Team Udayavani, Oct 3, 2019, 11:53 AM IST
ಜಿ.ಎಸ್. ಕಮತರ
ವಿಜಯಪುರ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ವಿಷಯ ಚುರುಕು ಪಡೆಯುತ್ತಲೇ ಇತ್ತ ವಿಜಯಪುರ ಜಿಲ್ಲೆಯಲ್ಲೂ ಇಂಡಿ ಪ್ರತ್ಯೇಕ ಜಿಲ್ಲೆಯ ಕೂಗು ಎದ್ದಿದೆ. ನೂತನ ತಾಲೂಕಗಳ ರಚನೆಯ ಬಳಿಕ 13 ತಾಲೂಕು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಸುಗಮ ಆಡಳಿತದ ದೃಷ್ಟಿಯಿಂದ ಜಿಲ್ಲೆಯನ್ನು ವಿಭಾಗಿಸುವುದು ಸೂಕ್ತ ಎಂದು ಇಂಡಿ ಶಾಸಕರೇ ಧ್ವನಿ ಎತ್ತಿರುವುದು ರಾಜಕೀಯವಾಗಿಯೂ ಕಾವು ಪಡೆಯುವಂತೆ ಮಾಡಿದೆ.
ವಿಜಯಪುರ ಜಿಲ್ಲೆಯಿಂದ ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವಾಗಿಸಿ, ಪ್ರತ್ಯೇಕ ಜಿಲ್ಲೆಯ ಕೂಗಿಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಖುದ್ದು ಧ್ವನಿಯಾಗಿದ್ದಾರೆ. ಇದಕ್ಕಾಗಿಯೇ ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಜಿಲ್ಲೆಗಾಗಿ ಮನವಿ ಸಲ್ಲಿಸಿರುವ ಯಶವಂತರಾಯಗೌಡ ಪಾಟೀಲ, ಪ್ರತ್ಯೇಕ ಜಿಲ್ಲೆಯ ಅಗತ್ಯತೆ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.
ಒಂದೂವರೆ ದಶಕದ ಹಿಂದೆ ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಯನ್ನು ಪ್ರತ್ಯೇಕಿಸಿದಾಗ ವಿಜಯಪುರ ಮೂಲ ಜಲ್ಲೆಯಲ್ಲಿ ಐದು ತಾಲೂಕಗಳು ಮಾತ್ರ ಇದ್ದವು. ಕಳೆದ ವರ್ಷ ಸರ್ಕಾರ ಜಿಲ್ಲೆಯ ಮೂಲ ತಾಲೂಕಗಳಲ್ಲಿದ್ದ ದೊಡ್ಡ ಪಟ್ಟಣಗಳನ್ನು ತಾಲೂಕು ಕೇಂದ್ರವಾಗಿಸಿ ಮತ್ತೆ 13 ತಾಲೂಕುಗಳನ್ನು ಘೋಷಿಸಿದ್ದು, 12 ತಾಲೂಕಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿದ್ದು, ಕಂದಾಯ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಘೋಷಿತ ಇನ್ನೊಂದು ತಾಲೂಕು ಅಧಿಸೂಚನೆಗೆ ಕಾಯುತ್ತಿದೆ.
ಈ ಹಂತದಲ್ಲೇ ಬಳ್ಳಾರಿ ಜಿಲ್ಲೆಯಿಂದ ಹೊಸಪೇಟೆ ನಗರವನ್ನು ಜಿಲ್ಲಾ ಕೇಂದ್ರವಾಗಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಬೇಡಿಕೆ ಮುಂದಿಟ್ಟುಕೊಂಡು ಅಲ್ಲಿನ ಶಾಸಕ ಆನಂದಸಿಂಗ್ ಮನವಿಗೆ ಸರ್ಕಾರ ಸ್ಪಂದನೆ ನೀಡುತ್ತಿದೆ. ಅಲ್ಲದೇ ಬಳ್ಳಾರಿಯನ್ನು ವಿಭಜಿಸುವ
ಹಾಗೂ ವಿಜಯನಗರ ಜಿಲ್ಲೆ ರಚನೆಗೆ ಬಳ್ಳಾರಿ ಭಾಗದಲ್ಲಿ ವಿರೋಧ ವ್ಯಕ್ತವಾಗಿದ್ದರೂ ಸರ್ಕಾರ ವಿಜಯಪುರ ನಗರ ಜಿಲ್ಲೆಗೆ ಚಾಲನೆ ನೀಡಲು ಪ್ರಕ್ರಿಯೆ ಆರಂಭಿಸಿದೆ.
ಮತ್ತೂಂದೆಡೆ ವಿಜಯಪುರ ಜಿಲ್ಲೆಯಿಂದ ದಶಕದ ಹಿಂದೆ ವಿಭಜನೆಗೊಂಡಿರುವ ಬಾಗಲಕೋಟೆ ಜಿಲ್ಲೆಯನ್ನೂ ಮತ್ತೆ ವಿಭಜಿಸಿ, ಜಮಖಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಕೂಗು ಎದ್ದಿದೆ. ಅತ್ತ ತುಮಕೂರು ಜಿಲ್ಲೆಯ ವಿಭಜನೆಗೂ ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ ಧ್ವನಿ ಎತ್ತಿದ್ದಾರೆ. ತುಮಕೂರು ಜಿಲ್ಲೆಯನ್ನು ವಿಭಜಿಸಿ ಕೊರಟಗೆರೆ ಜಿಲ್ಲಾ ಕೇಂದ್ರ ಮಾಡಿ ಪ್ರತ್ಯೇಕ ಜಿಲ್ಲೆ ರಚಿಸಿ ಎಂದು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯಪುರ ಜಿಲ್ಲೆಯನ್ನು ಮತ್ತೂಮ್ಮೆ ವಿಭಜಿಸಿ, ಇಂಡಿ ಜಿಲ್ಲಾ ಕೇಂದ್ರ ಮಾಡಿ ಪ್ರತ್ಯೇಕ ಜಿಲ್ಲೆಯನ್ನು ರೂಪಿಸುವಂತೆ ಶಾಸಕ ಯಶವಂತರಾಯಗೌಡ ಪಾಟೀಲ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿ ಮಾಡಿ, ಮನವಿ ಸಲ್ಲಿಸಿ ಆಗ್ರಹ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಗಡಿಗೆ ಹೊಂದಿರುವ ರಾಜ್ಯದ ಗಡಿಯಲ್ಲಿ ಇಂಡಿ ಪಟ್ಟಣ ತಾಲೂಕು ಕೇಂದ್ರ ಹೊಂದಿದ್ದು, 50 ಸಾವಿರ ಜನಸಂಖ್ಯೆ ಹೊಂದಿರುವ ಜಿಲ್ಲೆಯ ರಚನೆ ದೊಡ್ಡ ಪಟ್ಟಣವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಇದೀಗ 12 ತಾಲೂಕುಗಳಿದ್ದು, ಮತ್ತೂಂದು ತಾಲೂಕು ಕೂಡ ಘೋಷಣೆ ಆಗಿದೆ.
ಇದರಿಂದ ಭೌಗೋಳಿಕವಾಗಿ ದೊಡ್ಡ ವಿಸ್ತಾರ ಹೊಂದಿರುವ ಜಿಲ್ಲೆಯಾಗಿದೆ. ಇಂಡಿ, ಆಲಮೇಲ, ಸಿಂದಗಿ ಭಾಗದ ಜನರು ದೂರದಲ್ಲಿರುವ ಜಿಲ್ಲಾ ಕೇಂದ್ರಕ್ಕೆ ಬರಲು ಕಷ್ಟಪಡುವಂತಾಗಿದೆ. ಹೀಗಾಗಿ ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಬರಲು ಇಂಡಿ, ಚಡಚಣ, ಆಲಮೇಲ, ಸಿಂದಗಿ, ದೇವರಹಿಪ್ಪರಗಿ ತಾಲೂಕಿನ ಜನರಿಗೆ ಸಮಸ್ಯೆ ಆಗುತ್ತಿದೆ ಎಂದು ಇಂಡಿ ಪ್ರತ್ಯೇಕ ಜಿಲ್ಲೆ ರಚನೆ ಅಗತ್ಯ ಹಾಗೂ ಸೂಕ್ತ ಎಂದು ಕಾರಣ ನೀಡಿದ್ದಾರೆ.
ಅಲ್ಲದೇ ಕಂದಾಯ ಯಾಗೂ ಪೊಲೀಸ್ ಉಪ ವಿಭಾಗ ಕೇಂದ್ರಗಳನ್ನು ಹೊಂದಿರುವ ಇಂಡಿ ಪಟ್ಟಣವನ್ನು ಜಿಲ್ಲಾ ಕೇಂದ್ರ ಮಾಡಿ ಚಡಚಣ, ಆಲಮೇಲ, ಸಿಂದಗಿ ಹಾಗೂ ದೇವರಹಿಪ್ಪರಗಿ ತಾಲೂಕುಗಳನ್ನು ನೂತನ ಜಿಲ್ಲೆ ರಚಿಸಿದರೆ ಆಡಳಿತದ ದೃಷ್ಟಿಯಿಂದಲೂ ಸೂಕ್ತ. ಅಲ್ಲದೇ ತಾಲೂಕು ಕೇಂದ್ರವಾಗಿದ್ದರೂ ಇಂಡಿ ಪಟ್ಟಣದಲ್ಲಿ ಈಗಾಗಲೇ ಮಿನಿ ವಿಧಾನಸೌಧವಿದ್ದು, ರಾಜ್ಯದ ಲಿಂಬೆ ಅಭಿವೃದ್ಧಿ ಮಂಡಳಿಯ ಕೇಂದ್ರವೂ ಇದೆ.
ಅಲ್ಲದೇ ಹೆಸ್ಕಾಂ, ಕೆಬಿಎಜೆಎನ್ನೆಲ್, ಕೃಷಿ ಉಪ ನಿರ್ದೇಶಕರ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಜಿಲ್ಲಾ ಕೇಂದ್ರಕ್ಕೆ ಬೇಕಾದ ಅರ್ಹತೆಯ ಸೌಲಭ್ಯ ಹೊಂದಿದೆ. ಅಲ್ಲದೇ ಜಿಲ್ಲಾ ಕೇಂದ್ರಕ್ಕೆ ಬೇಕಾದ ಅಗತ್ಯ ಮೂಲಭೂತ ಪ್ರಾಥಮಿಕ ಎಲ್ಲ ಸೌಲಭ್ಯಗಳು ಈಗಾಗಲೇ ಲಭ್ಯ ಇರುವುದರಿಂದ ಇಂಡಿ ಜಿಲ್ಲಾ ಕೇಂದ್ರ ಮಾಡಿ ಪ್ರತ್ಯೇಕ ಜಿಲ್ಲೆ ಘೋಷಿಸುವುದು ಸೂಕ್ತ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.