ಹುಬ್ಬಳ್ಳಿ-ಅಂಕೋಲಾ ರೈಲ್ವೆ ಇನ್ನೂ ಕನಸು
Team Udayavani, Mar 15, 2020, 5:16 PM IST
ಸಾಂದರ್ಭಿಕ ಚಿತ್ರ
ಕಾರವಾರ: ದಶಕಗಳ ಕನಸಿನ ಯೋಜನೆ ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರಾಜ್ಯ ವನ್ಯಜೀವಿ ಮಂಡಳಿ ವಿರೋಧ ವ್ಯಕ್ತಪಡಿಸಿದ್ದು, ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು ಉತ್ತರ ಕನ್ನಡ ಜಿಲ್ಲೆಯವರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ರಿಟಿಷರು ರೂಪಿಸಿದ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರು ಅಡಿಗಲ್ಲು ಹಾಕಿದ ಯೋಜನೆಯನ್ನೇ ಟ್ರಕ್ ಲಾಭಿ ಮತ್ತು ಕೆಲವು ಎನ್‌ಜಿಓಗಳ ಸ್ವಾರ್ಥಕ್ಕಾಗಿ ವನ್ಯಜೀವಿ ಮಂಡಳಿ ಸದಸ್ಯರು ಕುಣಿದಿರುವುದಕ್ಕೆ ಬೇಸರ ವ್ಯಕ್ತವಾಗಿದೆ. ಟೈಗರ್ ರಿಸರ್ವ್ ಫಾರೆಸ್ಟ್ ದಾಂಡೇಲಿಯಿಂದ ಕದ್ರಾತನಕ ಇದ್ದು, ಅದನ್ನು ವನ್ಯಜೀವಿ ಮಂಡಳಿ ಸದಸ್ಯರು ಅರಬೈಲ್ ಘಟ್ಟದವರೆಗೆ ಇದೆ ಎಂದು ತಪ್ಪು ಗ್ರಹಿಕೆ ಬರುವಂತೆ ವಾದಿಸಿ, ಸರ್ಕಾರದ ಹಾದಿ ತಪ್ಪಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜಗದೀಶ್ ಬಿರ್ಕೋಡಿಕರ್, ನಾಗರಾಜ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹಸಿರುಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದಾರೆ.
ದಶಕಗಳ ಕನಸಿಗೆ ಬೀಗ ಜಡಿದು ದೇಶದ ಮತ್ತು ರಾಜ್ಯದ ಅಭಿವೃದ್ಧಿಗೆ ಮುಳುವಾಗುವ ಕೆಲ ಕಾಣದ ಕೈಗಳನ್ನು ಬಯಲಿಗೆ ಎಳೆಯಲು ಇದೀಗ ಉತ್ತರ ಕನ್ನಡ ಜಿಲ್ಲೆಯ ಜನ ಸಜ್ಜಾಗುತ್ತಿದ್ದಾರೆ. ಕರಾವಳಿ ಅಭಿವೃದ್ಧಿ ಆಗಬಾರದು, ಇಲ್ಲಿನ ಬಂದರು ಅಭಿವೃದ್ಧಿಯಾಗಿ ವಾಣಿಜ್ಯ ಚಟುವಟಿಕೆ ಹೆಚ್ಚಿ, ಉದ್ಯೋಗ ಅವಕಾಶಗಳು ಹೆಚ್ಚಬಾರದು ಎಂಬ ಧೋರಣೆಯ ಜನ ಒಳಗೊಳಗೇ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕೂ ತಡೆ ಯೊಡ್ಡುತ್ತಿದ್ದಾರೆ. ಈ ಧೋರಣೆ ಮುಂದುವರಿದಲ್ಲಿ ಕರಾವಳಿ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಬಂದರೆ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಕರಾವಳಿಯಲ್ಲಿ ಬಂದರುಗಳಿವೆ. ಪ್ರವಾಸಿ ತಾಣಗಳಿವೆ. ಕದಂಬ ನೌಕಾನೆಲೆ ಇದೆ. ಕೈಗಾ ಅಣುಸ್ಥಾವರವಿದೆ. ಸುಪಾ, ಕದ್ರಾ, ಕೊಡಸಳ್ಳಿ ಅಣೆಕಟ್ಟುಗಳಿಂದ ಜಲವಿದ್ಯುತ್ ಉತ್ಪಾದನೆ ಇದೆ. ರಾಜ್ಯಕ್ಕೆ ಶೇ.70 ರಷ್ಟು ವಿದ್ಯುತ್ ಉತ್ಪಾದಿಸಿ ಕೊಡುತ್ತಿದ್ದೇವೆ. ಸಂಪದ್ಭರಿತ ಪಶ್ಚಿಮಘಟ್ಟ ಹೊಂದಿದ್ದೇವೆ. ಹಾಗಾಗಿ ಸ್ವಾವಲಂಬಿಯಾಗಲು ಇಷ್ಟು ಸಾಕು. ಇಲ್ಲಿನ ರೈಲ್ವೆ, ಬಂದರುಗಳ ಅಭಿವೃದ್ಧಿಯನ್ನು ಪರಿಸರವಾದಿಗಳು ವಿರೋಧಿಸಿದಲ್ಲಿ ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಬಂದರೂ ಅಚ್ಚರಿ ಪಡಬೇಕಿಲ್ಲ. ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ವನ್ಯಜೀವಿ ಮಂಡಳಿ ಸದಸ್ಯರ ಅರ್ಥಹೀನ ವಾದಗಳನ್ನು ತಿರಸ್ಕರಿಸಬೇಕು ಎಂಬ ಮಾತು ಕೇಳಿಬಂದಿದೆ.
ವನ್ಯಜೀವಿ ಮಂಡಳಿಯಲ್ಲಿ ಕರಾವಳಿ ಭಾಗದ ಸದಸ್ಯರೇ ಇಲ್ಲ. ಕರಾವಳಿ ಭಾಗದ ಸದಸ್ಯರು ಇದ್ದರೆ ಅವರು ಇಲ್ಲಿನ ಜನರ ಬೇಕು ಬೇಡಿಕೆಗಳನ್ನು ಮಂಡಿಸುತ್ತಿದ್ದರು. ರಾಜಕೀಯ ಪ್ರೇರಿತ ನೇಮಕಗಳ ಸದಸ್ಯರು ಟ್ರಕ್ ಲಾಭಿಗೆ ಮತ್ತು ಎನ್‌ಜಿಓಗಳ ರಹಸ್ಯ ಅಜೆಂಡಕ್ಕೆ ಮಣಿದು ಅಭಿಪ್ರಾಯ ಮಂಡಿಸಿದ್ದಾರೆ ಎಂಬ ದೂರು ಕೇಳಿಬಂದಿದೆ.
ಪರ್ಯಾಯ ಏನು?: ಎರಡು ಲಕ್ಷ ಮರಗಳ ಮಾರಣ ಹೋಮ ತಡೆಯಲು ಅನೇಕ ಪರ್ಯಾಯಗಳಿವೆ. ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗಕ್ಕೆ ಹೋಗುವ ಮರಗಳನ್ನು ದೇವಕಾರು ಸೇರಿದಂತೆ ಜಿಲ್ಲೆಯ ಬಯಲು ಜಾಗದಲ್ಲಿ ಹಾಗೂ ಅಕೇಶಿಯ ತೋಪುಗಳ ಬದಲಿಗೆ ಮಳೆ ತರುವ ಮರಗಳನ್ನು ಬೆಳೆಸಬಹುದು. ಉತ್ತರ ಕರ್ನಾಟಕದ ಬಯಲು ಸೀಮೆ ಜಿಲ್ಲೆಗಳಲ್ಲಿ ಪರ್ಯಾಯ ಕಾಡು ಬೆಳೆಸಬಹುದು. ಅರಬೈಲ್ ಘಟ್ಟದಲ್ಲಿ ಟನಲ್‌ಗಳನ್ನು ಹೆಚ್ಚಿಸಬಹುದು. ಆ ಮೂಲಕ ಅರಣ್ಯವನ್ನು ಸಾಧ್ಯವಿರುವಷ್ಟು ಉಳಿಸಬಹುದು.
ಏನೇನು ಲಾಭ: ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣವಾದರೆ ಕರಾವಳಿ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳನ್ನು ಬೆಸೆಯಬಹುದು. ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ವಾಣಿಜ್ಯ ವಹಿವಾಟು ಹೆಚ್ಚಲಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ರೈತರ ಮತ್ತು ವಾಣಿಜ್ಯ ಉದ್ದಿಮೆಗಳ ರಫ್ತು ಆಮದು ವಹಿವಾಟಿಗೆ ಅನುಕೂಲ. ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ. ಯೋಜನೆ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಕಾರಣ ಎಂಬ ಮಾತಿದೆ. ತಡವಾಗಿಯಾದರೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಧ್ವನಿ ಎತ್ತಿದ್ದಾರೆ. ಅವರ ಧ್ವನಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪರಿಗಣಿಸಲಿ. ಪರಿಸರ ಉಳಿಸಿಕೊಂಡೇ ರೈಲ್ವೆ ಮಾರ್ಗ ನಿರ್ಮಾಣ ಸಾಧ್ಯವಿದೆ. ಇದರಿಂದ ಉದ್ಯೋಗ ಸೃಷ್ಟಿ ಸಾಧ್ಯ. ಮಂಗಳೂರು, ಗೋವಾ ವಾಣಿಜ್ಯ ಬಂದರುಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಕಾರವಾರ ಅಂಕೋಲಾ ಅಭಿವೃದ್ಧಿಗೆ ನಾಂದಿಯಾಗಲಿದೆ. ಗೋವಾಕ್ಕೆ ಸಾಧ್ಯವಾದದ್ದು ನಮ್ಮಲ್ಲಿ ಏಕೆ ಬೇಡ ಎಂಬ ಕೂಗು ಏಳತೊಡಗಿದೆ.
ಉತ್ತರ ಕನ್ನಡ ಜಿಲ್ಲೆಯಷ್ಟೇ ವಿಸ್ತೀರ್ಣ ಹೊಂದಿರುವ, ಜಿಲ್ಲೆಯ ಜನಸಂಖ್ಯೆಯಷ್ಟೇ ಹೊಂದಿರುವ ಗೋವಾ ಕೈಗಾರಿಕೆಗಳನ್ನು ಹೊಂದಿದೆ. ಪ್ರವಾಸೊದ್ಯಮವನ್ನು ಸಮರ್ಥವಾಗಿ ಬಳಸಿಕೊಂಡಿದೆ. ಅಲ್ಲಿ ಸಹ ನಮ್ಮಂತೆ ಅರಣ್ಯವಿದೆ. ಅದನ್ನು ಅವರು ಉಳಿಸಿಕೊಂಡೇ ಅಭಿವೃದ್ಧಿ ಸಾಧಿಸಿದ್ದಾರೆ. ಈ ಅಭಿವೃದ್ಧಿಯ ನೋಟ ನಮಗೇಕೆ ಸಾಧ್ಯವಿಲ್ಲ. ಈ ಎಲ್ಲ ಸಾಧ್ಯತೆಗಳನ್ನು ರಾಜ್ಯ ಸರ್ಕಾರ ಬಳಸಿಕೊಳ್ಳಬೇಕು. –ಜಗದೀಶ್ ಬಿರ್ಕೋಡಿಕರ್. ಟ್ಯಾಕ್ಸ ಕನ್ಸಲ್ಟಟೆಂಟ್, ಕಾರವಾರ
-ನಾಗರಾಜ ಹರಪನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.