ಬಾಲಚಂದ್ರ ಸಾಯಿಮನೆಗೆ ಪಾವನಾ ಪರಿಸರ ಪ್ರಶಸ್ತಿ
Team Udayavani, May 29, 2022, 5:23 PM IST
ಶಿರಸಿ: ಪಾವನಾ ಪರಿಸರ ಪ್ರತಿಷ್ಠಾನದಿಂದ ಕೊಡಲಾಗುವ ಪ್ರತಿಷ್ಠಿತ ಪಾವನಾ ಪರಿಸರ ಪ್ರಶಸ್ತಿಯನ್ನು ಈ ಬಾರಿ ಕೃಷಿಕ-ಪರಿಸರ ವಿಜ್ಞಾನಿ, ಲೇಖಕ ಹೆಗ್ಗರಣಿ ಸಮೀಪದ ಬಾಲಚಂದ್ರ ಸಾಯಿಮನೆಗೆ ನೀಡಲು ನಿರ್ಧರಿಸಲಾಗಿದೆ.
ಪ್ರಶಸ್ತಿ 50 ಸಾವಿರ ರೂ. ಗೌರವಧನ ಹಾಗೂ ಸ್ಮರಣಿಕೆಯನ್ನೊಳಗೊಂಡ ಪ್ರಶಸ್ತಿ ಇದಾಗಿದ್ದು, ಜೂನ್ 5ರ ವಿಶ್ವ ಪರಿಸರ ದಿನದಂದು ಶಿರಸಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನ್ಯಾಶನಲ್ ಜಿಯಾಗ್ರಫಿಕ್ ಸಂಸ್ಥೆಯ ಅನ್ವೇಷಕಿ ಆರತಿ ಕುಮಾರ್ ರಾವ್ ಅವರು ಪಶ್ಚಿಮಘಟ್ಟದ ಪರಿಸರ ಮತ್ತು ವಿಜ್ಞಾನ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಅದೇ ವೇದಿಕೆಯಲ್ಲಿ ಬಾಲಚಂದ್ರ ಸಾಯಿಮನೆ ಅವರ “ಬಿಂಗ್‌ಲಾಂಗ್ ಮತ್ತು ಲಂಬನಾಗ್” ಹೆಸರಿನ ಪ್ರವಾಸ ಕಥನ ಬಿಡೆಗಡೆಗೊಳ್ಳಲಿದೆ. ಚೀನಾ ಮತ್ತು ಫಿಲಿಪೈನ್ಸ್ ದೇಶಗಳ ಅಡಿಕೆ, ಬೆತ್ತ, ಬಿದಿರು ಕೃಷಿಯನ್ನು ಪರಿಚಯಿಸುವ ಈ ಕೃತಿಯನ್ನು ಪತ್ರಕರ್ತ, ಲೇಖಕ ಮಹಾಬಲ ಸೀತಾಳಭಾವಿ ಪರಿಚಯಿಸಲಿದ್ದಾರೆ.
ಬಾಲಚಂದ್ರ ಸಾಯಿಮನೆಯವರು ಏಳು ದೇಶಗಳ ಎಂಟು ವಿಶ್ವವಿದ್ಯಾಲಯಗಳಲ್ಲಿ ಪರಿಸರ ವಿಜ್ಞಾನ ಕುರಿತು ವಿಶೇಷ ಅಧ್ಯಯನ ನಡೆಸಿದ್ದು ಪ್ರಸ್ತುತ ಕೃಷಿ ಕಾಯಕ ಮಾಡುತ್ತಲೇ ಜಾಗತಿಕ ಹವಾಗುಣ ಬದಲಾವಣೆಗೆ ಪಶ್ಚಿಮಘಟ್ಟಗಳು ಹೇಗೆ ಸ್ಪಂದಿಸುತ್ತಿವೆ ಎಂಬುದರ ಕುರಿತು ತಮ್ಮದೇ ಪರಿಸರದಲ್ಲಿ ನಡೆಸುತ್ತಿರುವ ಪ್ರಯೋಗಗಳು ಬೆಂಗಳೂರು, ಪುಣೆ, ಇಂಗ್ಲಂಡ್ ಮತ್ತು ಜರ್ಮನಿಯ ಹೆಸರಾಂತ ವಿಜ್ಞಾನ ಸಂಸ್ಥೆಗಳ ಮಾನ್ಯತೆ ಪಡೆದಿವೆ.
ಬಕ್ಕೆಮನೆಯ ಸ್ವಾತಂತ್ರ್ಯಯೋಧ ನಾರಾಯಣ ಹೆಗಡೆ ದಂಪತಿಯ ಹೆಸರಿನಲ್ಲಿ ಅವರ ಮಕ್ಕಳು ಸ್ಥಾಪಿಸಿದ ʼಪಾವನಾ ಪರಿಸರ ಪ್ರತಿಷ್ಠಾನʼ ನಾಡಿನ ಅನೇಕ ಪರಿಸರ ಸಂರಕ್ಷಣಾ ಕಾರ್ಯಗಳಿಗೆ ನೆರವಾಗುತ್ತ, ಈ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಕಾಲಕಾಲಕ್ಕೆ ಗೌರವ ಪ್ರಶಸ್ತಿಯನ್ನೂ ನೀಡುತ್ತ ಬಂದಿದೆ. ಇದುವರೆಗೆ ಡಾ. ಕುಸುಮಾ ಸೊರಬ, ಶ್ರೀಪಡ್ರೆ, ಶಿವಾನಂದ ಕಳವೆ, ಡಾ. ಅ.ನ. ಯಲ್ಲಪ್ಪರೆಡ್ಡಿ ಮತ್ತು ಡಾ. ಎಸ್.ಆರ್. ಹಿರೇಮಠರಿಗೆ ʼಪಾವನಾ ಪರಿಸರ ಪ್ರಶಸ್ತಿʼ ನೀಡಿ ಗೌರವಿಸಿದೆ.
ನಾಡೋಜ ನಾರಾಯಣ ರೆಡ್ಡಿ, ಸ್ವಾತಂತ್ರ್ಯಯೋಧ ಎಚ್‌ಎಸ್ ದೊರೆಸ್ವಾಮಿ, ಜಸ್ಟಿಸ್ ಇ.ಎಸ್. ವೆಂಕಟರಾಮಯ್ಯ, ಪ್ರೊ. ಎಸ್.ಕೆ.ರಾಮಚಂದ್ರ ರಾವ್, ಜಸ್ಟಿಸ್ ಸಂತೋಷ್ ಹೆಗಡೆ ಇವರುಗಳು ಈ ಹಿಂದೆ ಪಾವನಾ ಪರಿಸರ ಪ್ರಶಸ್ತಿ ಸಂಮಾನ ಸಂದರ್ಭದಲ್ಲಿ ಗೌರವ ಉಪನ್ಯಾಸ ನೀಡಿದ್ದಾರೆ ಎಂಬುದು ಉಲ್ಲೇಖನೀಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.