ಬಡವರ ಪರ ಕೆಲಸ ಮಾಡಿ: ಪೂಜಾರಿ
ನಿವೃತ್ತಿ ಸಮಯದಲ್ಲಿ ಜನ ನಿಮ್ಮನ್ನ ಸ್ಮರಿಸುತ್ತಾರೆ
Team Udayavani, Mar 27, 2022, 5:24 PM IST
ಕಾರವಾರ: ಬಡವರ ಪರವಾಗಿ ಕೆಲಸ ಮಾಡಿ, ಸರ್ಕಾರದ ಎಲ್ಲಾ ಯೋಜನೆಗಳು ಬಿಪಿಎಲ್ ಕಾರ್ಡುದಾರರ ಮನೆ ಬಾಗಿಲಿಗೆ ಸರ್ಕಾರ ತಲುಪಿದೆ ಎಂಬುದು ಗೊತ್ತಾಗಬೇಕು. ಈ ಕಾರ್ಯ ಏ.16ರೊಳಗೆ ಪೂರ್ಣಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಹಶೀಲ್ದಾರರಿಗೆ ಕಿವಿಮಾತು ಹೇಳಿದರು.
ಡಿಸಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ಬಾಕಿ ಉಳಿದ ಜನರ ಅರ್ಜಿಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.
ರಾಜ್ಯ ಕಂದಾಯ ಸಚಿವರ ನೇತೃತ್ವದಲ್ಲಿ ಏ.16 ರಂದು ಜಿಲ್ಲೆಯಲ್ಲಿ ಜರುಗುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗುವ ರೀತಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು, ಗ್ರಾಮ ಲೆಕ್ಕಾಧಿಕಾರಿಯವರೆಗೂ ಎಲ್ಲರೂ ಕೆಲಸ ಮಾಡಬೇಕು. ಬಡವರಿಗೆ ನೆರವಾಗಿ, ಜನ ನಿಮ್ಮನ್ನು ನಿವೃತ್ತಿ ನಂತರವೂ ನೆನಪಿಸಿಕೋತಾರೆ. ನೀವು ಸಹ ಜನರಿಗೆ ಮಾಡಿದ ಕೆಲಸ ನೆನಪಿಡಬಹುದು ಎಂದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ವತಿಯಿಂದ ಕೈಗೊಳ್ಳುವ ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಂಥವರಿಗೆ ಯೋಜನೆ ಲಾಭ ದೊರಕುವಂತೆ ಮಾಡಬೇಕು ಎಂದರು.
ಕಂದಾಯ ಇಲಾಖೆ ವ್ಯಾಪ್ತಿಯ ಅಹವಾಲುಗಳನ್ನು ತಾಂತ್ರಿಕ ಕಾರಣ ನೀಡಿ ವಿಳಂಬ ಮಾಡದೇ ಮುತುವರ್ಜಿ ವಹಿಸಿ ಪೂರ್ಣಗೊಳಿಸಬೇಕು. ವಿವಿಧ ವೇತನ ಮತ್ತಿತರ ಯೋಜನೆ, ಮೂಲ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ನೇರ ಭೇಟಿ ಮಾಡಿ, ನೈಜತೆ ಅರಿತು ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಬಡವರು ತುಂಡುಭೂಮಿ ಹಕ್ಕಿಗಾಗಿ ಕಾಯುವ ಸ್ಥಿತಿ ಬರದಂತೆ ನೋಡಿಕೊಳ್ಳಿ. ಇದಕ್ಕಾಗಿ ಗ್ರಾಮ ಲೆಕ್ಕಾಧಿಕಾರಿ ಮತ್ತು ಪಿಡಿಒಗಳಿಂದ ಸರ್ವೇ ಮಾಡಿಸಿ, ಅರ್ಹರಿಗೆ ಭೂಮಿಯ ಹಕ್ಕುಪತ್ರ ನೀಡುವ ಕೆಲಸ ತ್ವರಿತವಾಗಿ ಆಗಬೇಕು. ಅರಣ್ಯ ಇಲಾಖೆ ಹಸ್ತಕ್ಷೇಪದ ನೆಪವೊಡ್ಡಿ ಬಡವರಿಗೆ ಭೂಮಿ ಹಕ್ಕುಪತ್ರವಿಲ್ಲವೆಂದು ಪಡಿತರ ಚೀಟಿ ನೀಡದೇ ಇರುವುದು ಸರಿಯಾದ ಕ್ರಮವಲ್ಲ. ಅರಣ್ಯ ವಾಸಿಗಳಿಗೆ ಮನೆ, ವಿಳಾಸ ಇಲ್ಲದಿದ್ದರೂ ಪಡಿತರ ಚೀಟಿ ನೀಡಬೇಕು ಎಂದರು.
7.5 ಕೋಟಿ ರೂ. ಬೇಕು: ಸುಪ್ರೀಂ ಕೋರ್ಟ್‌ನ ಆದೇಶದಂತೆ ಮೂಲಭೂತ ಸೌಕರ್ಯಗಳನ್ನು ನಿರಾಕರಿಸುವಂತಿಲ್ಲ, ಜಿಲ್ಲೆಯಲ್ಲಿ ವಿದ್ಯುತ್ ಇಲ್ಲದ ಮನೆಯಿರಬಾರದು, ಬೆಳಕು ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆಲ್ಲ ವಿದ್ಯುತ್ ನೀಡಲು ಸೂಕ್ತ ಕ್ರಮವಹಿಸಬೇಕು ಎಂದರು. ಜಿಲ್ಲೆಯಲ್ಲಿ 4000 ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಈ ಮನೆಗಳಿಗೆ ಕಾಡಿನಲ್ಲಿ, ಗುಡ್ಡದ ಮೇಲೆ ಹಾಗೂ ನದಿಯಾಚೆ ಮನೆಗಳು ಸಹ ಇವೆ. ಇವಕ್ಕೆ ವಿದ್ಯುತ್ ನೀಡಲು ಕಿ.ಮೀ.ಗಟ್ಟಲೇ ತಂತಿ ಹಾಗೂ ಕಂಬ ಹಾಕಬೇಕು. ಟ್ರಾನ್ಸ್‌ಫಾರ್ಮರ್ ಬೇಕು. ಈ ಎಲ್ಲಾ ಕಾರ್ಯಕ್ಕೆ 7.5 ಕೋಟಿ ರೂ. ಹಣಕಾಸು ನೆರವು ಬೇಕು ಎಂದು ಹೆಸ್ಕಾಂ ಅಧಿಕಾರಿ ಸಚಿವರ ಗಮನಸೆಳೆದರು.
ಇದಕ್ಕೆ ಸಚಿವರು ಬೆಳಕು ಯೋಜನೆಗೆ ಬೇಕಾಗುವ ಅನುದಾನವನ್ನು ಇಂಧನ ಸಚಿವರೊಂದಿಗೆ ಸಮಾಲೋಚಿಸಿ ನೀಡಲಾಗುವುದು ಎಂದರು. ಪಾರ್ಶ್ವವಾಯು ಪೀಡಿತರಿಗೂ ಅಂಗವೈಕಲ್ಯ ಪ್ರಮಾಣ ಪತ್ರ: ಪಾರ್ಶ್ವವಾಯು ಪೀಡಿತರಿಗೆ ಮಾನವೀಯತೆ ಆಧಾರದ ಮೇಲೆ ಅಂಗವಿಕಲರ ಮಾಸಾಶನ ಸೌಲಭ್ಯ ಕಲ್ಪಿಸಿಕೊಡಬೇಕು. ತಾಂತ್ರಿಕ ಮಾನದಂಡಗಳ ಕಾರಣ ನೀಡಿ, ಮಾಸಾಶನ ಜಾರಿ ಮಾಡದೇ ಇರಬಾರದು. ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ನೇರವಾಗಿ ಮನೆ ಮನೆ ಭೇಟಿ ಮಾಡಿ ಮಾಹಿತಿ ಪಡೆದು ಪಿಂಚಣಿ ಸೌಲಭ್ಯ ನೀಡಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅತೀ ಹೆಚ್ಚು ಸಮಸ್ಯೆ ಇರುವುದು ಸರ್ವೇ ಇಲಾಖೆಯಲ್ಲಿ. ನೂರಕ್ಕೂ ಹೆಚ್ಚು ಸರ್ವೇಯರ್ ಹುದ್ದೆಗಳು ಖಾಲಿ ಇವೆ. ಖಾಸಗಿಯವರು ಸಹ ಸರ್ವೇಯರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೀಡುತ್ತಿಲ್ಲ. ಈ ಕೆಲಸಕ್ಕೆ ಜನವೇ ಸಿಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಸಚಿವರ ಗಮನ ಸೆಳೆದರು.
ಶಾಸಕಿ ರೂಪಾಲಿ ನಾಯ್ಕ, ಎಂಎಲ್‌ಸಿ ಗಣಪತಿ ಉಳ್ವೇಕರ್, ಡಿಸಿ ಮುಲ್ಲೈ, ಮುಗಿಲನ್ ಎಂ.ಪಿ, ಜಿಪಂ ಸಿಇಒ ಪ್ರಿಯಾಂಕಾ ಎಂ, ಎಸ್ಪಿ ಡಾ| ಸುಮನ್ ಪೆನ್ನೇಕರ್, ಎಡಿಸಿ ರಾಜು ಮೊಗವೀರ, ಸಹಾಯಕ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.