ಹಳಿಯಾಳ ಹಾಳುಗೆಡವಿದೆ ಯುಜಿಡಿ
Team Udayavani, Mar 9, 2020, 5:32 PM IST
ಸಾಂದರ್ಭಿಕ ಚಿತ್ರ
ಹಳಿಯಾಳ: ನಗರೋತ್ಥಾನ ಯೋಜನೆಯಡಿ ಹಳಿಯಾಳಕ್ಕೆ ಕೋಟಿ ಕೋಟಿ ಹಣ ಹರಿದು ಬಂದು ಪಟ್ಟಣದ ಸೌಂದರ್ಯ ಹೆಚ್ಚಿಸಿತ್ತು. ಆದರೆ ಸದ್ಯ ವಿರೋಧದ ನಡುವೆಯು ಪ್ರಾರಂಭವಾಗಿರುವ ಒಳಚರಂಡಿ(ಯುಜಿಡಿ) ಕಾಮಗಾರಿ ಪಟ್ಟಣದ ಸೌಂದರ್ಯ ಹಾಳುಗೆಡವಿದೆ.
ಮೊದಲು ಪಟ್ಟಣ ಪಂಚಾಯತ್ ಹೊಂದಿದ್ದ ಹಳಿಯಾಳ ಕಳೆದ ಕೆಲವು ವರ್ಷಗಳ ಹಿಂದೆ ಪುರಸಭೆಯಾಗಿ ಮೇಲ್ದರ್ಜೆಗೇರಿತು. ಹಳಿಯಾಳಕ್ಕೆ 2009-10ನೇ ಸಾಲಿನಲ್ಲಿ 5 ಕೋಟಿ, 2013-14ನೇ ಸಾಲಿನಲ್ಲಿ 5 ಕೋಟಿ ಹಾಗೂ 2016-17ನೇ ಸಾಲಿನಲ್ಲಿ 7.5 ಕೋಟಿ ರೂ. ಅನುದಾನ ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗಿದೆ. ಒಟ್ಟೂ ಮೂರು ಹಂತಗಳಲ್ಲಿ ಸುಮಾರು 17.5 ಕೋಟಿ ರೂ. ಅನುದಾನ ಬಂದಿದೆ. ನಗರೋತ್ಥಾನದ ಒಂದು ಮತ್ತು 2ನೇ ಅವಧಿಗೆ ಬಂದ 10 ಕೋಟಿ ರೂ. ಮೊತ್ತವನ್ನು ಸಂಪೂರ್ಣವಾಗಿ ವಿನಿಯೋಗಿಸಲಾಗಿದ್ದು ಬಹುತೇಕ ಎಲ್ಲ ಮೊತ್ತವನ್ನು ಗಟಾರ ಹಾಗೂ ರಸ್ತೆಗಳ ನಿರ್ಮಾಣಕ್ಕಾಗಿಯೇ ಬಳಸಲಾಗಿದೆ.
ಮೂರನೇ ಹಂತಕ್ಕೆ ಮಂಜೂರಾದ 7.5 ಕೋಟಿ ಮೊತ್ತದಲ್ಲಿ ಈಗಾಗಲೇ 6.11 ಕೋಟಿ ರೂ. ಬಿಡುಗಡೆಯಾಗಿದ್ದು ಬಹುತೇಕ ಶೇ. 80 ಕಾಮಗಾರಿ ಪೂರ್ಣಗೊಂಡಿವೆ. ಈ ಅನುದಾನದಲ್ಲಿ ಒಟ್ಟೂ 21 ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು ಬಹುತೇಕ ಹಣವನ್ನು ವಿವಿಧ ಬಡಾವಣೆಗಳಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಹಾಗೂ ರಸ್ತೆ ಪಕ್ಕದಲ್ಲಿ ಇಂಟರಲಾಕ್(ಫೇವರ್) ಹಾಕಲು ಹಾಗೂ ಹಳಿಯಾಳದ ಮೌರ್ಯ ಹೊಟೆಲ್ ಪಕ್ಕ ಪುರಸಭೆಯವರಿಂದ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ 1 ಕೋಟಿ ರೂ. ಬಳಸಲಾಗುತ್ತಿದೆ. ಕಳೆದ 12 ವರ್ಷಗಳಲ್ಲಿ 17 ಕೋಟಿ ರೂ. ಬೃಹತ್ ಮೊತ್ತ ಪುರಸಭೆಗೆ ಹರಿದು ಬಂದಿದೆ. ಇದನ್ನು ರಸ್ತೆ, ಚರಂಡಿ, ಇಂಟರಲಾಕ್ಸ್ ಅಳವಡಿಸಲು ಬಳಸಲಾಗಿದೆ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.
ಕೆಲ ವರ್ಷಗಳ ಹಿಂದೆ ನೂತನವಾಗಿ ನಿರ್ಮಿಸಿದ ರಸ್ತೆಗಳನ್ನು ಹಳಿಯಾಳದಲ್ಲಿ 24ಗಿ7 ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯ ಪೈಪ್ ಲೈನ್ ಅಳವಡಿಕೆ ಕಾರ್ಯಕ್ಕೆ ಮಾನವ ಸಂಪನ್ಮೂಲಗಳನ್ನು ಬಳಸದೆ ಬೃಹತ್ ಜೆಸಿಸಿ, ಹಿಟಾಚಿ ಯಂತ್ರ, ವೈಬ್ರೆಟರ್ ಬಳಸಿ ಮನಸೋ ಇಚ್ಚೆ ಅಗೆದು ಹಾಳು ಮಾಡಲಾಗಿತ್ತು. ಇದಾದ ಬಳಿಕ ಮತ್ತೆ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಆದರೆ ಸದ್ಯ ಹಳಿಯಾಳಕ್ಕೆ ಸಾರ್ವಜನಿಕರ ವಿರೋಧದ ನಡುವೆಯು ಪ್ರಾರಂಭವಾಗಿರುವ ಒಳಚರಂಡಿ ಕಾಮಗಾರಿಗೆ ವ್ಯವಸ್ಥಿತ ಹಾಗೂ ಉತ್ತಮ ರಸ್ತೆಗಳನ್ನು ಬಲಿ ಕೊಡಲಾಗುತ್ತಿದೆ. ಈ ಮೂಲಕ ಮತ್ತೆ ಕೊಟ್ಯಂತರ ರೂ. ಸರ್ಕಾರದ ಹಣ ವ್ಯರ್ಥವಾಗಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಪರಿಸ್ಥಿತಿ ಎದ್ದು ಕಾಣುತ್ತಿದೆ.
17 ಕೋಟಿ ಮೊತ್ತದಲ್ಲಿ ಆಗಿರುವ ಕಾಮಗಾರಿಗಳಲ್ಲಿ ಅಲ್ಲಲ್ಲಿ ಕಳಪೆ ಕಾಮಗಾರಿ ನಡೆದ ಬಗ್ಗೆ ಅಂದಿನಿಂದಲೂ ಪತ್ರಿಕೆಗಳು ಬೆಳಕು ಚೆಲ್ಲಿವೆ. ಆದರೆ ಹಳಿಯಾಳದ ರಾಜಕೀಯ ವ್ಯವಸ್ಥೆಯಲ್ಲಿ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದು ದುರ್ದೈವದ ಸಂಗತಿ. ಇಲ್ಲಿ ಎಲ್ಲ ಅಡಜಸ್ಟ್‌ಮೆಂಟ್ ಪಾಲಿಸಿಯಾಗಿದೆ. ಸದ್ಯ ನಡೆಯುತ್ತಿರುವ ಕಾಮಗಾರಿಗಳಲ್ಲು ಅಲ್ಲಲ್ಲಿ ಕಳಪೆ ಕೆಲಸವಾಗುತ್ತಿದೆ ಎನ್ನುವುದು ಆಯಾ ಬಡಾವಣೆಯ ಜನರ ಆರೋಪವಾಗಿದೆ.
ನಗರೋತ್ಥಾನ 2 ಹಂತಗಳಲ್ಲಿ ಬಂದ 10 ಕೋಟಿ ಪೂರ್ಣ ವಿನಿಯೋಗಿಸಲಾಗಿದೆ. ಸದ್ಯ 16-17ನೇ ಸಾಲಿಗೆ 7.5 ಕೋಟಿ ಮಂಜೂರಾಗಿದ್ದು ಅದರಲ್ಲಿ 6.11 ಕೋಟಿ ಬಿಡುಗಡೆಯಾಗಿದ್ದು, ಬಹುತೇಕ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದೆ. ಕೆಲವು ಪ್ರಗತಿಯಲ್ಲಿದ್ದು, ಬಿಲ್ ಗಳನ್ನು ಪಾವತಿಸಲಾಗಿದೆ. ಪುರಸಭೆಯ ಪ್ರಗತಿ ಉತ್ತಮವಾಗಿದ್ದು, ಬಾಕಿ ಉಳಿದ ಹಣವು ಬಿಡುಗಡೆಯಾಗುವ ನೀರಿಕ್ಷೆಯಿದೆ. -ಕೇಶವ ಚೌಗಲೆ, ಹಳಿಯಾಳ ಪುರಸಭೆ ಮುಖ್ಯಾಧಿಕಾರಿ
-ಯೋಗರಾಜ ಎಸ್.ಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.