾರ್ಯಕರ್ತರು ತಮ್ಮ ಹಿಂದಿನ ಸೇವೆಯನ್ನು, ಸೋಲನ್ನು ಮರೆತು ಗೆಲ್ಲಬಹುದು ಎಂಬ ಚುನಾವಣೆ ಬಂದಾಗ ಇನ್ನೊಂದು ಪಕ್ಷದ ಸೋತವನನ್ನು ತಂದು ಗೆಲ್ಲಿಸಲು ಸಹಕಾರ ನೀಡಿ ಎಂದು ಹೇಳಿದರೆ ಯಾರು ಸಹಕಾರ ನೀಡಬಲ್ಲರು? ಎಲ್ಲ ಕಾಲದಲ್ಲೂ ಗುಪ್ತಗಾಮಿನಿಯಾಗಿ ಹರಿಯುವ ರಾಜಕೀಯ ದ್ವೇಷ, ಸ್ವಪ್ರತಿಷ್ಠೆ ಜಿಲ್ಲೆಯ ರಾಜಕೀಯದ ಪ್ರತಿಭೆಗಳನ್ನು ಚಿವುಟಿಹಾಕುತ್ತಿದೆ, ಅಭಿವೃದ್ಧಿಯನ್ನು ಭಸ್ಮಗೊಳಿಸಿವೆ.
ಒಂದೇ ಉದಾಹರಣೆ
ಸ್ವಾತಂತ್ರ್ಯ ಬಂದ ಮೇಲೆ ಅಧಿ ಕಾರಕ್ಕಾಗಿ ಹಪಹಪಿಸುವವರ ಸಂಖ್ಯೆ ಹೆಚ್ಚುತ್ತಲೇ ಹೋಗಿದೆ. ಪ್ರಥಮ ಜನಪ್ರತಿನಿಧಿ ಸಭೆಗೆ ಶಿರಸಿ ಮೋಟಿನ್ಸರ್ ತಿಮ್ಮಪ್ಪ ಹೆಗಡೆಯವರು ನಾಮಕರಣಗೊಂಡಿದ್ದರು. ಅವರಿಗೆ ಮಂತ್ರಿಸ್ಥಾನ ಸಿಗಲಿದೆ ಎಂಬ ಸುದ್ಧಿ ಬಂತು. ಆಗ ಮಾತ್ರ ಪ್ರಥಮ ವಿಧಾನಸಭೆ ಚುನಾವಣೆ ನಡೆದಿತ್ತು. ನಾನು ಮಂತ್ರಿಯಾಗುವುದಿಲ್ಲ. ಜನರಿಂದ ನೇರ ಆಯ್ಕೆಯಾದ ರಾಮಕೃಷ್ಣ ಹೆಗಡೆಯನ್ನು ಮಂತ್ರಿಮಾಡಿ ಎಂದು ಮೊಟಿನ್ಸರ್ ಹೇಳಿದರು. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಇದೊಂದೇ ಉದಾಹರಣೆ.
ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.