ಭಟ್ಕಳದಲ್ಲಿ ಕುಂಭದ್ರೋಣ ಮಳೆ ; ಮುಂಜಾಗ್ರತಾ ಕ್ರಮವಾಗಿ ಜನರ ಸ್ಥಳಾಂತರ
Team Udayavani, Jul 8, 2022, 5:31 PM IST
ಭಟ್ಕಳ: ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಣೆ ಮಾಡಿದ ಬೆನ್ನಲ್ಲಿಯೇ ಕುಂಭದ್ರೋಣ ಮಳೆ ಆರಂಭವಾಗಿದ್ದು ಗುರುವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಅರ್ಧ ಭಟ್ಕಳ ತಾಲೂಕು ನೀರಿನಿಂದ ಮುಳುಗಿ ಹೋಗಿದೆ.
ರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದರೂ ಮಧ್ಯರಾತ್ರಿಯಿಂದ ಒಂದೇ ಸವನೆ ಜೋರಾಗಿ ಬರಲಾರಂಭಿಸಿದ್ದರಿಂದ ಅನೇಕ ಕಡೆಗಳಲ್ಲಿ ಮನೆಯೊಳಕ್ಕೆ ನೀರು ನುಗ್ಗಿ ಮನೆಯವರೆಲ್ಲರೂ ಆತಂಕದಿಂದ ಜಾಗರಣೆ ಮಾಡುವಂತಾಯಿತು. ನಗರದ ಚೌಥನಿಯಲ್ಲಿ ಹೊಳೆಯು ಉಕ್ಕಿ ಹರಿಯಲಾರಂಭಿಸಿದ್ದು ಸೇತುವೆ ಮುಳುಗಡೆಯಾಯಿತು. ಕುದ್ರೆಬೀರಪ್ಪ ದೇವಸ್ಥಾನ ಅರ್ಧದಷ್ಟು ಮುಳುಗಿದ್ದು ಮುಂಡಳ್ಳಿ ಸಂಪರ್ಕವೇ ಕಡಿತಗೊಂಡಿತು. ಅನೇಕ ಮನೆಗಳಿಗೆ ನೀರು ನುಗ್ಗಿದ್ದು ಹೊಳೆದಂಡೆಯಲ್ಲಿರುವ ಅಪಾಯದ ಅಂಚಿನ ಮನೆಗಳಲ್ಲಿ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ ಮಾಡಲಾಯಿತು.
ತಗ್ಗು ಪ್ರದೇಶಗಳು ಸಂಪೂರ್ಣ ನೀರಿನಿಂದಾವೃತವಾಗಿದ್ದು ಕಿ.ಮಿ. ಗಟ್ಟಲೆ ಎಲ್ಲಿ ನೋಡಿದರೂ ನೀರೇ ಕಾಣುತ್ತಿದ್ದು ಜನ ಭಯಭೀತರಾಗಿದ್ದಾರೆ. ತಾಲೂಕಿನ ಬೈಲೂರಿನಿಂದ ಗೊರ್ಟೆಯ ತನಕ ರೈತರ ಗದ್ದೆಗಳು, ತೋಟ ಸಂಪೂರ್ಣ ಜಲಾವೃತವಾಗಿದ್ದರೆ ಹಲವು ಕಡೆಗಳಲ್ಲಿ ಗದ್ದೆಯಲ್ಲಿ ನಾಟಿ ಮಾಡಿದ ಸಸಿಗಳು ಕೊಳೆತು ಹೋಗುವ ಭೀತಿ ರೈತರದ್ದಾಗಿದೆ.
ತಾಲೂಕಿನ ಪುರವರ್ಗದ ಹುಲಿದುರ್ಗಿ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಗುಡ್ಡಕುಸಿದು ಕೆಲಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ದೊಡ್ಡ ಬಂಡೆಯೊಂದು ಉರುಳಿ ಅನಾಹುತವಾಗಿದ್ದು ತಕ್ಷಣ ಕ್ರಮ ಕೈಗೊಂಡ ಐ.ಆರ್.ಬಿ. ಮಣ್ಣು ತೆರವುಗೊಳಿಸಿ ಸಂಚಾಯಕ್ಕೆ ಅನುವು ಮಾಡಿಕೊಟ್ಟಿದೆ. ಇನ್ನೂ ಕೂಡಾ ಗುಡ್ಡ ಕುಸಿಯುವ ಭೀತಿ ಇದ್ದು ಆತಂಕ ದೂರಾದಂತೆ ಕಂಡು ಬರುತ್ತಿಲ್ಲ.
ನಗರದಲ್ಲಿ ಸಮಪರ್ಕವಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಹಾಗೂ ಹಲವೆಡೆ ಚರಂಡಿ ಸ್ವಚ್ಚತೆ ಮಾಡದೇ ಇರುವುದರಿಂದ ಅನೇಕ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ನಗರದ ಮಾರುತಿ ನಗರ, ಮಣ್ಕುಳಿ, ಮುಖ್ಯ ರಸ್ತೆ, ರಂಗೀಕಟ್ಟೆ, ಕೋಗ್ತಿ ನಗರ ಇತ್ಯಾದಿ ಭಾಗದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದೇ ನೀರು ಮನೆಗಳಿಗೆ ನುಗ್ಗಿ ಹಾನಿಯಾಗಿದ್ದು ರಾತ್ರಿಯೆಲ್ಲಾ ಮನೆಯವರು ನೀರು ಹೊರ ಹಾಕುವುದರಲ್ಲಿಯೇ ಕಾಲ ಕಳೆಯುವಂತಾಯಿತು. ರಂಗೀಕಟ್ಟೆಯಲ್ಲಿ ನೀರು ಹೋಗಲು ವ್ಯವಸ್ಥೆಯೇ ಇಲ್ಲದೇ ವಿಠಲ ಪ್ರಭು ಎನ್ನುವವರ ಮನೆಯೊಳಗೆ ರಾತ್ರಿ 2 ಗಂಟೆಯ ಸಮಯ ಸುಮಾರು ಎರಡು ಅಡಿಗಳಷ್ಟು ನೀರು ನಿಂತು ಅನೇಕ ವಸ್ತುಗಳು ನೀರಿನಿಂದ ಒದ್ದೆಯಾಗಿದೆ. ಪ್ರತಿ ವರ್ಷವೂ ಕೂಡಾ ಇದೇ ಗೋಳು ಎನ್ನುವುದು ಮನೆಯವರ ಆಕ್ರೋಶ.
ಭಾರೀ ಮಳೆಯಿಂದಾಗಿ ಬೈಲೂರಿನಲ್ಲಿನ ರಸ್ತೆಯೊಂದು ಕೊಚ್ಚಿ ಹೋಗಿದ್ದು, ಹತ್ತಿರದಲ್ಲಿಯೇ ಇನ್ನೊಂದು ಸಂಪರ್ಕ ರಸ್ತೆ ಇರುವುದರಿಂದ ಜನರಿಗೆ ತೊಂದರೆಯಾಗಿಲ್ಲ. ಬೈಲೂರು, ಮಾವಳ್ಳಿ, ಕಾಯ್ಕಿಣಿ, ಬೇಂಗ್ರೆ, ಶಿರಾಲಿ, ಹಾಡುವಳ್ಳಿ, ಕೋಣಾರ, ಮಾರುಕೇರಿ, ಬೆಳಕೆ, ಗೊರ್ಟೆ ಇತ್ಯಾದಿ ಭಾಗಗಳಲ್ಲಿ ಮಳೆಯಿಂದಾಗಿ ನೂರಾರು ಎಕರೆ ಕೃಷಿ ಭೂಮಿ, ತೋಟಗಳು, ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಸಾರದ ಹೊಳೆ ಭಾಗದಲ್ಲಿ ಕೂಡಾ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.
ಗುರುವಾರ ರಾತ್ರಿ ಬಿದ್ದ ಭಾರೀ ಮಳೆಗೆ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಚೌಥನಿಯಲ್ಲಿ ರಾತ್ರಿ 3 ಗಂಟೆಯ ಸುಮಾರಿಗೆ ನೀರು ಉಕ್ಕಿ ಹರಿದಿರುವುದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಭೇಟಿ ಕೊಟ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು ನೋಡಲ್ ಅಧಿಕಾರಿ ದೇವಿದಾಸ ಮೊಗೇರ ಸ್ಥಳದಲ್ಲಿಯೇ ಯವುದೇ ಅನಾಹುತವಾಗದಂತೆ ಜಾಗೃತೆ ವಹಿಸಿದ್ದಾರೆ. ತಾಲೂಕಿನಲ್ಲಿ ಯಾವುದೇ ಸಂದರ್ಭದಲ್ಲಿ ಜನರ ರಕ್ಷಣೆಗೆ ತಂಡ ಸಿದ್ದವಿದ್ದು ಕಾಳಜಿ ಕೇಂದ್ರಗಳನ್ನು ತೆರೆಯಲು ಕೂಡಾ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಡಾ. ಸುಮಂತ್ ಬಿ.ಇ., ತಹಶೀಲ್ದಾರ್, ಭಟ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.