ಪುನರುಜ್ಜೀವನಗೊಳಿಸಬೇಕಿದೆ ಸನಾತನ ಸಂಸ್ಕೃತಿ
Team Udayavani, Jan 28, 2019, 10:40 AM IST
ಯಲ್ಲಾಪುರ: ನಮ್ಮ ಶ್ರೇಷ್ಠವಾದ ಋಷಿ ಪರಂಪರೆ, ಸನಾತನ ಸಂಸ್ಕೃತಿಯನ್ನು ಮರೆತು ಬದುಕಲು ಹೋಗಿ ಎಡವಿದ್ದೇವೆ. ಋಷಿ ಪರಂಪರೆ, ನಮ್ಮ ಸನಾತನದ ವಿಚಾರ ಪುನರುಜ್ಜೀವನಗೊಳಿಸಿ ಅದರಡಿ ನಮ್ಮ ಜೀವನ ರೂಪಿಸುವ ಕಾಲ ಬಂದಿದೆ. ಸನಾತನ ಶ್ರೇಷ್ಠ ಪರಂಪರೆಯೇ ಬದುಕಿನ ಜೀವಾಳ ಎಂದು ಹಿರಿಯ ಜ್ಯೋತಿಷಿ ವಿದ್ವಾಂಸ ಪ.ಗ. ಭಟ್ಟ ಗುಡ್ಡೆ ಹೇಳಿದರು.
ಅವರು ರವಿವಾರ ಕಾಳಮ್ಮನಗರದಲ್ಲಿ ಹಿಮಾಲಯದ ವಿಶ್ವರೂಪ ಸಂಸ್ಥೆಯಡಿ ಪ್ರಾರಂಭವಾದ ಮನುಷ್ಯನ ಶಾರರೀಕ, ಮಾನಸಿಕ, ಬೌದ್ಧಿಕ ತೊಂದರೆಗಳಿಗೆ ಚಿಕಿತ್ಸೆ ನೀಡುವ ವಿಶ್ವರೂಪ ಆರೋಗ್ಯಧಾಮ, ದ್ಯಾನಧಾಮ ಹಾಗೂ ಜ್ಞಾನಧಾಮ ಕೇಂದ್ರವನ್ನು ತುಳಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮನಸ್ಸು, ದೇಹ, ಭಾಷೆಯನ್ನು ಶುದ್ಧಗೊಳಿಸಿ ವ್ಯಕ್ತಿಯ ಆರೋಗ್ಯ ಸುಧಾರಿಸುವ ಕ್ರಮ ಕಷ್ಟದಾಯಕವಾದರೂ ಅಂತಹ ಒಂದು ಶ್ರೇಷ್ಠ ಕಲಬೆರೆಕೆಯಲ್ಲದ ಜ್ಞಾನ ನೀಡುವ ಈ ಕೇಂದ್ರದ ಕಾರ್ಯ ಶ್ಲಾಘನೀಯ. ಇಂದು ಆಯುರ್ವೇದ, ವೇದಶಾಸ್ತ್ರ ಗ್ರಂಥಗಳನ್ನು ತಿರುಚಿಯೇ ಬದುಕುತ್ತಿರುವ ಸಂದರ್ಭದಲ್ಲಿ ಶುದ್ಧ ಸಂಸ್ಕೃತಿಯ ಚಿಕಿತ್ಸೆಯತ್ತ ವಿಶ್ವರೂಪ ಸಂಸ್ಥೆ ತನ್ನ ಪ್ರಯತ್ನ ನಡೆಸಿರುವುದು ವಿಶೇಷ. ಇದರ ಪ್ರಯೋಜನ ಪಡೆದುಕೊಳ್ಳುವುದರ ಮೂಲಕ ಆರೋಗ್ಯಜೀವನದ ದಾರಿ ಕಂಡುಕೊಳ್ಳೋಣ ಎಂದು ಹೇಳಿದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಶ್ರೇಷ್ಠವಾದುದು ಕಳೆದು ಹೋಗುವುದಿಲ್ಲ. ಯಾವತ್ತಾದರೂ ನಾವು ಪುನಃ ಅದರ ಮೊರೆ ಹೋಗುತ್ತೇವೆ. ಮತ್ತೆ ಋಷಿ ಪರಂಪರೆಯ ಕರೆಗಳನ್ನು ಮನ್ನಿಸುತ್ತಿದ್ದೇವೆ ಎಂದರು. ಗಣ್ಯ ವರ್ತಕ ಡಿ.ಶಂಕರ ಭಟ್, ಚೇತನಾ ಪ್ರಿಂಟರ್ಸ್ ಮಾಲಕ ರಾಮಕೃಷ್ಣ ಭಟ್ಟ ಬಾಳ್ಕಲ್, ಪತ್ರಕರ್ತ ನರಸಿಂಹ ಸಾತೊಡ್ಡಿ,ಪತಂಜಲಿ ಪರಿವಾರದ ಮುಖ್ಯಸ್ಥ ಜಿ.ಎಸ್. ಭಟ್ ಹಲವಳ್ಳಿ, ಡಾ| ಸುಬ್ರಾಯ ಭಟ್ ಶುಭಹಾರೈಸಿ ಮಾತನಾಡಿದರು. ಹಿರಿಯರಾದ ವನರಾಗ ಶರ್ಮಾ, ಗೋಪಾಲಕೃಷ್ಣ ಬಗನಪಾಲ್, ರವಿ ಭಟ್ಟ ಸುಂಕಸಾಳ, ನಾರಾಯಣ ಎಂ.ಭಟ್ ಕಂಚನಳ್ಳಿ, ನಾಗರತ್ನಾ ಭಟ್ಟ, ದೀಪಾ ಭಟ್ಟ ಮತ್ತು ಕೇಂದ್ರದ ಮುಖ್ಯಸ್ಥೆ ಅಪರ್ಣಾ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ವಿಶ್ವರೂಪ ಸಂಸ್ಥೆಯ ಈ ಕೇಂದ್ರದ ವೈದ್ಯ ಡಾ| ರವಿ ಬಿ.ಎಸ್. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಯೋಗ ವಿಶ್ವ ವಿದ್ಯಾನಿಲಯದ ಉಪಕುಲಪತಿ ಭವಭೂತಿ ಡಾ| ರಾಮಚಂದ್ರ ಕೋಟೆಮನೆಯವರ ಮಾರ್ಗದರ್ಶನದಲ್ಲಿ ಕೇಂದ್ರ ಹೆಜ್ಜೆಗಳನ್ನಿಡುತ್ತಿದೆ. ಈ ಚಿಕಿತ್ಸೆಯ ಬಗ್ಗೆ ಹಿಮಾಲಯದಲ್ಲಿಯೇ ಅನುಭವ ಪಡೆದ ನನಗೆ ಯಲ್ಲಾಪುರದಲ್ಲಿ ಕೇಂದ್ರ ಮಾಡುವ ಬಗ್ಗೆ ದಾರಿ ದೊರೆಯಿತು ಎಂದ ಅವರು ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಅದರ ಚಿಕಿತ್ಸಾವಿಧಾನ ವಿವರಿಸಿದರು. ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.