ಗೌಡರಕೇರಿಗೆ ಮೂಲ ಸೌಲಭ್ಯ ಮರೀಚಿಕೆ
Team Udayavani, Dec 22, 2018, 3:09 PM IST
ಅಂಕೋಲಾ: ಗ್ರಾಮೀಣ ಭಾಗದ ಕೆಲ ಊರುಗಳಿಗೆ ರಸ್ತೆಗಳಿಲ್ಲದೇ ಜನ ಪರದಾಡುವುದು ಸಾಮಾನ್ಯ. ಆದರೆ ಪುರಸಭೆ ವ್ಯಾಪ್ತಿಯಲ್ಲಿಯೂ ಇಂತಹ ಪ್ರದೇಶಗಳಿವೆ. ಇದಕ್ಕೆ ಹುಲಿದೇವರವಾಡಾದ ಗೌಡರಕೇರಿ ಸಾಕ್ಷಿ. ಇಲ್ಲಿಗೆ ಹೋಗಲು ಇದುವರೆಗೂ ರಸ್ತೆಯೇ ಇಲ್ಲ. ಈ ಭಾಗದಲ್ಲಿ ಸುಮಾರು 35ಕ್ಕೂ ಅಧಿಕ ಕುಟುಂಬ ನೆಲೆಸಿವೆ. ಪುರಸಭೆ ನಗರೋತ್ಥಾನ ಅಡಿಯಲ್ಲಿ ಕೋಟ್ಯಂತರ ರೂ. ಅನುದಾನದಲ್ಲಿ ಅನೇಕ ರಸ್ತೆಗಳು ಅಭಿವೃದ್ಧಿಯಾಗಿದೆ. ಅಂತಹ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಈ ಗ್ರಾಮದ ನಿವಾಸಿಗಳಿಗೆ ರಸ್ತೆ ಸೌಕರ್ಯ ಒದಗಿಸಲು ಏಕೆ ಮನಸ್ಸು ಮಾಡಲಿಲ್ಲ ಎನ್ನುವುದು ಇಲ್ಲಿಯ ಜನರ ಪ್ರಶ್ನೆಯಾಗಿದೆ.
ಗೌಡರಕೇರಿಯಲ್ಲಿ ಜಿಲ್ಲೆಯ ಬಹುಸಂಖ್ಯಾತ ಹಾಲಕ್ಕಿ ಸಮುದಾಯಕ್ಕೆ ಸೇರಿದ 18 ಸೀಮೆಯ ಗೌಡರ ಮನೆ ಇದೆ. ಅವರಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಆಧುನಿಕ ಬದುಕನ್ನು ಅಣುಕಿಸುವಂತಿದೆ. ಈ ಸೀಮೆ ಗೌಡರ ಮನೆ ಇರುವ ಜಾಗೆ ಕೂಡ ಅವರ ಹೆಸರಿಗೆ ಇಲ್ಲ ಎಂಬುವುದು ಆಶ್ಚರ್ಯ ಪಡುವ ಸಂಗತಿಯಾಗಿದೆ.
ಇಲ್ಲಿ ಹೋಗುವುದಾದರೆ ಸುಮಾರು ಒಂದುವರೆ ಕಿ.ಮೀ. ಗುಡ್ಡದಿಂದ ನಡೆದು ಹೋಗಬೇಕು. ಮಧ್ಯದಲ್ಲಿ ರೈಲ್ವೆ ಹಳಿ ಹಾಯ್ದು ಹೋಗಿರುವುದರಿಂದ ಅದನ್ನು ದಾಟಿ ಹೋಗುವುದು ಅತ್ಯಂತ ಕಷ್ಟ. ಹಾಗಾಗಿ ಮಳೆಗಾಲ ಹಾಗೂ ಇನ್ನಿತರ ದಿನಗಳಲ್ಲಿ ಒಂದುವರೆ ಕಿ.ಮೀ. ಕ್ರಮಿಸುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಅನಾರೋಗ್ಯಕ್ಕೆ ತುತ್ತಾದವರನ್ನು ಬೆತ್ತದ ಚೂಳಿಬುಟ್ಟಿಯಲ್ಲಿ ಕುಡ್ರಿಸಿ ಮುಖ್ಯ ರಸ್ತೆಗೆ ನಾಲ್ಕೈದು ಜನ ಹೊತ್ತು ತರಬೇಕು. ನಗರ ಕೇಂದ್ರದಿಂದ ಕೇವಲ ಎರಡು ಕಿ.ಮೀ. ಅಂತರದಲ್ಲಿರುವ ಹುಲಿದೇವರವಾಡ ಗೌಡರಕೇರಿಯ ಗೋಳಿನ ಕಥೆ ಇದಾಗಿದೆ.
ಈ ಗ್ರಾಮಕ್ಕೆ ಸೌಲಭ್ಯಗಳನ್ನು ನೀಡಲು ಪುರಸಭೆಯವರು ಹೆಚ್ಚಿನ ಅನುದಾನ ನೀಡುವುದಲ್ಲದೇ ಸರ್ಕಾರ ಕೂಡ ವಿಶೇಷ ಅನುದಾನ ನೀಡುವ ಮೂಲಕ ಈ ಪ್ರದೇಶವನ್ನು ನಗರಕ್ಕೆ ಸಂಬಂಧಿಸಿದ ಅಭಿವೃದ್ಧಿ ಪಡಿಸಬೇಕಾಗಿದೆ ಎಂಬುವುದು ಎಲ್ಲಿನ ಜನರ ಆಗ್ರಹವಾಗಿದೆ.
ನಾವು ಎಲ್ಲ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಮನೆ ಕಟ್ಟಲು ಕಲ್ಲು, ರೇತಿ ಎಲ್ಲ ಸಾಮಾನುಗಳನ್ನು ಹೊತ್ತಿಕೊಂಡು ಬರಬೇಕು. ಬಡತನದಲ್ಲಿರುವ ನಾವು ಒಂದು ಮನೆ ನಿರ್ಮಾಣ ಮಾಡುವುದಾದರೆ ಎರಡರಷ್ಟು ಖರ್ಚಾಗುತ್ತಿದೆ. ಯಾರಿಗಾದರು ಅನಾರೋಗ್ಯ ಬಂದರೆ, ಹೆರಿಗೆಗೆ ಮಹಿಳೆಯರು ಹಾಗೂ ವಯಸ್ಸಾದವರು ಆಸ್ಪತ್ರೆಗೆ ಹೋಗಬೇಕೆಂದರೆ ಬುಟ್ಟಿಯಲ್ಲಿ ಅಥವಾ ಕಂಬಳಿಯಲ್ಲಿ ಹೊತ್ತು ಸಾಗಿಸಬೇಕು. ನಮ್ಮ ಗ್ರಾಮದ ಜನತೆಯ ಗೋಳು ಯಾರು ಕೇಳುವವರೆ ಇಲ್ಲ. ನಮ್ಮನ್ನು ದೇವರೇ ಕಾಪಾಡಬೇಕು.
ಸುಬ್ಬಿ ಶಿವಾ ಗೌಡ, ಗ್ರಾಮಸ್ಥೆ
ಅರುಣ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.