ಅಡಿಕೆ ಬೆಳೆಗಾರರ ಉಸಿರು ಟಿಎಸ್‌ಎಸ್‌


Team Udayavani, Jul 4, 2022, 9:00 AM IST

thumb news

ಶತಮಾನದ ಹೊಸ್ತಿಲಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಸಹಕಾರಿ ಸಂಸ್ಥೆ ಸಾಧಿಸಿದ ದಾರಿ ಸಣ್ಣದಲ್ಲ. ಅಂಥ ಅಪರೂಪದ, ಇಡೀ ಸಹಕಾರಿ ಕ್ಷೇತ್ರಕ್ಕೆ ಮೇಲ್ಪಂಕ್ತಿ ಹಾಕಿದ ದಿ ತೋಟಗಾರ್ಸ್‌ ಸೇಲ್ಸ್‌ ಕೋ ಆಪರೇಟಿವ್‌ ಸೊಸೈಟಿ ಬೆಳೆಗಾರರ ಪಾಲಿಗೆ ಮಧ್ಯವರ್ತಿಗಳನ್ನು ತಪ್ಪಿಸಿ ಅತಿ ಹೆಚ್ಚು ದರ ಕೊಡಿಸುವ ಆಪದ್ಬಾಂಧವ. ದಲ್ಲಾಳಿಗಳ ಕಾಟ ತಪ್ಪಿಸಿ ನೇರವಾಗಿ ಗ್ರಾಹಕರಿಗೆ ವಸ್ತು ಒದಗಿಸುವ ಸಹಕಾರಿ. ಅಡಿಕೆ ಬೆಳೆಯ ಜತೆಗೆ ಇತರೆ ಬೆಳೆಗಾರರನ್ನೂ ಜತೆಗೆ ಸೇರಿಸಿ ಮುನ್ನಡೆಯುತ್ತಿರುವ ಮಾರ್ಗದರ್ಶಿ.

ಸ್ವಾತಂತ್ರ್ಯ ಸಿಗುವುದಕ್ಕಿಂತ ಪೂರ್ವ 1923ರಲ್ಲಿ ಅಡಿಕೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮುಖ್ಯ ಉದ್ದೇಶದೊಂದಿಗೆ ಆರಂಭಗೊಂಡ ರಾಷ್ಟ್ರದ ಪ್ರತಿಷ್ಠಿತ ಟಿಎಸ್‌ಎಸ್‌, ಹಿರಿಯ ಸಹಕಾರಿ ಕಡವೆಯ ಶ್ರೀಪಾದ ಹೆಗಡೆ ಅವರ ಕನಸಿನಲ್ಲಿ ಅರಳಿದ ಸಂಸ್ಥೆಯಾಗಿದ್ದು, ಇಂದು ಬಹುಬೆಳೆಗಾರರಿಗೆ ಭರವಸೆಯ ಸಂಸ್ಥೆಯೂ ಆಗಿದೆ.

ಅಡಿಕೆ, ಕಾಳುಮೆಣಸು, ಯಾಲಕ್ಕಿ ಇತ್ಯಾದಿ ತೋಟದ ಬೆಳೆಗಳಿಗೆ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ ನೀಡಿದ್ದು ಮಾತ್ರವಲ್ಲ ಬಾಳೆಕಾಯಿ, ತೆಂಗಿನಕಾಯಿ, ಗೇರುಬೀಜ, ಅರಿಶಿಣ, ಶುಂಠಿ ಬೆಳೆಗಳಿಗೂ ಒಳ್ಳೆಯ ಮಾರುಕಟ್ಟೆ ಒದಗಿಸುವ ಕಾರ್ಯ ಮಾಡುತ್ತಿದೆ. ಸದಸ್ಯರಿಗೆ ವೈವಿಧ್ಯಮಯ ಸೇವೆ-ಸೌಲಭ್ಯಗಳನ್ನು ಒದಗಿಸುವುದೇ ಇದರ ಪ್ರಬಲ ಹೆಜ್ಜೆ ಆಗಿದೆ.

ಸಂಸ್ಥೆ ಮೂಲಕ ಮಾಡುವ ವಿಕ್ರಿ ಆಧರಿಸಿ ಸಾಲ ಸೌಲಭ್ಯ, ಸದಸ್ಯರಿಂದ ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸಂಗ್ರಹ, ದೈನಂದಿನ ಅಗತ್ಯದ ದಿನಸಿ ಸಾಮಗ್ರಿಗಳಿಂದ ಹಿಡಿದು ಕೃಷಿ ಸಲಕರಣೆಗಳು, ರಸಗೊಬ್ಬರ, ಕೀಟನಾಶಕಗಳು, ಪಶು ಆಹಾರ, ಗೃಹೋಪಯೋಗಿ ಸಾಧನಗಳು, ನೀರಾವರಿ ಯಂತ್ರೋಪಕರಣಗಳು ಸೇರಿದಂತೆ ಜೀವನಕ್ಕೆ ಬೇಕಾದ ವಸ್ತುಗಳನ್ನು ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಸದಸ್ಯರಿಗೆ ಪೂರೈಸುವ ವ್ಯವಸ್ಥೆ, ಅಡಿಕೆ ದರ ಸ್ಥಿರೀಕರಣಕ್ಕಾಗಿ ಸ್ವಂತ ಅಡಿಕೆ ಖರೀದಿ, ಖರೀದಿಸಿದ ಅಡಿಕೆಗಳನ್ನು ಟಿಎಸ್‌ಎಸ್‌ ಬ್ರ್ಯಾಂಡ್ ನ‌ಲ್ಲಿ ಮಾರಾಟ ಮಾಡುವುದು, ಮೌಲ್ಯವರ್ಧಿತ ಉತ್ಪನ್ನವಾಗಿ ಪರಿವರ್ತಿಸಿ ಮಾರಾಟ ಮಾಡುವುದು, ಅಕ್ಕಿಗಿರಣಿ ವ್ಯವಸ್ಥೆ, ಅತಿಥಿಗೃಹ ವ್ಯವಸ್ಥೆ, ಸ್ಪರ್ಧಾತ್ಮಕ ದರದಲ್ಲಿ ಸರಕು ಸಾಗಾಣಿಕೆ ವಾಹನಗಳ ವ್ಯವಸ್ಥೆ, ಮಾರುಕಟ್ಟೆ ಮಾಹಿತಿ ಪಡೆಯಲು ಎಸ್‌ಎಮ್‌ಎಸ್‌ ಸೇವೆ ಹೀಗೆ ಸಂಘವು ನೀಡುತ್ತಿರುವ ಸೇವೆಗಳ ಯಾದಿ ಬೆಳೆಯುತ್ತಲೇ ಇದೆ.

ಸೇವೆಯೇ ಧ್ಯೇಯ: ದಿನದಿಂದ ದಿನಕ್ಕೆ ಹೊಸ ಹೊಸ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಂಘವು ಆರಂಭಿಸಿದ ಹೊಸ ಸೇವೆಗಳೆಂದರೆ ನಿವೇಶನಗಳು ಹಾಗೂ ಜಮೀನಿನ ಖರೀದಿ-ಮಾರಾಟ, ಟಿಎಸ್‌ಎಸ್‌ ಟೂರಿಸಂ, ವಧು-ವರರ ಮಾಹಿತಿ ವಿನಿಮಯ ಕೇಂದ್ರ, ಎಲ್‌ಐಸಿ ವಿಮಾ ಪಾವತಿ ಕೇಂದ್ರ, ಪಹಣಿ ಪತ್ರಿಕೆ ಒದಗಿಸುವ ವ್ಯವಸ್ಥೆ, ಇ-ಸ್ಟಾಂಪಿಂಗ್‌, ಡಿಜಿಟಲ್‌ ಸಿಗ್ನೇಚರ್‌ ಸರ್ಟಿಫಿಕೇಟ್‌ ಇವುಗಳ ಜತೆಗೆ ಹೋಟೆಲ್‌ ಬುಕ್ಕಿಂಗ್‌, ವಿಮಾನ ಟಿಕೆಟ್‌ ಬುಕ್ಕಿಂಗ್‌, ಬಸ್‌ ಟಿಕೆಟ್‌ ಬುಕ್ಕಿಂಗ್‌, ಕೋವಿಡ್‌ ಲಸಿಕೆ ಪಡೆದ ಪ್ರಮಾಣ ಪತ್ರ, ಮೊಬೈಲ್‌, ಡಿಟಿಎಚ್‌, ಲ್ಯಾಂಡ್‌ಲೈನ್‌, ಬ್ರಾಡ್‌ಬ್ಯಾಂಡ್‌, ಇಲೆಕ್ಟ್ರಿಸಿಟಿ, ಗ್ಯಾಸ್‌ ಹಾಗೂ ಫಾಸ್ಟ್ಯಾಗ್ ರೀಚಾರ್ಜ್‌ ಸೇವೆಗಳೂ ಸಹ ಲಭ್ಯವಿದೆ. ರೈತರು ಅಡಿಕೆ ಹೊತ್ತು ಸಂಸ್ಥೆ ಒಳಗೆ ಬಂದರೆ ಅವರಿಗೆ ಬೇಕಾದ ಎಲ್ಲ ಸೌಲಭ್ಯ ನೀಡುವ ಸಂಸ್ಥೆಯಾಗಿ ಬೆಳೆದಿದೆ. ಸರ್ಕಾರಿ ಕಚೇರಿ ಕೆಲಸಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆ-ಸೌಲಭ್ಯಗಳು ಸಹಕಾರಿಯ ಸದಸ್ಯರಿಗೆ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ.

ಅಡಿಕೆ, ಕಾಳು ಮೆಣಸು ಇತ್ಯಾದಿಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು, ಸದಸ್ಯರಿಗೆ ಆರ್ಥಿಕ ನೆರವು ನೀಡುವ ವ್ಯವಹಾರ ಜತೆಯಲ್ಲಿ ಸದಸ್ಯರ ಅಗತ್ಯದ ಗೃಹೋಪಯೋಗಿ ಸಾಮಗ್ರಿಗಳು, ಕಿರಾಣಿ ಸಾಮಗ್ರಿ ಹಾಗೂ ಕೃಷಿ ಅಗತ್ಯಗಳನ್ನು ಯೋಗ್ಯ ದರದಲ್ಲಿ ಸಂಸ್ಥೆಯು ಒದಗಿಸುತ್ತಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡದಲ್ಲಿನ ನಾಲ್ಕು ಸೂಪರ್ ಮಾರ್ಕೆಟ್‌ಗಳನ್ನು ತೆರೆದು ಎಲ್ಲ ಅಗತ್ಯವನ್ನೂ ಕೈಗೆಟಕುವಂತೆ ನೀಡಿದೆ. ಕೋವಿಡ್‌ನ‌ಂತಹ ಕಷ್ಟದ ವೇಳೆಯಲ್ಲೂ ಕೊರತೆ ಆಗದಂತೆ ನೋಡಿಕೊಂಡಿದೆ. ಗೊತ್ತಿರಲಿ, ಸದಸ್ಯರಿಗಾಗಿ ನೂರಾರು ವಿಧದ ಸೇವೆಗಳನ್ನು ನೀಡುವುದರ ಜತೆ 1,732 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ನಡೆಸುವ ಬೃಹತ್‌ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಶಿರಸಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಘವು ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡದಲ್ಲಿ ಶಾಖೆಗಳನ್ನು ಹೊಂದಿದೆ. ಸಂಘವು 144.92 ಕೋಟಿ ರೂ.ಸ್ವಂತ ಬಂಡವಾಳ ಹೊಂದಿದ್ದು, 334.49 ಕೋಟಿ ರೂ. ಠೇವನ್ನು ಸದಸ್ಯರಿಂದ ಸಂಗ್ರಹಿಸಿರುತ್ತದೆ. ಸುಮಾರು 40 ಸಾವಿರಕ್ಕೂ ಅಧಿಕ ಅಡಿಕೆ ಬೆಳೆಗಾರ ಸದಸ್ಯರನ್ನು ಒಳಗೊಂಡಿರುವ ಸಂಘದಲ್ಲಿ 3,649 ಜನ ಶೇರು ಸದಸ್ಯರಿದ್ದು, 28.21 ಲಕ್ಷ ರೂಪಾಯಿ ಶೇರು ಬಂಡವಾಳ ಹೊಂದಿದೆ.

ಆರಂಭದಿಂದಲೂ ನಿರಂತರವಾಗಿ ಲಾಭದಲ್ಲಿಯೇ ಮುನ್ನಡೆಯುತ್ತಿರುವ ಸಂಘವು ಅತ್ಯುತ್ತಮ ಸಾಂಪತ್ತಿಕ ಸ್ಥಿತಿ ಹೊಂದಿದ್ದು, 1023.06 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 2.24ಕೋ.ರೂ.ಗೂ ಮಿಕ್ಕಿ ಲಾಭ ಮಾಡಿದೆ ರೈತರ ಕಣ್ಮಣಿ ಅಡಿಕೆ ಬೆಳೆಗಾರ ಸದಸ್ಯರ ಅಡಿಕೆ, ಕಾಳುಮೆಣಸು, ಯಾಲಕ್ಕಿ ಮತ್ತಿತರೆ ತೋಟದ ಉತ್ಪನ್ನಗಳ ಮಾರಾಟ ಟೆಂಡರ್‌ ಮೂಲಕ ಈ ವಿಭಾಗದಲ್ಲಿ ನಿರ್ವಹಣೆಯಾಗುತ್ತದೆ. ರಜಾದಿನಗಳನ್ನು ಹೊರತುಪಡಿಸಿ ವರ್ಷದ ಬಹುತೇಕ ಎಲ್ಲಾ ದಿನಗಳೂ ಇಲ್ಲಿ ಟೆಂಡರ್‌ ಪ್ರಕ್ರಿಯೆ ಜರುಗುತ್ತದೆ. ಆವಕದ ಪ್ರಮಾಣ ಹಾಗೂ ಮಾರುಕಟ್ಟೆ ದರವನ್ನಾಧರಿಸಿ ಪ್ರತಿದಿನ ಸರಾಸರಿ 600ರಿಂದ 800 ಕ್ವಿಂಟಲ್‌ಗ‌ಳವರೆಗೆ ವ್ಯಾಪಾರ ನಡೆಯುತ್ತದೆ. ಸದಸ್ಯರು ಬೆಳೆಗಳನ್ನು ಪೂರ್ಣ ಚೀಲಗಳಿಂದ ಸುರುವಿದ ಬಳಿಕ ಎಪಿಎಂಸಿ ನೋಂದಾಯಿತ ವ್ಯಾಪಾರಸ್ಥರು ಗಣೀಕೃತ ಟೆಂಡರ್‌ ಮೂಲಕ ದರ ನಮೂದಿಸಿ ಖರೀದಿಸುತ್ತಾರೆ. ಅಡಿಕೆಗೆ ದರ ಘೋಷಣೆಯಾದ ನಂತರ ಸದಸ್ಯನಿಗೆ ಇಷ್ಟವಾಗದಿದ್ದಲ್ಲಿ ಆ ಮಾರಾಟವನ್ನು ನಿರಾಕರಿಸಲೂಬಹುದು. ಮಾರಾಟ ಆದರೆ ತಕ್ಷಣ ಖಾತೆಗೆ ಹಣವೂ ಜಮಾ ಆಗಲಿದೆ. ಬೇಕಿದ್ದರೆ ಬೆಳೆ ಇಟ್ಟುಕೊಳ್ಳಲು ಸುಸಜ್ಜಿತವಾದ ಪ್ರತ್ಯೇಕ ಗೋದಾಮುಗಳ ವ್ಯವಸ್ಥೆ ಇದೆ.

ವಾರ್ಷಿಕವಾಗಿ ಸರಾಸರಿ 13,500 ಟನ್‌ಗಳಷ್ಟು ಮಹಸೂಲು ಸಂಘದಲ್ಲಿ ಮಾರಾಟವಾಗುತ್ತಿದ್ದು, ಇದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಟ್ಟಾರೆ ಆಗುವ ಮಾರಾಟದ ಶೇ.50ಕ್ಕಿಂತ ಜಾಸ್ತಿಯಿದೆ. ಮಾರುಕಟ್ಟೆಯಲ್ಲಿ ಖಾಸಗಿ ವಲಯದ ಹಿಡಿತವನ್ನು ಸಡಿಲಗೊಳಿಸಿ ಶೋಷಣೆ ತಪ್ಪಿಸಿ ಅಡಿಕೆ ದರದ ಸ್ಥಿರತೆ ಕಾಪಾಡುವ ಉದ್ದೇಶದಿಂದ 2006ರಿಂದ ಸಂಘವು ಟೆಂಡರ್‌ನಲ್ಲಿ ಸ್ವತಃ ಭಾಗವಹಿಸಿ ಅಡಿಕೆ ಖರೀದಿ ಆರಂಭಿಸಿದೆ. ಖರೀದಿಸಿದ ಅಡಿಕೆಗಳನ್ನು ವರ್ಗೀಕರಿಸಿ ಭಾರತದಾದ್ಯಂತ ಟಿಎಸ್‌ಎಸ್‌ ಬ್ರ್ಯಾಂಡ್ ನ‌ಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ವಿಭಾಗದ ವಾರ್ಷಿಕ ಸರಾಸರಿ ವಹಿವಾಟು 480 ರೂ. ಕೋಟಿಗಳಷ್ಟಿದೆ. ಈ ವಿಭಾಗದ ನಿರ್ವಹಣೆಗಾಗಿ ಸುಮಾರು 600ಕ್ಕೂ ಅಧಿ ಕ ಜನರಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ.

ಅಡಿಕೆಯ ಬಳಕೆಯ ಸ್ವರೂಪ ಬದಲಾದಂತೆಲ್ಲ ಮಾರಾಟದ ಸ್ವರೂಪವನ್ನೂ ಬದಲಿಸುವ ಮೂಲಕ ಸಂಘವು ಸ್ಪಂದಿಸುತ್ತಿದೆ.ಅಡಿಕೆಯನ್ನು ಮೌಲ್ಯವರ್ಧಿಸಿ ಟಿಎಸ್‌ಎಸ್‌ ಟೈಗರ್‌ ಬ್ರ್ಯಾಂಡಿನಲ್ಲಿ ಸಿಹಿ ಅಡಿಕೆ ಪುಡಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಸಿಹಿ ಅಡಿಕೆ ಪುಡಿ ಇಂದು ದೇಶಾದ್ಯಂತ ಜನಪ್ರಿಯಗೊಂಡಿದೆ. ಬೇಡಿಕೆಗೆ ಅನುಗುಣವಾಗಿ ಟಿಎಸ್‌ಎಸ್‌ ಗೋಲ್ಡ್‌, ಟಿಎಸ್‌ಎಸ್‌ ಟೈಗರ್‌, ಟಿಎಸ್‌ಎಸ್‌ ಅರ್ಜುನ್‌, ಟಿಎಸ್‌ಎಸ್‌ ಟ್ರೇನ್‌ ಬ್ರ್ಯಾಂಡ್‌ಗಳಲ್ಲಿ ಗ್ರಾಹಕರ ಕೈ ಸೇರುತ್ತಿವೆ. ವಾರ್ಷಿಕವಾಗಿ ಸರಾಸರಿ 600 ಟನ್‌ಗೂ ಅ ಧಿಕ ಅಡಿಕೆಯನ್ನು ಸಂಸ್ಕರಿಸಿ ಸಿಹಿ ಅಡಿಕೆ ಪುಡಿ ತಯಾರಿಸಲಾಗುತ್ತಿದೆ. ಸಾದಾ ಅಡಿಕೆಯ ಹೋಳುಗಳನ್ನು ಸಹ ಪ್ಯಾಕಿಂಗ್‌ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬುದು ಗಮನೀಯ. ಶಿರಸಿಗೆ ಸಮೀಪದ ಕಡವೆ ಎಂಬ ಗ್ರಾಮದಲ್ಲಿ ಸಂಸ್ಕರಣಾ ಹಾಗೂ ಪ್ಯಾಕಿಂಗ್‌ ಘಟಕ ಸ್ಥಾಪಿಸಲಾಗಿದೆ. ಈ ವಿಭಾಗದಲ್ಲಿ ಸಂಸ್ಕರಣೆ, ಪ್ಯಾಕಿಂಗ್‌ ಘಟಕಗಳಲ್ಲಿ ಸುಮಾರು 300 ಜನರಿಗೆ ಉದ್ಯೋಗ ನೀಡಿದ್ದು, ವಾರ್ಷಿಕ ವಹಿವಾಟು 30 ಕೋಟಿಗಳಷ್ಟಿದೆ. ಸಿಹಿ ಅಡಿಕೆ ಪುಡಿ ಕರ್ನಾಟಕ, ದೆಹಲಿ, ಗುಜರಾತ್‌, ರಾಜಸ್ತಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್‌, ಹರಿಯಾಣ, ಪಶ್ಚಿಮ ಬಂಗಾಳ, ಚತ್ತಿಸಘಡ, ತಮಿಳುನಾಡು ಸೇರಿದಂತೆ ಹಲವೆಡೆ ಮಾರಾಟ ಆಗುತ್ತಿದೆ.

ಸೂಪರ್‌ ಇದೆ ಮಾರುಕಟ್ಟೆ: ಅಗತ್ಯದ ಸಾಮಗ್ರಿಗಳನ್ನು ಖರೀದಿಗೆ ಕೂಡ ರೈತರಿಗೆ, ಗ್ರಾಹಕರಿಗೆ ಆಗುವ ಶೋಷಣೆ ತಪ್ಪಿಸಲು ಸಂಘವು ಅನೇಕ ಸೇವೆಗಳನ್ನು ನೀಡುತ್ತಿದೆ. ಮೊದಲಿನಿಂದಲೂ ಸದಸ್ಯರಿಗೆ ದಿನಸಿ ಸಾಮಗ್ರಿ ಪೂರೈಸುತ್ತಿದ್ದ ಕಿರಾಣಿ ಹಾಗೂ ಕೃಷಿ ವಿಭಾಗವನ್ನು ಮೇಲ್ದರ್ಜೆಗೇರಿಸಿ ಟಿಎಸ್‌ಎಸ್‌ ಸುಪರ್‌ ಮಾರ್ಕೆಟ್‌ ಆರಂಭಿಸಲಾಗಿದೆ. ಇಂದು ಈ ಸುಪರ್‌ಮಾರ್ಕೆಟ್‌ ಈ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿರುವುದಲ್ಲದೇ ಸದಸ್ಯರಿಗೆ ಅಗತ್ಯವುಳ್ಳ ಸಾಮಗ್ರಿ ಒದಗಿಸುತ್ತಿದೆ.

ದಿನಸಿ ಸಾಮಗ್ರಿಗಳು, ಬಟ್ಟೆ, ಸ್ಟೀಲ್‌ ಸಾಮಗ್ರಿಗಳು, ಬೆಳ್ಳಿ ಮತ್ತು ಬಂಗಾರದ ಆಭರಣ ಸಾಮಗ್ರಿಗಳು, ಪಾದರಕ್ಷೆಗಳು, ಗೃಹೋಪಯೋಗಿ ಸಲಕರಣೆಗಳು, ಮೊಬೈಲ್‌ ಪೋನ್ಸ್‌, ಗೃಹಬಳಕೆ ಪ್ಲಾಸ್ಟಿಕ್‌ ಸಾಮಗ್ರಿ, ಔಷಧಗಳು, ರೂಫಿಂಗ್‌ ಶೀಟ್‌, ಬಣ್ಣಗಳು, ಇಲೆಕ್ಟ್ರಿಕಲ್ಸ್‌, ತರಕಾರಿ, ಹಣ್ಣುಗಳು, ಹಾಲಿನ ಉತ್ಪನ್ನಗಳು, ಟಯರ್‌ಗಳು ಹಾಗೂ ಕೃಷಿ ಅಗತ್ಯತೆಗಳಾದ ಕೃಷಿ ಸಲಕರಣೆಗಳು, ರಸಗೊಬ್ಬರ, ಕೀಟನಾಶಕ, ನೀರಾವರಿ ಯಂತ್ರೋಪಕರಣಗಳು, ಪೈಪ್‌ಗ್ಳು, ಪಂಪ್‌ಸೆಟ್‌, ಪಶು ಆಹಾರ ಹೀಗೆ ಸುಪರ್‌ ಮಾರ್ಕೆಟ್‌ನಲ್ಲಿ ಎಲ್ಲವೂ ಲಭ್ಯವಿದೆ. 170 ಕೋಟಿ ವಾರ್ಷಿಕ ವಹಿವಾಟಿನ ಸೂಪರ್‌ ಮಾರುಕಟ್ಟೆಯಲ್ಲಿ ಸದಸ್ಯರಿಗೆ ಉದ್ರಿ ಸೇವೆಯೂ ಇದೆ. ಪರಿಣಿತ ಕೃಷಿ ಸಲಹೆಗಾರರ ಸೇವೆಯೂ ಲಭ್ಯವಿದೆ.

ಮನೆ ಕಟ್ಟಿ ನೋಡಾ! ಮಿತವ್ಯಯಕರ ಹಾಗೂ ಅಚ್ಚುಕಟ್ಟಾದ ಮನೆ ನಿರ್ಮಿಸಲು ಸಹಾಯಕವಾಗುವ ಉದ್ದೇಶಕ್ಕಾಗಿ ಗೃಹನಿರ್ಮಾಣ ಸಾಮಗ್ರಿಗಳ ಮಾರಾಟ ವಿಭಾಗವನ್ನೂ ಟಿಎಸ್‌ಎಸ್‌ ಆರಂಭಿಸಿ ನೆರವಾಗಿದೆ.

ಈ ವಿಭಾಗದಲ್ಲಿ ಗೃಹ ನಿರ್ಮಾಣಕ್ಕೆ ಅಗತ್ಯವಾದ ಟಿ.ಎಂ.ಟಿ. ಕಂಬಿಗಳು, ಸ್ಕ್ವೇರ್‌ ಪೈಪ್‌ಗ್ಳು, ಜಿ.ಐ. ಶೀಟ್‌ಗಳು, ಟೈಲ್ಸ್‌, ಗ್ರಾನೈಟ್‌, ಹಾರುಬೂದಿಯ ಇಟ್ಟಿಗೆಗಳು, ಬಾಥ್‌ರೂಂ ಫಿಟ್ಟಿಂಗ್ಸ್‌, ವಿದ್ಯುತ್‌ ಸಲಕರಣೆಗಳು ಹಾಗೂ ಹಾರ್ಡ್‌ವೇರ್‌ ಇತ್ಯಾದಿ ಸಾಮಗ್ರಿಗಳು ಉತ್ತಮ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿವೆ. ಸಿಮೆಂಟ್‌, ಜೆಲ್ಲಿ, ಮರಳು ಇತ್ಯಾದಿಗಳನ್ನು ಸಹ ಪೂರೈಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಗೃಹ ನಿರ್ಮಾಣ ಸಾಮಗ್ರಿಗಳನ್ನು ಪೂರೈಸುವುದರ ಜತೆಗೆ ಗೃಹ ನಿರ್ಮಾಣ ಕಾರ್ಯದ ಯೋಜನೆ ಹಾಗೂ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗಾಗಿ ಸಿವಿಲ್‌ ಇಂಜನಿಯರ್‌ಗಳು, ಮೇಸ್ತ್ರಿಗಳು, ಟೈಲ್ಸ್‌ ಕೂರಿಸುವವರು ಇತ್ಯಾದಿ ಕುಶಲಕರ್ಮಿಗಳ ಪ್ಯಾನೆಲ್‌ವೊಂದನ್ನು ಆರಂಭಿಸುವ ಯೋಜನೆಯೂ ಇದೆ.19 ಕೋಟಿ ವಾರ್ಷಿಕ ವಹಿವಾಟು ನಡೆಸಲಾಗುವ ಈ ವಿಭಾಗ ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡಿದೆ.

ಇತರೆ ಚಟುವಟಿಕೆಗಳು: ಸಂಸ್ಥೆಯು ತನ್ನ ಸದಸ್ಯರಿಗೆ ಅವಶ್ಯಕತೆಗೆ ಅನುಗುಣವಾಗಿ ಉತ್ಪಾದನಾ ಹಾಗೂ ಮಾಲುವತ್ತೆ ಸಾಲ ನೀಡುತ್ತಿದೆ. ಇಷ್ಟೇ ಅಲ್ಲ ಸಂಸ್ಥೆಯು ಸದಸ್ಯರ ಅನುಕೂಲಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಅಕ್ಕಿಗಿರಣಿ, ಸಾಮ್ರಾಟ್‌ ಅತಿಥಿ ಗೃಹ ಹಾಗೂ ಇಲೆಕ್ಟ್ರಿಕಲ್‌ ರಿಪೇರಿ ವಿಭಾಗ ನಡೆಸುತ್ತಿದೆ.

ಸಂಸ್ಥೆಯು ತೋಟಗಾರ ಸೇವಾ ಸಮಿತಿ ಹೆಸರಿನಲ್ಲಿ ಸೂಪರ್‌ ಸ್ಟೆಷಾಲಿಟಿ ಆಸ್ಪತ್ರೆ ನಡೆಸುತ್ತಿದೆ. ಸದಸ್ಯರ ವೈದ್ಯಕೀಯ ವೆಚ್ಚ ಭರಿಸುವ ಸಲುವಾಗಿ ಹಾಗೂ ಕೃಷಿ ಅವಘಡಗಳ ಪರಿಹಾರಕ್ಕಾಗಿ ಟಿಎಸ್‌ಎಸ್‌ ಸದಸ್ಯರ ರೈತ ರûಾ ಕವಚ ಯೋಜನೆ ಆರಂಭಿಸಿದೆ. ಈ ಯೋಜನೆಗೆ ಒಂದು ನಿಧಿ ಸ್ಥಾಪಿಸಿ, ಸದಸ್ಯರಿಂದ ವಂತಿಗೆ ಪಡೆದು ಅಷ್ಟೇ ಮೊತ್ತವನ್ನು ಸಂಘದಿಂದ ಸಹ ಹಾಕಿ ನಡೆಸಲಾಗುತ್ತಿದೆ.

ಈ ಯೋಜನೆಯಲ್ಲಿ ಪಾಲ್ಗೊಂಡ ಸದಸ್ಯರ ಗರಿಷ್ಠ ಮಿತಿಗೆ ಒಳಪಟ್ಟು ಕುಟುಂಬದ ಎಲ್ಲಾ ಸದಸ್ಯರ ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸಲಾಗುತ್ತದೆ. ಹಾಗೂ ಸದಸ್ಯರು ಹಾಗೂ ಕೃಷಿ ಕಾರ್ಮಿಕರು ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಅವಘಡಗಳು ಸಂಭವಿಸಿದಲ್ಲಿ ವೈದ್ಯಕೀಯ ವೆಚ್ಚವನ್ನು ಇದೇ ಯೋಜನೆಯಡಿ ಭರಿಸಲಾಗುತ್ತಿದೆ. ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಸಂಘದಲ್ಲಿ ಪೂರ್ತಿ ವ್ಯವಹಾರ ಹೊಂದಿದ್ದು, ಆರ್ಥಿಕವಾಗಿ ಹಿಂದುಳಿದ ಸದಸ್ಯರ ಪ್ರತಿಭಾವಂತ ಮಕ್ಕಳ ಪದವಿ ಪೂರ್ವ ಶಿಕ್ಷಣ, ಪದವಿ ಶಿಕ್ಷಣ, ಹಾಗೂ ವೃತ್ತಿಪರ ಶಿಕ್ಷಣಕ್ಕೆ ಸಂಘದ ಸದಸ್ಯರ ಕ್ಷೇಮನಿಧಿಯಿಂದ ಧನಸಹಾಯ ನೀಡಲಾಗುತ್ತಿದೆ. ಇದರ ಜತೆಯಲ್ಲಿ ಸಂಘದ ಸಾಲಗಾರ ಸದಸ್ಯರು ಮೃತಪಟ್ಟಲ್ಲಿ ಆ ಸದಸ್ಯರ ಖಾತೆಯಲ್ಲಿನ ಸಾಲಬಾಕಿಯ ತೀರುವಳಿಯ ಉದ್ದೇಶಕ್ಕಾಗಿ ಟಿಎಸ್‌ಎಸ್‌ ಸದಸ್ಯರ ಋಣ ವಿಮೋಚನಾ ಯೋಜನೆಯನ್ನು ನಿರ್ವಹಿಸಲು ಟಿಎಸ್‌ಎಸ್‌ ಸದಸ್ಯರ ಋಣ ವಿಮೋಚನಾ ನಿಧಿ ಸ್ಥಾಪಿಸಲಾಗಿದೆ.

ಈ ಯೋಜನೆಯಡಿ ಸಾಲ ಹೊಂದಿರುವ ಮತ್ತು ಕಳೆದ ಮೂರು ವರ್ಷದಿಂದ ನಿರಂತರವಾಗಿ ಸಂಘದಲ್ಲೇ ಮಹಸೂಲು ವಿಕ್ರಯಿಸುತ್ತಿರುವ ಎಲ್ಲ ಸದಸ್ಯರು ನೋಂದಾವಣಿ ಮಾಡಿಕೊಳ್ಳಲು ಅರ್ಹರಿದ್ದು ಸಾಲ ಮಂಜೂರಿ ಪಡೆದಿರಬೇಕಾಗಿರುತ್ತದೆ. ಋಣ ವಿಮೋಚನಾ ನಿ ಧಿಗೆ ಸಾಲಗಾರ ಸದಸ್ಯನಿಂದ 4 ಲಕ್ಷ ರೂ.ವರೆಗಿನ ಸಾಲಕ್ಕೆ ಪ್ರತಿ ಲಕ್ಷ ರೂಪಾಯಿ ಸಾಲಕ್ಕೆ ಒಂದು ಸಾವಿರ ರೂಪಾಯಿಯಂತೆ ಹಾಗೂ ಅದರ ಮೇಲ್ಪಟ್ಟ ಸಾಲಕ್ಕೆ ಗರಿಷ್ಠ 5 ಸಾವಿರ ರೂ. ವಂತಿಗೆಯನ್ನು ಸಾಲ ಮಂಜೂರಿ ವೇಳೆಯಲ್ಲಿ ಪಡೆಯಲಾಗುತ್ತದೆ. ಅಂತಹ ಸಾಲಗಾರ ಸದಸ್ಯನು ಮರಣ ಹೊಂದಿದಲ್ಲಿ (ಆತ್ಮಹತ್ಯೆ ಹೊರತುಪಡಿಸಿ) ನಿಯಮಗಳಿಗನುಗುಣವಾಗಿ ಆ ಸದಸ್ಯನ ಖಾತೆಯಲ್ಲಿನ ಬಾಕಿಯನ್ನು ಸದಸ್ಯನ ಖಾತೆಯಲ್ಲಿನ ಠೇವಣಿ, ಶಿಲ್ಕು ಮಹಸೂಲು ಇದ್ದರೆ ಅದರ ಮೌಲ್ಯವನ್ನು ಕಳೆದು ಗರಿಷ್ಠ ಐದು ಲಕ್ಷ ರೂ.ಮಿತಿಗೊಳಪಟ್ಟು ಋಣ ವಿಮೋಚನಾ ನಿಧಿಯಿಂದ ಭರಿಸಿಕೊಡಲಾಗುವುದು.

ಉಳಿದಂತೆ ಮಾಹಿತಿ ಕಿಯೋಸ್ಕ್, ಎಟಿಎಮ್‌ ಸೌಲಭ್ಯ ಒದಗಿಸಲಾಗುತ್ತಿದೆ. ಸಂಘದಿಂದ ರೈತ ಆರೋಗ್ಯ ಕೇಂದ್ರ, ಗಣಕೀಕೃತ ನೇತ್ರ ತಪಾಸಣೆ ಹಾಗೂ ಉತ್ತಮ ದರ್ಜೆಯ ಕನ್ನಡಕಗಳ ಪೂರೈಕೆ, ಆಯುರ್ವೇದ, ಹೋಮಿಯೋಪಥಿ ಚಿಕಿತ್ಸಾ ಸೇವೆಗಳನ್ನು ಸಹ ಒದಗಿಸಲಾಗುತ್ತಿದೆ. ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಅಡಿಕೆ ಕೊಯಿಲು ಹಾಗೂ ಸಂಸ್ಕರಣೆಯಲ್ಲಿ ಆಗುತ್ತಿರುವ ಕಷ್ಟಗಳನ್ನು ಹಾಗೂ ಫಸಲು ಗುತ್ತಿಗೆಯಿಂದಾಗಿ ಸಂಘದಲ್ಲಿ ಸದಸ್ಯರ ಪತ್ತು ಕಡಿಮೆಯಾಗುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಸಂಘವು ಹಸಿ ಅಡಿಕೆ ಟೆಂಡರ್‌ ಅನ್ನು ಆರಂಭಿಸಿದೆ.

ಸಂಸ್ಥೆಯ ಕಾರ್ಯವ್ಯಾಪ್ತಿ ವಿಸ್ತರಿಸುವುದು, ಎಲ್ಲಾ ಭಾಗದ ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಹುಲೇಕಲ್‌, ಸಾಲ್ಕಣಿ, ಕೊರ್ಲಕೈ, ಬಾಡಾ, ಹಳಿಯಾಳ ಹಾಗೂ ಹೆಗ್ಗೊಡಗಳಲ್ಲಿ ಫ್ರಾಂಚೈಸಿ ಮಾದರಿಯಲ್ಲಿ ಸುಪರ್‌ ಮಾರ್ಕೆಟ್‌ ತೆರೆಯಲಾಗಿದೆ. ಶಿರಸಿಯ ಸಿ.ಪಿ.ಬಜಾರ್‌ನಲ್ಲಿ ಸುಪರ್‌ ಮಾರ್ಕೆಟ್‌ ಆರಂಭಿಸಲಾಗಿದೆ.

ಸ್ವಂತ ಬ್ರಾಂಡ್‌ನ‌ಲ್ಲೂ: ಟಿಎಸ್‌ಎಸ್‌ ಮುಂದುವರಿದು ಗುಣಮಟ್ಟದ ಸೇವೆ ನೀಡಲು ಸ್ವಂತ ಬ್ರ್ಯಾಂಡ್‌ನ‌ಲ್ಲಿಯೇ ಅನೇಕ ವಸ್ತು ತಯಾರಿಸಿದೆ. ಟಿಎಸ್‌ಎಸ್‌ ಅಡಿಕೆ, ಸಿಹಿ ಅಡಿಕೆ ಪುಡಿ, ಶುಂಠಿ, ಪಶು ಆಹಾರ ಧಾರಾ, ಸಾವಯವ ಗೊಬ್ಬರ ಟಿಎಸ್‌ಎಸ್‌ ಗ್ರೀನ್‌ ಗೋಲ್ಡ್‌, ಅನ್ನಪೂರ್ಣ ಸಾವಯವ ಗೊಬ್ಬರ, ಟಿಎಸ್‌ಎಸ್‌ ಫೈಟರ್‌ ಕೊಳೆನಾಶಕ ಹಾಗೂ ಟಿಎಸ್‌ಎಸ್‌ ಪವರ್‌ ವೆಟ್‌ ಗಮ್‌, ಟಿಎಸ್‌ಎಸ್‌ ಬಂಗಾರ, ಟಿಎಸ್‌ಎಸ್‌ ದಿನಸಿಗಳು, ಟಿಎಸ್‌ಎಸ್‌ ಕೃಷಿ ಸುಣ್ಣ, ಟಿಎಸ್‌ಎಸ್‌ ಮೈಲುತುತ್ತ, ಟಿಎಸ್‌ಎಸ್‌ ಕೃಷಿ ಮಿತ್ರ(14:06:21), ಟಿಎಸ್‌ಎಸ್‌ ಟೀ, ಟಿಎಸ್‌ಎಸ್‌ ಅಗರ್‌ಬತ್ತಿ, ಟಿಎಸ್‌ಎಸ್‌ ಉಪ್ಪಿನ ಕಾಯಿ, ಟಿಎಸ್‌ಎಸ್‌ ಔಷಧಗಳು, ಟಿಎಸ್‌ಎಸ್‌ ಮಕ್ಕಳ ಆಹಾರ ಇತ್ಯಾದಿ ಉತ್ಪನ್ನಗಳನ್ನು ಸಂಘವು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಯೋಗ್ಯ ದರದಲ್ಲಿ ಔಷ ಧಗಳನ್ನು ಪೂರೈಸಲು ಸಂಘದ ಸುಪರ್‌ ಮಾರ್ಕೆಟ್‌ನಲ್ಲಿ ಜನೌಷಧಿ ಕೇಂದ್ರವನ್ನು ತೆರೆದಿದೆ. ಇದರ ಜತೆಯಲ್ಲಿ ಬ್ರ್ಯಾಂಡೆಡ್‌ ಔಷಧಗಳನ್ನು ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಕಡಿಮೆ ದರದಲ್ಲಿ ಪೂರೈಸುತ್ತಿದೆ. ಅಷ್ಟೇ ಅಲ್ಲ ಸಂಸ್ಥೆಯು ಔಷಧ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ಸ್ವಂತ ಬ್ರ್ಯಾಂಡ್‌ನ‌ಲ್ಲಿ ಔಷಧಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರಿಂದ ಪ್ರತಿದಿನ ಆಯುಷ್ಯ ಪೂರ್ತಿ ಔಷಧ ತೆಗೆದುಕೊಳ್ಳುವವರಿಗೆ ಬಹಳಷ್ಟು ಹಣ ಉಳಿತಾಯ ಸಾಧ್ಯವಾಗಿದೆ.

ಸೇವೆಯನ್ನೇ ಉಸಿರನ್ನಾಗಿಟ್ಟುಕೊಂಡು ಶತಮಾನದ ಹೊಸ್ತಿಲಲ್ಲಿ ನಿಂತಿರುವ ಸಂಘವು ಸದಸ್ಯರಿಗೆ ಇನ್ನೂ ಹೆಚ್ಚಿನ ವೈವಿಧ್ಯಮಯ ಸೇವೆ ಸೌಲಭ್ಯಗಳನ್ನು ಒದಗಿಸಿ ಪರಸ್ಪರ ಅಭಿವೃದ್ಧಿ ಪಥದಲ್ಲಿ ಮುನ್ನಡೆದು ಮುಂದಿನ ಶತಮಾನವನ್ನು ಯಶಸ್ವಿಯಾಗಿ ಪೂರೈಸುವಂತಾಗಲಿ.

ಸಂಸ್ಥೆ ಎಂದರೆ..
ಟಿಎಸ್‌ಎಸ್‌ ಸಂಸ್ಥೆಯಲ್ಲಿ ದೊರೆಯುವ ಸೌಲಭ್ಯಗಳು ಎಂದರೆ ಮಹಸೂಲು ಮಾರಾಟಕ್ಕೆ ವ್ಯವಸ್ಥಿತವಾದ ಪಾರದರ್ಶಕ ಮಾರುಕಟ್ಟೆ ಸೌಲಭ್ಯ, ಬೃಹತ್‌ ವ್ಯಾಪಾರಿ ಅಂಗಳ, ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಮಹಸೂಲು ಶೇಖರಣೆಗೆ ಸುಸಜ್ಜಿತ ಗೋದಾಮು ಮತ್ತು ಶೈತ್ಯಾಗಾರದ ಸೌಲಭ್ಯ, ಮಹಸೂಲು ಸಾಗಾಟಕ್ಕೆ ಸ್ಪರ್ಧಾತ್ಮಕ ದರದಲ್ಲಿ ವಾಹನ ವ್ಯವಸ್ಥೆ, ಸದಸ್ಯರಿಗೆ ಮಹಸೂಲು ವಿಕ್ರಿಗನುಗುಣವಾಗಿ ಬೋನಸ್‌, ಶೇರುಗಳ ಮೇಲೆ ಡಿವಿಡೆಂಡ್‌, ಸದಸ್ಯರ ಠೇವಣಿಗೆ ಆಕರ್ಷಕ ಬಡ್ಡಿ, ಕಚೇರಿ ವೇಳೆಯಲ್ಲಿ ದಿನವಿಡೀ ಹಣ ಬಟವಡೆ ವ್ಯವಸ್ಥೆ, ಗಣಕೀಕೃತ ಪಾಸ್‌ ಪುಸ್ತಕ, ಪ್ರತಿಯೊಂದು ವಿಭಾಗದಲ್ಲೂ ಗಣಕಯಂತ್ರ ಅಳವಡಿಕೆ, ತನ್ಮೂಲಕ ಶೀಘ್ರ ಸೇವೆ, ಸದಸ್ಯರಿಗೆ ಎಟಿಎಂ ಸೌಲಭ್ಯ, ಶುಲ್ಕರಹಿತವಾಗಿ ಹಣ ವರ್ಗಾಯಿಸಿಕೊಡುವ ವ್ಯವಸ್ಥೆ, ಸಂಕಷ್ಟದಲ್ಲಿರುವ ಸದಸ್ಯರಿಗೆ ಧನಸಹಾಯ, ಸದಸ್ಯರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಶಿಕ್ಷಣ ಸಾಲ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಟಿಎಸ್‌ಎಸ್‌ ರೈತ ರಕ್ಷಾ ಕವಚ ಯೋಜನೆ ಇನ್ನೂ ಇವೆ.

ಉತ್ತಮ ಕೃಷಿ ನಿರ್ವಹಣೆಗೆ ತಜ್ಞರ ಲಭ್ಯತೆ, ಕೃಷಿ ಗ್ರಂಥಾಲಯ ಸೌಲಭ್ಯ, ಪ್ರಾಥಮಿಕ ಸಹಕಾರಿ ಸಂಘಗಳಿಗೆ ಪತ್ತು ಮತ್ತು ಮಾರಾಟ, ಸ್ಪರ್ಧಾತ್ಮಕ ದರದಲ್ಲಿ ದಿನಸಿಗಳು, ಗೊಬ್ಬರ, ಕ್ರಿಮಿನಾಶಕ ಪೂರೈಕೆಯ ಮೂಲಕ ಕೃಷಿಕರಿಗೆ ಪರೋಕ್ಷವಾಗಿ ನೆರವು, ಶಿರಸಿಯಲ್ಲಿ ಕಡಿಮೆ ದರದಲ್ಲಿ ಸುಸಜ್ಜಿತ ಅತಿಥಿಗೃಹ ಸಾಮ್ರಾಟ್‌, ಸ್ಪರ್ಧಾತ್ಮಕ ದರದಲ್ಲಿ ಭತ್ತದ ಗುಣಮಟ್ಟದ ಮಿಲ್ಲಿಂಗ್‌ ವ್ಯವಸ್ಥೆ, ವೆಬ್‌ಸೈಟ್‌ ಮೂಲಕ ದಿನದ ಟೆಂಡರ್‌ ಮಾಹಿತಿ, ಸಂಘದಲ್ಲಿಯೇ ಭೋಜಾ ದಾಖಲಿಸುವ ಹಾಗೂ ಪಹಣಿ ಪತ್ರಿಕೆ ಒದಗಿಸುವ ವ್ಯವಸ್ಥೆ, ಪಾನ್‌ಕಾರ್ಡ್‌, ಟಿಡಿಎಸ್‌ ಅಪ್‌ಲೋಡ್‌, ಇ- ಸ್ಟಾಂಪಿಂಗ್‌, ಡಿಜಿಟಲ್‌ ಸಿಗ್ನೇಚರ್‌ ಸರ್ಟಿಫಿಕೇಟ್‌, ಜೀವನ್‌ ಪ್ರಮಾಣ ಪತ್ರ (ಡಿಎಲ್‌ಸಿ) ಮಾಡಿಕೊಡುವ ವ್ಯವಸ್ಥೆ, ವಾಹನ ವಿಮೆ ಮಾಡಿಸಿಕೊಡುವ ವ್ಯವಸ್ಥೆ, ಶಿರಸಿಯಲ್ಲಿ ಮೊದಲ ಬಾರಿಗೆ ವಾಹನಗಳ ಉಚಿತ ವ್ಯಾಲೆಟ್‌ ಪಾರ್ಕಿಂಗ್‌ ವ್ಯವಸ್ಥೆ, ಜಾನುವಾರುಗಳ ಮತ್ತು ಸಾಕು ಪ್ರಾಣಿಗಳ ಕೊಂಡು ಕೊಳ್ಳುವಿಕೆಯ ಕುರಿತಾದ ಮಾಹಿತಿ ವಿನಿಮಯಕ್ಕಾಗಿ ಟಿಎಸ್‌ಎಸ್‌ ಪೆಟ್‌ ಶಾಪ್‌, ಸದಸ್ಯರಿಗೆ ಕಾಶಿ ಯಾತ್ರೆ ಸಲುವಾಗಿ ಸಹಾಯಧನ, ಹಸಿ ಅಡಿಕೆ ಹಾಗೂ ಕೃಷಿ ಉತ್ಪನ್ನಗಳಾದ ಶುಂಠಿ, ಅರಿಶಿಣ, ಬಾಳೆಕಾಯಿ, ಗೇರುಬೀಜ ಹಾಗೂ ತೆಂಗಿನಕಾಯಿಗಳ ಟೆಂಡರ್‌ ವ್ಯವಸ್ಥೆ, ಟಿಎಸ್‌ಎಸ್‌ ಟೂರಿಸಂ, ಎಲ್‌ಐಸಿ ವಿಮಾ ಪಾವತಿ ಕೇಂದ್ರ ಎಲ್ಲವೂ ಇಲ್ಲೇ ಇದೆ.

ಸೌಲಭ್ಯದ ಮೂಲಕ ಸೇವೆ: ಟಿಎಸ್‌ಎಸ್‌ ಆರಂಭವಾಗಿದ್ದೇ ರೈತರಿಗೆ ಆಗುತ್ತಿರುವ ಶೋಷಣೆ ತಪ್ಪಿಸಲು. ಹಿರಿಯ ಸಹಕಾರಿ ಕಡವೆ ಶ್ರೀಪಾದ ಹೆಗಡೆ ಅವರ ಕನಸಿನ ಕೂಸು. ಅಂದಿನಿಂದ ಇಂದಿನವರೆಗೂ ಸಮರ್ಥ ಆಡಳಿತ ಮಂಡಳಿ, ನಿಷ್ಠಾವಂತ ಸಿಬ್ಬಂದಿಗಳಿಂದ, ಸದಸ್ಯರ ವಿಶ್ವಾಸದಿಂದ ಸಂಸ್ಥೆ ಬೆಳೆದಿದೆ. ಇಂದು ಸಹಕಾರಿ ರತ್ನ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅಧ್ಯಕ್ಷತೆ, ರಾಮಕೃಷ್ಣ ಹೆಗಡೆ ಕಡವೆ ಅವರ ಕಾರ್ಯಾಧ್ಯಕ್ಷತೆ ಹಾಗೂ ಇತರೆ ನಿರ್ದೇಶಕರು, ರವೀಶ ಹೆಗಡೆ ಅವರ ವ್ಯವಸ್ಥಾಪಕ ನಿರ್ದೇಶಕರ ಸ್ಥಾನದಿಂದ ಸಮರ್ಥವಾಗಿ ಮುನ್ನಡೆದಿದೆ.

-ಆರ್‌.ಎಸ್‌. ಹೆಗಡೆ, ಶಿರಸಿ

 

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.