ರಕ್ಷಣೆ ಕೋರಿ ಎಸ್ಪಿಗೆ ಕುಂವೀ ಮನವಿ
Team Udayavani, Apr 12, 2022, 5:05 PM IST
ಹೊಸಪೇಟೆ: ಕೊಲೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ರಕ್ಷಣೆ ನೀಡಬೇಕು ಎಂದು ಕೋರಿದ ಸಾಹಿತಿ ಕುಂ. ವೀರಭದ್ರಪ್ಪನವರು ಈ ಪ್ರಕರಣ ಕುರಿತಂತೆ ದೂರು ದಾಖಲಿಸಿಕೊಳ್ಳಬೇಕು ಎಂದು ವಿಜಯನಗರ ಎಸ್ಪಿ ಡಾ| ಅರುಣ್ ಕೆ. ಅವರಿಗೆ ಸೋಮವಾರ ಎಸ್ಪಿ ಕಚೇರಿಯಲ್ಲಿ ಮನವಿಪತ್ರ ಸಲ್ಲಿಸಿದರು.
ಭದ್ರಾವತಿಯಿಂದ ಅಂಚೆ ಮಾಡಿರುವ ಲಕೋಟೆ ಏಪ್ರಿಲ್ 4ರಂದು ಬಂದಿದೆ. ಈ ಪತ್ರದಲ್ಲಿ ನನ್ನನ್ನು ದೇಶದ್ರೋಹಿ ಎಂದು ಸಂಬೋಧಿಸಿದ್ದು, ಹಿಜಾಬ್ ಪರವಾಗಿ, ಭಗವದ್ಗೀತೆ ವಿರುದ್ಧವಾಗಿ ನೀವು ಮಾತನಾಡಿದ್ದೀರಿ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಇವರುಗಳು ಹಿಂದೂ ಧರ್ಮದ ವಿರೋಧಿಗಳಾಗಿದ್ದು, ಇವರನ್ನು ಕೊಲೆ ಮಾಡುತ್ತೇವೆಂದು, ಜತೆಗೆ ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿರುತ್ತದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕುಂ.ವೀ. ಅವರು ಎಸ್ಪಿ ಅವರಿಗೆ ಮನವಿ ಮಾಡಿಕೊಂಡರು.
ಸದರಿ ಪತ್ರದಲ್ಲಿ ನಿರ್ದಿಷ್ಟ ವ್ಯಕ್ತಿ ಸಹಿ ಹೆಸರು, ವಿಳಾಸ ಇರುವುದಿಲ್ಲ. “ಸಹಿಷ್ಣು ಹಿಂದೂ” ಎಂದು ಮಾತ್ರ ಕೈಬರಹದಲ್ಲಿನ ಬೆದರಿಕೆ ಪತ್ರವಾಗಿರುತ್ತದೆ. ಈ ಪತ್ರದ ವಿಷಯವು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ನನ್ನ ಬರಹಕ್ಕೆ ಧಕ್ಕೆ ತರುವಂತಿದ್ದು, ನನ್ನನ್ನು ಕೊಲ್ಲುವುದಾಗಿ ಸದರಿ ಪತ್ರದಲ್ಲಿ ಒಕ್ಕಣೆ ಇರುವುದರಿಂದ ಸಮಾಜ ವಿದ್ರೋಹದ ಸಂಘಟನೆಯ ಮತ್ತು ವ್ಯಕ್ತಿಯ, ಸಮಾಜದ ಶಾಂತಿ ಕದಡುವ ಸಮಾಜಘಾತಕ ವ್ಯಕ್ತಿಯ ಕೃತ್ಯವಾಗಿರುತ್ತದೆ ಎಂದು ಕುಂ. ವೀ. ದೂರಿದರು.
ನನ್ನ ಜೀವಿಸುವ ಹಕ್ಕಿಗೆ ದೈಹಿಕ ಸ್ವಾತಂತ್ರ್ಯಕ್ಕೆ ಅಪಾಯ ತರುವ ಸಂಭವವಿರುವುದರಿಂದ ನನಗೆ ಪೊಲೀಸ್ ರಕ್ಷಣೆ ಒದಗಿಸಿಕೊಡಬೇಕು. ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕುಂ.ವೀ. ಮನವಿ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.