ಜಿಮಖಾನಾ ಕ್ಲಬ್‌ನಿಂದ ಅಧಿಕಾರಿಗಳ ಕುಟುಂಬಕ್ಕೆ ಅನುಕೂಲ
ನಗರದಲ್ಲಿ ಆಫೀಸರ್ ಜಿಮಖಾನಾ ಕ್ಲಬ್ ಸಮಿತಿ ಅಸ್ತಿತ್ವಕ್ಕೆ
Team Udayavani, Sep 19, 2019, 6:14 PM IST
ವಿಜಯಪುರ: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ಜಿಮಖಾನಾ ಕ್ಲಬ್ ಸಾಮಾನ್ಯ ಸಭೆ ಜರುಗಿತು.
ವಿಜಯಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರಿಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಚಟುವಟಿಕೆಗಳ ಅನುಕೂಲಕ್ಕಾಗಿ ನಗರದಲ್ಲಿ ಆಫೀಸರ್ ಜಿಮಖಾನಾ ಕ್ಲಬ್ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ನಗರದ ನಿರ್ಮಿತಿ ಬಜಾರ್‌ನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಮಖಾನಾ ಕ್ಲಬ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ವಿಜಯಪುರ ನಗರದಲ್ಲಿ ಜಿಮಖಾನಾ ಕ್ಲಬ್ ಕೂಡ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಅಧಿಕಾರಿಗಳು ಹಾಗೂ ಅವರ ಕುಟುಂಬಗಳ ಸದಸ್ಯರ ಒತ್ತಡ ನಿವಾರಣೆ, ವಿವಿಧ ಮನರಂಜನಾ ಚಟುವಟಿಕೆಗಳಿಗೆ ಸೌಕರ್ಯ ಕಲ್ಪಿಸಬೇಕು. ಜೊತೆಗೆ ಅಧಿಕಾರಿಗಳಿಗೆ ವಿಶೇಷ ಸಮಯಾವಕಾಶ ದೊರೆಯುವಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಸ್ಥಾಪಿಸಲಾದ ಆಫೀಸರ್ ಕ್ಲಬ್ ಅತ್ಯಂತ ಹೆಸರುವಾಸಿಯಾಗಿದ್ದು, ಈ ಕ್ಲಬ್ ಸದಸ್ಯರಾಗುವುದೇ ಗೌರವ-ಪ್ರತಿಷ್ಠೆ ವಿಷಯ. ಈ ದಿಸೆಯಲ್ಲಿ ವಿಜಯಪುರ ನಗರದಲ್ಲಿ ಆರಂಭಗೊಂಡಿರುವ ಸುಸಜ್ಜಿತ ಆಫೀಸರ್ ಕ್ಲಬ್‌ನಲ್ಲಿ ಅಧಿಕಾರಿಗಳಿಗೆ ಅಮೂಲ್ಯ ಸಮಯಾವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ವಿಚಾರ-ವಿನಿಮಯ, ಮಕ್ಕಳಿಗೆ ವಿವಿಧ ಕ್ರೀಡಾಕೂಟ ಮತ್ತು ಪರಸ್ಪರ ಪರಿಚಯ ಮತ್ತು ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ. ಹಂತ ಹಂತವಾಗಿ ಕ್ಲಬ್ ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಿದ್ದು, ಇಂದು ತಾತ್ಕಾಲಿಕವಾಗಿ ಕಾರ್ಯಕಾರಿ ಮಂಡಳಿ ರಚಿಸಲಾಗಿದೆ ಎಂದು ಹೇಳಿದರು.
ಜಿಪಂ ಸಿಇಒ ವಿಕಾಸ ಸುರಳಕರ ಮಾತನಾಡಿ, ಆಫಿಸರ್ ಕ್ಲಬ್ ಸ್ಥಾಪನೆಯಿಂದ ಸಾಂಸ್ಕೃತಿಕ ಹಾಗೂ ಇದಕ್ಕೆ ಪೂರಕವಾಗಿರುವ ಚಟುವಟಿಕೆಗಳಿಗೆ ಉತ್ತಮ ವೇದಿಕೆಯಾಗಲಿದೆ. ಕ್ಲಬ್ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮಾಡಬೇಕಿದೆ. ವಿಶೇಷವಾಗಿ ತಕ್ಷಣಕ್ಕೆ ರೆಸ್ಟೋರೆಂಟ್ ತೆರೆಯುವುದು ತುರ್ತು ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೂಕ್ತ ಸಲಹೆ-ಸೂಚನೆ ನೀಡುವಂತೆ ಹೇಳಿದರು.
ಎಸ್ಪಿ ಪ್ರಕಾಶ ನಿಕ್ಕಂ ಮಾತನಾಡಿ, ವಿಜಯಪುರ ನಗರದಲ್ಲಿ ಬ್ರಿಟಿಷ್ ಕಾಲದಿಂದಲೂ ಆಫೀಸರ್ ಕ್ಲಬ್ ಇದ್ದು, ಸದ್ಯಕ್ಕೆ 1.5 ಎಕರೆ ಪ್ರದೇಶ ಸ್ಥಿರಾಸ್ತಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆ, ಹೊಸ ವರ್ಷಾಚರಣೆ ಸೇರಿದಂತೆ ಮಹತ್ವದ ದಿನಗಳಂದು ಅಧಿಕಾರಿಗಳ ಕುಟುಂಬಸ್ಥರು ಅಮೂಲ್ಯ ಸಮಯ ಕಳೆಯಲು ಅವಕಾಶ ಲಭ್ಯವಾಗಲಿದೆ. ಅದರಂತೆ ವಿವಿಧ ಜಿಲ್ಲೆಗಳ ಅಧಿಕಾರಿಗಳ ಕ್ಲಬ್‌ಗಳ ಸಹಯೋಗದೊಂದಿಗೆ ಇಲ್ಲಿನ ಚಟುವಟಿಕೆ ಮುಂದುವರಿಸಲು ಸಲಹೆ ನೀಡಿ ವಿವಿಧ ಸ್ಪರ್ಧೆಗಳಿಗೂ ಅವಕಾಶ ಕಲ್ಪಿಸುವಂತಾಗಲಿ ಎಂದರು.
ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಮಾತನಾಡಿ, ವಿಜಯಪುರ ನಗರದ ಜಿಮಖಾನಾ ಕ್ಲಬ್ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಹಿಂದೆ ಆನಂದ ಮಹಲ್ನಲ್ಲಿ ಕ್ಲಬ್‌ನ ಕಚೇರಿ ಹೊಂದಿದ್ದು ಈಗ ನಿರ್ಮಿತಿ ಬಜಾರದಲ್ಲಿ ಈ ಕ್ಲಬ್ ಆರಂಭಿಸಲಾಗಿದೆ. ಗ್ರೂಪ್-ಎ, ಗ್ರೂಪ್-ಬಿ ಮತ್ತು ನಿವೃತ್ತ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕ್ಲಬ್ ಸದಸ್ಯರಾಗಲು ಅವಕಾಶವಿದೆ ಎಂದು ಹೇಳಿದರು.
ಕ್ಲಬ್‌ನ 2019-20ನೇ ಸಾಲಿನ ತಾತ್ಕಾಲಿಕ ಕಾರ್ಯಕಾರಿ ಮಂಡಳಿ ರಚಿಸಲಾಯಿತು. ಜಿಲ್ಲಾಧಿಕಾರಿಗಳು ಕ್ಲಬ್ ಶಾಶ್ವತ ಅಧ್ಯಕ್ಷರಾಗಿದ್ದು, ಎಸ್ಪಿ ಶಾಶ್ವತ ಉಪಾಧ್ಯಕ್ಷರಾಗಿರುತ್ತಾರೆ. ಜಿಪಂ ಸಿಇಓ ಸಹ- ಅಧ್ಯಕ್ಷರಾಗಿರಲಿದ್ದಾರೆ. ಇದಲ್ಲದೇ ಅಪರ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಪಂ ಉಪ ಕಾರ್ಯದರ್ಶಿಗಳು, ಉಪ ವಿಭಾಗಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು, ಅಬಕಾರಿ ಆಯುಕ್ತರು, ಉಪ ನಿಬಂಧಕರು ಸಹಕಾರ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಓರ್ವ ಅಧಿಕಾರಿ ಒಂಬತ್ತು ಸದಸ್ಯರ ಕಾರ್ಯಕಾರಿ ಸದಸ್ಯರನ್ನೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿತು. ಎಎಸ್ಪಿ ನೇಮಗೌಡ, ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.