ಪ್ರವಾಹ ಪೀಡಿತ ಹಳ್ಳಿಗಳಲ್ಲಿ ಕಳ್ಳರ ಹಾವಳಿ-ಸಂತ್ರಸ್ತರಲ್ಲಿ ಭೀತಿ!
ಸಂತ್ರಸ್ತರೊಂದಿಗೆ ಮಲಗುತ್ತಿರುವ ಶಂಕಿತರು • ಮುದ್ದೇಬಿಹಾಳ ಪುನರ್ವಸತಿ ಕೇಂದ್ರದಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು •ಹಳ್ಳಿಗಳಲ್ಲಿ ಪೊಲೀಸ್ ಕಾವಲು
Team Udayavani, Aug 17, 2019, 10:22 AM IST
ವಿಜಯಪುರ: ಬಸವನಾಡಿನ ಜೀವನದಿಗಳು ಎನಿಸಿರುವ ಕೃಷ್ಣಾ ಹಾಗೂ ಭೀಮಾ ನದಿಗಳು ಕಳೆದ ಹತ್ತಾರು ದಿನಗಳಿಂದ ಮಾಡಿರುವ ಪ್ರವಾಹ ಬಾಧೆಗೆ ನಲುಗಿರುವ ತೀರ ಪ್ರದೇಶದ ಸಂತ್ರಸ್ತರು, ಇದೀಗ ಕಳ್ಳರ ಕೈ ಚಳಕಕ್ಕೆ ಕಂಗೆಟ್ಟಿದ್ದಾರೆ. ಪ್ರವಾಹದಿಂದಾಗಿ ಉಟ್ಟ ಬಟ್ಟೆ ಮೇಲೆ ಪುನರ್ವಸತಿ ಕೇಂದ್ರಕ್ಕೆ ಬಂದಿರುವ ಮನೆಗಳ್ಳತನಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ಸಂತ್ರಸ್ತರನ್ನು ಕಂಗೆಡಿಸಿದೆ.
ತಮ್ಮ ಕೈಚಳಕ ತೋರುವ ಕಳ್ಳಲು ತಾವೂ ಕೂಡ ಸಂತ್ರಸ್ತರು ಎಂಬಂತೆ ಪುನರ್ವಸತಿ ಕೇಂದ್ರದಲ್ಲೇ ಅಮಾಯಕಾರಂತೆ ನಟಿಸುತ್ತಿದ್ದಾರೆ ಎಂಬ ಸಂಗತಿ ಇನ್ನಷ್ಟು ಭೀತಿ ಹುಟ್ಟಿಸಿದೆ. ಇಂಥ ಕಳ್ಳರ ಕುರಿತು ಮಾಹಿತಿ ಪಡೆಯುತ್ತಿರುವ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಮಾಹಿತಿ ಹೊರ ಬಿದ್ದಿದೆ.
ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ನದಿಗೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿದ್ದ ಮಳೆ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ 6 ಲಕ್ಷ ಕ್ಯೂಸೆಕ್ ನೀರು ಒಳ ಹರಿವು ಸೃಷ್ಟಿಸಿದ್ದರಿಂದ ಶಾಸ್ತ್ರಿ ಜಲಾಶಯದ ಒಳ-ಹರಿವಿನ ಒತ್ತಡ ಹಾಗೂ ಬಸವಸಾಗರದ ಹಿನ್ನೀರಿನ ಒತ್ತಡದಿಂದಾಗಿ ಬಬಲೇಶ್ವರ, ನಿಡಗುಂದಿ ಹಾಗೂ ಮುದ್ದೇಬಿಹಾಳ ತಾಲೂಕಿನ ತೀರ ಪ್ರದೇಶದ ಹಳ್ಳಿಗರ ಜನರ ಬದುಕನ್ನು ರಾತ್ರೋ ರಾತ್ರಿ ಬೀದಿಗೆ ತಂದು ನಿಲ್ಲಿಸಿದೆ.
ಇದರಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿ ತೀರದಲ್ಲಿ ಪ್ರವಾಹ ಕಾಣಿಸಿಕೊಂಡ ಕಾರಣ ಕಂಗೆಟ್ಟು ನಿಂತಿದ್ದ ಪ್ರವಾಹ ಬಾಧಿತ ಹಳ್ಳಿಗಳ ಜನರನ್ನು ಜಿಲ್ಲಾಡಳಿತ ಉಟ್ಟ ಬಟ್ಟೆ ಮೇಲೆ ವಿವಿಧ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿತ್ತು. ಬಬಲೇಶ್ವರ, ನಿಡಗುಂದಿ, ಮುದ್ದೇಬಿಹಾಳ ತಾಲೂಕಿನ 25 ಹಳ್ಳಿಗಳನ್ನು ಜಿಲ್ಲೆಯ ಕೃಷ್ಣಾ ನದಿ ಪ್ರವಾಹ ಮುಳುಗಿಸಿದ್ದರೆ, ಭೀಮಾ ನದಿ ಪಾತ್ರದ ಚಡಚಣ, ಇಂಡಿ ಹಾಗೂ ಆಲಮೇಲ-ಸಿಂದಗಿ ತಾಲೂಕಿನ 10 ಹಳ್ಳಿಗಳು ಸೇರಿ ಜಿಲ್ಲೆಯಲ್ಲಿ 75 ಹಳ್ಳಿಗಳ ಜಮೀನಿಗೆ ನೀರು ನುಗ್ಗಿದೆ. ಇದರಲ್ಲಿ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದ ಕಾರಣಕ್ಕೆ ಕೃಷ್ಣಾ ನದಿ ಪಾತ್ರದ 12 ಹಳ್ಳಿಗಳ ಜನರನ್ನು ವಿವಿಧ ಕಡೆಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ.
ರಾತ್ರೋರಾತ್ರಿ ಮನೆಗಳಿಗೆ ನುಗ್ಗಿದ ಪ್ರವಾಹದ ನೀರಿನಿಂದ ಕಂಗೆಟ್ಟ ಪ್ರವಾಹ ಬಾಧಿತ ಹಳ್ಳಿಗಳ ಜನರು ಜೀವ ಉಳಿದರೆ ಸಾಕು ಆಸರೆ ಕಾಯುತ್ತಿದ್ದರು. ಈ ಹಂತದಲ್ಲಿ ಜಿಲ್ಲಾಡಳಿತ ಅಧಿಕಾರಿಗಳ ಸೂಚನೆ ಮೇರೆಗೆ ಇದ್ದಕ್ಕಿಂತೆ ತಮ್ಮ ಮನೆಗೆ ಬೀಗ ಹಾಕಿ ಎದ್ದು ಹೊರಟು ಬಂದ ಪ್ರವಾಹ ಬಾಧಿತ ಹಳ್ಳಿಗಳ ಸಂತ್ರಸ್ತರು, ಪುನರ್ವಸತಿ ಕೇಂದ್ರದಲ್ಲಿ ನೆಲೆಸಿದ್ದಾರೆ. ಆದರೆ ಜಲಾವೃತ ಗ್ರಾಮಗಳ ಬೀಗ ಹಾಕಿದ ಮನೆಗಳ ಬೀಗ ಮುರಿದು ಕಳ್ಳತನ ಎಸಗುತ್ತಿರುವ ಸುದ್ದಿ ಸಂತ್ರಸ್ತರನ್ನು ಕಂಗೆಡಿಸಿದೆ.
ಇದರಲ್ಲಿ ಮುದ್ದೇಬಿಹಾಳ ತಾಲೂಕಿನ ನಾಗರಾಳ ಗ್ರಾಮದ 65 ಕುಟುಂಬಗಳ 149 ಜನರನ್ನು ಮುದ್ದೇಬಿಹಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಸ್ಥಾಪಿಸಲಾದ ಪುನರ್ವಸತಿ ಕೇಂದ್ರದಲ್ಲೇ ಶಂಕಿತ ಕಳ್ಳರು ಇರುವ ಮಾಹಿತಿ ಇದೆ. ಸಂತ್ರಸ್ತರೊಂದಿಗೆ ಇರುವ ಕೆಲವರು ಹಗಲು ವೇಳೆಯಲ್ಲಿ ಅವರ ಸಂಕಷ್ಟದ ಮಾತುಗಳ ಸಂದರ್ಭದಲ್ಲಿ ಎಲ್ಲೆಲ್ಲಿ ಯಾವ್ಯಾವ ವಸ್ತುಗಳನ್ನು ಬಿಟ್ಟು ಬರಲಾಗಿದೆ ಎಂದು ಮಾತನಾಡಿಕೊಳ್ಳುವಾಗ ಮಾಹಿತಿ ಸಂಗ್ರಹಿಸಿ, ಮನೆಗಳ್ಳತನಕ್ಕೆ ಮುಂದಾಗಿದ್ದಾರೆ. ಕಳ್ಳತನ ಎಸಗಿ ಯಾರಿಗೂ ಸಂಶಯ ಬಾರದಿರಲಿ ಎಂದು ಮತ್ತೆ ಪುನರ್ವಸತಿ ಕೇಂದ್ರಕ್ಕೆ ಬಂದು ಸಂತ್ರಸ್ತರೊಂದಿಗೆ ರಾತ್ರಿ ವಾಸ್ತವ್ಯ ಹೂಡುತ್ತಿದ್ದಾರೆ ಎನ್ನಲಾಗಿದೆ. ಈ ವಿಷಯ ಸಂತ್ರಸ್ತರನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ.
ಇದರ ಮಧ್ಯೆ ನಾಗರಾಳ ಗ್ರಾಮದ ಕೆಲವು ಮನೆಗಳ ಬೀಗ ಮುರಿದು ಕಳ್ಳತನ ಎಸಗಿರುವುದು ಸಂತ್ರಸ್ತರ ಗಮನಕ್ಕೆ ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಲೇ ಸ್ಥಳೀಯ ಪೊಲೀಸರು ಎಚ್ಚೆತ್ತುಕೊಂಡು ಕೂಡಲೇ ಕಳ್ಳರ ಶೋಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಮುದ್ದೇಬಿಹಾಳ ನಗರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪುನರ್ವಸತಿ ಕೇಂದ್ರಕ್ಕೆ ರವಿವಾರ ರಾತ್ರಿ ಜೀಪಿನಿಲ್ಲಿ ಬಂದ ಕೆಲವು ಪೊಲೀಸರು ಸಂತ್ರಸ್ತರ ಇಡಿ ಕೇಂದ್ರವನ್ನು ಜಾಲಾಡಿದ್ದಾರೆ. ಇದರಲ್ಲಿ ಸಂತ್ರಸ್ತರ ಮಧ್ಯೆ ಕುಳಿತು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಮಧ್ಯೆ ಪ್ರವಾಹ ಬಾಧಿತ ಪ್ರತಿ ಹಳ್ಳಿಗಳಲ್ಲಿ ಪೊಲೀಸರ ನಿರಂತರ ಕಾವಲು ಇರಿಸಿದೆ. ಇಷ್ಟಿದ್ದರೂ ಕಳ್ಳರು ಪುನರ್ವಸತಿ ಕೇಂದ್ರದಲ್ಲಿರುವ ಸಂತ್ರಸ್ತರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಇಳಿದಿದ್ದಾರೆ ಎಂಬ ಅನುಮಾನಗಳು ದೃಢಪಡುತ್ತಿದ್ದಂತೆ ಪ್ರವಾಹ ಬಾಧಿತರನ್ನು ಇನ್ನಷ್ಟು ಕಂಗೆಡಿಸಿದೆ.
ಹೆಸರು ಹೇಳಲು ಇಚ್ಛಿಸದ ಪ್ರತ್ಯಕ್ಷದರ್ಶಿಗಳ ಪ್ರಕಾರ ಆ. 11ರಂದು ರಾತ್ರಿ ನಾಲ್ಕಾರು ಜನ ಪೊಲೀಸರು ಜೀಪಿನಲ್ಲಿ ಮುದ್ದೇಬಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಬಂದು ತೀವ್ರ ಶೋಧ ನಡೆಸಿದರು. ಬಳಿಕ ಪ್ರವಾಹ ಬಾಧಿತ ನಾಗರಾಳ ಗ್ರಾಮದ ಕೆಲವು ಮನೆಗಳಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆದು, ತಮ್ಮ ಪೊಲೀಸ್ ಜೀಪಿನಲ್ಲಿ ಕರೆದೊಯ್ದಿದರು. ಇದರ ಹೊರತಾಗಿ ಮುಂದೇನಾಯಿತು ಎಂಬುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.