ಭೂಸಗೊಂಡಗೆ ಗುರಿ ಮುಟ್ಟಿದ ಸಂತೃಪ್ತಿ
27 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮಲ್ಲಿಕಾರ್ಜುನಗೆ ರಾಜ್ಯಮಟ್ಟದ ಪ್ರಶಸ್ತಿ
Team Udayavani, Sep 5, 2019, 11:55 AM IST
ಜಿ.ಎಸ್. ಕಮತರ
ವಿಜಯಪುರ: ಶಿಕ್ಷಕನಾಗಿ ಕಳೆದ 27 ವರ್ಷಗಳಿಂದ ಸಲ್ಲಿಸಿದ ಸೇವೆ ಹಾಗೂ ಕರ್ತವ್ಯ ಬದ್ಧತೆ ಗುರುತಿಸಿ ನನ್ನ ಇಲಾಖೆ ನೀಡಿರುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಶಿಕ್ಷಕನಾಗಿ ಗುರಿ ಮುಟ್ಟಿದ ಸಂತೃಪ್ತಿ ತಂದಿದೆ. ನನ್ನಲ್ಲಿ ಇನ್ನೂ ಹೆಚ್ಚಿನ ಉತ್ಸಾಹ ಹಾಗೂ ಹೊಣೆಗಾರಿಕೆ ಹೆಚ್ಚಿಸಿದೆ.
ಹೀಗೆ ಪ್ರತಿಕ್ರಿಯಿಸಿದವರು ಈ ಬಾರಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಜಿಲ್ಲೆಯ ತಿಕೋಟಾ ಪಟ್ಟಣದ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮಲ್ಲಿಕಾರ್ಜುನ ಶಿವಲಿಂಗಪ್ಪ ಭೂಸಗೊಂಡ. ಸರ್ಕಾರಿ ಬಾಲಕರ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರು, ಶಿಕ್ಷಣಕ್ಕೆ ಬೇಕಾದ ಬಿಎ, ಬಿಎಡ್ ಪದವಿ ಜೊತೆಗೆ ಸಂಗೀತ ಹಾಗೂ ರೇಷ್ಮೆ ಕೃಷಿಯಲ್ಲೂ ಶಿಕ್ಷಣ ಪಡೆದಿದ್ದಾರೆ. ಹಿಂದಿ ರಾಜ ಭಾಷಾ ಪದವಿಯನ್ನೂ ಸಂಪಾದಿಸಿದ್ದಾರೆ.
ದೂರದ ಶಿವಮೊಗ್ಗದಲ್ಲಿ 1992ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅವರು, 1995ರಲ್ಲಿ ವಿಜಯಪುರ ಜಿಲ್ಲೆಯ ಹರನಾಳ ಗ್ರಾಮಕ್ಕೆ ವರ್ಗವಾಗಿ ಬಂದರು. ನಂತರ ವಿವಿಧ ವಸ್ತಿ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಇದೀಗ ತಿಕೋಟಾ ತಾಲೂಕು ಕೇಂದ್ರದಲ್ಲಿ ಸೇವೆಯಲ್ಲಿದ್ದಾರೆ.
ಕೇವಲ ಶಿಕ್ಷಕರಾಗಿ ಮಕ್ಕಳಿಗೆ ನಾಲ್ಕು ಗೋಡೆಗಳ ಮಧ್ಯೆ ಅಕ್ಷರ ಬಿತ್ತುವ ಕಾಯಕ ಮಾಡದ ಮಲ್ಲಿಕಾರ್ಜುನ, ತಮ್ಮಲ್ಲಿರುವ ಬಹುಮುಖ ಪ್ರತಿಭೆಯನ್ನು ಮಕ್ಕಳಲ್ಲಿಯೂ ಸ್ಫೂರ್ತಿದಾಯಕವಾಗಿ ತುಂಬಿದರು. ಇದಲ್ಲದೇ ಸ್ವಚ್ಛ ಭಾರತ ಅಭಿಯಾನ ವೇಳೆ ಸಾಮುದಾಯಿಕ ನಿರ್ವಹಣೆ ಪಾತ್ರ ಹಾಗೂ ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಅನಕ್ಷರಸ್ಥರ ಎದೆಯಲ್ಲಿ ಅಕ್ಷರ ಬಿತ್ತುವಲ್ಲಿ ತಮ್ಮೊಂದಿಗೆ ಇತರೆ ಶಿಕ್ಷಕರನ್ನೂ ಸಂಪೂರ್ಣ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತರತ್ನ ಸೇವಾದಳದ ಮೂಲಕವೂ ಸಮಾಜದಲ್ಲಿ ಮಕ್ಕಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಕುರಿತು ಜ್ಞಾನ ಧಾರೆ ಎರೆದಿದ್ದಾರೆ.
ಸ್ವಯಂ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಚಿತ್ರಕಲೆ ಹಾಗೂ ಸಂಗೀತದಲ್ಲೂ ಉತ್ತಮ ಜ್ಞಾನ ಹೊಂದಿದ್ದಾರೆ. ಪರಿಣಾಮ ಕ್ರೀಡೆ ಹಾಗೂ ಸಂಗೀತದಲ್ಲಿ ರಾಜ್ಯದ ಮಟ್ಟದ ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ. ಅಂಚೆ ಚೀಟಿ, ನಾಣ್ಯ ಸಂಗ್ರಹಗಳಂಥ ವಿಶಿಷ್ಟ ಹವ್ಯಾಸಗಳನ್ನು ಮೈಗೂಡಿಸಿಕೊಂಡಿರುವ ಭೂಸಗೊಂಡ ಅವರು, ಉತ್ತಮ ಯೋಗ ಪಟುವೂ ಹೌದು. ಹೀಗೆ ಹಲವು ವಿಷಯಗಳ ಆಗರದಂತೆ ವಿವಿಧ ಪ್ರತಿಭೆಗಳನ್ನು ಮೈಗೂಡಿಸಿಕೊಂಡು ಓರ್ವ ಪರಿಪೂರ್ಣ ಶಿಕ್ಷಕ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ.
ತಮ್ಮಲ್ಲಿರುವ ಪ್ರತಿಭೆ ಮೂಲಕವೇ ಈಗಾಗಲೇ ತಾಲೂಕು, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಮಲ್ಲಿಕಾರ್ಜುನ ಭೂಸಗೊಂಡ ಇದೀಗ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಗಮನೀಯ ಅಂಶ ಎಂದರೆ ಮಲ್ಲಿಕಾರ್ಜುನ ಭೂಸಗೊಂಡ ಅವರ ಹಿರಿಯ ಸಹೋದರ ಸಿಂದಗಿ ತಾಲೂಕಿನ ಚಾಂದಕವಠೆ ಪರಮಾನಂದ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಜಿ.ಎಸ್. ಭೂಸಗೊಂಡ ಕೂಡ ಕಳೆದ 4 ವರ್ಷಗಳ ಹಿಂದೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು. ಇವರ ಬಳಿಕ ತಮ್ಮನ ಮೂಲಕ ಜಿಲ್ಲೆಗೆ ಮತ್ತೂಮ್ಮೆ ಪ್ರಶಸ್ತಿಯ ಗರಿ ಮೂಡಿಸಿದ್ದಾರೆ. ಇವರ ಇನ್ನೋರ್ವ ಸಹೋದರ ಸಿದ್ದಪ್ಪ ಭೂಸಗೊಂಡ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿರುವ ಮಾಳಿ ವಸ್ತಿ ಜಿಪಂ ಕನ್ನಡ ಶಾಲೆಯಲ್ಲಿ ಗಡಿನಾಡ ಶಿಕ್ಷಕರಾಗಿ ವಿಭಾಗ ಮಟ್ಟದ ಪ್ರಶಸ್ತಿ ಪಡೆದಿರುವುದು ವಿಶೇಷ. ಹೀಗೆ ಶಿಕ್ಷಕರಾಗಿರುವ ಭೂಸಗೊಂಡ ಕುಟುಂಬದ ಮೂವರೂ ಸಹೋದರರು ರಾಜ್ಯ-ವಿಭಾಗ ಮಟ್ಟದಲ್ಲಿ ತಮ್ಮ ಸೇವೆ ಮೂಲಕವೇ ಪ್ರಶಸ್ತಿಗಳನ್ನು ಬಾಚಿರುವುದು ಅವರಲ್ಲಿರುವ ಪ್ರತಿಭೆ ಹಾಗೂ ಸೇವಾ ಬದ್ಧತೆಗೆ ಸಾಕ್ಷಿ.
ಯಾವುದೇ ಶಿಕ್ಷಕ ತನ್ನಲ್ಲಿರುವ ಶೈಕ್ಷಣಿಕ ಪ್ರತಿಭೆಯನ್ನು ಮಕ್ಕಳಿಗೆ ಧಾರೆ ಎರೆದು ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ಕೊಡುಗೆ ನೀಡಬೇಕಿದ್ದರೆ ಗುಣಮಟ್ಟದ ಶಿಕ್ಷಣ ಅಗತ್ಯ. ಆದರೆ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆ ಶಿಕ್ಷಕರಿಗೆ ಶಿಕ್ಷಣ ಕಲಿಕೆ ಹೊರತಾದ ಜನ-ದನ ಗಣತಿ, ಚುನಾವಣೆ ಆಂತೆಲ್ಲ ಹಲವು ಹೊರೆಗಳನ್ನು ನೀಡಿ ಶಾಲೆ ಹೊರಗೆ ಅವರ ಸೇವೆ ಸಮಯ ಕಳೆಯುವ ಸ್ಥಿತಿ ಇದೆ. ಇದರಿಂದ ಸರ್ಕಾರಿ ಶಾಲೆ ಶಿಕ್ಷಕರಲ್ಲಿ ಕಲಿಕಾ ನೈಪುಣ್ಯತೆ ಹಾಳಾಗುತ್ತಿದೆ. ಮತ್ತೂಂದೆಡೆ ಸಮಾಜದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರ ಕುರಿತು ನಕಾರಾತ್ಮಕ ಸಂದೇಶ ರವಾನೆಯಾಗಿ, ಗೌರವ ಇಲ್ಲದಂತಾಗಿದೆ. ಮಕ್ಕಳಲ್ಲಿ ಗುಣಮಟ್ಟದ ಹಾಗೂ ನೈತಿಕ ಶಿಕ್ಷಣ ಮೌಲ್ಯ ಕುಸಿಯುವಂತೆ ಮಾಡಿದೆ ಎಂಬ ಕೊರಗು ಇವರನ್ನು ಕಾಡುತ್ತಿದೆ.
ಸರ್ಕಾರ ಇನ್ನಾದರೂ ಶಿಕ್ಷಕರಿಗೆ ಅನ್ಯ ಕೆಲಸಗಳ ಹೊರೆ ಮಾತ್ರವಲ್ಲ, ಬಿಸಿಯೂಟದ ಹೊರೆಯಿಂದಲೂ ಮುಕ್ತಿಗೊಳಿಸಬೇಕು. ಬಿಸಿಯೂಟ ಯೋಜನೆಯನ್ನು ಗ್ರಾಪಂ ವ್ಯಾಪ್ತಿಗೆ ನೀಡಿ, ಶಿಕ್ಷಕರನ್ನು ಕೇವಲ ಕಲಿಸುವಿಕೆಗೆ ಸೀಮಿತಗೊಳಿಸಬೇಕು. ಇದರಿಂದ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣದ ಮೂಲಕ ಉತ್ತಮ ಫಲಿತ ಸಾಧ್ಯವಾಗಲಿದೆ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾರೆ ಪ್ರಶಸ್ತಿ ವಿಜೇತ ಶಿಕ್ಷಕ ಮಲ್ಲಿಕಾರ್ಜುನ ಭೂಸಗೊಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.