ಸಭೆ ಕರೆಯದೆ ಯುಜಿಡಿ ಕಾಮಗಾರಿ: ಸಾರ್ವಜನಿಕರಿಂದ ಪ್ರತಿಭಟನೆ
Team Udayavani, Jun 24, 2020, 3:35 PM IST
ದಾಂಡೇಲಿ: ನಗರದ ಹಳೆ ದಾಂಡೇಲಿಯಲ್ಲಿ ಯುಜಿಡಿ ಪೈಪ್‌ಲೈನ್ ಕಾಮಗಾರಿ ಪ್ರಾರಂಭವಾಗಿದ್ದು, ಸ್ಥಳೀಯ ಸಾರ್ವಜನಿಕರ ಜೊತೆ ಸಭೆ ನಡೆಸದೇ ಕಾಮಗಾರಿ ನಡೆಸಿರುವುದನ್ನು ಹಾಗೂ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ಸಾರ್ವಜನಿಕ ಅಹಲವಾಲು ಸಭೆ ಕರೆದ ನಂತರವೆ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಮಂಗಳವಾರ ನಡೆದಿದೆ.
ನಗರದಲ್ಲಿ ಸಾಕಷ್ಟು ವಿವಾದಗಳಿಗೆ ಕಾರಣವಾಗುತ್ತಿರುವ ಯುಜಿಡಿ ಕಾಮಗಾರಿಯೂ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂಬ ಆರೋಪವಿದೆ. ಈ ಕಾಮಗಾರಿ ಆರಂಭಿಸುವ ಮುನ್ನ ಸಾರ್ವಜನಿಕ ಅಹವಾಲು ಸಭೆ ಕರೆಯಬೇಕೆಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೂ ಅಹವಾಲು ಸಭೆ ಕರೆಯದೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಇದೀಗ ಹಳೆ ದಾಂಡೇಲಿಯಲ್ಲಿ ಸ್ಥಳೀಯ ನಗರ ಸಭಾ ಸದಸ್ಯರ ಗಮನಕ್ಕೆ ತರದೇ ಹಾಗೂ ಸ್ಥಳೀಯರ ಜೊತೆ ಸಮಾಲೋಚನಾ ಸಭೆ ನಡೆಸದೆ ಯುಜಿಡಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಪೈಪ್ ಲೈನ್ ಅಳವಡಿಸಲು ಜೆಸಿಬಿ ಮೂಲಕ ಅಗೆಯುವ ಕೆಲಸವನ್ನು ಪ್ರಾರಂಭಿಸಿತ್ತು. ಕಾಮಗಾರಿ ಆರಂಭಿಸಿರುವುದನ್ನು ವಿರೋಧಿಸಿ ನಗರದ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಮ್ ಖಾನ್, ಕಾರ್ಮಿಕ ಮುಖಂಡ ಶಿವಾನಂದ ಗಗ್ಗರಿ, ಮಾಜಿ ಸದಸ್ಯ ರಾಮಲಿಂಗ ಜಾಧವ, ಮಹಮ್ಮದ್ ಫನಿಬಂದ್, ಕರವೇ ಮುಖಂಡರಾದ ಪ್ರವೀಣ ಕೊಠಾರಿ, ರಾಜೇಶ ಜಲ್ದಿ, ಮಂಜು ಪಂಥೋಜಿ ಮೊದಲಾದವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟಿಸಿದರು.
ಸಮಾಲೋಚನಾ ಸಭೆ ನಡೆಸಿದ ನಂತರವಷ್ಟೆ ಕಾಮಗಾರಿ ಪ್ರಾರಂಭಿಸುವಂತೆ ಪಟ್ಟು ಹಿಡಿದ ಪರಿಣಾಮ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ, ಬುಧವಾರ ಈ ಬಗ್ಗೆ ಚರ್ಚೆ ನಡೆಸುವುದಾಗಿ ಗುತ್ತಿಗೆ ಸಂಸ್ಥೆ ಭರವಸೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.