ಪ್ರವಾಸಿಗರ ಹೆಸರಲ್ಲಿ ವೆಚ್ಚ ಅನ್ಯರಿಗೆ ಸೌಲಭ್ಯ
1.50 ಕೋಟಿ ರೂ. ವೆಚ್ಚದಲ್ಲಿ ದುರಸ್ತಿಯಾದ ಪ್ರವಾಸಿ ಪ್ಲಾಜಾ ಸಚಿವರ ಕಚೇರಿ, ಪ್ರವಾಸಿ ಪ್ಲಾಜಾ ಬ್ಲಾಕ್-2ರಲ್ಲಿ ಇಗ್ನೋ ಕೇಂದ್ರ
Team Udayavani, Aug 7, 2019, 10:55 AM IST
ವಿಜಯಪುರ: ಐತಿಹಾಸಿಕ ಸ್ಮಾರಕಗಳಲ್ಲಿ ಒಂದೆಡೆ ಸರ್ಕಾರಿ ಕಚೇರಿಗಳು, ಅಧಿಕಾರಿಗಳ ನಿವಾಸಗಳಾಗಿ ಪರಿವರ್ತನೆಯಾಗಿದ್ದರೆ, ಮತ್ತೂಂದೆಡೆ ಪ್ರವಾಸಿಗರ ಅನುಕೂಲಕ್ಕಾಗಿ ಇಲಾಖೆಯಿಂದ ಕೋಟಿ ಕೋಟಿ ರೂ. ವೆಚ್ಚ ಮಾಡಿ ದುರಸ್ತಿ ಮಾಡಿದ ಕಟ್ಟಡಗಳು ಕೂಡ ಅನ್ಯರ ಪಾಲಾಗಿವೆ. ಪರಿಣಾಮ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ಅಭಿವೃದ್ಧಿ ಮಾಡಿದ ಮೂಲ ಉದ್ದೇಶ ಈಡೇರದೇ ವಿಜಯಪುರ ಜಿಲ್ಲೆಯಲ್ಲಿ ಎಲ್ಲ ಇದ್ದೂ ಏನೂ ಇಲ್ಲದ ದೈನೇಸಿ ಪರಿಸ್ಥಿತಿ ಇದೆ.
ಪಾರಂಪರಿಕ ಸಂಪನ್ಮೂಲಗಳಿಂದ ಸಮೃದ್ಧಿಯಾಗಿರುವ ವಿಜಯಪುರ ಜಿಲ್ಲೆಗೆ ಪ್ರವಾಸಕ್ಕೆ ಬರುವ ಯಾತ್ರಿಗಳಿಗೆ ಸೌಲಭ್ಯಗಳ ಕೊರತೆ ಇದೆ. ಈ ಸೌಲಭ್ಯಗಳನ್ನು ನೀಗಲು ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಹಲವು ಅಭಿವೃದ್ಧಿ ಮಾಡಿದ್ದರೂ ಪ್ರವಾಸಿಗರಿಗೆ ಲಭ್ಯವಾಗುತ್ತಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇರುವುದನ್ನು ಮನಗಂಡ ಸಿದ್ದರಾಮಯ್ಯ ಸರ್ಕಾರ 2015 ರಲ್ಲಿ ವಿಜಯಪುರ ನಗರದಲ್ಲಿ ಪ್ರವಾಸಿ ಪ್ಲಾಜಾ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡಿತು. ಸದರಿ ಯೋಜನೆಯಲ್ಲಿ ಪ್ರವಾಸೋದ್ಯಮ ಇಲಾಖೆ ಎರಡು ಕಟ್ಟಡಗಳನ್ನು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿತ್ತು. ಡಾ| ಎಸ್.ಎಂ.ಜಾಮದಾರ ಅವರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಆಡಳಿತಾಧಿಕಾರಿ ಅಗಿದ್ದಾಗ ಈ ಕಟ್ಟಡಗಳು ವಿಶ್ವವಿದ್ಯಾಲಯದ ಮೌಲ್ಯಮಾಪ ವಿಭಾಗ ಕಚೇರಿಗಳಾಗಿದ್ದವು. ವಿಶ್ವವಿದ್ಯಾಲಯ ತಮ್ಮ ಸ್ವಂತ ಕಟ್ಟಡಕ್ಕೆ ಸ್ಥಳಾಂತಗೊಂಡಗೊಂಡು ಪ್ರವಾಸೋದ್ಯಮ ಇಲಾಖೆಗೆ ಮರಳಿದ್ದವು. ಹೀಗಾಗಿ ಈ ಕಟ್ಟಡಗಳನ್ನು ದುರಸ್ತಿ ಮಾಡಿ ಪ್ರವಾಸೋದ್ಯಮ ಪ್ಲಾಜಾ ಮಾಡಲು ಯೋಜಿಸಲಾಗಿತ್ತು. ಅದರಂತೆ 1.60 ಕೋಟಿ ರೂ. ವೆಚ್ಚ ಮಾಡಿ ಕಟ್ಟಡಗಳನ್ನು ನವೀಕರಿಸಲಾಗಿತ್ತು. ಬ್ಲಾಕ್- 1ರಲ್ಲಿ ಇಲಾಖೆ ಉಪ ನಿರ್ದೇಶಕರ ಕಚೇರಿ, ಚಿತ್ರಕಲಾ ಪ್ರದರ್ಶನಕ್ಕೆ ಆರ್ಟ ಗ್ಯಾಲರಿ, ಪ್ರವಾಸಿ ಮಾಹಿತಿ ಕೇಂದ್ರ, ವಿಡಿಯೋ ಕಾನ್ಫರೆನ್ಸ್ ಹಾಲ ನಿರ್ಮಿಸಲಾಯಿತು. ಆದರೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಕಚೇರಿ ಹಾಗೂ ಆರ್ಟ್ ಗ್ಯಾಲರಿ ನಿರ್ಮಾಣದ ಹೊರತಾಗಿ ಇತರೆ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಪ್ರವಾಸಿ ಮಾಹಿತಿ ಕೇಂದ್ರ ಸ್ಥಾಪನೆಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಇತರೆ ಕಾರಣಗಳಿಂದಾಗಿ ಖಾಸಗಿ ಸಹಭಾಗಿತ್ವಕ್ಕಾಗಿ ಹುಡುಕಾಟ ನಡೆಸಿದೆ. ಇನ್ನೊಂದೆಡೆ ಸಂಪೂರ್ಣ ನವೀಕರಣಗೊಂಡ ಬ್ಲಾಕ್-2ರಲ್ಲಿ ಪ್ರವಾಸಿಗರಿಗೆ ವಾಸದ ಅನುಕೂಲಕ್ಕಾಗಿ 11 ಕೋಣೆಗಳ ಊಟ-ಉಪಹಾರ ಸಹಿತ ಹೋಟೆಲ್ ಸಹಿತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ದುರಸ್ತಿ ಮಾಡಲಾಗಿತ್ತು. ಎರಡು ಆಂತಸ್ತಿನ ಈ ಕಟ್ಟಡಗಳಿರುವ ಎರಡನೇ ಬ್ಲಾಕ್ ದುರಸ್ತಿ ಆದದ್ದೇ ತಡ ಜಿಲ್ಲಾ ಉಸ್ತುವಾರಿ ಹೊಂದಿದ್ದ ತೋಟಗಾರಿಕೆ ಖಾತೆ ಸಚಿವ ಎಂ.ಸಿ. ಮನಗೂಳಿ ಅವರು ನೆಲ ಕಟ್ಟಡದಲ್ಲಿ ತಮ್ಮ ಕಚೇರಿ ತೆರೆದು ಠಿಕಾಣಿ ಹೂಡಿದರು. ಐತಿಹಾಸಿಕ ಆನಂದ್ ಮಹಲ್ನಲ್ಲಿದ್ದ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವನ್ನು ಇದೇ ಬ್ಲಾಕ್‌ನ ಮೊದಲ ಮಹಡಿಗೆ ಸ್ಥಳಾಂತರಿಸಲಾಯಿತು. ಅಲ್ಲಿಗೆ 1.60 ಕೋಟಿ ರೂ. ವೆಚ್ಚ ಮಾಡಿ ಪ್ರವಾಸಿಗರಿಗೆ ಕಡಿಮೆ ವೆಚ್ಚದಲ್ಲಿ ವಸತಿ, ಉಪಹಾರ-ಊಟಸ ಸೌಲಭ್ಯ ಕಲ್ಪಿಸುವ ಪ್ರವಾಸಿ ಪ್ಲಾಜಾ ಕನಸು ಹಾಗೂ ಅಶಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಇನ್ನು ಪ್ರವಾಸೋಧ್ಯಮ ಇಲಾಖೆ ಮೂಲಕ ವಿಜಯಪುರದಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 2016ರಲ್ಲಿ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಮಾದರಿ ಪ್ರವಾಸಿ ತಾಣ ಯೋಜನೆ ಘೋಷಿಸಿ 10 ಕೋಟಿ ರೂ. ಅನುದಾನವನ್ನೂ ಪ್ರಕಟಿಸಿತು. ಈ ಅನುದಾನದಲ್ಲಿ ಬ್ರಿಟಿಷರ ಕಾಲದಲ್ಲಿ ಜಿಲ್ಲಾ ಆಸ್ಪತ್ರೆ ಸರ್ಜನ್ ಅವರ ಅಧಿಕೃತ ನಿವಾಸವಾಗಿದ್ದ ಆರಸ ಮಹಲ್ ದುರಸ್ತಿಗೆ ಮುಂದಾದರು. ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಈ ಸ್ಮಾರಕ ಕಳೆದ 12 ವರ್ಷದಿಂದ ಬಳಕೆ ಇಲ್ಲದೇ ಹಾಳಾಗುತ್ತಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಪ್ರವಾಸೋಸದ್ಯಮ ಇಲಾಖೆ ಸಮಿತಿಯಲ್ಲಿ ಹಲವು ನಿರ್ಧಾರಗಳನ್ನು ಕ್ಯೆಗೊಳ್ಳಲಾಯಿತು. ಇದರಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 40 ಲಕ್ಷ ರೂ. ವೆಚ್ಚ ಮಾಡಿ ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಈ ಕಟ್ಟಡವನ್ನು ದುರಸ್ತಿ ಮಾಡಲಾಯಿತು. ಬ್ರಿಟಿಷ್ ಕಾಲದ ಸದರಿ ಸ್ಮಾರಕದಲ್ಲಿ ಗುಜರಾತ್, ರಾಜಸ್ಥಾನ ರಾಜ್ಯಗಳಲ್ಲಿರುವಂತೆ ಪರಾಂಪರಿಕ ಹೋಟೆಲ್ ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಯೋಜಿಸಿ ಅನುದಾನ ಬಳಸಿ ಅರಸ ಮಹಲ್ ದುರಸ್ತಿಯನ್ನೂ ಮಾಡಲಾಯಿತು. ಈ ಸ್ಮಾರಕ ದುರಸ್ತಿ ಆದದ್ದೇ ತಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆರಸ ಮಹಲ್ನ್ನು ಅಪರ ಜಿಲ್ಲಾಧಿಕಾರಿಗಳ ನಿವಾಸಕ್ಕೆ ಬಿಟ್ಟುಕೊಟ್ಟರು. ಈ ಹಿಂದೆ ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ ಗಂಗೂಬಾಯಿ ಮಾನಕರ್ ಅವರು ಬಡಿಕಮಾನ್ ಮಾರ್ಗದಲ್ಲಿದ್ದ ಸರ್ಕಾರಿ ಬಂಗಲೆಯನ್ನು ವರ್ಗವಾದರೂ ಖಾಲಿ ಮಾಡಿರಲಿಲ್ಲ. ಇದರಿಂದ ಗಂಗೂಬಾಯಿ ಅವರ ಸ್ಥಳಕ್ಕೆ ವರ್ಗವಾಗಿ ಬಂದಿದ್ದ ಡಾ| ಬೂದೆಪ್ಪ ಅವರು ಖಾಸಗಿ ಬಾಡಿಗೆ ಮನೆಯಲ್ಲೇ ವಾಸ ಮಾಡಿ ಅವರೂ ಕೂಡ ವರ್ಗವಾಗಿ ಹೋದರು. ಬೂದೆಪ್ಪ ಅವರ ತೆರವಾದ ಸ್ಥಳಕ್ಕೆ ವರ್ಗವಾಗಿ ಬಂದ ಹಾಲಿ ಅಪರ ಜಿಲ್ಲಾಧಿಕಾರಿ ಪ್ರಸನ್ನ ಅವರಿಗೆ ವಾಸಕ್ಕೆ ನೆಲೆ ಇಲ್ಲದಂತಾಯಿತು. ಪ್ರಸನ್ನ ಅವರು ಲೋಕೋಪಯೋಗಿ ಇಲಾಖೆಗೆ ಸರ್ಕಾರಿ ನಿಯಮದಂತೆ ತಮಗೆ ವಸತಿ ವ್ಯವಸ್ಥೆ ಮಾಡಲು ಕೋರಿದರು. ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ದುರಸ್ತಿಯಾಗಿದ್ದ ಅರಸ ಮಹಲ್ನನ್ನು ಹಿಂದುಮುಂದು ಯೋಚನೆ ಮಾಡದ ಲೋಕೋಪಯೋಗಿ ಇಲಾಖೆ ಅಪರ ಜಿಲ್ಲಾಧಿಕಾರಿ ನಿವಾಸ ಎಂದು ಬಿಟ್ಟು ಕೊಟ್ಟಿತು. ತನ್ನ ಆಸ್ತಿಯೇ ಅಲ್ಲದ ಕಟ್ಟಡ ದುರಸ್ತಿಗೆ 40 ಲಕ್ಷ ರೂ. ಖರ್ಚು ಮಾಡಿದ ಪ್ರವಾಸೋದ್ಯಮ ಇಲಾಖೆಯ ಮಾಡಿದ ಮುಂದಾಲೋಚನೆ ಇಲ್ಲದ ತಪ್ಪಿಗೆ ಮತ್ತೂಂದು ಸೌಲಭ್ಯ ಪ್ರವಾಸಿಗರ ಕೈ ತಪ್ಪಿದೆ. ಮತ್ತೂಂದೆಡೆ ಗುಜರಾತ, ರಾಜಸ್ತಾನ ಮಾದರಿಲ್ಲಿ ಹೆರಿಟೇಜ್ ಹೋಟೆಲ್ ಕನಸು ಕಂಡಿದ್ದ ಇಲಾಖೆ ಕನಸೂ ಭಗ್ನವಾಗಿದೆ. ಅಚ್ಚರಿ ಸಂಗತಿ ಎಂದರೆ ಬಡಿಕಮಾನ್ ರಸ್ತೆಯಲ್ಲಿರುವ ಸರ್ಕಾರಿ ಕಟ್ಟಡದ ಮುಂದೆ ಈಗಲೂ ಅಪರ ಜಿಲ್ಲಾಧಿಕಾರಿಗಳ ನಿವಾಸ ಎಂದೇ ಫಲಕ ಇರುವುದು.
ಹೀಗೆ ಐತಿಹಾಸಿಕ ಸ್ಮಾರಕಗಳ ತವರು ಎನಿಸಿರುವ ಹಾಗೂ ವಿಶ್ವದ ಅದ್ಭುತಗಳನ್ನು ಒಡಲಲ್ಲಿ ಇರಿಸಿಕೊಂಡಿರುವ ವಿಜಯಪುರ ಜಿಲ್ಲೆಯ ಪ್ರವಾಸಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕೆ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾದ ಯೋಜನೆಗಳು ಹೀಗೆ ಅನ್ಯರ ಪಾಲಾಗುತ್ತಿವೆ.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಭಾಷಣ ಮಾಡುವ ಜನಪ್ರತಿನಿಧಿಗಳು, ಅಧಿಕಾರಿಗಳು ಇಲಾಖೆ ಅನುದಾನವನ್ನು ಹೀಗೆ ಬಳಸಿಕೊಂಡು ಪ್ರವಾಸಿಗರ ಪಾಲಿಗೆ ಸೌಲಭ್ಯಗಳನ್ನು ಅನ್ಯರಿಗೆ ಬಿಟ್ಟುಕೊಡಲಾಗುತ್ತಿದೆ. ತನ್ನ ಅನುದಾನ ಹಾಗೂ ಆಸ್ತಿ ಅನ್ಯರ ಪಾಲಾಗುತ್ತಿದ್ದರೂ ಏಕೆ ಎಂದು ಕೇಳಲು ಇಲಾಖೆಗೆ ಮೂಲ ವಾರಸುದಾರ ಅಧಿಕಾರಿಗಳೇ ಇಲ್ಲ. ಇಲಾಖೆಗೆ ಪೂರ್ಣ ಪ್ರಮಾಣದ ಅಧಿಕಾರಿಗಳಿಲ್ಲದೇ 16 ವರ್ಷಗಳಿಂದ ಪ್ರಭಾರಿಗಳಿಂದಲೇ ನಡೆಯುತ್ತಿದ್ದು, ಪ್ರಭಾರಿಗಳಾಗಿ ಬಂದವರೆಲ್ಲ ‘ಅಲ್ಲಿದೆ ನನ್ನ ಇಲಾಖೆ, ಇಲ್ಲಿ ಬಂದೆ ಸುಮ್ಮನೇ’ ಎಂದು ಮನೋಭಾವದಿಂದ ತಮಗೇಕೆ ಎಂದು ಕ್ಯೆತೊಳೆದುಕೊಂಡು ಹೋಗಿದ್ದಾರೆ. ಪರಿಣಾಮ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಎಂಬುದು ಇದ್ದೂ ಇಲ್ಲದಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.