ಮತಯಂತ್ರ ಹ್ಯಾಕ್ ಮಾಡುವುದು ಅಸಾಧ್ಯ
Team Udayavani, Mar 9, 2019, 11:21 AM IST
ಕಾರವಾರ: ಮತಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯ ಎಂಬ ಸುಳ್ಳು ಸುದ್ದಿ ಹಬ್ಬಿರುವುದರಿಂದ, ಜನರಲ್ಲಿನ ತಪ್ಪು ತಿಳಿವಳಿಕೆ ದೂರ ಮಾಡುವುದಕ್ಕೋಸ್ಕರ ಜಿಲ್ಲೆಯಾದ್ಯಂತ ಚುನಾವಣಾ ಆಯೋಗದ ವತಿಯಿಂದ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ಮಾಧ್ಯಮದವರಿಗೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಗೆ ಮತಯಂತ್ರ ಪ್ರಾತ್ಯಕ್ಷಿಕೆ ನಡೆದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮತದಾರರಲ್ಲಿ ಅರಿವು ಮೂಡಿಸುವಲ್ಲಿ ಮಾಧ್ಯಮದ ಪಾತ್ರ ಬಹಳ ಮಹತ್ವಪೂರ್ಣದ್ದಾಗಿದೆ. ಅಲ್ಲದೇ ಒಬ್ಬರ ಬಾಯಿಂದ ಮತ್ತೂಬ್ಬರಿಗೆ ಮಾಹಿತಿ ಹಂಚಿಕೆ, ನ್ಯಾಯಾಲಯದ ಆವರಣಗಳಲ್ಲಿ ಅರಿವು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಸೂಕ್ತ ಮಾಹಿತಿ ನೀಡುವುದರಿಂದ ಮತದಾರರಲ್ಲಿ ಜಾಗೃತಿ ಮೂಡಿಸಬಹುದಾಗಿದೆ ಎಂದರು.
ಚುನಾವಣಾ ಆಯೋಗ ಕಾಲ ಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಗಳಿಂದ ಮತಯಂತ್ರಗಳಲ್ಲಿ ಸುಧಾರಿತ ಆಧುನಿಕ ಹೊಸ ತಂತ್ರಜ್ಞಾನ ಅಳವಡಿಸುವ ತೀರ್ಮಾನ ಸೇರಿದಂತೆ, ನೀತಿ ಸಂಹಿತೆ ನಿಯಮಾವಳಿಗಳಲ್ಲಿ ಬದಲಾವಣೆ ತರುತ್ತದೆ. ಒಟ್ಟಾರೆ ಚುನಾವಣೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲು ಸರ್ವ ರೀತಿಯ ಪ್ರಯತ್ನ ಸಾಗಿದೆ. ಈ ಹಿಂದೆ ಮತಯಂತ್ರಗಳಲ್ಲಿ ಎಂ-1, ಎಂ-2 ತಂತ್ರಾಂಶ ಬಳಸಲಾಗುತ್ತಿತ್ತು. ಈಗ ಹೊಸ ಸುಧಾರಿತ ಎಂ-3 ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಬಳಸಲಾಗುತ್ತಿದೆ. ಈ ಬಾರಿ ಮತದಾನ ಖಾತ್ರಿ ಪಡಿಸುವ ವಿವಿ ಪ್ಯಾಡ್‌ನ್ನು ವಿಶೇಷವಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ ಯಾವುದೇ ಮತಯಂತ್ರವನ್ನು ಒಮ್ಮೆ ಮಾತ್ರ ಪ್ರೊಗ್ರಾಮಿಂಗ್ ಮಾಡಲು ಸಾಧ್ಯ. ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಅಸಾಧ್ಯದ ಮಾತು. ಈ ಮತಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯ ಎಂದು ಹೇಳುವವರು ಹ್ಯಾಕ್ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ವಿದೇಶಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತದಾನ ಪ್ರಕ್ರಿಯೆ ನಿಲ್ಲಿಸಲಾಗಿದೆ ನಿಜ. ಆದರೆ ಭಾರತದಲ್ಲಿ ಆವಿಷ್ಕರಿಸಲಾದ ಸುಧಾರಿತ ಮತಯಂತ್ರದ ತಾಂತ್ರಿಕ ವ್ಯವಸ್ಥೆ ವಿದೇಶಗಳಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿನ ವಿದ್ಯುನ್ಮಾನ ಮತದಾನ ವ್ಯವಸ್ಥೆ ವಿಫಲಗೊಳ್ಳಲು ಮುಖ್ಯ ಕಾರಣ. ಇಲ್ಲಿನ ಚುನಾವಣೆ ಅತ್ಯಂತ ಪಾರದರ್ಶಕವಾಗಿದ್ದು, ಯಾವ ಮತಪೆಟ್ಟಿಗೆ ಎಲ್ಲಿ ಹೋಗುತ್ತದೆ ಎಂಬುದು ಚುನಾವಣೆ ಸಿಬ್ಬಂದಿಗೆ ಗೊತ್ತಾಗುವುದಿಲ್ಲ. ಪ್ರತಿಯೊಂದು ರಾಜ್ಯಕ್ಕೆ ಹೊರ ರಾಜ್ಯದಿಂದ ಚುನಾವಣಾ ವೀಕ್ಷಕರನ್ನು ಕಳಿಸಲಾಗುತ್ತದೆ. ಚುನಾವಣೆ ಸಿಬ್ಬಂದಿಗೆ ಮೂರು ಹಂತಗಳಲ್ಲಿ ಮತಯಂತ್ರ ಬಳಸುವುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ಮತಗಟ್ಟೆ ಮತ್ತು ಮತಪೆಟ್ಟಿಗೆ ಸಂಗ್ರಹಾಗಾರ ಹಾಗೂ ಎಣಿಕೆ ಕೇಂದ್ರಗಳಿಗೆ ಕಟ್ಟು ನಿಟ್ಟಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಎಲ್ಲೆಡೆ ನಿಗಾ ಇಡಲಾಗುತ್ತದೆ ಎಂದು ತಿಳಿಸಿದರು.
ಚುನಾವಣೆ ಘೋಷಣೆ ಆಗುವ ಮುಂಚೆ ಮತ್ತು ನೀತಿಸಂಹಿತೆ ಜಾರಿಯಾದ ಬಳಿಕ ಹಣ, ಮದ್ಯದ ಪ್ರಭಾವ ತಗ್ಗಿಸಲು ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಮೂಲಕ ದಾಳಿ ನಡೆಸಲು ಚಾಲನೆ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಕಚೇರಿಗೆ ಕಾಲಕಾಲಕ್ಕೆ ವರದಿ ನೀಡಬೇಕಾಗುತ್ತದೆ. ಹೀಗಾಗಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಪೂರ್ಣ ನಿಯಂತ್ರಣ ಹೇರಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಸ್ವೀಪ್ ಅಧ್ಯಕ್ಷ ಹಾಗೂ ಸಿಇಒ ಎಂ.ರೋಶನ್ ಮಾತನಾಡಿ, ಜಿಲ್ಲೆಯಲ್ಲಿ ಮತದಾನ ಜಾಗೃತಿಗೋಸ್ಕರ ಈಗಾಗಲೇ 72 ಇವಿಎಂ ಮಷಿನ್‌ಗಳನ್ನು ತಹಶೀಲ್ದಾರ್ ಕಚೇರಿ ಸೇರಿದಂತೆ, 14 ಕೇಂದ್ರಗಳಲ್ಲಿ ಅಳವಡಿಸಲಾಗಿದೆ. ಇಲ್ಲಿ ಡಮ್ಮಿ ಮತದಾನ ನಡೆಸಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಈ ಎಲ್ಲ ಕೇಂದ್ರಗಳಲ್ಲಿ ಇದುವರೆಗೆ 2,69990 ಡಮ್ಮಿ ಮತದಾನವಾಗಿದೆ. ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚಿನ 14,210 ವಿಕಲಚೇತನ ಮತದಾರರನ್ನು ಗುರುತಿಸಲಾಗಿದ್ದು, ಚುನಾವಣೆ ಸಂದರ್ಭದಲ್ಲಿ ಅವರನ್ನು ಮತಗಟ್ಟೆಗೆ ಕರೆತರುವ ವ್ಯವಸ್ಥೆ ಕೂಡ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ತರಬೇತುದಾರ ಚೆಂದನ್ ಎನ್.ಜೆ. ಹಾಗೂ ಶಿವಾನಂದ ಭಟ್ಟ ಮತಯಂತ್ರ ಕಾರ್ಯನಿರ್ವಹಣೆ ಬಗ್ಗೆ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ್, ವಾರ್ತಾಧಿಕಾರಿ ಹಿಮಂತರಾಜು ಇದ್ದರು.
ಸಾಮಾನ್ಯವಾಗಿ ಹೊಸದಾಗಿ ಮತದಾರರ ಪಟ್ಟಿಗೆ ಸೇರುವ 18 ವರ್ಷ ತುಂಬಿದ ಯುವ ಮತದಾರರು ಮತಗಟ್ಟೆಗೆ ಬರಲು ಸಂಕೋಚ ಪಡುತ್ತಾರೆ. ಅಂತಹ ಮತದಾರರನ್ನು ದೃಷ್ಠಿಯಲ್ಲಿಟ್ಟುಕೊಂಡು ಅವರಿಗೆ ಮನವರಿಕೆ ಮಾಡಲು, ಮಾರುಕಟ್ಟೆ, ಬಸ್‌ನಿಲ್ದಾಣ, ಜಾತ್ರೆ, ಕಾಲೇಜುಗಳಲ್ಲಿ ಡಮ್ಮಿ ಮತದಾನ ನಡೆಸುವುದರ ಮೂಲಕ ಅರಿವು ಮೂಡಿಸಲಾಗುತ್ತಿದೆ.
ಡಾ| ಹರೀಶಕುಮಾರ.ಕೆ. ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.