ನೀರಿನ ಸಮಸ್ಯೆ ಪರಿಹಾರಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಸನ್ನದ್ಧ
Team Udayavani, May 18, 2019, 2:41 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬರ ಘೋಷಿತ ತಾಲೂಕುಗಳಿದ್ದರೂ, ಜನ ಗುಳೆ ಹೋಗುವ ಪರಿಸ್ಥಿತಿ ಇಲ್ಲ. ಬೆಳೆ ಹಾನಿಯೇ ಮುಖ್ಯ. ಜಾನುವಾರುಗಳಿಗೆ ಮೇವಿನ ಕೊರತೆ ಎಂಬುದಿಲ್ಲ. ಕಾರಣ ಇಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಿವೆ. ಇಲ್ಲಿನ ಜನರಿಗೆ ಕುಡಿಯುವ ನೀರಿನದ್ದೇ ಮೂಲ ಸಮಸ್ಯೆ. ಜಲ ಮೂಲಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದು ಈ ಸಲ ತೀವ್ರ ಚಿಂತೆಗೆ ಕಾರಣವಾಗಿದೆ.
ಪ್ರತಿ ತಾಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ, ನಗರ ಪಟ್ಟಣಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಕಾಳಿ ನದಿಯಲ್ಲಿ ನೀರಿದ್ದರೂ ಅದು ಕುಡಿಯಲು ಅಯೋಗ್ಯ. ಹಾಗಾಗಿ ಜೋಯಿಡಾ, ದಾಂಡೇಲಿಯಿಂದ ಹಿಡಿದು ಕಾರವಾರದವರೆಗೆ ಕುಡಿಯುವ ನೀರಿಗೆ ಬರ ಉಂಟಾಗಿದೆ. ಕಾರವಾರ, ಅಂಕೋಲಾ ಪಟ್ಟಣಗಳು ಗಂಗಾವಳಿ ನದಿ ನೀರನ್ನು ಅಲವಂಬಿಸಿದ್ದು, ಗಂಗಾವಳಿಯಲ್ಲಿ ನೀರಿನ ಸಂಗ್ರಹ ತೀವ್ರ ಕುಸಿದಿದೆ. ನಲ್ಲಿ ನೀರು ನಾಲ್ಕು ದಿನಕ್ಕೊಮ್ಮೆ ಬರುತ್ತಿದ್ದು, ಅದು ಸಹ ನಿಲ್ಲುವ ಲಕ್ಷಣಗಳು ಕಂಡು ಬಂದಿವೆ. ಶರಾವತಿ ನದಿ ನೀರನ್ನು ಕುಡಿಯುವ ಸ್ವರೂಪದಲ್ಲಿ ಯೋಜನೆ ರೂಪಿಸಿಲ್ಲ. ಕುಮಟಾದ ಮರಾಕಲ್ ಯೋಜನೆಯಲ್ಲಿ ನೀರಿನ ಸಂಗ್ರಹ ಬತ್ತಿದೆ. ಭಟ್ಕಳಕ್ಕೆ ಕುಡಿಯುವ ನೀರು ಪೂರೈಸುವ ಕಡವಿನಕಟ್ಟಾ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಶರಾಬಿ ಹೊಳೆಯಲ್ಲಿ ಸಹ ನೀರಿನ ಮೂಲ ಬತ್ತಿದೆ ಎಂದು ತಾಲೂಕು ಆಡಳಿತಗಳು ಹೇಳುತ್ತಿವೆ.
ಜೊಯಿಡಾ, ದಾಂಡೇಲಿಯ ಕೆಲ ಮಜಿರೆಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಕುಮಟಾ, ಹೊನ್ನಾವರ ಪಟ್ಟಣಗಳ ಕೆಲ ಗ್ರಾಮಗಳು ಕುಡಿಯುವ ನೀರಿನ ಕೊರತೆ ಅನುಭವಿಸುತ್ತಿವೆ.
ಅಂಕೋಲಾ ತಾಲೂಕಿನಲ್ಲಿ 13 ಗ್ರಾಪಂಗಳ 43 ಗ್ರಾಮಗಳು, ನೂರಕ್ಕೂ ಹೆಚ್ಚು ಮಜಿರೆಗಳು ಕುಡಿಯುವ ನೀರಿನ ಬವಣೆ ಅನುಭವಿಸುತ್ತಿದ್ದು, ಇಲ್ಲಿ ಪ್ರತಿದಿನ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಬಾವಿಗಳಿಂದ ನೀರು ಪೂರೈಸುತ್ತಿದ್ದು, ಮೇ ಅಂತ್ಯಕ್ಕೆ ಮಳೆಯಾಗದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಬೆಳಂಬಾರ, ಬೆಳಸೆ, ಹೊನ್ನೇಬೈಲ್, ಅಗ್ರಗೋಣ, ಸಗಡಗೇರಿ, ಶೇಟಗೇರಿ ಸೇರಿದಂತೆ ಒಟ್ಟು 13 ಗ್ರಾಪಂ ವ್ಯಾಪ್ತಿಯಲ್ಲಿ ದಿನಾಲೂ 32 ಟ್ಯಾಂಕರ್ ನೀರು ಸರಬರಾಜಾಗುತ್ತಿದ್ದು, ಜನರಿಂದ ದೂರು ಬರದಂತೆ ನೋಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಕಚೇರಿ ಶಿರಸ್ತೇದಾರ ಎನ್.ಎಂ. ನಾಯ್ಕ ವಿವರಿಸಿದರು.
ಗಂಗಾವಳಿ ನದಿಗೆ ಬಳಸಿ ತೋಟಗಳಿಗೆ ನೀರು ಹಾಯಿಸುತ್ತಿದ್ದ 30ಕ್ಕೂ ಹೆಚ್ಚು ಅಕ್ರಮ ಪಂಪ್‌ಸೆಟ್‌ಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಬೆಳಗಿನ ಜಾವ 3 ತಾಸು 3 ಫೇಸ್ ವಿದ್ಯುತ್ ನೀಡಿ, ನಂತರ ಸಿಂಗಲ್ ಫೇಸ್ ಮಾಡಲಾಗುತ್ತಿದೆ ಎಂಬ ಮಾಹಿತಿ ಅಂಕೋಲಾ ಪುರಸಭೆಯಿಂದ ಲಭ್ಯವಾಗಿದೆ.
ಕಾರವಾರ ತಾಲೂಕಿನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕಾರವಾರ ಪಟ್ಟಣಕ್ಕೆ ದಿನವೂ 7 ಟ್ಯಾಂಕರ್‌ಗಳಲ್ಲಿ ನೀರನ್ನು ವಿವಿಧ ವಾರ್ಡ್‌ಗಳಿಗೆ ಪೂರೈಸಲಾಗುತ್ತಿದೆ. 1.5 ಲಕ್ಷ ಲೀಟರ್ ಕಾರವಾರ ನಗರದಲ್ಲಿ ವಿತರಣೆ ಮಾಡಲಾಗುತ್ತಿದ್ದು, ಬೈತಖೋಲ, ಬಿಣಗಾ ಗ್ರಾಮಗಳಿಗೆ ಸಹ ನೀರು ಕೊಡಲಾಗುತ್ತಿದೆ. ಕಾರವಾರ ಗ್ರಾಮಾಂತರ ಭಾಗದ 19 ಮಜಿರೆಗಳಿಗೆ ನೀರು ಪೂರೈಸಲಾಗುತ್ತಿದೆ. ಇನ್ನೂ ಎರಡು ಗ್ರಾಮಗಳಿಂದ ಬೇಡಿಕೆ ಬಂದಿದೆ. ಶಿರವಾಡ, ವೈಲವಾಡಗಳಿಗೆ ಹೊಸದಾಗಿ ನೀರು ಕೊಡಬೇಕಿದೆ ಎಂದು ತಹಶೀಲ್ದಾರ ಕಚೇರಿಯ ಪ್ರಕೃತಿ ವಿಕೋಪ ವಿಭಾಗದ ಗ್ರಾಮ ಲೆಕ್ಕಿಗ ಯೋಮಕೇಶ್ ವಿವರಿಸಿದರು. ಈಗಾಗಲೇ ಹೋಟೆಗಾಳಿ, ಗೋಟೆಗಾಳಿ ಗ್ರಾಮಗಳಿಗೆ ಪ್ರತಿದಿನ 12000 ಲೀಟರ್, ಬೋಳಶಿಟ್ಟಾ, ಘಾಡಸಾಯಿ, ಹಳಗಾಜೋಗ, ಉಳಗಾ ಗ್ರಾಮಗಳಿಗೆ 12 ಸಾವಿರ ಲೀಟರ್, ಅಸ್ನೋಟಿ ಪರವಾರವಾಡಕ್ಕೆ 1000 ಲೀಟರ್, ಕಿನ್ನರಕ್ಕೆ 12000 ಲೀಟರ್, ಭೈರೆ ಶೀನಗುಡ್ಡ, ಸಣ್ಣಮಕ್ಕಿಗೆ 6000 ಲೀಟರ್ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ.
•ನಾಗರಾಜ್ ಹರಪನಹಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.