ಅತಿಕ್ರಮಣದಾರರ ಅರ್ಜಿ ತಿರಸ್ಕೃತಕ್ಕೆ ತಡೆ
Team Udayavani, Apr 26, 2019, 5:08 PM IST
ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ಅತಿಕ್ರಮಣದಾರರ ತಿರಸ್ಕೃತ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ನಿಖಾಲಿ ಆಗುವವರೆಗೂ ಅರಣ್ಯವಾಸಿಗಳಿಗೆ ಹೊರ ಹಾಕದಂತೆ ಮಧ್ಯಂತರ ಆದೇಶ ನೀಡಿದೆ ಎಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ತಿಳಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ವಿವಿಧ ಉಪ ವಿಭಾಗ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿ ಅರಣ್ಯವಾಸಿಗಳ ಅರ್ಜಿ ಕಾನೂನಿಗೆ ವ್ಯತಿರಿಕ್ತವಾಗಿ 65,220 ಅರ್ಜಿಗಳನ್ನು ತಿರಸ್ಕರಿಸಿರುವ ಆದೇಶವನ್ನು ರದ್ದುಗೊಳಿಸಿ ಅರಣ್ಯವಾಸಿಗಳನ್ನು ಆದೇಶದ ಮೇಲೆ ಒಕ್ಕಲೆಬ್ಬಿಸಬಾರದೆಂಬ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇಲೆ ಪ್ರಾಥಮಿಕ ವಿಚಾರಣೆ ನಡೆಸಿ ಮಧ್ಯಂತರ ಆದೇಶ ಹೊರಡಿಸಿದೆ.
ರಾಜ್ಯ ಉಚ್ಚ ನ್ಯಾಯಾಲಯದ ಹಂಗಾಮಿ ನ್ಯಾ| ಎಲ್. ನಾರಾಯಣಸ್ವಾಮಿ ಮತ್ತು ನ್ಯಾ| ದಿನೇಶಕುಮಾರ ಪೀಠ ವಿಚಾರಿಸಿದ ಅರ್ಜಿಯನ್ನು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರ್ಜಿದಾರರಾಗಿದ್ದು ಅರ್ಜಿಯಲ್ಲಿ ಪ್ರತಿವಾದಿಯಾಗಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಇಲಾಖೆಯ ಜಿಲ್ಲಾಧಿಕಾರಿಯನ್ನು ಎದರುದಾರರನ್ನಾಗಿ ಮಾಡಲಾಗಿತ್ತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಜಯರಾಮ ಸಿದ್ದಿ ವಾದ ಮಂಡಿಸಿದ್ದರು.
ಕಳೆದ 28 ವರ್ಷದಿಂದ ಜಿಲ್ಲೆಯಲ್ಲಿ ಅರಣ್ಯವಾಸಿಗಳ ಕುರಿತು ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟ ಮಾಡುತ್ತಿರುವ ಹೋರಾಟಗಾರರ ವೇದಿಕೆ ಅರಣ್ಯವಾಸಿಗಳ ಧ್ವನಿಯಾಗಿ ಅರ್ಜಿ ತಿರಸ್ಕೃತಗೊಂಡ ಅರಣ್ಯವಾಸಿಗಳ ಪರವಾಗಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ದುರ್ಬಲರಾಗಿರುವ ಅರಣ್ಯವಾಸಿಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು ಉಲ್ಲೇಖನಾರ್ಹ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಕಾನೂನನ್ನು ತಪ್ಪಾಗಿ ಅರ್ಥೈಸಿ ನಿರ್ದಿಷ್ಟ ದಾಖಲೆಗಳ ಒತ್ತಾಯಿಸುವಿಕೆಗೆ ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದಾಗ್ಯೂ ನಿರ್ದಿಷ್ಟವಾದ ದಾಖಲಾತಿ ಪೂರೈಸಿಲ್ಲ ಎಂಬ ಆಧಾರದ ಮೇಲೆ ಅರ್ಜಿ ತಿರಸ್ಕರಿಸಿರುವುದನ್ನು ಉಚ್ಚ ನ್ಯಾಯಾಲಯದಲ್ಲಿ ಆದೇಶದ ಮೌಲ್ಯತೆಯನ್ನು ಪ್ರಶ್ನಿಸಿ ಹಾಗೂ ಕಾನೂನಾತ್ಮಕವಾದ ಅರಣ್ಯ ಹಕ್ಕು ಮಂಜೂರಿ ಪ್ರಕ್ರಿಯೆ ಜರುಗಿಸಿದ ಬೇಕಾಯ್ದೆಶೀರ ಆಗಿ ಅರ್ಜಿಗಳನ್ನು ತಿರಸ್ಕರಿಸಿರುವ ಆದೇಶವನ್ನು ರದ್ದುಪಡಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲ್ಪಟ್ಟಿತ್ತು.
ಜಿಲ್ಲೆಯಲ್ಲಿ 87,625 ಅರ್ಜಿಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸ್ವೀಕೃತಗೊಂಡಿದ್ದು ಅವುಗಳಲ್ಲಿ 65,220 ಅರ್ಜಿಗಳು ತಿರಸ್ಕಾರಗೊಂಡು ಬಂದಿರುವ ಅರ್ಜಿಗಳಲ್ಲಿ ಶೇ.74.43 ರಷ್ಟು ಅರ್ಜಿ ತಿರಸ್ಕಾರ ವಾಗಿರುವ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಹಕ್ಕಿನಿಂದ ವಂಚಿತರಾಗುವವರಿಗೆ, ಅರಣ್ಯವಾಸಿಗಳಿಗೆ ಕಾನೂನಾತ್ಮಕವಾಗಿ ಸಾಗುವಳಿ ಹಕ್ಕನ್ನು ಒದಗಿಸಲು ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.