ಪ್ರಯಾಣಿಕರಿಗೆ ಟೋಲ್‌ಗೇಟ್ ಶಾಕ್
ಸದ್ದಿಲ್ಲದೇ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಆರಂಭಿಸಿದೆ ಚತುಷ್ಪಥ ಗುತ್ತಿಗೆ ಕಂಪನಿ ಐಆರ್‌ಬಿ
Team Udayavani, Feb 16, 2020, 7:16 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಓಡಾಡುವ ಪ್ರಯಾಣಿಕರಿಗೂ ಶುಕ್ರವಾರದಿಂದ ಶಾಕ್ ಆಗಿದ್ದರೆ, ಟೋಲ್ ಸಂಗ್ರಹಿಸುವ ಕಂಪನಿ ಮುಖದಲ್ಲಿ ನಗೆ ಅರಳಿದೆ.
ಪ್ರಯಾಣಿಕರ ಹಣವನ್ನು ಟೋಲ್ ಕಂಪನಿಗೆ ವರ್ಗಾಯಿಸುವ ಈ ಹೊಸ ಆಟ ಸಾರ್ವಜನಿಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ಉತ್ತರ ಕನ್ನಡದಲ್ಲಿ ರಸ್ತೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಕೆಲ ಸೇತುವೆ ಕಾರ್ಯ ಮುಗಿದಿಲ್ಲ. ಕಾರವಾರದ ಮೇಲ್ಸೇತುವೆ ನಿರ್ಮಾಣ ನಡೆಯುತ್ತಿದೆ. ಆದಾಗ್ಯೂ ಜನರ ಕಿಸೆ ಕತ್ತರಿಸುವ ಆಟಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಶುಕ್ರವಾರ ಮುಂಜಾನೆ ಅಂಕೋಲಾದಿಂದ ಕಾರವಾರಕ್ಕೆ ಹಾಗೂ ಕಾರವಾರದಿಂದ ಅಂಕೋಲಾಕ್ಕೆ ಬರುವ ಪ್ರಯಾಣಿಕರಿಗೆ ಶಾಕ್ ಕಾದಿತ್ತು. ಪ್ರತಿದಿನ ರೂ. 33 ಕೊಟ್ಟು ಬರುತ್ತಿದ್ದ ಪ್ರಯಾಣಿಕರಿಂದ ಶುಕ್ರವಾರ ರೂ. 42 ವಸೂಲಿ ಮಾಡಲಾಗಿದೆ. ಅಂದರೆ ಪ್ರತಿ ಪ್ರಯಾಣಿಕರು ಇನ್ಮುಂದೆ 33 ಕಿಮೀ ಪ್ರಯಾಣಕ್ಕೆ 9 ರೂ. ಹೆಚ್ಚಿಗೆ ಕೊಡಬೇಕು. ಕಾರವಾರದಿಂದ ಭಟ್ಕಳ ತುದಿಯವರೆಗೆ ಹೋದರೆ ಬರೊಬ್ಬರಿ 35 ರೂ. ಹೆಚ್ಚಿಗೆ ಭಾರ ಪ್ರಯಾಣಿಕನ ಜೇಬಿಗೆ ಬೀಳಲಿದೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದ್ದು ಕರಾವಳಿ ಜನಪ್ರತಿನಿಧಿಗಳು ಈ ಬಗ್ಗೆ ಮೂಕ ಪ್ರೇಕ್ಷಕರಾಗಿರುವುದು ಜನರ ಕೋಪಕ್ಕೆ ಕಾರಣವಾಗಿದೆ.
ಜನರಿಂದ ಟೋಲ್ ವಸೂಲಿ ಮಾಡುವ ಐಆರ್‌ಬಿ ಇನ್ನೂ ಕಾಮಗಾರಿಯನ್ನೇ ಮುಗಿಸಿಲ್ಲ. ಅರ್ಧಕ್ಕರ್ಧ ಕಾಮಗಾರಿ ಇನ್ನೂ ಬಾಕಿ ಇದೆ. ಇದ್ದ ರಸ್ತೆಯನ್ನು ಕತ್ತರಿಸಿ ಕಚಡಾ ಮಾಡಿದ್ದಾರೆ. ಅಲ್ಲದೇ ಸರಕಾರದ ಸಹಕಾರದಿಂದ ಮುಗಿಯದ ರಸ್ತೆಗೆ ನಮ್ಮಿಂದ ಹಣ ಕೀಳುತ್ತಿದ್ದಾರೆ ಎಂದು ಕಾರವಾರದ ಖಾಸಗಿ ಕಚೇರಿಯೊಂದರಲ್ಲಿ ಕೆಲಸ ಮಾಡುವ ರಾಮದಾಸ್ ಆತಂಕ ವ್ಯಕ್ತಪಡಿಸಿದರು.
ಇಡೀ ಕಾರ್ಯಾಚರಣೆ ಅಸ್ವಾಭಾವಿಕ ರೀತಿಯಲ್ಲಿ ನಡೆಸಲಾಗುತ್ತಿದೆ. ಮೊದಲು ಗುಡ್ಡಗಳನ್ನು ಕತ್ತರಿಸಿ ಕಲ್ಲು ಕೊಳ್ಳೆ ಹೊಡೆಯಲು ಕಾಮಗಾರಿಯನ್ನು ನಿಧಾನವಾಗಿ ನಡೆಸಲಾಯಿತು. ಅವಶ್ಯಕತೆಗಿಂತ ಹೆಚ್ಚು ಕಲ್ಲು ತೆಗೆದು ಅದನ್ನು ಸಾಗರಮಾಲಾ ಯೋಜನೆಗೆ ಮಾರಾಟ ಮಾಡಿದ್ದಾರೆ. ಕೆಲವು ಕಡೆ ಅಗಲವಾಗಿರುವ ರಸ್ತೆ ಹಠಾತ್ತನೆ ಕೊನೆಗೊಂಡು ತಿರುವುಗಳು ಬರುತ್ತವೆ. ಚಾಲಕರು ಗಲಿಬಿಲಿಗೊಂಡು ಅಪಘಾತಗಳಾಗುತ್ತಿವೆ. ಈ ಅವೈಜ್ಞಾನಿಕ ಕಾಮಗಾರಿಯಿಂದ ಎಷ್ಟೋ ಜನ ಅಪಘಾತದಲ್ಲಿ ಸಾವನ್ನಪ್ಪಿ ಉಳಿದವರು ಅಂಗವಿಕಲರಾಗಿದ್ದಾರೆ. ನಿಗದಿತ ಅವಧಿಯಲ್ಲಿ ಕಾಮಗಾರಿ ನಡೆಸದೇ ಟೋಲ್ ವಸೂಲಿ ಆರಂಭಿಸಿದ್ದಾರೆ. ಅಂದರೆ ಇನ್ನು ಬಾಕಿ ಉಳಿದ ಕಾಮಗಾರಿ ಪೂರ್ತಿಗೊಳಿಸಲು ದಶಕಗಳನ್ನೇ ಈ ಗುತ್ತಿಗೆದಾರರು ತೆಗೆದುಕೊಂಡರೂ ಅಥವಾ ಬಾಕಿ ಕಾಮಗಾರಿ ನಡೆಸದಿದ್ದರೂ ಅವರಿಗೆ ನಷ್ಟವಿಲ್ಲ ಎಂದು ಪ್ರಯಾಣಿಕರು ಆರೋಪಿಸಿದರು.
ಸರಕಾರ ಹಾಗೂ ಗುತ್ತಿಗೆದಾರರ ನಡುವೆ ಶೇ.75 ರಷ್ಟು ಕೆಲಸ ಮುಗಿದ ಮೇಲೆ ಹಣ ವಸೂಲಿ ಮಾಡಬಹುದು ಎಂಬ ಒಪ್ಪಂದವಾಗಿದೆ ಎಂದು ಹೇಳಲಾಗುತ್ತಿದೆ. ಸರಕಾರ ಹಣವನ್ನು ಈ ಗುತ್ತಿಗೆದಾರರಿಗೆ ಒಪ್ಪಂದದ ಪ್ರಕಾರ ನೀಡಲಿ. ತಾವು ನಿರಾತಂಕವಾಗಿ ಉಪಯೋಗಿಸದೇ ಇರುವ, ಅರ್ಧ ನಿರ್ಮಾಣವಾದ ರಸ್ತೆಯಲ್ಲಿ ಓಡಾಡುವ ಜನರು, ವಾಹನಗಳು ಪೂರ್ತಿ ಟೋಲ್ ಏಕೆ ತುಂಬಬೇಕು ಎಂಬುದು ಹಲವರ ಪ್ರಶ್ನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈಗ ಪ್ರತಿ ಟೋಲ್‌ಗೇಟ್‌ನಲ್ಲಿಯೂ ಬಸ್‌ಗಳು ಟೋಲ್ ಹಣ ತುಂಬಲೇ ಬೇಕು. ಹೀಗಾಗಿ ಆ ಹಣದ ಭಾರವನ್ನು ಪ್ರಯಾಣಿಕರಿಗೆ ವರ್ಗಾಯಿಸಿದ್ದೇವೆ ಎಂದು ಹೇಳಿದ್ದಾರೆ. ಕೇವಲ 33 ಕಿಮೀ ಉದ್ದದ ರಸ್ತೆಗೆ ಭಾರಿ ಪ್ರಮಾಣದಲ್ಲಿ ಟೋಲ್ ವಿಧಿಸುವುದು ಕೂಡ ಆಕ್ಷೇಪಕ್ಕೆ ಕಾರಣವಾಗಿದೆ.
ಬಿಜೆಪಿಗೆ ತಿರುಗುಬಾಣ
ಟೋಲ್‌ಗೇಟ್‌ಗಳಲ್ಲಿ ಕಾನೂನಿನ ಪ್ರಕಾರ ಕಾಮಗಾರಿ ಪೂರ್ತಿಯಾದ ನಂತರವೇ ಸಾರ್ವಜನಿಕರಿಂದ ಹಣ ವಸೂಲಿ ಮಾಡಬೇಕು ಎನ್ನುತ್ತಾರೆ ಕಾನೂನು ತಜ್ಞರು. ಅಲ್ಲದೇ ಈ ರಸ್ತೆ ಸುಸ್ಥಿತಿಯಲ್ಲಿ ಇಡಬೇಕಾದ ಜವಾಬ್ದಾರಿಯೂ ಟೋಲ್ ಸಂಗ್ರಹಿಸುವವರಾದಾಗಿರುತ್ತದೆ. ಟೋಲ್ ನೀಡಿದ ಸಾರ್ವಜನಿಕರಿಗೆ ತಮ್ಮ ಇಂಧನ ಉಳಿತಾಯ ಹಾಗೂ ವಾಹನದ ಸವಕಳಿ ತಪ್ಪುವುದರಿಂದ ಉತ್ತಮ ರಸ್ತೆಗಳಿಗೆ ಟೋಲ್ ನೀಡಿದರೆ ಅಪ್ರತ್ಯಕ್ಷವಾಗಿ ಆ ಹಣ ವಾಹನದ ಇಂಧನ ಹಾಗೂ ಸವಕಳಿಯಲ್ಲಿ ಉಳಿತಾಯವಾಗುತ್ತದೆ. ಆದರೆ ರಾ.ಹೆ. 66 ರಲ್ಲಿ ರಸ್ತೆಯನ್ನು ಎಲ್ಲ ಕಡೆ ಅಭಿವೃದ್ಧಿಪಡಿಸಿಲ್ಲ. ಅಲ್ಲದೇ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಅಂದರೆ ಎರಡೂ ಕಡೆಗಳಿಂದ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಕರಾವಳಿ ಭಾಗದ ಮೂವರು ಬಿಜೆಪಿ ಶಾಸಕರೂ ಮೌನವಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಗುತ್ತಿಗೆದಾರ ಕಂಪನಿ ಮಹಾರಾಷ್ಟ್ರ ಮೂಲದ ಕೇಂದ್ರ ಸಚಿವರೊಬ್ಬರಿಗೆ ಹತ್ತಿರದ್ದಾಗಿದೆ. ಹೀಗಾಗಿ ಮೇಲಿಂದ ಆದೇಶ ಬಂದ ಕಾರಣ ಜಿಲ್ಲೆಯ ಶಾಸಕರೂ ತಲೆ ಅಲ್ಲಾಡಿಸಿ ಸುಮ್ಮನಿದ್ದಾರೆ. ಈ ಹೆದ್ದಾರಿ ಕಾಮಗಾರಿ ಪೂರ್ತಿಯಾಗಲು ಮತ್ತೆ ಎಷ್ಟು ಕಾಲ ಬೇಕು? ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದರೂ ಸರ್ಕಾರ ಕಂಪನಿಯ ಬೆನ್ನಿಗೆ ನಿಂತಿದೆ. ಇದು ಮುಂಬರುವ ದಿನಗಳಲ್ಲಿ ಬಿಜೆಪಿ ಶಾಸಕರಿಗೆ ಭಾರಿ ತಿರುಗುಬಾಣವಾಗಲಿದೆ ಎಂಬ ಅನಿಸಿಕೆ ಜನರಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.