ರಸ್ತೆ ನಿರ್ಬಂಧಿಸಿದ ಬ್ಯಾರಿಕೇಡ್; ತಪಾಸಣೆಯಲ್ಲಿ ಶಿಕ್ಷಕರೂ ಭಾಗಿ
ಹೊರ ಜಿಲ್ಲೆಗಳಿಂದ ಬಂದವರಿಗೆ ಕ್ವಾರಂಟೈನ್ ಮುದ್ರೆ
Team Udayavani, May 12, 2021, 1:03 PM IST
ಶಿರಸಿ: ಕೋವಿಡ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರಕಾರ ಘೋಷಿಸಿದ ಲಾಕ್‌ಡೌನ್ ಕಾರಣದಿಂದ ನಗರದಲ್ಲಿ ಅನಗತ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಅನಗತ್ಯ ಓಡಾಟ ಮಾಡುವವರ ತಪಾಸಣೆ ಕಾರ್ಯವನ್ನು ಪ್ರಮುಖ ವೃತ್ತದಲ್ಲೂ ಮಾಡಲಾಗುತ್ತಿದ್ದು ಪೊಲೀಸರ ಕಾರ್ಯಕ್ಕೆ ಶಿಕ್ಷಕರೂ ಸಾಥ್ ನೀಡಿದ್ದಾರೆ. ಶಾಲೆಗಳಲ್ಲಿ ಪಾಠ ಮಾಡುತ್ತಿದ್ದ ಸರಕಾರಿ ಶಾಲಾ ಶಿಕ್ಷಕರು, ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್‌ನ ಶಿಕ್ಷಕರೂ ಕಳೆದ ಎರಡು ದಿನಗಳಿಂದ ನಗರದ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರ ತಪಾಸಣಾ ಕಾರ್ಯದಲ್ಲಿ ಇವರೂ ಜತೆಯಾಗಿದ್ದಾರೆ. ಈವರೆಗೆ ಹೋಮ್ ಗಾರ್ಡ್ ಸೇವೆ ಪಡೆಯುತ್ತಿದ್ದ ಪೊಲೀಸ್ ಇಲಾಖೆ ಜೊತೆ ಈಗ ಶಿಕ್ಷಕರೂ ಜೊತೆಯಾಗಿದ್ದಾರೆ.
ಶಿರಸಿ ನಿಲೇಕಣಿ, ಚಿಪಗಿ ವೃತ್ತ, ಬನವಾಸಿ ತಿಗಣಿ ಕ್ರಾಸ್, ಯಲ್ಲಾಪುರ ನಾಕಾ ಸೇರಿದಂತೆ ಹಲವಡೆ ಇರುವ ಚೆಕಿಂಗ್ ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊರ ಜಿಲ್ಲೆಗಳಿಂದ ಬರುವ ಅತಿಥಿಗಳಿಗೆ ಕ್ವಾರಂಟೈನ್ ಸೀಲ್ ಕೂಡ ಹಾಕಲಾಗುತ್ತಿದೆ. ಆ ಕಾರ್ಯವನ್ನೂ ಮಾಡುತ್ತಿದ್ದು, ಹೊರ ಭಾಗದಿಂದ ಬರುವ ವಾಹನಗಳ ನಂಬರ್ ಕೂಡ ದಾಖಲಿಸಲಾಗುತ್ತಿದೆ.ಈ ಮಧ್ಯೆ ಶಿರಸಿ ಪಟ್ಟಣದಲ್ಲಿ ಹದಿನೈದಕ್ಕೂ ಅಧಿಕ ವೃತ್ತದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಸಂಪರ್ಕ ಮಾರ್ಗವನ್ನೂ ಕಡಿತಗೊಳಿಸಲಾಗಿದೆ. ಇದರಿಂದ ಅನಗತ್ಯ ಓಡಾಟಕ್ಕೆ ಕೂಡ ಬ್ರೇಕ್ ಬಿದ್ದಿದೆ ಎನ್ನುತ್ತಾರೆ ಪೊಲೀಸರು.
ಶಿರಸಿಯಲ್ಲಿ ನಾಗರಿಕರ ಸ್ಪಂದನೆ ಚೆನ್ನಾಗಿದ್ದು, ವಿನಾಕಾರಣ ಓಡಾಟದ ಮೇಲೆ ನಿರ್ಬಂಧ ಹೇರಿಕೊಂಡಿದ್ದಕ್ಕೂ ಶ್ಲಾಘನೆ ವ್ಯಕ್ತವಾಗಿದೆ. ಶಿರಸಿಯಲ್ಲಿ ಮಂಗಳವಾರ 77 ಜನರಿಗೆ ಸೋಂಕು ತಗುಲಿದ್ದು, 222 ಜನರು ಗುಣಮುಖರಾಗಿದ್ದಾರೆ. ನಗರದಷ್ಟೇ ಗ್ರಾಮೀಣ ಭಾಗದಲ್ಲೂ ಸೋಂಕು ತಗುಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ವಿನಾಯಕ ಕಣ್ಣಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.