ಈಡೇರದ ಶಿಕ್ಷಕರ ವರ್ಗಾವಣೆ ಉದ್ದೇಶ
Team Udayavani, Oct 21, 2018, 3:30 PM IST
ಕಾರವಾರ: ಹೆಚ್ಚುವರಿ ಶಿಕ್ಷಕರ ನೆಪದಲ್ಲಿ ವರ್ಗಾವಣೆಗೆ ಮುಂದಾದ ಶಿಕ್ಷಣ ಇಲಾಖೆ ಕ್ರಮ ಹಳ್ಳಿಗಳಲ್ಲಿ ದಶಕಗಳಿಂದ ಕರ್ತವ್ಯ ಮಾಡಿದ ಶಿಕ್ಷಕರಿಗೆ ಪ್ರಯೋಜನವೇನೂ ಆಗಿಲ್ಲ. ಇದಕ್ಕೆ ಕಾರಣ ಯಾರು ಎಂದರೆ ತಾಲೂಕು ಮತ್ತು ಜಿಲ್ಲಾ ಶಿಕ್ಷಣ ಇಲಾಖೆ ರಾಜಧಾನಿಯತ್ತ ಕೈ ತೋರಿಸಿದೆ. ಶಿಕ್ಷಕರ ಸಂಘದವರಂತೂ ಬೀಸೋ ದೊಣ್ಣೆ ತಪ್ಪಿಸಿಕೊಂಡು ಮಾತೇ ಆಡದ ಸ್ಥಿತಿ ತಲುಪಿದ್ದಾರೆ. ಹಳ್ಳಿಗಳಲ್ಲಿ ಸೇವೆ ಮಾಡಿದ ತಪ್ಪಿಗೆ ಮತ್ತಷ್ಟು ದೂರದ ಗುಡ್ಡದ ಶಾಲೆಗೆ ಹೊಗಬೇಕಾದ ಸ್ಥಿತಿ ನಿರ್ಮಿಸಿದೆ ಸರ್ಕಾರ. ಇದಕ್ಕೆ ಕಾರಣ ಸ್ಥಳೀಯ ತಾಲೂಕು ಶಿಕ್ಷಣ ವಲಯದ ಅಧಿಕಾರಿಗಳು ಎಂದು ನೇರವಾಗಿ ಆರೋಪಿಸಿದವರು ಶಿಕ್ಷಕಿಯರು. ಕಾರವಾರದ ಗುರುಭವನದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಶಿಕ್ಷಕರ ಹೆಚ್ಚುವರಿ ನೆಪದ ಹುದ್ದೆಗಳ ಕೌನ್ಸಿಲಿಂಗ್ ವೇಳೆ ಕೇಳಿ ಬಂದ ಮಾತುಗಳಿವು.
ನಿಯಮ ಅರ್ಥ ಮಾಡಿಕೊಳ್ಳದ ಅಧಿಕಾರಿಗಳು:
ಶಿಕ್ಷಣ ಇಲಾಖೆ ರೂಪಿಸಿದ ವರ್ಗಾವಣೆ ನೀತಿಯನ್ನೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಅರ್ಥ ಮಾಡಿಕೊಂಡಿಲ್ಲ. ವರ್ಗಾವಣೆ ಅಧಿ ನಿಯಮಗಳನ್ನು ಸ್ಪಷ್ಟವಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಪಾಲಿಸಿಲ್ಲ. ಪದವೀಧರ ಶಿಕ್ಷಕರ ಪಟ್ಟಿ ತಯಾರಿಸಿಲ್ಲ. ಪದವಿ ಮುಗಿಸಿದ ಶಿಕ್ಷಕಿಯರು ಪಟ್ಟಣದ ಶಾಲೆಗಳಲ್ಲಿ ಹಾಗೂ ಹಿಪ್ರಾ ಶಾಲೆಯಲ್ಲಿ ಕಲಿಸಬಾರದು ಎಂಬ ನೀತಿ ಎಲ್ಲಿದೆ? ಪದವೀಧರರನ್ನು ವಿಜ್ಞಾನ ಕಲಿಸಲು ನಿಯೋಜಿಸಬೇಡಿ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆಯೇ? ವಿಜ್ಞಾನ ಪದವಿ ಹುದ್ದೆಗಳಿಗೆ ಕಲಾ ಶಿಕ್ಷಕರನ್ನು ನಿಯೋಜಿಸಬೇಡಿ ಎಂಬ ಸ್ಪಷ್ಟ ಆದೇಶ ಇಲ್ಲದಿರುವುದನ್ನೇ ಆಯುಧವಾಗಿ ಬಳಸಿರುವ ಡಿಡಿಪಿಐ ಮತ್ತು ಬಿಇಓಗಳು ತಮ್ಮ ಅಧೀನ ಸಿಬ್ಬಂದಿಗಳಿಂದ ಹಿಪ್ರಾ ಶಾಲೆಗಳ ಖಾಲಿ ಹುದ್ದೆಗಳನ್ನು ಮುಚ್ಚಿಟ್ಟಿದ್ದಾರೆ. ಆ ಖಾಲಿ ಹುದ್ದೆಗಳಿಗೆ ಸರ್ಕಾರ ತಕ್ಷಣ ಬದಲಿ ವ್ಯವಸ್ಥೆ ಮಾಡಲಿದೆಯೇ? ಜಿಲ್ಲೆಯಲ್ಲಿ 150 ಪದವೀಧರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ ತುಂಬುತ್ತೇವೆ ಎಂದು ಶಿಕ್ಷಣ ಸಚಿವರು ಮತ್ತು ಸರ್ಕಾರ ಡಿಡಿಪಿಐ ಅವರಿಗೆ ಮಾತು ಕೊಟ್ಟಿದೆಯೇ? ಇಷ್ಟು ದಿನ ವಿಜ್ಞಾನ ವಿಷಯವನ್ನು ಕನ್ನಡ ಹಾಗೂ ಕಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡಿಲ್ಲವೇ ಎಂದು ಶಿಕ್ಷೆ ಅನುಭವಿಸಿರುವ ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.
ಇದಕ್ಕೆ ಅಧಿಕಾರಿಗಳ ಬಳಿ ಉತ್ತರವೇ ಇಲ್ಲ. ಹೆಚ್ಚು ದಿನ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿಯರಿಗೆ ಹೆಚ್ಚು ಅಂಕ ನೀಡಿ ಮತ್ತಷ್ಟು ದೂರದ ಶಾಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಕಡಿಮೆ ಸೇವೆ ಮಾಡಿರುವ ಶಿಕ್ಷಕರಿಗೆ ಕಡಿಮೆ ಅಂಕ ನೀಡಿದ್ದ ಶಾಲೆಗಳಲ್ಲಿ ಉಳಿಯುವಂತೆ ಮಾಡಲಾಗಿದೆ. ನಗರದಲ್ಲಿ ಇರುವ ಶಿಕ್ಷಕರು ನಗರದಲ್ಲೇ ಉಳಿಯುವಂತೆ ವ್ಯವಸ್ಥಿತವಾಗಿ ಶಿಕ್ಷಣ ಇಲಾಖೆ ಕಾರ್ಯ ಮಾಡಿದೆ. ಹೆಚ್ಚುವರಿ ನೆಪದಲ್ಲಿ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಇರುವ ಶಿಕ್ಷಕರನ್ನು ಬಿಡದೇ ದೂರದ ಶಾಲೆಗಳಿಗೆ ಹಾಕಿ, ಶಾಲೆಗಳಿಗೂ ಅನ್ಯಾಯ ಮಾಡಲಾಗಿದೆ. ಹೆಚ್ಚುವರಿ ಮರು ನಿಯುಕ್ತಿಯಲ್ಲಿ ಅನ್ಯಾಯದ ಪರಮಾವಧಿ ಮಾಡಲಾಗಿದೆ. ಹೊನ್ನಾವರ ತಾಲೂಕಿನ ಶಿಕ್ಷಕಿಯರು ಕಣ್ಣೀರು ಹಾಕುತ್ತಾ ಕೌನ್ಸಿಲಿಂಗ್ ಕೇಂದ್ರದಿಂದ ಭಾರದ ಹೃದಯ ಹೊತ್ತು ತೆರಳಿದ ಘಟನೆ ಶನಿವಾರ ನಡೆಯಿತು.
ಅಂಕೋಲಾದಲ್ಲಿ ಹೆಚ್ಚುವರಿ ಹುದ್ದೆಗಳಾಗಿ ಗುರುತಿಸಿದ್ದು 23. ಈ ಪೈಕಿ 12 ಶಿಕ್ಷಕರಿಗೆ ವರ್ಗಾವಣೆ ಮಾಡಿ ಆದೇಶ ನೀಡಲಾಯಿತು. ಮೊದಲಿದ್ದ ನಾಲ್ವರು ಶಿಕ್ಷಕರಿಗೆ ಮಾತ್ರ ಸನಿಹದ ಶಾಲೆಗಳು ಸಿಕ್ಕವು. ನಂತರದವರಿಗೆ ಗ್ರಾಮೀಣ ಭಾಗದ ದೂರದ ಶಾಲೆಗಳಿಗೆ ತೆರಳುವ ಧಾವಂತದ ಶಿಕ್ಷೆ ಸಿಕ್ಕಿತು. ಗ್ರಾಮೀಣ ಭಾಗದಲ್ಲಿ ದಶಕಗಳ ಕಾಲ ಸೇವೆ ಮಾಡಿದ್ದಕ್ಕೆ ಶಿಕ್ಷಣ ಇಲಾಖೆ ಒಳ್ಳೆಯ ಶಿಕ್ಷೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳವೇ ಸಿಗದ ಕಾರಣ ಹೆಚ್ಚುವರಿಯಾದ 11 ಶಿಕ್ಷಕರು ಇರುವ ಶಾಲೆಗಳಲ್ಲೇ ಮುಂದುವರಿದರು. ಕಡಿಮೆ ಅವಧಿ ಗ್ರಾಮೀಣ ಭಾಗದಲ್ಲಿ ಸೇವೆ ಮಾಡಿದ ಶಿಕ್ಷಕರಿಗೆ ಇರುವ ಶಾಲೆಯಾದರೂ ಉಳಿಯಿತು. ಗ್ರಾಮೀಣ ಭಾಗದಲ್ಲಿ ಹೆಚ್ಚು ವರ್ಷ ಸೇವೆ ಮಾಡಿದ ಪದವೀಧರ ಶಿಕ್ಷಕಿಯರಿಗೆ ದೂರದ ಶಾಲೆಗೆ ವರ್ಗಾವಣೆ ಮಾಡಿದ್ದು ಎಷ್ಟು ಸರಿ ಎಂಬುದು ನೊಂದ ಶಿಕ್ಷಕಿಯರ ಪ್ರಶ್ನೆ. ಉದಾಹರಣೆಗೆ ಹೆಗ್ರೆ ಶಾಲೆಯಲ್ಲಿ ಕೆಲಸ ಮಾಡಿದವರನ್ನು ಹಿಲ್ಲೂರು ಭಾಗದ ಬೆಟ್ಟದ ಗ್ರಾಮವಾದ ಬೊರಳ್ಳಿಗೆ ಹಾಕಲಾಗಿದೆ. ಹಡವದಲ್ಲಿ ಕೆಲಸ ಮಾಡಿದ ಶಿಕ್ಷಕಿಯನ್ನು ಮರಕಾಲು ಎಂಬ ಹಳ್ಳಿ ಶಾಲೆಗೆ ವರ್ಗಾಯಿಸಲಾಗಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳೇ ಕುರುಡಾದರೆ ಏನು ಮಾಡುವುದು. ಈಗ ಉಳಿದಿರುವ ದಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದು ಇಲ್ಲವೇ ಕಾನೂನು ಹೋರಾಟ ಮಾಡುವುದು ಎಂಬ ವಿಷಾದ ಅವರ ಮಾತಿನಲ್ಲಿ ಇತ್ತು. ವಿಜ್ಞಾನ ಪದವೀಧರರನ್ನು ಸರ್ಕಾರ ಇನ್ನು ಭರ್ತಿ ಮಾಡಿಲ್ಲ. ಆ ಹುದ್ದೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಹೆಚ್ಚುವರಿ ವರ್ಗಾವಣೆಯ ವೇಳೆ ಮುಚ್ಚಿಟ್ಟಿದ್ದೇಕೆ ಎಂಬ ದೊಡ್ಡ ಸಂದೇಹ ಶಿಕ್ಷಕ ವಲಯದಲ್ಲಿದೆ. ಈ ಪ್ರಶ್ನೆಗೆ ಯಾವ ಅಧಿಕಾರಿಯೂ ಉತ್ತರಿಸುತ್ತಿಲ್ಲ. ಇದನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗಮನಿಸಬೇಕಿದೆ. ಪಕ್ಕದ ಜಿಲ್ಲೆಯ ವರ್ಗಾವಣೆ ನೀತಿ ಉತ್ತರ ಕನ್ನಡಕ್ಕೆ ಯಾಕೆ ಅನ್ವಯವಾಗುವುದಿಲ್ಲ ಎಂಬ ಪ್ರಶ್ನೆಯನ್ನು ಹೆಚ್ಚುವರಿ ಶಿಕ್ಷಕರು ಕೇಳುತ್ತಿದ್ದಾರೆ.
ಶಿಕ್ಷಕರ ಸಂಘಗಳು ಮೌನ: ಶಿಕ್ಷಕರ ಸಂಘದಲ್ಲಿ ಇರುವ ಪದಾಧಿಕಾರಿಗಳನ್ನು ಹೆಚ್ಚುವರಿ ಅಥವಾ ವರ್ಗಾವಣೆಗೆ ಪರಿಗಣಿಸಬಾರದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಂಘದ ಮಧ್ಯೆ ಅಲಿಖಿತ ಒಪ್ಪಂದ ಇರುವ ಕಾರಣ ಅವರು ವರ್ಗಾವಣೆ ಭೀತಿಯಿಂದ ಬಚಾವ್ ಆಗಿದ್ದಾರೆ. ಶಿಕ್ಷಕರ ನೋವುಗಳಿಗೆ ಅವರದು ಸಾಂತ್ವನದ ಮಾತು ಮಾತ್ರ. ಪದವೀಧರ ಶಿಕ್ಷಕರಿಗೆ ನಗರ ಭಾಗದ ಖಾಲಿ ಹುದ್ದೆಗಳನ್ನು ಕೊಡಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಹಿರಿಯ ಪ್ರಾಥಮಿಕ ಶಾಲೆಗಳ ಖಾಲಿ ಹುದ್ದೆಗಳಿಗೆ ಗ್ರಾಮೀಣ ಭಾಗದ ಹೆಚ್ಚುವರಿ ಶಿಕ್ಷಕರನ್ನು ತರಲು ಸಂಘದವರು ಪ್ರಯತ್ನಿಸಲಿಲ್ಲ ಎಂಬುದು ನೊಂದ ಶಿಕ್ಷಕಿಯರ ನೇರ ಆರೋಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.