ಐದು ವಿಶೇಷ ಚೆಕ್‌ಪೋಸ್ಟ್
Team Udayavani, Jul 11, 2020, 5:11 PM IST
ಕುಮಟಾ: ತಾಲೂಕಿನಾದ್ಯಂತ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜು.11 ರಿಂದಲೇ ಪ್ರಮುಖ ರಸ್ತೆಯ 5 ಕಡೆಗಳಲ್ಲಿ ವಿಶೇಷ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ, ಬೇರೆ ಜಿಲ್ಲೆಗಳಿಂದ ತಾಲೂಕಿಗೆ ಆಗಮಿಸುವವರಿಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ.
ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಕೋವಿಡ್ ತಡೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನ್ಯ ರಾಜ್ಯ, ಜಿಲ್ಲೆಗಳಿಂದ ಹಾಗೂ ಮುಖ್ಯವಾಗಿ ಬೆಂಗಳೂರಿನಿಂದ ಬಹಳಷ್ಟು ಜನ ಊರಿಗೆ ಮರಳುತ್ತಿದ್ದಾರೆ. ಇವರು ಸರಿಯಾದ ಮಾಹಿತಿಯನ್ನು ತಾಲೂಕಾಡಳಿತಕ್ಕೆ ನೀಡುವುದಿಲ್ಲ. ಆಶಾ ಕಾರ್ಯಕರ್ತೆಯರಿಗೂ ಮಾಹಿತಿ ಇರುವುದಿಲ್ಲ. ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂಬ ಆರೋಪವಿದೆ. ಬೆಂಗಳೂರಿನಿಂದ ಬಂದವರಲ್ಲೇ ಹೆಚ್ಚಿನ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದೆ. ಹೀಗಾಗಿ ಹೊರಗಿನಿಂದ ತಾಲೂಕಿಗೆ ಬರುವವರ ಮೇಲೆ ತೀವ್ರ ನಿಗಾ ಇರಿಸಲೇಬೇಕಾಗಿದೆ. ಮೊದಲಿದ್ದ ಚೆಕ್‌ಪೋಸ್ಟ್‌ಗಳನ್ನು ಪುನಃ ತೆರೆಯಬೇಕಾಗಿದೆ ಎಂದರು.
ಗೋಕರ್ಣದ ಹಿತ್ತಲಮಕ್ಕಿ, ಹಿರೇಗುತ್ತಿ, ಕತಗಾಲ, ಸಾಂತಗಲ್, ಹೊಳೆಗದ್ದೆಯಲ್ಲಿ ಚೆಕ್‌ಪೋಸ್ಟ್ ಆರಂಭಿಸಲಾಗುವುದು. ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್, ಅರಣ್ಯ, ಆರೋಗ್ಯ, ಶಿಕ್ಷಣ ಇಲಾಖೆ ಸಿಬ್ಬಂದಿ ಜೊತೆ ಒಟ್ಟೂ 5 ಜನ ಕಾರ್ಯನಿರ್ವಹಿಸಬೇಕು. ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಮತ್ತು ವಲಯ ಅರಣ್ಯಾಧಿಕಾರಿ ಚೆಕ್‌ಪೋಸ್ಟಿನ ಉಸ್ತುವಾರಿ ವಹಿಸಬೇಕು. ತಾಲೂಕಿಗೆ ಬರುವ ಪ್ರತಿಯೊಂದು ವಾಹನ ತಡೆದು ತಪಾಸಣೆ ನಡೆಸಿ, ಅನುಮಾನವಿದ್ದಲ್ಲಿ ಕೂಡಲೇ ಗಂಟಲು ದ್ರವ ಸಂಗ್ರಹಿಸಿ ತಪಾಸಣೆಗೆ ಕಳುಹಿಸಬೇಕು ಎಂದರು.
ಜಿ.ಪಂ ಸದಸ್ಯ ಗಜಾನನ ಪೈ, ಉಪವಿಭಾಗಾಧಿಕಾರಿ ಎಂ. ಅಜಿತ ರೈ, ತಹಸೀಲ್ದಾರ್ ಮೇಘರಾಜ ನಾಯ್ಕ, ಪುರಸಭಾ ಮುಖ್ಯಾಧಿಕಾರಿ ಸುರೇಶ ಎಮ್.ಕೆ., ತಾ.ಪಂ ಇಒ ಸಿ.ಟಿ. ನಾಯ್ಕ, ಸಿಪಿಐ ಪರಮೇಶ್ವರ ಗುನಗಾ, ತಾಲೂಕಾ ಆರೋಗ್ಯಾಧಿಕಾರಿ ಡಾ| ಆಜ್ಞಾ ನಾಯಕ, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.