ಹನುಮನ ಜನ್ಮಭೂಮಿಗೆ ಏಕಿಲ್ಲ ಪ್ರಾಶಸ್ತ್ಯ?
Team Udayavani, Apr 23, 2019, 2:48 PM IST
ಹೊನ್ನಾವರ: ದೇಶದ ತುಂಬೆಲ್ಲಾ ರಾಮ ಧ್ಯಾನ, ರಾಮ ಮಂದಿರಗಳು ಇದ್ದರೂ ಅಯೋಧ್ಯೆ ರಾಮಜನ್ಮಭೂಮಿ ವಿವಾದಗಳಿಂದಲೇ ಪ್ರಾಮುಖ್ಯತೆ ಪಡೆಯಿತು. ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಭಾವ ಬೀರಿತು. ಹಾಗೆಯೇ ಹನುಮ ಧ್ಯಾನ, ಮಂದಿರಗಳು ದೇಶ ತುಂಬಿದ್ದರೂ ಯಾವ ವಿವಾದಗಳಿಲ್ಲದ ಕಾರಣ ಹನುಮ ಜನ್ಮಭೂಮಿ ಪ್ರಸಿದ್ಧಿ ಪಡೆಯಲೇ ಇಲ್ಲ. ಮಾತ್ರವಲ್ಲ ಸರ್ಕಾರದ ತೀರ ನಿರ್ಲಕ್ಷ್ಯಕ್ಕೊಳಗಾಗಿದೆ.
ಗೋಕರ್ಣ ತನ್ನ ಜನ್ಮಭೂಮಿ ಎಂದು ಆಂಜನೇಯ ಹೇಳಿದ್ದಕ್ಕೆ ಮೂಲ ವಾಲ್ಮೀಕಿ ರಾಮಾಯಣದಲ್ಲೇ ದಾಖಲೆ ಇದೆ. ಹೀಗಿದ್ದರೂ ಕರ್ನಾಟಕದ ಒಂದು ಮೂಲೆಯಲ್ಲಿರುವ ಗೋಕರ್ಣದ ಆಂಜನೇಯ ಜನ್ಮಭೂಮಿ ಕುರಿತು ನಿರ್ಲಕ್ಷ್ಯ ಅಸಹನೀಯ. ಮಾತ್ರವಲ್ಲ ಅಪರಾಧವೂ ಹೌದು. ಬಹುಶಃ ಹನುಮ ಜನ್ಮಭೂಮಿಯಲ್ಲೂ ಮಂದಿರವಾದ ಮೇಲೆ ತನ್ನ ಮಂದಿರವಾಗಲಿ ಎಂದು ರಾಮನಿಗೆ ಅನಿಸಿದೆಯೇ ? ಸಂಬಂಧಿಸಿದವರು ವಿಚಾರ ಮಾಡಬೇಕಾಗಿದೆ.
ರಾಘವೇಶ್ವರ ಶ್ರೀಗಳು ಗೋಕರ್ಣದ ಆಡಳಿತ ವಹಿಸಿಕೊಂಡ ಮೇಲೆ ಆಂಜನೇಯ ಜನ್ಮಭೂಮಿಯಲ್ಲಿ ಒಂದು ಫಲಕ ನೆಟ್ಟು ಕಾರ್ಯಾರಂಭ ಮಾಡಿದರು. ಗೋಕರ್ಣಕ್ಕೆ ವಿವಾದ ಮುತ್ತಿಕೊಂಡ ಕಾರಣ ಆಂಜನೇಯನ ಜನ್ಮಭೂಮಿ ಅಭಿವೃದ್ಧಿ ಕನಸಾಗಿಯೇ ಉಳಿಯಿತು. ಹನುಮ ಜನಿಸಿದ ಹುಣ್ಣಿಮೆಯಂದು ಮಾತ್ರವಲ್ಲ ಪ್ರತಿ ಹುಣ್ಣಿಮೆಯಂದು ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಕುಮಟಾ ರಾಜಾರಾಮ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪವಮಾನಸೂಕ್ತ, ಶ್ರೀಸೂಕ್ತ, ಪುರುಷ ಸೂಕ್ತ, ಆಂಜನೇಯ ಮೂಲಮಂತ್ರಹವನ, ಜಪ, ಮೊದಲಾದವನ್ನು ನಡೆಸಿಕೊಂಡು ಬರಲಾಗುತ್ತಿದ್ದು ಪುಟ್ಟ ಪಲ್ಲಕ್ಕಿಯಲ್ಲಿ ಆಂಜನೇಯನ ಮೂರ್ತಿ ಉತ್ಸವ ನಡೆಸಿ, ಮಹಾಬಲೇಶ್ವರನ ದರ್ಶನ, ಕೋಟಿತೀರ್ಥ ದರ್ಶನ ಮಾಡಿಸಲಾಗುತ್ತದೆ. ರಾಮಜಪ ನಡೆಯುತ್ತದೆ. ಕ್ಷೇತ್ರ ಅಭಿವೃದ್ಧಿಗಾಗಿ ಭೂಮಿ ಖರೀದಿಸಲಾಗಿದೆ. ಆದರೂ ಆಳುವ ಪ್ರಭುಗಳು ಆಸಕ್ತಿ ವಹಿಸದಿದ್ದರೆ ಆಧುನಿಕ ವ್ಯವಸ್ಥೆ ಮಾಡದಿದ್ದರೆ ಭಕ್ತರು ಬರುವುದಿಲ್ಲ.
ಕೇಂದ್ರ ಸರ್ಕಾರ ರಾಮಾಯಣದ ಕಾರಿಡಾರ್ ಪ್ರಕಟಿಸಿದೆ. ರಾಮಾಂಜನೇಯರಿಗೆ ಸಂಬಂಧಿಸಿದ ಕ್ಷೇತ್ರಗಳಿಗೆ ಯಾತ್ರೆಗೆ ಹೋಗಿ ಬರಲು ಸಕಲ ವ್ಯವಸ್ಥೆ ಮಾಡಿದೆ. ಬಹುಕೋಟಿ ರೂ.ಗಳನ್ನು ಸುರಿದಿದೆ. ಆಂಜನೇಯ ಆಡಿ, ಬೆಳೆದ ಹಂಪೆಯ ಕುರಿತು ವ್ಯವಸ್ಥೆ ಮಾಡುವ ಸರ್ಕಾರ ಆಂಜನೇಯ ಜನ್ಮಸ್ಥಳವನ್ನು ನಿರ್ಲಕ್ಷಿಸಿದೆ. ಭಜರಂಗಬಲಿ ನಮ್ಮವ ಎಂದು ಎದೆತಟ್ಟಿಕೊಳ್ಳುವ ಉತ್ತರ ಭಾರತದ ಧಾರ್ಮಿಕ ಮುಖಂಡರಿಗೆ ಭಜರಂಗಬಲಿ ಎಂಬ ಹೆಸರು ಕೇಳಿಸುತ್ತದೆ ವಿನಃ ಆಂಜನೇಯನ ಜನ್ಮಸ್ಥಳ ಕಾಣುವುದಿಲ್ಲ. ಅಲ್ಲಿ ಉತ್ತರದ ರಾಜ್ಯಗಳಲ್ಲಿ ಬಹುಕೋಟಿ ರೂಪಾಯಿಗಳನ್ನು ಕ್ಷೇತ್ರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಕೊಡುತ್ತದೆ. ಆಂಜನೇಯನ ಜನ್ಮಸ್ಥಾನಕ್ಕೂ, ಪರಶಿವನ ಆತ್ಮಲಿಂಗ ಕ್ಷೇತ್ರಕ್ಕೂ ಯಾವುದೇ ನೆರವಿಲ್ಲ. ಜಿಲ್ಲೆಯ ಕ್ಷೇತ್ರಗಳನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳು ಲೆಕ್ಕಿಸುವುದೇ ಇಲ್ಲ. ಜಿಲ್ಲೆಯನ್ನು ಪ್ರತಿನಿಧಿಸುವವರೆಲ್ಲ ಪರಮದೈವಭಕ್ತರೇ. ಆದರೆ ಜಿಲ್ಲೆಯ ದೇವರುಗಳಿಗೆ ಬೆಲೆಯೇ ಇಲ್ಲ. ರಾಘವೇಶ್ವರ ಶ್ರೀಗಳು ಅಭಿವೃದ್ಧಿ ಮಾಡಲು ಸಿಆರ್‌ಝಡ್ ತೊಡಕು ನಿವಾರಿಸಬೇಕಿದೆ.
ಹಂಪೆಗೆ ಬಂದವರು, ಅಲ್ಲಿರುವ ಸಾಧುಸಂತರು ಗೋಕರ್ಣಕ್ಕೆ ಬಂದು ಆಂಜನೇಯನ ಜನ್ಮಸ್ಥಳದಲ್ಲಿ ತಪಸ್ಸು ಮಾಡುತ್ತಾರೆ. ಅವರೊಂದಿಗೆ ಸಹಕರಿಸುತ್ತೇವೆಯೇ ವಿನಃ ಯಾವ ಸೌಲಭ್ಯ ಮಾಡಿಕೊಡುವ ಶಕ್ತಿ ನಮಗಿಲ್ಲ ಎಂದು ವಿಷಾದ ಪಡುತ್ತಾರೆ ಮಹಾಬಲೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ.
ಪಿತೃ ಕಾರ್ಯಕ್ಕೆ ವೈಷ್ಣವರಿಗೆ ಶ್ರೇಷ್ಠವಾದದ್ದು ಗಯಾದ ವಿಷ್ಣುಪಾದ. ಶಿವಭಕ್ತರಿಗೆ ಗೋಕರ್ಣದ ರುದ್ರಪಾದ. ಇದು ಅಭಿವೃದ್ಧಿಯಾಗಬೇಕು ಎಂದು ಆಸೆಪಟ್ಟು, ಕಷ್ಟಪಟ್ಟ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾಗಿದ್ದ ವೀಣಾಕರ್ ಆ ಕಾರ್ಯ ಪೂರ್ತಿಯಾದದ್ದನ್ನು ಕಾಣಲಿಲ್ಲ. ಈಗಲೂ ಹಾಗೆಯೇ ಇದೆ. ಹೊನ್ನಾವರದ ರಾಮತೀರ್ಥದಲ್ಲಿ ನೀರು ಇಲ್ಲ. ಸುತ್ತಲಿನ ಭೂಮಿಯಲ್ಲಿ ಅಕ್ರಮ ಚಟುವಟಿಕೆಗಳು ಚಿಗುರಿವೆ. ಹೀಗೆ ಜಿಲ್ಲೆಯ ರಾಮ, ರುದ್ರ, ಆಂಜನೇಯರ ಕುರಿತು ಕಾಳಜಿ ವಹಿಸುವವರೇ ಇಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಜಿಲ್ಲೆಯ ಇಂತಹ ಅಪೂರ್ವ ಸ್ಥಳಗಳನ್ನು ನಿರ್ಲಕ್ಷಿಸಿವೆ. ಸರ್ಕಾರ ಎಚ್ಚರಿಸಬೇಕಾದ ಶಾಸಕರು, ಸಂಸದರು ಕಾಳಜಿವಹಿಸಿ ಅಥವಾ ಸನಾತನ ಸಂಸ್ಕೃತಿ, ಸಂಪ್ರದಾಯದ ಕುರಿತು ಮಾತನಾಡುವುದನ್ನು ಬಿಡಿ.
ಸೀತಾಮಾತೆಯನ್ನು ಪ್ರಥಮ ಬಾರಿ ಆಂಜನೇಯ ನೋಡಿದಾಗ ತನ್ನ ಗುರುತು ಹೇಳುತ್ತ, ವೈದೇಹಿ!…. ಮಾಲ್ಯವಂತವು ಪರ್ವತಗಳಲ್ಲಿಯೇ ಶ್ರೇಷ್ಠವಾದ ಪರ್ವತ. ಕೇಸರಿ ಎಂಬ ಕಪೀಶ್ವರನು ಅಲ್ಲಿಂದ ಗೋಕರ್ಣ ಪರ್ವತಕ್ಕೆ ಹೋದನು. ಪುಣ್ಯಪ್ರದವಾದ ಗೋಕರ್ಣ ಕ್ಷೇತ್ರದಲ್ಲಿ ಯಾತ್ರಾರ್ಥಿಗಳಿಗೆ ತೊಂದರೆ ಉಂಟು ಮಾಡುತ್ತಿದ್ದ ಶಂಬಸಾದನನೆಂಬ ರಾಕ್ಷಸನನ್ನು ಸಂಹರಿಸುವಂತೆ ಬ್ರಹ್ಮರ್ಷಿಗಳು ಕಪಿಶ್ರೇಷ್ಠನಾದ ನನ್ನ ತಂದೆಗೆ ಆಜ್ಞೆ ಮಾಡಿದರು. ಅವರ ಆಜ್ಞೆಯಂತೆ ನನ್ನ ತಂದೆಯು ಆ ರಾಕ್ಷಸನನ್ನು ಸಂಹರಿಸಿದನು. ಅಂತಹ ಪರಾಕ್ರಮಿಯಾದ ಕೇಸರಿ ಕ್ಷೇತ್ರದಲ್ಲಿ (ಅವನ ಪತ್ನಿಯಾದ ಅಂಜನಾದೇವಿಯಲ್ಲಿ) ನಾನು ವಾಯುವಿನಿಂದ ಹುಟ್ಟಿದೆನು. ನನ್ನ ಪರಾಕ್ರಮದಿಂದಲೇ ನಾನು ಲೋಕದಲ್ಲಿ ಹನುಮಂತ ಎಂಬ ಹೆಸರಿನಿಂದ ಖ್ಯಾತನಾಗಿದ್ದೇನೆ ಎಂದು ಸೀತಾಮಾತೆಗೆ ತನ್ನನ್ನು ಆಂಜನೇಯ ಪರಿಚಯಿಸಿಕೊಳ್ಳುತ್ತಾನೆ. (ತಸ್ಯಾಹಂ ಹರಿಣಃ ಕ್ಷೇತ್ರೇ ಜಾತೋ ವಾತೇನ ಮೈಥಿಲಿ ಹನುಮಾನಿತಿ ವಿಖ್ಯಾತೋ ಲೋಕೇ ಸ್ವೇನೈವ ಕರ್ಮಣಾ) ಮೂಲ ವಾಲ್ಮೀಕಿ ರಾಮಾಯಣದ ಸುಂದರಕಾಂಡದ 1304ನೇ ಪೇಜಿನ 81ನೇ ಶ್ಲೋಕದಲ್ಲಿ ಮತ್ತು ಕನ್ನಡ ಅನುವಾದದ 2274ನೇ ಪುಟದಲ್ಲಿ ಇದು ದಾಖಲಾಗಿದೆ. ಹೀಗಿರುವಾಗ ಆಂಜನೇಯ ಜನ್ಮಭೂಮಿಗೆ ಸಂಬಂಧಿಸಿದ ದಾಖಲೆ ಕೇಳುವ ಅಗತ್ಯವೇ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.