ಅಳ್ವೆಕೋಡಿ ಸಿಹಿ ಈರುಳ್ಳಿಗೆ ಬಹುಬೇಡಿಕೆ
Team Udayavani, Apr 27, 2022, 10:56 AM IST
ಕುಮಟಾ: ಬೇಸಿಗೆ ಬಂತೆಂದರೆ ತಾಲೂಕಿನ ಅಳ್ವೆಕೋಡಿಯಿಂದ ಹಂದಿಗೋಣ ವರೆಗಿನ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿ ಸಾಲು ಸಾಲು ಈರುಳ್ಳಿ ಗೊಂಚಲುಗಳು ಶೃಂಗರಿಸಿಟ್ಟ ರೀತಿ ಕಾಣುತ್ತದೆ. ಇದು ವರ್ಷಕ್ಕೊಮ್ಮೆ ಮಾತ್ರ ಸಿಗುವ ಬಹು ಬೇಡಿಕೆಯ ಅಳ್ವೆಕೋಡಿ ಸಿಹಿ ಈರುಳ್ಳಿ.
ಜಿಲ್ಲೆಯ ಪ್ರವಾಸಕ್ಕೆಂದು ಬಂದವರಿಗೆ ಈರುಳ್ಳಿಯನ್ನು ಹೀಗೂ ಮಾರುತ್ತಾರಲ್ಲ ಎನ್ನುವ ಅಚ್ಚರಿ ಉಂಟಾಗುವುದು ಸಹಜ. ಇವು ಗದ್ದೆಯಿಂದ ಆಗ ತಾನೇ ಕಿತ್ತು ತಂದಿದ್ದು.
ಈರುಳ್ಳಿಯ ಒಣಗಿದ ಎಲೆಯನ್ನೆಲ್ಲ ಸೇರಿಸಿ ಜಡೆಯಂತೆ ಹೆಣೆದು ತಯಾರಿಸುವ ಕಲಾತ್ಮಕ ಗುತ್ಛ ನೋಡುವುದೇ ಸೊಗಸು. ಇದು 5 ರಿಂದ 10 ಕೆ.ಜಿ. ವರೆಗೂ ತೂಗುತ್ತವೆ. ವರ್ಷಗಳಿಂದ ಬಳಸಿ ಇದರ ರುಚಿ ಗೊತ್ತಿದ್ದವರು ಈ ಸೀಸನ್ನಿನಲ್ಲಿ ತಮ್ಮ ಪರಿಚಿತರ ಅಂಗಡಿ ಬಳಿ ತಕ್ಷಣ ಗಾಡಿ ನಿಲ್ಲಿಸಿ ಕಿಲೊಗಟ್ಟಲೆ ಈರುಳ್ಳಿ ಖರೀದಿ ಮಾಡಿಕೊಂಡು ಹೊಗುತ್ತಾರೆ.
ಅಪರೂಪದ ರುಚಿ ಇದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಹೊನ್ನಾವರ, ಭಟ್ಕಳದಲ್ಲಿ ಈರುಳ್ಳಿ ಬೆಳೆದರೂ ಹೆದ್ದಾರಿಯಂಚಿಗೆ ರಾಶಿ ಹಾಕಿಟ್ಟುಕೊಂಡು ತಿಂಗಳುಗಟ್ಟಲೆ ಮಾರಾಟ ಮಾಡುವಷ್ಟು ಬೆಳೆಯುವುದು ಕುಮಟಾದ ಅಳ್ವೆಕೋಡಿ, ಹಂದಿಗೋಣ, ವನ್ನಳ್ಳಿ ಭಾಗದಲ್ಲಿ ಮಾತ್ರ. ಹೆದ್ದಾರಿಯಿಂದ ಕೇವಲ ಒಂದೆರಡು ಕಿಮೀ ಅಂತರದಲ್ಲಿ ಸಮುದ್ರ ಇರುವುದರಿಂದ ಸಹಜವಾಗಿ ಇಲ್ಲಿಯ ಗದ್ದೆಯ ಉಸುಕು ಮಿಶ್ರಿತ ಮಣ್ಣು ಈರುಳ್ಳಿ ಬೇಸಾಯಕ್ಕೆ ಪ್ರಶಸ್ತವಾಗಿದೆ. ಜೊತೆಗೆ ಈ ಬೆಳೆಗೆ ನೂರಾರು ವರ್ಷಗಳ ಇತಿಹಾಸವಿದೆ.
ಮುಂಗಾರು ಬತ್ತದ ಕೊಯಿಲು ಮುಗಿಯುತ್ತಿದ್ದಂತೆ ರೈತರು ಈರುಳ್ಳಿ ಬೇಸಾಯಕ್ಕೆ ಅಣಿಯಾಗುತ್ತಾರೆ. ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಬೇಸಿಗೆಯಲ್ಲಿ ತಯಾರಿ ಮಾಡಿಟ್ಟುಕೊಂಡ ಬೀಜವನ್ನು ಮಡಿಯಲ್ಲಿ ಹಾಕಿ ಸಸಿ ತಯಾರಿಸುತ್ತಾರೆ.
ಈ ಈರುಳ್ಳಿ ಬೀಜ ತಯಾರಿಸುವುದೂ ಅತ್ಯಂತ ವಿಶಿಷ್ಟ ಹಾಗೂ ವಿಚಿತ್ರ ಪದ್ಧತಿ. ಈರುಳ್ಳಿ ಹೂಗಳಿಂದ ಸಂಗ್ರಹಿಸಿದ ಬೀಜವನ್ನು ಬೇಸಿಗೆಯಲ್ಲಿ ಚೆನ್ನಾಗಿ ಒಣಗಿಸಿ ನಂತರ ಅದಕ್ಕೆ ಬೆಳಕು ಸೋಕದಂತೆ ಕಪ್ಪು ಬಟ್ಟೆಯಲ್ಲಿ ಸುತ್ತಿ ಮಣ್ಣಿನ ಪಾತ್ರೆಯೊಳಗೆ ಸಂರಕ್ಷಣೆ ಮಾಡಿಡುತ್ತಾರೆ. ಮಡಿ ತಯಾರಿಸಿದ ನಂತರವೇ ಬೀಜ ಹೊರತೆಗೆಯುತ್ತಾರೆ.
ನಾಟಿ ಮಾಡಿದ ಸಸಿಗಳಿಗೆ ಧಕ್ಕೆಯಾಗದಂತೆ ನಿತ್ಯ ಬೆಳಗಿನ ಜಾವಕ್ಕೆ ಎದ್ದು ಕೊಡದಲ್ಲಿ ಮೆಲ್ಲಗೆ ನೀರುಣಿಸುವುದೇ ದೊಡ್ಡ ಸಾಹಸ. ಈರುಳ್ಳಿ ಕೀಳುವವರೆಗೂ ರೈತನಿಗೆ ಸರಿಯಾಗಿ ನಿದ್ದೆಯೂ ಇರುವುದಿಲ್ಲ.
ಗದ್ದೆಯಲ್ಲಿ ಬೆಳೆದ ಈರುಳ್ಳಿಗೆ ಪಕ್ಕದ ಹೆದ್ದಾರಿ ಬದಿಯೇ ದೊಡ್ಡ ಮಾರುಕಟ್ಟೆ. ಹೀಗಾಗಿ ಇದನ್ನು ಮಾರಲು ಸಮಸ್ಯೆಯೇ ಇಲ್ಲ. ಮಾರ್ಚ್‌ನಿಂದ ಏಪ್ರಿಲ್ ಮುಗಿಯುವ ತನಕವೂ ಅಳ್ವೆಕೋಡಿಯಿಂದ ಹಂದಿಗೋಣ ವರೆಗಿನ ಸುಮಾರು ಮೂರು ಕಿ.ಮೀ. ಹೆದ್ದಾರಿ ಬದಿಯಲ್ಲಿ ಎಲ್ಲಿ ನೋಡಿದರೂ ಈರುಳ್ಳಿಯೇ ಕಂಗೊಳಿಸುತ್ತದೆ.
ಇಲ್ಲಿ ಮಧ್ಯವರ್ತಿಗಳ ಜೊತೆ ಕೆಲ ರೈತರೂ ಹೆದ್ದಾರಿ ಬದಿಗಿಟ್ಟು ಈರುಳ್ಳಿ ಮಾರಾಟ ಮಾಡುತ್ತಾರೆ. ಹಾಲಿ ಇದರ ಬೆಲೆ ಕಿಲೋಗೆ 75 ರಿಂದ 80 ರೂ. ಇದೆ. ಮಳೆಗಾಲದಲ್ಲಿ ಇದು ಹಾಳಾಗುವ ಸಾಧ್ಯತೆ ಹೆಚ್ಚಿರುವುದರಿಂದ ಸಂಗ್ರಹಣೆಗೆ ರೈತರು ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಜೊತೆಗೆ ಇತ್ತೀಚೆಗಿನ ವ ರ್ಷಗಳಲ್ಲಿ ಕಾಣಿಸಿಕೊಂಡ ಹಾವು ಸುಳಿ ರೋಗದಿಂದಾಗಿ ಈರುಳ್ಳಿ ಬೆಳೆಯನ್ನು ಬೆಳೆಯವುದು ಕಷ್ಟ ಎನ್ನುತ್ತಾರೆ ಬೆಳೆಗಾರರು. ಇನ್ನು ಹಲವೆಡೆಗಳಲ್ಲಿ ಅದನ್ನು ವ್ಯವಸ್ಥಿತವಾಗಿ ಬೆಂಕಿಯ ಧಗೆ ತಾಗುವ ಒಲೆಯ ಮೇಲ್ಭಾಗದಲ್ಲಿ ಕಟ್ಟಿ ನೇತುಹಾಕಿ ಸಂಗ್ರಹಿಸಿಟ್ಟುಕೊಂಡು ವರ್ಷವಿಡೀ ಬಳಸುತ್ತಾರೆ.
ಹಾವು ಸುಳಿ ರೋಗ: ಕಳೆದ ಕೆಲ ವರ್ಷಗಳಿಂದ ಸಸಿ ಒಣಗಿ ಹಾವು ಸುಳಿ ರೋಗ ಈರುಳ್ಳಿಗೆ ತಗುಲಿ ಬೆಳೆ ಸಾಕಷ್ಟು ಪ್ರಮಾಣ ಕುಂಠಿತವಾಗುತ್ತಿದೆ. ಸಾವಯವ ಗೊಬ್ಬರದ ಬಳಕೆಯ ಪ್ರಮಾಣ ಕಡಿಮೆಯಾಗಿ ರೋಗ ತಡೆಯುವ ಶಕ್ತಿ ಕುಗ್ಗಿದೆ. ಸಾವಯವ ಗೊಬ್ಬರ ಬಳಕೆ ಹಾಗೂ ಸರಿಯಾದ ಬೀಜೋಪಚಾರದಿಂದ ಮತ್ತೆ ಅಂಥ ಶಕ್ತಿ ಪಡೆಯಬಹುದು ಎಂದು ಧಾರವಾಡ ಕೃಷಿ ವಿವಿ ತಜ್ಞರು ತಿಳಿಸಿದ್ದಾರೆ. ನೂರಾರು ವರ್ಷಗಳ ಪರಂಪರೆಯ ಅಳ್ವೆಕೋಡಿ ಈರುಳ್ಳಿಯ ಬೆಡಗು, ಬೇಡಿಕೆ, ರುಚಿ ಉಳಿಸಿಕೊಳ್ಳಲು ಅದರ ಸಾಂಪ್ರದಾಯಿಕ ಕೃಷಿಯೊಂದೇ ಏಕೈಕ ಮಾರ್ಗವಾಗಿದೆ.
ಹೊರ ರಾಜ್ಯಗಳಲ್ಲೂ ಬೇಡಿಕೆ: ತಾಲೂಕಿನ ಅಳ್ವೆಕೊಡಿಯ ಈರುಳ್ಳಿಗೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕೇರಳ ಸೇರಿದಂತೆ ಹಲವೆಡೆಗಳಿಂದ ಬೇಡಿಕೆ ಇದೆ. ರಾಜ್ಯದಲ್ಲಿಯೂ ಇದರ ಬೇಡಿಕೆ ಹೆಚ್ಚಿದೆ.
-ಮಂಜುನಾಥ ದೀವಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.