ನಿಂತಿಲ್ಲ ಭೂ ಕುಸಿತದ ಆತಂಕ| ನೆಲದ ಸಾರ ಉಳಿಸಿಕೊಳ್ಳವ ಯತ್ನ ಆಗಲಿ
ಕುಸಿತದ ಪ್ರಮಾಣ ತಗ್ಗಿಸಲು ಕೊರ್ಸೆ ಹಕ್ಕೊತ್ತಾಯ
Team Udayavani, Aug 22, 2021, 5:53 PM IST
ವರದಿ: ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ: ಮಳೆ ಅತಿಯಾಗಿ ಮತ್ತೆ ಬಂದರೆ ಭೂ ಕುಸಿತ ಆಗಬಹುದು. ಇಂಥ ಆತಂಕ ಇನ್ನೂ ಮಲೆನಾಡಿನ ಊರುಗಳಲ್ಲಿ ಬಿಟ್ಟು ಹೋಗಿಲ್ಲ. ಕಾಳಿ, ಅಘನಾಶಿನಿ, ಬೇಡ್ತಿ ಕೊಳ್ಳದಲ್ಲಿ ನಡೆದ ಭೂ ಕುಸಿತಗಳು ವನವಾಸಿಗಳಿಗೆ, ರೈತರಿಗೆ, ಅರಣ್ಯ ಭೂಮಿ, ಜನಜೀವನಕ್ಕೆ ಆತಂಕವಾಗಿದೆ.
ಕಳಚೆ, ತಳಕೆಬಯಲು, ಮತ್ತೀಘಟ್ಟದಂತಹ ಪ್ರದೇಶದಲ್ಲಿ ಕೊಡಗಿನ ರೌದ್ರತೆ ಬಿಚ್ಚಿಟ್ಟಿದೆ. ಕಳೆದ ಜು 22, 23ರಂದು ಸುರಿದ ಮಳೆಗೆ ಮಾಸದ ಗಾಯಗಳಾಗಿವೆ. ಈ ಘಟನೆ ನಡೆದು ತಿಂಗಳಾಗುತ್ತಿದ್ದರೂ ಇಡೀ ಜಿಲ್ಲೆಯಲ್ಲಿ ಭೂ ಕುಸಿತದ ಆತಂಕ, ಗುಡ್ಡದ ತಲೆಯಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಆತಂಕ ಹೆಚ್ಚಿಸಿದೆ.
ಇನ್ನು ಯಾರೂ ನೋಡದ ಸ್ಥಳದಲ್ಲೂ ಕುಸಿತ, ಬಿರುಕು ಬಿಟ್ಟಿರಲೂಬಹುದಾಗಿದೆ. ಇವುಗಳ ಸರ್ವೇ ಕೂಡ ಆಗಿಲ್ಲ. ಈ ಕುಸಿತಕ್ಕೆ ಕಾರಣ ಏನು? ಜನ, ಸಮುದಾಯ, ಸರಕಾರ ಏನು ಮಾಡಬೇಕು ಎಂಬುದಕ್ಕೆ ಪರಿಸರ ತಜ್ಞರು ವಿಶ್ಲೇಷಣೆ ನಡೆಸಿದ್ದಾರೆ. ಕೊಡಗಿನ ಕುಸಿತದ ಪ್ರದೇಶದಲ್ಲಿ ಭೂ ಅಧ್ಯಯನ ನಡೆಸಿದ ತಂಡದಲ್ಲಿ ಕೆಲಸ ಮಾಡಿದ, ಪರಿಸರ ತಜ್ಞ ಡಾ| ಕೇಶವ ಹೆಗಡೆ ಕೊರ್ಸೆ “ಉದಯವಾಣಿ’ ಜೊತೆ ಈ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದ್ದಾರೆ. ಅವರು ಎತ್ತಿಕೊಟ್ಟ ಕಾರಣಗಳ ಬಗ್ಗೆ ವಿಶ್ಲೇಷಣೆ ನಡೆಸಬೇಕು.
ಶಾಶ್ವತ ಪರಿಹಾರ ಅಥವಾ ಈ ಕುಸಿತದ ಪ್ರಮಾಣ ತಗ್ಗಿಸುವ ಕಾರ್ಯಕ್ಕೆ ಎಲ್ಲರೂ ಅವರವರ ಮಟ್ಟದಲ್ಲಿ ಕೆಲಸ ಮಾಡಬೇಕು. ಕೈ ಜೋಡಿಸಬೇಕಾದ ಕಾಲಘಟ್ಟದಲ್ಲಿ ನಿಂತಿದ್ದೇವೆ. ಸೂಕ್ಷ್ಮ ಸಂಗತಿಯಲ್ಲಿ ಎಡವಟ್ಟು ಮಾಡಿಕೊಂಡರೆ ಮತ್ತಷ್ಟು ಅಪಾಯ ಕಟ್ಟಿಕೊಂಡೇ ಬದುಕು ನಡೆಸಬೇಕಾಗುತ್ತದೆ. ಕೊರ್ಸೆ ಮೂರು ಪ್ರಮುಖ ಕಾರಣಗಳ ಜೊತೆ ಅದಕ್ಕೆ ಪರಿಹಾರದ ಸಲಹೆಗಳನ್ನೂ ನೀಡಿದ್ದಾರೆ. ಸಂಕಷ್ಟ ಅನುಭವಿಸುತ್ತಿದ್ದವರಿಗೆ ನೆರವಾಗಬೇಕು. ಕಾಳಿ ಕಣಿವೆ, ಅಘನಾಶಿನಿ, ಬೇಡ್ತಿ ಕಣಿವೆಯಲ್ಲಿ ಆದ ಭೂ ಕುಸಿತ ಭಯ ಹುಟ್ಟಿಸುತ್ತದೆ. ಇದು ಬಹಳ ದೊಡ್ಡ ದುರಂತ. ರೈತರು, ವನವಾಸಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರಿಗೆ ಸಹಾಯ ಹಸ್ತ ಚಾಚಬೇಕು. ಏಕೆ ಒಮ್ಮೆಲೆ ಭೂ ಕುಸಿತ ಆಗುತ್ತಿದೆ. ತಜ್ಞರ ಮೂಲಕ ಸಮಗ್ರ ಆಧ್ಯಯನ ಆಗಬೇಕು ಎಂದಿದ್ದಾರೆ.
ಭೂಮಿಯು ಕೆಲವೆಡೆ ಬಿರುದು ನಿಂತಿದೆ. ಜಾಗರೂಕತೆ, ಸುವ್ಯವಸ್ಥೆ ಭೂ ಬಳಕೆ ನೀತಿ ಜಾರಿಗೆ ಬರಬೇಕು. ಅರಣ್ಯೀಕರಣ, ಅಭಿವೃದ್ಧಿ ಕಾಮಗಾರಿಗಳಲ್ಲಿ ಮಣ್ಣಿನ ಸಾರದ ರಕ್ಷಣೆ ಮಾಡಬೇಕು. ಈ ಮೊದಲಿದ್ದ ಕಾಡಿನ ಮರು ಹೊದಿಕೆ ಪುನರ್ ನಿರ್ಮಾಣ ಮಾಡಬೇಕು. ಆಯಾ ಕಣಿವೆಯಲ್ಲಿ ಸೂಕ್ತವಾದ ಜಾತಿವಾರು ವೃಕ್ಷಗಳ ರಕ್ಷಣೆ ಮಾಡಬೇಕು. ಗ್ರಾಪಂ ಮಟ್ಟದಲ್ಲಿ ಜನ ಸಹಭಾಗಿತ್ವದಲ್ಲಿ ಇಂತಹ ಕೆಲಸ ಆಗಬೇಕು ಎಂದು ಸರಕಾರಕ್ಕೆ, ನೀತಿ ನಿರೂಪಕರಿಗೆ ಹಕ್ಕೊತ್ತಾಯ ಮಾಡಿದ್ದಾರೆ.
ಪಶ್ಚಿಮ ಘಟ್ಟದ ಮಲೆನಾಡಿನ, ಕಾಡಿನ ಪರಿಸರ ಇಳಿ ಜಾರಿನಲ್ಲಿ ಆಗಿದೆ. ನದಿ ಕಣಿವೆಯ ಪರಿಸರ ಇದಾಗಿದೆ. ಅದು ಸೂಕ್ಷ್ಮ ಪ್ರದೇಶ. ಅದರ ಮೇಲ್ಮಣ್ಣು ಬಹಳ 70-80 ಅಡಿಯಲ್ಲಿ ಗ್ರಾನೈಟ್, ಜೇಡಿ ಮಣ್ಣು ಬರಬಹುದು. ಮೇಲ್ಮಣ್ಣಿನಲ್ಲಿ ಇಂಗಿದ ನೀರು ಒಳಗೆ ಇಂಗಲಾಗದೇ ಗುರುತ್ವಾಕರ್ಷಣೆಯ ಕಾರಣಕ್ಕೆ ತಗ್ಗಿನ ಕಡೆಗೆ ನುಗ್ಗುತ್ತದೆ. ಆಗ ಮೇಲಿನ ಮಣ್ಣನ್ನು ಹಾಗೂ ಕಾಡನ್ನು ಜಾರಿಸುತ್ತದೆ. ಇನ್ನೂ ಆಳಕ್ಕೆ ಹೋಗದ ಸಂದರ್ಭದಲ್ಲಿ ಹೀಗಾಗುತ್ತದೆ. ಮೂಲತಃ ಪಶ್ಚಿಮ ಘಟ್ಟದಲ್ಲಿ ಈ ಕಾರಣಗಳಿಂದ ಭೂ ಕುಸಿತ ಆಗುವ ಸಾಧ್ಯತೆ ಹೆಚ್ಚು. ಇದನ್ನು ಬಹು ವರ್ಷದಿಂದ ಭೂಗರ್ಭ ಶಾಸ್ತ್ರಜರು ಹೇಳುತ್ತಿದ್ದಾರೆ.
ಒಂದೆರಡು ದಿನದಲ್ಲಿ 200, 250 ಮಿಲಿ ಮೀಟರ್ ಮಳೆ ಆದರೆ ಅದನ್ನು ತಡೆದುಕೊಳ್ಳುವ ಸಾಧ್ಯತೆ ಇಲ್ಲ. ಇದರಿಂದ ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಸಾಧ್ಯತೆ ಹೆಚ್ಚು ಎನ್ನುತ್ತಾರೆ. ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಕಾಡಿನ ರಕ್ಷಣಾ ಹೊದಿಕೆ ಮಳೆ ನೀರು ಜಾರಿ ನದಿ ಸಾಗುತ್ತದೆ. ಈಚೆಗಿನ ದಶಕಗಳಿಂದ ರಸ್ತೆ, ಕಂದಕ ನಿರ್ಮಾಣ, ಕೆರೆಗಳನ್ನು ತೋಡಿದ್ದು, ರಕ್ಷಣಾ ಕಂದಕ ನಿರ್ಮಾಣ ಮಾಡಿದ್ದು, ಗುಡ್ಡದ ಮೇಲ್ಭಾದಲ್ಲಿ ಅರಣ್ಯೀಕರಣ, ಕೃಷಿ ವಿಸ್ತಾರವಾಗಿದ್ದು, ಅನಾಹುತಗಳಿಗೆ ಕಾರಣವಾಗಿದೆ. ಜೆಸಿಬಿ ಬಳಸಿ ಮೇಲ್ಮಣ್ಣು ಬಿಡಿಸಿದಾಗ ನೀರು ಜಾರಿ ಹೋಗುವ ಬದಲು ಮಣ್ಣಿನೊಳಗೆ ಇಳಿಯತೊಡಗುತ್ತದೆ. ಭೂ ಕುಸಿತದ ಸಾಧ್ಯತೆ ಇದರಿಂದ ಇನ್ನೂ ಹೆಚ್ಚು ಆಗುತ್ತದೆ. ಮೊದಲೇ ಸೂಕ್ಷ್ಮ ನಿರ್ವಹಣೆ ಮಾಡಬೇಕಿದ್ದ ಪದರಿಗೆ ಏಟಾಗಿದೆ ಎಂದೂ ವಿಶ್ಲೇಷಿಸಿದ್ದಾರೆ ಕೇಶವ ಹೆಗಡೆ ಕೊರ್ಸೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.