ಕೋಣೆನಾಲಾಕ್ಕೆ ಸ್ಲ್ಯಾಬ್ ಅಳವಡಿಸಲಿ
Team Udayavani, Dec 3, 2019, 5:52 PM IST
ಕಾರವಾರ: ನಗರದ ಹೃದಯಭಾಗದಲ್ಲಿರುವ ಕೋಣೆನಾಲಾ ಹಾಗೂ ಕೋಡಿಬಾಗದ ಮಧ್ಯೆವಾಡಾದಲ್ಲಿ ಬಂದು ಸೇರುವ ಕಾತ್ಯಾಯನಿ ಮುಖ್ಯನಾಲಾದಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದ ಉತ್ಪತ್ತಿಯಾಗುವ ಸೊಳ್ಳೆ ಕಡಿತದಿಂದ ಪಕ್ಕದ ನಿವಾಸಿಗಳು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಕೋಣೆನಾಲಾದ ಪಕ್ಕದಲ್ಲೇ ಶಾಸಕರ ಮಾದರಿಶಾಲೆ, ಸರ್ಕಾರಿ ಪ್ರೌಢಶಾಲೆ, ಲೋಕಾಯುಕ್ತ ಕಚೇರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಯಿದ್ದು, ಗಬ್ಬು ವಾಸನೆ ಕುಡಿಯುತ್ತಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.
ಮಳೆಗಾಲ ಹೊರತುಪಡಿಸಿದರೆ ಈ ಕೊಳಚೆ ನಾಲಾಗಳು ನಗರದ ನಿವಾಸಿಗಳ ಪಾಲಿಗೆ ನರಕ ಸದೃಶವಾಗಿವೆ. ಕೋಣೆನಾಲಾ ಸ್ವತ್ಛತೆಗೆ ಲಕ್ಷಾಂತರ ರೂ. ಮೀಸಲಾಗಿಡಲಾಗುತ್ತಿದೆ. ಆದರೆ ನಾಲಾದ ಸ್ವತ್ಛತೆ ಮಾತ್ರ ನಡೆಯುವುದು ಮೇ ತಿಂಗಳಲ್ಲಿ ಹೂಳು ತೆಗೆಯುವಾಗ ಮಾತ್ರ. ಉಳಿದ ಅವಧಿಯಲ್ಲಿ ಕೊಳಚೆ ನಾಲಾ ಪಕ್ಕದ ಜನರು, ವಿದ್ಯಾರ್ಥಿಗಳು, ಅಧಿಕಾರಿಗಳು ಮಾತ್ರ ಹಿಂಸೆ ಅನುಭವಿಸುತ್ತಾರೆ. ಜನರ ಮೈಮೇಲೆ ಬೊಕ್ಕೆಗಳು ಎದ್ದು, ಮೈಕೆರೆತದಂತ ಕಾಯಿಲೆಗಳು ಕಾಡತೊಡಗಿವೆ ಎಂದು ಬೇಸರ ಪಡುತ್ತಿದ್ದಾರೆ. ಕೊಳಚೆ ನಾಲಾದ ದುರ್ವಾಸನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡತೊಡಗಿವೆ ಎಂದು ಸ್ಥಳೀಯರು ಆತಂಕ ಪಟ್ಟಿದ್ದಾರೆ.
ಈ ಸಮಸ್ಯೆ ಬಗ್ಗೆ ನಗರಸಭೆಗೆ ಹಲವಾರುಬಾರಿ ದೂರು ನೀಡುತ್ತಲೇ ಬರಲಾಗಿದೆ. ಕೊಣೆನಾಲ ಹಾಗೂ ಕ್ಯಾತ್ಯಾಯಿನಿ ನಾಲಾಗಳೂ ಕ್ರಮವಾಗಿ ವಾರ್ಡ್ ನಂ. 3, 4, 5 ಹಾಗೂ 16 ರ ವ್ಯಾಪ್ತಿಯಲ್ಲಿವೆ. ಹೀಗಾಗಿ ವಾರ್ಡ್ ಸದಸ್ಯರಿಗೆ ಹಾಗೂ ಶಾಸಕರ ಗಮನಕ್ಕೂ ಸಮಸ್ಯೆಯನ್ನು ತರಲಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ. ಮುಖ್ಯನಾಲಾದಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಅಲ್ಲದೇ ಈ ಮುಖ್ಯನಾಲಾ ಕಾಳಿ ನದಿ ಸೇರುವಲ್ಲಿ ಸಂಪೂರ್ಣವಾಗಿ ನಾಲಾದ ಎರಡೂ ಬದಿಗೆ ಅಂದಾಜು 100 ಮೀಟರ್ ಹಾಗೂ ಕೊಣೆನಾಲಕ್ಕೆ 1000 ಮೀಟರ್ ಉದ್ದ ತಡೆಗೋಡೆನಿರ್ಮಿಸಿ, ಕಾಂಕ್ರೀಟ್ ಮುಚ್ಚಳದಿಂದ ಮುಚ್ಚಬೇಕು. ಆ ಮೂಲಕ ಗಂಭೀರ ಆರೋಗ್ಯ ಸಮಸ್ಯೆಗಳು ಮರುಕಳಿಸದಂತೆ ನಿಗಾ ವಹಿಸಲು ಸ್ಥಳೀಯರುನಗರಸಭೆಗೆ ವಿನಂತಿಸುತ್ತಲೇ ಬಂದಿದ್ದಾರೆ. ಆದರೆ ನಗರಸಭೆ 100 ಕೋಟಿ ರೂ. ಅನುದಾನದ ದೂರದ ಕನಸು ಕಾಣುತ್ತಿದೆ. ಇರುವ ಅನುದಾನದಲ್ಲಿನಾಲಾವನ್ನು ಸ್ವಚ್ಛ ವಾಗಿಡುವ ಪ್ರಯತ್ನ ಮಾಡಿಲ್ಲ ಎಂಬುದು ಸ್ಥಳೀಯರ ಆರೋಪ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಷ್ಟೇ ಮತ ಕೇಳಲಿಕ್ಕಷ್ಟೇ ಮನೆ ಬಾಗಿಲಿಗೆ ಬರುತ್ತಾರೆ. ಆ ಬಳಿಕ ಈ ಕಡೆ ತಲೇ ಹಾಕುವುದೇ ಇಲ್ಲ.
ಅಪಾರ್ಟಮೆಂಟ್, ಹೋಟೆಲ್ ತ್ಯಾಜ್ಯ ಕೋಣೆನಾಲಕ್ಕೆ: ಅಪಾರ್ಟಮೆಂಟ್‌ನ ನೂರಾರು ಮನೆಗಳಿಂದ ಬಿಡಲಾಗುವ ತ್ಯಾಜ್ಯದ ನೀರು ಕಾತ್ಯಾಯನಿ ನಾಲಾದಿಂದ ಹರಿದು ಬಂದು ಕಾಳಿ ನದಿಗೆ ಸೇರುವ ಮುಂಚೆ ಸುಮಾರು 100 ಅಡಿ ದೂರದಲ್ಲಿಯೇ ನಿಂತು ಬಿಟ್ಟಿದೆ. ಇಲ್ಲಿ ಹೂಳು ತುಂಬಿರುವುದರಿಂದ ಈ ಮಲೀನ ತ್ಯಾಜ್ಯದ ನೀರು ಮುಂದೆ ಹರಿಯುತ್ತಿಲ್ಲ. ನಾಲಾದ ಮೇಲ್ಭಾಗದಿಂದಹರಿದು ಬರುವ ಮಲೀನ ತ್ಯಾಜ್ಯದ ನೀರಿನ ಜೊತೆಗೆ ಪ್ಲಾಸ್ಟಿಕ್, ಬಟ್ಟೆಯ ವಸ್ತುಗಳು ಸೇರಿದಂತೆ,ನಿತ್ಯ ಮನೆ ಬಳಕೆ ನಿರುಪಯೋಗಿ ವಸ್ತುಗಳು ನಾಲಾದಲ್ಲಿ ಬಿದ್ದು ಬ್ಲಾಕ್ ಆಗಿರುವ ಜಾಗದಲ್ಲಿ ಸೇರಿವೆ.
ಕೊಳಚೆ ಪ್ರಮಾಣದ ನೀರು ನದಿಗೆಸೇರುತ್ತಿದ್ದರೂ, ಉಳಿದ ನೀರು ಇಲ್ಲಿಯೇ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಈ ನಾಲಾದಎರಡೂ ಬದಿಗೆ ಕಟ್ಟಲು ಬಾಕಿ ಇರುವ ಅಂದಾಜು 100 ಮೀ. ನಷ್ಟು ತಡೆಗೋಡೆ ನಿರ್ಮಿಸಿ, ಇಲ್ಲಿನ ಹೂಳು ತೆಗೆದರೆ, ನೀರು ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ. ಇದಲ್ಲದೇ ನಾಲಾದ ಮೇಲೆ ಕಾಂಕ್ರೀಟ್ ಮುಚ್ಚಳ ಹಾಕಿದರೆ, ಇಲ್ಲಿನ ಕೆಲ ಮನೆಗಳಿಗೆ ಇರುವ ಕಾಲು ದಾರಿ ಸಮಸ್ಯೆಯೂ ಬಗೆಹರಿಯುತ್ತದೆ. ಇದರೊಂದಿಗೆ ದುರ್ವಾಸನೆಹಾಗೂ ಸೊಳ್ಳೆಯ ಕಾಟದಿಂದ ಸ್ಥಳೀಯರಿಗೆ ಮುಕ್ತಿ ನೀಡಿದಂತಾಗುತ್ತದೆ ಎಂದು ಸಾರ್ವಜನಿಕರ ಅಂಬೋಣವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.