Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
ಗಂಗಾವಳಿ ಕೂಡು ರಸ್ತೆ ಅರೆಬರೆ : ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾದ ಶಾಸಕರು
Team Udayavani, Apr 30, 2024, 5:40 PM IST
ಗೋಕರ್ಣ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜನಪ್ರತಿನಿಧಿಗಳು ನಾವು ಜನರ ಕೆಲಸ ಮಾಡಿದ್ದೇವೆ ಎನ್ನುವ ಕಾರಣಕ್ಕಾಗಿ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅದಕ್ಕೆ ಉದಾಹರಣೆಯೆಂದರೆ ಮಂಜಗುಣಿ ಗಂಗಾವಳಿ ನಡುವಿನ ಸೇತುವೆ ಸಂಪರ್ಕ ರಸ್ತೆಯೂ ಒಂದು. ಇಲ್ಲಿ ಕೂಡು ರಸ್ತೆಗೆ ಮಂಜಗುಣಿಯಲ್ಲಿ ಮಣ್ಣು ಹಾಕದಿದ್ದರೂ ವಾಹನ ಸಂಚಾರಕ್ಕೆ ಮುಕ್ತವಾಗಿದೆ ಎಂದು ಶಾಸಕರಾದ ಸತೀಶ ಸೈಲ್, ದಿನಕರ ಶೆಟ್ಟಿ ಹೇಳಿರುವುದು ಈಗ ಜನಾಕ್ರೋಶಕ್ಕೆ ಕಾರಣವಾಗಿದೆ.
ಈ ಸೇತುವೆ ಕಾಮಗಾರಿ ಆರಂಭಗೊಂಡು 7 ವರ್ಷ ಕಳೆದಿದೆ. ಆದರೆ ಕೇವಲ ಸೇತುವೆಯನ್ನು ಪೂರ್ಣಗೊಳಿಸಿ ಜೋಡುರಸ್ತೆಗಳನ್ನು ಮಾಡದೇ ಹಾಗೇ ಬಿಡಲಾಗಿತ್ತು. ಹೀಗಾಗಿ ಸ್ಥಳೀಯರು ಅನೇಕ ಬಾರಿ ಪ್ರತಿಭಟನೆಯನ್ನು ಕೂಡ ಮಾಡಿದ್ದರು. ಮಳೆಗಾಲದ ಹಿನ್ನೆಲೆಯಲ್ಲಿ ಕಳೆದ ವರ್ಷ ತಾತ್ಕಾಲಿಕವಾಗಿ ದ್ವಿಚಕ್ರ ವಾಹನ ಸಂಚರಿಸಲು ಅನುಕೂಲ ಮಾಡಿಕೊಟ್ಟಿದ್ದರು.
ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ತಕ್ಷಣ ಗಂಗಾವಳಿ ಮತ್ತು ಮಂಜಗುಣಿಯ ಕೂಡ ರಸ್ತೆಯನ್ನು ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಬಹುತೇಕರು ಮನವಿ ಕೂಡ ಸಲ್ಲಿಸಿದ್ದರು.
ಅದರಂತೆ ಈಗ ಚುನಾವಣೆ ಬಹಿಷ್ಕಾರದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರಸ್ತೆಗೆ ಮಣ್ಣನ್ನು ಹಾಕಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮುಂದಾಗಿದ್ದರು.
ಆದರೆ ಎರಡು ಬದಿಯ ರಸ್ತೆ ಸರಿಪಡಿಸಬೇಕು. ಹಾಗೇ ಇಲ್ಲಿ ಅನಾಹುತ ಉಂಟಾದರೆ ಅದಕ್ಕೆ ಇಲಾಖೆಯವರೇ ಜವಾಬ್ದಾರರು ಎಂದು ಸ್ಥಳಕ್ಕೆ ಆಗಮಿಸಿದ್ದ ಕೆಆರ್‌ಡಿಸಿಎಲ್ ಅವರಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದರು. ಗಂಗಾವಳಿ ಭಾಗದಲ್ಲಿ ಅಂಡರ್‌ಪಾಸ್ ನಿರ್ಮಾಣವಾಗಿದ್ದರಿಂದ ಮಣ್ಣನ್ನು ತುಂಬಲಾಗಿದೆ. ಅಲ್ಲಿ ವಾಹನ ಸಂಚಾರಕ್ಕೆ ಅಷ್ಟು ತೊಂದರೆಯಾಗುವುದಿಲ್ಲ. ಆದರೆ ಮಂಜಗುಣಿಯಲ್ಲಿ ಮಾತ್ರ ಸ್ವಲ್ಪವೂ ಮಣ್ಣು ಹಾಕದೇ ಹಾಗೇ ಬಿಡಲಾಗಿದೆ. ಈ ಹಿಂದೆ ಬೈಕ್ ಓಡಾಡುವ ಜಾಗದಲ್ಲಿಯೇ ಕೆಲವರು ಹುಂಬುಧೈರ್ಯ ಮಾಡಿ ಕಾರನ್ನು ಏರಿಸುತ್ತಿದ್ದಾರೆ. ಸ್ವಲ್ಪವೇ ಹೆಚ್ಚುಕಡಿಮೆಯಾದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಮಂಜಗುಣಿ ಭಾಗದಲ್ಲಿ ಇದುವರೆಗೂ ಅಂಡರ್‌ಪಾಸ್ ಮಾಡಿಲ್ಲ. ಇನ್ನು ಮಣ್ಣು ಹಾಕಿ ಸರಿಪಡಿಸಲು ಮುಂದಾದರೆ ಅಲ್ಲಿ ಇನ್ನೆರಡು ರಸ್ತೆಗಳು ಕೂಡುವುದರಿಂದ ಅಪಾಯ ಖಚಿತ. ಹೀಗಾಗಿ ಸ್ಥಳೀಯರು ಅಂಡರ್‌ಪಾಸ್ ಕಾಮಗಾರಿ ಮಾಡಿ ಅದಕ್ಕೆ ಬೇಕಾಗುವ ಸಹಕಾರವನ್ನು ನಾವು ಮಾಡುತ್ತೇವೆ ಎಂದರೂ ಗುತ್ತಿಗೆ ಕಂಪನಿಯವರು ಒಪ್ಪುತ್ತಿಲ್ಲ. ಹಾಗೇ ಇಲ್ಲಿ ಮಣ್ಣನ್ನು ಕೂಡ ಹಾಕುವ ಧೈರ್ಯ ಮಾಡುತ್ತಿಲ್ಲ. ಇಲ್ಲಿ ಮಣ್ಣು ಹಾಕಿ ವಾಹನ ಸಂಚಾರಕ್ಕೆ ಅವಕಾಶ ಮಾಡಿದರೆ ಪ್ರತಿನಿತ್ಯ ಅಪಘಾತಗಳು ಸಂಭವಿಸುವ ಬಗ್ಗೆ ಕಂಪನಿಯವರಿಗೆ ಅರಿವಿದೆ. ಆದರೆ ಶಾಸಕರಾದ ದಿನಕರ ಶೆಟ್ಟಿ ಹಾಗೂ ಸತೀಶ ಸೈಲ್ ರಸ್ತೆ ಕಾಮಗಾರಿಯನ್ನು ಉತ್ತಮವಾಗಿಯೇ ನಿರ್ಮಾಣ ಮಾಡಿ ಪ್ರಚಾರ ಪಡೆಯುವುದನ್ನು ಬಿಟ್ಟು ಜನರ ಜೀವದ ಜತೆ ಆಟ ಆಡುತ್ತಿರುವುದಕ್ಕೆ ಆಕ್ರೋಶ ಕೇಳಿಬರುತ್ತಿದೆ.
ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಕಳೆದ ಬಾರಿಯೂ ಅವರೇ ಶಾಸಕರಾಗಿದ್ದರು. ತಾವು ಶಾಸಕರಾಗಿದ್ದ ವೇಳೆಯಲ್ಲಿಯೇ ಈ ಕಾಮಗಾರಿ ಮುಗಿಸಲು ಪ್ರಯತ್ನಿಸಬಹುದಿತ್ತು. ಆದರೆ ಅಂದು ಈ ಬಗ್ಗೆ ಗಂಭೀರವಾಗಿ ಪರಿಗಣಿಸದ ಶಾಸಕರು ಈಗ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಎಂದಕೂಡಲೇ ಓಡಿ ಬಂದು ರಸ್ತೆ ಸಮಸ್ಯೆ ಮುಗಿದು ವಾಹನ ಸಂಚಾರಕ್ಕೆ ಸೇತುವೆ ಮುಕ್ತವಾಗಿದೆ ಎಂದು ಹೇಳುವ ಮೂಲಕ ತಮ್ಮ ಬಂಡತನವನ್ನು ಪ್ರದರ್ಶಿಸಿದ್ದಾರೆ. ಅವರಿಗೆ ಅಷ್ಟು ಕಾಳಜಿ ಇದ್ದರೆ ಮಂಜಗುಣಿ ಭಾಗಕ್ಕೆ ಬಂದು ನೋಡಬೇಕಿತ್ತು. ಅಲ್ಲಿನ ಸ್ಥಿತಿಗತಿಗಳನ್ನು ಗಮನಸಿದರೆ ಹೀಗೆ ಮಾತನಾಡುತ್ತಿರಲಿಲ್ಲವೇನೋ.
2018ರಲ್ಲಿ ಅಂದು ಶಾಸಕರಾಗಿದ್ದ ಸತೀಶ ಸೈಲ್ ಅವರು ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಪರಾಭವಗೊಂಡು ಬಿಜೆಪಿಯ ರೂಪಾಲಿ ನಾಯ್ಕ ಆಯ್ಕೆಯಾಗಿದ್ದರು. ಎರಡು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು, ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಕೂಡ ಈ ಇಬ್ಬರಿಂದಲೂ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.
ಕುಮಟಾ ಕ್ಷೇತ್ರದಿಂದ ಮತ್ತೆ ದಿನಕರ ಶೆಟ್ಟಿ ಆಯ್ಕೆಯಾದರೆ, ಕಾರವಾರ ಅಂಕೋಲಾ ಕ್ಷೇತ್ರದಿಂದ ಸತೀಶ ಸೈಲ್ ಆಯ್ಕೆಯಾದರು. ಆದರೂ ಕೂಡ ಮಂಜಗುಣಿಯಲ್ಲಿ ಬೈಕ್ ತೆರಳುವಷ್ಟು ರಸ್ತೆ ನಿರ್ಮಿಸಿದ್ದರೂ ಅದು ಈಗೀಗ ಸ್ವಲ್ಪ ಅಗಲೀಕರಣವಾಗಿದೆ. ಇಲ್ಲಿ ವಾಹನ ಸಂಚಾರ ಮಾಡಿದರೆ ನಿಜಕ್ಕೂ ಅಪಘಾತಗಳು ನಡೆಯುವುದರಲ್ಲಿ ಅನುಮಾನವಿಲ್ಲ. ಸ್ಥಳ ಪರಿಶೀಲನೆ ಮಾಡದೇ ಶಾಸಕ ಸತೀಶ ಸೈಲ್ ಅವರು ಸೇತುವೆ ಕಾಮಗಾರಿ ಮುಗಿದಿದೆ ಎಂದು ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.