ವಿಜಯನಗರ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ
ಹೆಚ್ಚುವರಿ ಮತಗಳ ಮೇಲೆ ಬಿಜೆಪಿ ಆಸೆ•ಕೈ ನಾಯಕರ ಗಲಾಟೆಯಿಂದ ಹಿನ್ನಡೆ ಭೀತಿ
Team Udayavani, Apr 29, 2019, 1:04 PM IST
ವಿಜಯನಗರ ವಿಧಾನಸಭಾ ಕ್ಷೇತ್ರ
ಬಳ್ಳಾರಿ: ಬಳ್ಳಾರಿ ಲೋಕಸಭೆ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳ ಹಣೆಬರಹ ಮತಯಂತ್ರಗಳಲ್ಲಿ ಭದ್ರವಾಗಿದೆ. ಫಲಿತಾಂಶಕ್ಕೆ ಇನ್ನು 25 ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ? ಎಷ್ಟೆಲ್ಲ ಲೀಡ್ ಸಿಗಬಹುದು? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಮನ್ನಣೆ ನೀಡಲಿದ್ದಾರೆಯೇ? ಅಥವಾ ಬಿಜೆಪಿಗೆ ಲೀಡ್ ದೊರೆಯಲಿದೆಯಾ ಎಂಬ ಭಾಗಾಕಾರ, ಗುಣಾಕಾರ ಲೆಕ್ಕಗಳು ಶುರುವಾಗಿವೆ.
ಕ್ಷೇತ್ರ ಮರುವಿಂಗಡಣೆಯಾದ 2008ರಲ್ಲಿ ಹೊಸಪೇಟೆಯನ್ನು ವಿಜಯನಗರ ವಿಧಾನಸಭಾ ಕ್ಷೇತ್ರವನ್ನಾಗಿ ಪರಿವರ್ತಿಸಲಾಯಿತು. ಸತತ ಎರಡು ಬಾರಿ ಯಾರಿಗೂ ಗೆಲುವು ಒಲಿಯದ ಈ ಕ್ಷೇತ್ರದಲ್ಲಿ ಹಾಲಿ ಶಾಸಕ ಆನಂದ್‌ಸಿಂಗ್ 2 ಬಾರಿ ಬಿಜೆಪಿ, ಒಮ್ಮೆ ಕಾಂಗ್ರೆಸ್‌ನಿಂದ ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದರು. ಬಿಜೆಪಿಯಿಂದ ಗೆದ್ದ ಎರಡು ಬಾರಿ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದ ಆನಂದ್‌ಸಿಂಗ್‌ಗೆ ಮೂರನೇ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಕ್ಷೇತ್ರದ ಮತದಾರರು ಗೆಲುವಿನ ಅಂತರ ಕಡಿತಗೊಳಿಸಿ ಆನಂದ್‌ಸಿಂಗ್‌ಗೆ ಶಾಕ್ ನೀಡಿದರು. ಶೇ.74.04 ರಷ್ಟು ಮತದಾನವಾಗಿದ್ದು, ಕಾಂಗ್ರೆಸ್‌ನ ಆನಂದ್‌ಸಿಂಗ್, ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎಚ್.ಆರ್.ಗವಿಯಪ್ಪರಿಗಿಂತ 8228 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ಅಂತರವನ್ನು ಸ್ವತಃ ಆನಂದ್‌ಸಿಂಗ್ ಅವರಿಗೂ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕಳೆದ ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಶೇ.61.25ರಷ್ಟು ಮತದಾನವಾಗಿದ್ದು, ಬಿಜೆಪಿಗಿಂತ ಕಾಂಗ್ರೆಸ್‌ಗೆ 27 ಸಾವಿರ ಲೀಡ್ ಲಭಿಸಿ ಒಂದಷ್ಟು ಸಮಾಧಾನ ಮೂಡಿಸಿತ್ತು. ಆದರೆ, ಇದೀಗ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಹೀಗೆ ಏರಿಳಿತ ಮುಂದುವರಿಯಲಿದೆಯೇ ಅಥವಾ ಮತದಾರರು ಬದಲಾವಣೆ ಬಯಸಿದ್ದಾರೆಯೇ? ಎಂಬುದು ಸದ್ಯದ ಮಟ್ಟಿಗೆ ಕುತೂಹಲ ಮೂಡಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ.74.04 ರಷ್ಟು ಮತದಾನವಾಗಿದ್ದ ವಿಜಯನಗರ ಕ್ಷೇತ್ರದಲ್ಲಿ ಲೋಕಸಭೆ ಉಪ ಚುನಾವಣೆಯಲ್ಲಿ ಶೇ.61.25 ರಷ್ಟು ಮತದಾನ ನಡೆದು ಶೇ.13 ರಷ್ಟು ಕಡಿಮೆ ಮತದಾನವಾಗಿತ್ತು. ಇದೀಗ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 1,15,691 ಪುರುಷ, 1,20,400 ಮಹಿಳೆಯರು, 63 ಇತರೆ ಸೇರಿ ಒಟ್ಟು 2,36,154 ಮತದಾರರು ಇದ್ದು, ಈ ಪೈಕಿ 51305 ಪುರುಷರು, 60,660 ಮಹಿಳೆಯರು, 5 ಇತರೆ ಸೇರಿ ಒಟ್ಟು 1,61,970 ಮತದಾರರು ಹಕ್ಕು ಚಲಾಯಿಸಿದ್ದಾರೆ. ಶೇ.68.59 ರಷ್ಟು ಮತದಾನವಾಗಿದೆ. ಕಳೆದ ವಿಧಾನಸಭೆಗೆ ಹೋಲಿಸಿದರೆ ಶೇ.6 ರಷ್ಟು ಕಡಿಮೆಯಾಗಿದ್ದು, ಲೋಕಸಭೆ ಉಪಚುನಾವಣೆಗೆ ಹೋಲಿಸಿದರೆ ಶೇ.7 ರಷ್ಟು ಹೆಚ್ಚು ಮತದಾನವಾಗಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭವಾದರೂ, ಹೆಚ್ಚುವರಿ ಮತಗಳು ಬಿಜೆಪಿಗೆ ಲಾಭವಾಗಬಹುದು ಎಂಬ ಚರ್ಚೆಗಳು ಕ್ಷೇತ್ರಗಳಲ್ಲಿ ನಡೆಯುತ್ತಿವೆಯಾದರೂ, ಫಲಿತಾಂಶದಿಂದಷ್ಟೇ ಸ್ಪಷ್ಟ ಚಿತ್ರಣ ಹೊರಬರಲಿದೆ.
ಜಾತಿ ಲೆಕ್ಕಾಚಾರ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ, ಕುರುಬ, ದಲಿತ, ವಾಲ್ಮೀಕಿ, ಲಿಂಗಾಯತ ಮತಗಳೇ ಪ್ರಮುಖ. ಮುಸ್ಲಿಂ, ಕುರುಬ, ದಲಿತ ಮತಗಳು ಕಾಂಗ್ರೆಸ್ ಬೆನ್ನಿಗೆ ನಿಂತರೆ, ಲಿಂಗಾಯತ, ವಾಲ್ಮೀಕಿ ಮತಗಳು ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆಯಿದೆ. ಅಲ್ಲದೇ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಸಂಘಟನೆಯು ಬಲಿಷ್ಠವಾಗಿರುವ ಕಾರಣ ಎಲ್ಲ ಸಮುದಾಯಗಳಲ್ಲೂ ಅದರ ಕಾರ್ಯಕರ್ತರಿದ್ದಾರೆ.
ಹಾಗಾಗಿ ಯುವ ಸಮೂಹವೆಲ್ಲ ಮೋದಿಯನ್ನು ನೆಚ್ಚಿಕೊಂಡಿದ್ದಾರೆ. ಜತೆಗೆ ಈಚೆಗೆ ನಡೆದ ಶಾಸಕರ ನಡುವಿನ ಗಲಾಟೆಯಿಂದ ಕಾಂಗ್ರೆಸ್‌ಗೆ ಒಂದಷ್ಟು ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಾರಣ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮೂಲತಃ ಹೊಸಪೇಟೆ ನಿವಾಸಿಯಾಗಿದ್ದು, ವಾಲ್ಮೀಕಿ ಸಮುದಾಯದ ಬಹುತೇಕ ಮತಗಳು ಬಿಜೆಪಿಯತ್ತ ವಾಲಿರಬಹುದು ಎಂದೂ ಕ್ಷೇತ್ರದ ರಾಜಕೀಯ ಮಂದಿ ವಿಶ್ಲೇಷಿಸುತ್ತಿದ್ದಾರೆ. ಪಕ್ಷದಲ್ಲಿ ಮುಖಂಡರಲ್ಲಿನ ಅಸಮಾಧಾನ, ಹಾಲಿ ಶಾಸಕ ಆನಂದ್‌ಸಿಂಗ್ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದು ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿದೆ. ಹಾಗಾಗಿ ಕ್ಷೇತ್ರದ ಮತದಾರರು ಯಾರಿಗೆ ಮನ್ನಣೆ ನೀಡಿದ್ದಾನೆ ಎಂಬ ಸ್ಪಷ್ಟ ಚಿತ್ರಣ ಫಲಿತಾಂಶದಿಂದಷ್ಟೇ ತಿಳಿಯಬೇಕಾಗಿದೆ.
ಲೋಕಸಭೆ ಸಾರ್ವತ್ರಿಕ ಚುನಾವಣೆಯ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 8 ಗಂಪುಗಳನ್ನು ರಚಿಸಿಕೊಂಡು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದೇವೆ. ಪ್ರಣಾಳಿಕೆಯಲ್ಲಿ ಘೋಷಿಸಿ ನ್ಯಾಯ್ ಯೋಜನೆ ಬಗ್ಗೆ ಮತದಾರರಲ್ಲಿ ಮನವೊಲಿಸಲಾಗಿದೆ. ಇದರಿಂದ ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ 27 ಸಾವಿರ ಮತಗಳು ಲೀಡ್ ದೊರೆತಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ 15 ರಿಂದ 20 ಸಾವಿರಕ್ಕೂ ಹೆಚ್ಚು ಮತಗಳು ಕಾಂಗ್ರೆಸ್‌ಗೆ ದೊರೆಯುವ ಸಾಧ್ಯತೆಯಿದೆ.
•ನಿಂಬಗಲ್ ರಾಮಕೃಷ್ಣ,
ಸಂಚಾಲಕರು, ಕಲಬುರಗಿ (ಹೈಕ) ವಿಭಾಗ, ಕೆಪಿಸಿಸಿ ಸಾಮಾಜಿಕ ಜಾಲತಾಣ.
ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪರಿಗೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 35 ಸಾವಿರಕ್ಕೂ ಅಧಿಕ ಮತಗಳ ಲೀಡ್ ದೊರೆಯಲಿದೆ. ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪರಿಗೆ ಕ್ಷೇತ್ರದಲ್ಲಿ ಬಿಜೆಪಿಗಿಂತ ಅಧಿಕ 27 ಸಾವಿರ ಮತಗಳು ಲಭಿಸಿದ್ದವು. ಅವರ ಗೆಲವಿಗಾಗಿ ಘಟಾನುಘಟಿ ನಾಯಕರು ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದರು. ಹೀಗಾಗಿ ಅವರ ಗೆಲವು ಸುಲಭವಾಯಿತು. ಕಳೆದ ಉಪಚುನಾವಣೆಗೂ ಈ ಬಾರಿ ಚುನಾವಣೆಗೆ ಅಜಗಜಾಂತರ ವ್ಯತ್ಯಾಸವಿದೆ. ಈ ಚುನಾವಣೆ ಚಿತ್ರಣವೇ ಬದಲಾಗಿದೆ. ದೇಶದೆಲ್ಲೆಡೆ ಮೋದಿಯವರ ಅಲೆಯಿದೆ. ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕಾಗಿ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ದೇಶದ ಪ್ರಜ್ಞಾವಂತ ಮತದಾರರು ಸಂಕಲ್ಪ ತೊಟ್ಟಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾರ್ಯಗಳು ಗೆಲುವಿಗೆ ಶ್ರೀರಕ್ಷೆಯಾಗಲಿದೆ.
•ಕಿಶೋರ್ ಪತ್ತಿಕೊಂಡ,
ಬಿಜೆಪಿ ಮುಖಂಡ, ವಿಜಯನಗರ ಕ್ಷೇತ್ರ.
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.