ಹುಬ್ಬಳ್ಳಿ – ಅಂಕೋಲಾ ರೈಲು ಯೋಜನೆ; ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಚಾಲನೆ
Team Udayavani, Sep 19, 2022, 4:48 PM IST
ಅಂಕೋಲಾ: ಹುಬ್ಬಳ್ಳಿ – ಅಂಕೋಲಾ ರೈಲ್ವೇ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಮಹತ್ವದ ಹುಬ್ಬಳ್ಳಿ – ಅಂಕೋಲಾ ರೈಲು ಯೋಜನೆ ಜಾರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಅಂಕೋಲಾ ಅರ್ಬನ್ ಬ್ಯಾಂಕಿನಲ್ಲಿ ಈ ಅಭಿಯಾನದ ಪೋಸ್ಟರ್ ನ್ನು ಹೋರಾಟ ಸಮಿತಿ ಅಧ್ಯಕ್ಷ ರಮಾನಂದ ಬಿ. ನಾಯಕ, ಪುರಸಭಾಧ್ಯಕ್ಷೆ ಶಾಂತಲಾ ಅರುಣ ನಾಡಕರ್ಣಿ, ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಉದ್ಯಮಿಗಳ ಸಂಘಟನೆಯ ದೇವಿದಾಸ ಪ್ರಭು, ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ್, ವಕೀಲರ ಸಂಘಟನೆಯ ನಾಗಾನಂದ ಬಂಟ ಬಿಡುಗಡೆ ಮಾಡಿದರು.
ಈ ಅಭಿಯಾನ ವಿವಿಧ ಬ್ಯಾಂಕ್, ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಮುಂದುವರೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ರಮಾನಂದ ಬಿ. ನಾಯಕ, ಜಿಲ್ಲೆಯ ಜೊತೆಗೆ ಇಡೀ ರಾಜ್ಯದ ಆರ್ಥಿಕ ವಿಕಾಸಕ್ಕೆ ಪೂರಕವಾಗಿರುವ ಈ ಯೋಜನೆಗೆ ಪದೇ ಪದೇ ಅಡ್ಡಿ ಒಡ್ಡಲಾಗುತ್ತಿದ್ದು, ಇದು ನಿಲ್ಲಬೇಕು. ಸರ್ಕಾರ ಈ ಯೋಜನೆ ಬಗ್ಗೆ ಗಟ್ಟಿ ನಿಲುವು ತಳೆಯಬೇಕಿದೆ. ಎಲ್ಲ ಜನಪ್ರತಿನಿಧಿಗಳ ಸಹಕಾರ ಪಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಯೋಜನೆಯ ಬಗ್ಗೆ ಅಭಿಪ್ರಾಯ ಸಂಗ್ರಹಣೆಗೆ ಬರಲಿರುವ ತಜ್ಞರ ಸಮಿತಿಗೆ ಎಲ್ಲರೂ ಯೋಜನಾ ಪರ ಅಭಿಪ್ರಾಯ ಸಲ್ಲಿಸಬೇಕು ಎಂದರು.
ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದ ಸಮಿತಿಯ ಕಾರ್ಯದರ್ಶಿ ವಿಠ್ಠಲದಾಸ ಕಾಮತ್, ಈ ಯೋಜನೆಯ ಪರ ಜಾಗೃತಿಗಾಗಿ ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಲಾಗಿದ್ದು, ಎಲ್ಲರೂ ಟ್ವೀಟರ್ , ಫೇಸ್ ಬುಕ್, ವಾಟ್ಸಪ್ ಮತ್ತಿತರ ಜಾಲತಾಣಗಳಲ್ಲಿ ಯೋಜನಾಪರ ಪೋಸ್ಟ್ ದಾಖಲಿಸಬೇಕು ಎಂದರು.
ಪ್ರಮುಖರಾದ ಅರುಣ ನಾಡಕರ್ಣಿ, ಕೆ.ಎಚ್.ಗೌಡ, ಪದ್ಮನಾಭ ಪ್ರಭು, ವಿನೋದ ನಾಯಕ ಭಾಸಗೋಡ, ರವೀಂದ್ರ ಕೇಣಿ, ಸಂಜಯ ನಾಯ್ಕ, ಪುರುಶೋತ್ತಮ ನಾಯ್ಕ, ಬ್ಯಾಂಕ್ ಜನರಲ್ ಮ್ಯಾನೇಜರ್ ರವೀಂದ್ರ ವೈದ್ಯ, ಸಂಗಾತಿ ರಂಗ ಭೂಮಿಯ ಕೆ. ರಮೇಶ, ಪರ್ತಕರ್ತರ ಸಂಘದ ಅರುಣ ಶೆಟ್ಟಿ, ರಾಘು ಕಾಕರಮಠ, ನಾಗರಾಜ ಜಾಂಬಳೇಕರ್, ನಿರ್ದೇಶಕ ಉಮೇಶ ನಾಯ್ಕ, ಪುರಸಭೆ ಸದಸ್ಯ ಮಂಜುನಾಥ ನಾಯ್ಕ ಮತ್ತಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳಿದ್ದರು. ಸಂಚಾಲಕ ಉಮೇಶ ನಾಯ್ಕ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.