ಹೊಸಳ್ಳಿಯಲ್ಲಿ ಹೊಸ ವೀರಗಲ್ಲು ಪತ್ತೆ
1401ನೇ ಇಸವಿಯಲ್ಲಿ ನೆಬ್ಬೂರಿನ ತಾಳೆಯ ನಾಯಕನ ಸ್ಮರಣಾರ್ಥ ನಿರ್ಮಿಸಿದ ವೀರಗಲ್ಲು
Team Udayavani, Apr 20, 2022, 5:10 PM IST
ಶಿರಸಿ: ತಾಲೂಕಿನ ನೆಗ್ಗು ಗ್ರಾಪಂ ವ್ಯಾಪ್ತಿಯ ಹೊಸಳ್ಳಿಯಲ್ಲಿ 1401ನೇ ಇಸವಿಯ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಇತಿಹಾಸಕಾರ ಲಕ್ಷ್ಮೀಶ ಸೋಂದಾ ಅವರ ತಂಡ ಅಪ್ರಕಟಿತ ಈ ಶಾಸನದ ಮೇಲೆ ಬೆಳಕು ಚೆಲ್ಲಿದೆ. ಇದರಿಂದಾಗಿ ನೆಗ್ಗು ಪಂಚಾಯಿತಿ ವ್ಯಾಪ್ತಿಯ ಇತಿಹಾಸದ ಬಗ್ಗೆ ಇದೇ ಮೊದಲ ಬಾರಿ ಹೆಚ್ಚಿನ ಮಾಹಿತಿ ಲಭ್ಯವಾದಂತಾಗಿದೆ.
ಇಲ್ಲಿಯ ಹೊಸಳ್ಳಿ ಗ್ರಾಮದಲ್ಲಿ ಈ ವೀರಗಲ್ಲು ಮಣ್ಣು ಅಡಿಯಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಇತಿಹಾಸಕಾರ ಲಕ್ಷ್ಮೀಶ್ ಸೋಂದಾ, ಈ ಕುರಿತು ಅಭ್ಯಸಿಸಿದಾಗ ಇದೊಂದು ವೀರಗಲ್ಲು ಶಾಸನವಾಗಿದ್ದು ಕ್ರಿ.ಶ. 1401 ರ ಕಾಲಮಾನದ್ದಾಗಿದೆ. ವಿಶೇಷವೆಂದರೆ ಆರುನೂರು ವರ್ಷಗಳ ಹಿಂದೆಯೇ ನೆಬ್ಬೂರು ಪ್ರದೇಶ ಅದೇ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬ ಅಪೂರ್ವ ಸಂಗತಿ ಈ ಶಾಸನದಿಂದ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.
ಆಸವರಸ ಒಡೆಯರು ಸತ್ತಗೋವೆಯ (ಸಪ್ತಕೊಂಕಣ)ರಾಜ್ಯವನ್ನಾಳುವ ಸಂದರ್ಭದಲ್ಲಿ ಬಳ್ಳಿಗಾವಿಯ ಅರಸು ಶಷ್ಠಿರಾಯನಿಗೂ ಮತ್ತು ನಾರಣಪ್ಪ ದಂಡನಾಯಕರಿಗೂ ನಡೆದ ಯುದ್ಧದಲ್ಲಿ ನೆಬ್ಬೂರಿನ ತಾಳೆಯ ನಾಯಕನು ರಣರಂಗದಲ್ಲಿ ಕಾದಾಡಿ ಎದುರಾದ ವೈರಿಗಳನ್ನು ಗೆದ್ದು ರಣದೊಳಗೆ ಮಡಿದು ವೀರ ಸ್ವರ್ಗವ ಸಂಗತಿಯನ್ನು ಈ ವೀರಗಲ್ಲು ಶಾಸನ ತಿಳಿಸುತ್ತದೆ ಎಂದಿದ್ದಾರೆ.
ಶಾಸನದ ಸುತ್ತ ಮಹಾಸತಿ ಕಲ್ಲುಗಳೂ ಪತ್ತೆಯಾಗಿವೆ. ಸಾಮಾನ್ಯವಾಗಿ ವೀರಗಲ್ಲುಗಳು ಗಾಳಿ, ಮಳೆಯ ಅಬ್ಬರಕ್ಕೆ ಶತ ಶತಮಾನಗಳಿಂದ ಸಿಲುಕಿ ಉಲ್ಲೇಖೀಸಲಾದ ಅಕ್ಷರಗಳು ಸವಕಳಿ ಹೊಂದಿರುತ್ತವೆ. ಆದರೆ, ಹೊಸಳ್ಳಿಯಲ್ಲಿ ಈ ವೀರಗಲ್ಲು ಮಣ್ಣಿನ ಅಡಿಯಲ್ಲಿ ಸಿಲುಕಿದ್ದರಿಂದ ಹೆಚ್ಚಿನ ಸವಕಳಿ ಹೊಂದಿಲ್ಲ. ವೀರಗಲ್ಲಿನ ಮೊದಲ ಸಾಲಿನಲ್ಲಿ ಯುದ್ಧದ ಚಿತ್ರವಿದೆ. ಈ ಕುರಿತಂತೆ ಶಾಸನದಲ್ಲಿ ಎರಡು ಸಾಲಿನಲ್ಲಿ ಹಿರಿಯ ಶಾಸನ ತಜ್ಞ ಬರಹವಿದೆ. ಎರಡನೇ ಸಾಲಿನಲ್ಲಿ ವೀರ ಯೋಧನನ್ನು ವೈರಿಗಳು ಖಡ್ಗದಿಂದ ಇರಿಯುತ್ತಿರುವ ಚಿತ್ರಗಳು ಮತ್ತು ಈ ಕುರಿತ ಬರಹಗಳಿವೆ.
ಮೂರನೇ ಸಾಲಿನಲ್ಲಿ ದೇವತೆಗಳು ವೀರನನ್ನು ಸ್ವರ್ಗಕ್ಕೆ ಒಯ್ಯುತ್ತಿರುವ ಚಿತ್ರಗಳು ಮತ್ತು ಈ ಕುರಿತ ಬರಹ ಕೆತ್ತನೆ ಮಾಡಲಾಗಿದೆ. ನಾಲ್ಕನೇ ಸಾಲಿನಲ್ಲಿ ವೀರ ಸ್ವರ್ಗಸ್ಥನಾದ ಚಿತ್ರವಿದ್ದರೆ ಇನ್ನೂ ಮೇಲ್ಗಡೆ ಸೂರ್ಯ, ಚಂದ್ರರ ಚಿತ್ರವಿದೆ. ಸೂರ್ಯ ಚಂದ್ರ ಇರುವವರೆಗೂ ಈ ಯೋಧನ ಕೀರ್ತಿ ಅಮರವಾಗಿರುತ್ತದೆ ಎಂಬುದರ ಸಂಕೇತವಾಗಿದೆ. ಇದರ ಅಧ್ಯಯನಕ್ಕೆ ಎಂ.ನಾಗರಾಜ್‌ರಾವ್ ಸಹಕರಿಸಿದ್ದಾರೆ ಎನ್ನುತ್ತಾರೆ. ಕ್ಷೇತ್ರಾನ್ವೇಷಣೆ ಸಂದರ್ಭದಲ್ಲಿ ವಿ.ಎನ್. ಹೆಗಡೆ ಗೌಡನಮನೆ, ಮಂಜುನಾಥ ಸಾಯಿಮನೆ, ಎಂ.ಡಿ. ಹೆಗಡೆ ಹೊಸಳ್ಳಿ, ಎಸ್.ವಿ. ಹೆಗಡೆ ಹಳ್ಳದಕೈ ಮುಂತಾದವರು ಇದ್ದರು.
ಇತಿಹಾಸ ಅರಿವು ಮುಖ್ಯ: ಈಗಿನ ನೆಬ್ಬೂರು ಸಂಪಖಂಡ ಹೋಬಳಿ ಜಾನ್ಮನೆ ಪಂಚಾಯತದ ಕೇವಲ 15 ಮನೆಗಳಿರುವ ಒಂದು ಪುಟ್ಟ ಹಳ್ಳಿ. ಕೃಷಿಕರು, ಕೂಲಿ ಕಾರ್ಮಿಕರೇ ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಕಾಲ ಚಕ್ರದ ತಿರುಗುವಿಕೆಯ ನಡುವೆ 600 ವರ್ಷಗಳಲ್ಲಿ ಪ್ರಾಂತ್ಯವೊಂದು ಹಳ್ಳಿಯಾಗಿ ಬದಲಾವಣೆಯಾಗಿರುವ ಸೋಜಿಗವನ್ನು ಈ ವೀರಗಲ್ಲು ತೆರೆದಿಟ್ಟಿದೆ. ಇತಿಹಾಸದ ಪುಟಗಳಲ್ಲಿ ಎಲ್ಲೆಲ್ಲಿಯದೋ ಇತಿಹಾಸಗಳನ್ನು, ಯುದ್ಧಗಳನ್ನು ಉರು ಹಾಕುವ ನಮ್ಮ ಮಕ್ಕಳಿಗೆ ನಮ್ಮದೇ ಊರಿನ ಇತಿಹಾಸದ ಬಗ್ಗೆ ತಿಳಿಸಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಅಧ್ಯಯನಗಳಿಗೆ ಉತ್ತೇಜನ ನೀಡಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತಗೊಂಡಿದೆ.
ಇತ್ತೀಚೆಗೆ ಸಿಕ್ಕ ವೀರಗಲ್ಲುಗಳ ಪೈಕಿ ಹೊಸಳ್ಳಿಯಲ್ಲಿ ಸಿಕ್ಕಿದ್ದು ಯಾವುದೇ ಹಾನಿ ಆಗದ ಸ್ಥಿತಿಯಲ್ಲಿದೆ. ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಈ ವೀರಗಲ್ಲು ಪ್ರಮುಖ ಮೆಟ್ಟಿಲಾಗಲಿದೆ. -ಲಕ್ಷ್ಮೀಶ ಸೋಂದಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.