ದಾಖಲೆ ಬರೆದ ಲೋಕ ಚುನಾವಣೆ
ಚಿಕ್ಕೋಡಿ-ವಿಜಯಪುರ ಕ್ಷೇತ್ರದಲ್ಲಿ ಸತತ ಎರಡು ಹ್ಯಾಟ್ರಿಕ್ ಗೆಲುವು ಸಾಧಿಸಿದ ರಮೇಶ ಜಿಗಜಿಣಗಿ
Team Udayavani, May 25, 2019, 11:01 AM IST
ವಿಜಯಪುರ: 2019ರ ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಮೊಲದ ಬಾರಿ ಹಲವು ದಾಖಲೆ ಸೃ್ರಷ್ಟಿಯಾಗಿದ್ದರೆ, ಮತ್ತೆ ಕೆಲವು ದಾಖಲೆ ಮುರಿಯಲ್ಪಟ್ಟಿವೆ. ಕ್ಷೇತ್ರದ ಇತಿಹಾಸದಲ್ಲಿ ಹಲವು ವ್ಯೆಶಿಷ್ಟ್ಯಗಳೂ ಕಾಣಿಸಿಕೊಂಡಿವೆ.
ವಿಜಯಪುರ ಕ್ಷೇತ್ರದಲ್ಲಿ ಇಬ್ಬರು ಮಹಿಳೆಯರು ರಾಜಕೀಯ ಪಕ್ಷಗಳಿಂದ ಸ್ಪರ್ಧೆಗೆ ಇಳಿದಿದ್ದರೂ ಪ್ರಥಮ ಹಂತದಲ್ಲೇ ಸೋಲು ಅನುಭವಿಸಿದ್ದಾರೆ. ಓರ್ವ ಪಕ್ಷೇತರ ಮಹಿಳೆ ನಿರ್ಮಲಾ ಅರಕೇರಿ 2009ರಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಸಂಸದರಾಗಿ ಹೆಸರು ಮಾಡಿದ್ದ ಬಿ.ಕೆ. ಗುಡದಿನ್ನಿ ಅವರ ಪತ್ನಿ ಲಕ್ಷ್ಮೀಬಾಯಿ ಗುಡದಿನ್ನಿ 1999ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಆದರೆ ಅವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಬಸವನಗೌಡ ಪಾಟೀಲ ಯತ್ನಾಳ ಹೆಚ್ಚಿನ ಪ್ರಭಾವಿತರಾಗಿದ್ದ ಕಾರಣ ಸೋಲು ಅನುಭವಿಸಿದರು.
ಲಕ್ಷ್ಮೀಬಾಯಿ ಗುಡದಿನ್ನಿ ಅವರನ್ನು ಸೋಲಿಸುವ ಮೂಲಕ ವಿಜಯಪುರ ಕ್ಷೇತ್ರದಲ್ಲಿ ಮೊದಲ ಬಾರಿ ಕೇಸರಿ ಬಾವುಟ ಹಾರಿಸಿದ್ದ ಯತ್ನಾಳ, ನಂತರದ ಚುನಾವಣೆಯಲ್ಲಿ ಕ್ರಿಕೆಟಿಗ ಪ್ರಕಾಶ ರಾಠೊಡ ಅವರನ್ನು ಸೋಲಿಸಿ ಸತತ ಎರಡು ಬಾರಿ ಈ ಕ್ಷೇತ್ರದಲ್ಲಿ ವಿಜಯ ಸಾಧಿಸಿದ್ದರು.
ಇದಾದ ಬಳಿಕ ವಿಜಯಪುರ ಕ್ಷೇತ್ರ ಮರು ವಿಂಗಡಣೆ ಬಳಿಕ 2009ರಲ್ಲಿ ವಿಜಯಪುರ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಆಯ್ಕೆಯಾದರೆ, ಪ್ರತಿ ಸ್ಪರ್ಧಿ ಪ್ರಕಾಶ ರಾಠೊಡ ಎರಡನೇ ಸೋಲು ಅನುಭವಿಸಿದ್ದರು. ಕಳೆದ ಚುನಾವಣೆಯಲ್ಲಿ ಮತ್ತೆ ಮುಖಾಮುಖೀ ಅಗಿದ್ದ ರಮೇಶ-ಪ್ರಕಾಶ ಇಬ್ಬರಲ್ಲಿ ರಮೇಶ ವಿಜಯ ಸಾಧಿಸಿದರೆ, ಪ್ರಕಾಶ ಮೂರನೇ ಸೋಲು ಕಂಡಿದ್ದರು.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಖಾತೆ ತೆರೆಯಬೇಕು ಎಂಬ ಕನಸು ಬಂಜಾರ ಸಮುದಾಯಕ್ಕೆ ಸಾಧ್ಯವಾಗಿಲ್ಲ. ಈ ಬಾರಿ ಡಾ| ಸುನೀತಾ ಚವ್ಹಾಣ ಅವರ ಸೋಲು ಹಾಗೂ ಈ ಹಿಂದೆ ಸತತ ಮೂರು ಬಾರಿ ಸ್ಪರ್ಧಿಸಿ ಸೋತಿರುವ ಪ್ರಕಾಶ ರಾಠೊಡ ಅವರ ಸೋಲು ಸೇರಿದಂತೆ ಬಂಜಾರಾ ಸಮುದಾಯದ ಅಭ್ಯರ್ಥಿಗಳು ಸತತ ನಾಲ್ಕನೇ ಪ್ರಯತ್ನದಲ್ಲೂ ತಮ್ಮ ಕನಸು ನನಸಾಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ರಮೇಶ ಜಿಗಜಿಣಗಿ ಅವರು ವಿಜಯಪುರ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಮಾಡಿದ್ದರೆ, ಸತತ 5ನೇ ಬಾರಿಗೆ ಬಿಜೆಪಿ ಇಲ್ಲಿ ವಿಜಯ ಸಾಧಿಸಿ ಕೇಸರಿ ಭದ್ರಕೋಟೆ ಎಂಬ ಹಿರಿಮೆ ಸಂಪಾದಿಸಿದೆ. ಜಿಗಜಿಣಗಿ ಅವರು 2009, 2014 ಹಾಗೂ 2019 ಸ್ಪರ್ಧೆಗೆ ಮುನ್ನ ಸತತ ಎರಡು ಬಾರಿ ಗೆದ್ದಿದ್ದ ಯತ್ನಾಳ ಈ ಕ್ಷೇತ್ರದಲ್ಲಿ ಕೇಸರಿ ಬುನಾದಿ ಹಾಕಿದ್ದಾರೆ.
ವಿಜಯಪುರ ಕ್ಷೇತ್ರದಲ್ಲಿ ಮೂರನೇ ಬಾರಿಗೆ ವಿಜಯ ಮಾಲೆ ಧರಿಸಿರುವ ರಮೇಶ ಜಿಗಜಿಣಗಿ ತಮ್ಮ ರಾಜಕೀಯ ಜೀವನದಲ್ಲಿ ಸತತ 6 ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶ ಮಾಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈ ಸಾಧನೆ ಮಾಡಿದ ಮೊದಲಿಗ ಎಂಬ ಹಿಮೆಯ ದಾಖಲೆ ಬರೆದಿದ್ದಾರೆ.
ವಿಜಯಪುರ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗುವ ಮುನ್ನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಚಿಕ್ಕೋಡಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದು ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇದಷ್ಟೇ ಅಲ್ಲದೇ ವಿಜಯಪುರ ಕ್ಷೇತ್ರದಲ್ಲಿ ಬಿ.ಕೆ.ಗುಡದಿನ್ನಿ ಅವರು ಮೂರು ಬಾರಿ ಗೆದ್ದಿದ್ದರೂ ಮಧ್ಯದಲ್ಲಿ ಒಂದು ಬಾರಿ ಸೋತಿದ್ದ ಕಾರಣ ಅವರಿಂದ ಹ್ಯಾಟ್ರಿಕ್ ಸಾಧನೆ ಸಾಧ್ಯವಾಗಿರಲಿಲ್ಲ.
ಆದರೆ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸತತ ಮೂರು ಬಾರಿ ಗೆದ್ದು ರಮೇಶ ಜಿಗಜಿಣಗಿ ಹ್ಯಾಟ್ರಿಕ್ ಸಾಧಿಸಿದ್ದಾರೆ. ಇದರೊಂದಿಗೆ ಚಿಕ್ಕೋಡಿ ಹಾಗೂ ವಿಜಯಪುರ ಎರಡೂ ಕ್ಷೇತ್ರದಲ್ಲಿ ಸತತ ಎರಡು ಹ್ಯಾಟ್ರಿಕ್ ವಿಜಯದ ಮೂಲಕ 6ನೇ ಬಾರಿಗೆ ಸಂಸತ ಭವನ ಪ್ರವೇಶಿಸಿ ದಾಖಲೆ ಬರೆದಿದ್ದಾರೆ. ಜಿಗಜಿಣಗಿ ಡಬಲ್ ಹ್ಯಾಟ್ರಿಕ್ ಮಾಡಿರುವ ಎರಡೂ ಕ್ಷೇತ್ರಗಳು ಮೀಸಲು ಕ್ಷೇತ್ರಗಳೇ ಎಂಬುದು ಗಮನೀಯ.
ಸತತ 6 ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ವಿಶಿಷ್ಟ ಸಾಧನೆಯ ದಾಖಲೆ ಬರೆದಿದ್ದರೂ ರಮೇಶ ಜಿಗಜಿಣಗಿ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ವಿಜಯಪುರ ಜಿಲ್ಲೆಯ ಪರಿಶಿಷ್ಟ ಜಾತಿಗೆ ಮೀಸಲಿದ್ದ ತವರು ಕ್ಷೇತ್ರ ಬಳೊಳ್ಳಿ ಬಂಜಾರಾ ಸಮುದಾಯದ ಮನೋಹರ ಐನಾಪುರ ವಿರುದ್ಧ ಸೋಲು ಅನುಭವಿಸಿದ್ದರು. ಆಗ ಜಿಗಜಿಣಗಿ ರಾಜ್ಯ ಸರ್ಕಾರದಲ್ಲಿ ಗೃಹ ಮಂತ್ರಿಯಾಗಿದ್ದರು.
ಇದಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿರುವ ಚಿಕ್ಕೋಡಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ರಾಜಕೀಯ ಪ್ರಯೋಗದಲ್ಲಿ ಪರಾಭವಗೊಂಡಿದ್ದರು. ಆಗ ಜಿಗಜಿಣಗಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸದಸ್ಯರಾಗಿದ್ದರು.
ಜನತಾ ಪರಿವಾರದ ಹಿನ್ನೆಲೆಯ ರಮೇಶ ಜಿಗಜಿಣಗಿ ಚಿಕ್ಕೋಡಿ ಕ್ಷೇತ್ರದಲ್ಲಿ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಪಕ್ಷದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರೆ, ಹೆಗಡೆ ಅವರ ನಿಧನಾನಂತರ ಆದೇ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ನಂತರ ವಿಜಯಪುರ ಮೀಸಲು ಕ್ಷೇತ್ರಕ್ಕೆ ವಲಸೆ ಬಂದು ಸತತ 4ನೇ ಬಾರಿಗೆ ಬಿಜೆಪಿ ಸಂಸದರಾಗಿದ್ದಾರೆ.
ವಿಜಯಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಆರಳಿಸಿ, ಎರಡನೇ ಬಾರಿಗೆ ಗೆದ್ದಿದ್ದ ಬಸನಗೌಡ ಪಾಟೀಲ ಯತ್ನಾಳ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ರೈಲ್ವೆ, ಜವಳಿ ಸಚಿವರಾಗಿದ್ದರು. ರಮೇಶ ಜಿಗಜಿಣಗಿ ಈ ಕ್ಷೇತ್ರದಿಂದ ಕಳೆದ ಸಲ ಎರಡನೇ ಬಾರಿ ವಿಜಯ ಸಾಧಿಸಿ, ಮೊದಲ ಬಾರಿಗೆ ನರೇಂದ್ರ ಮೋದಿ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದಾರೆ. ಹ್ಯಾಟ್ರಿಕ್ ಬಾರಿಸಿರುವ ಈ ಬಾರಿಯೂ ಮೋದಿ ನೇತೃತ್ವದಲ್ಲಿ ಎರಡನೇ ಬಾರಿಗೆ ಆಸ್ತಿತ್ವಕ್ಕೆ ಬರುತ್ತಿರುವ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಈ ನಿರೀಕ್ಷೆಯೂ ಕೈಗೂಡಿದರೆ ಸತತ ಎರಡು ಬಾರಿ ಕೇಂದ್ರದಲ್ಲಿ ಸಚಿವರಾದ ಜಿಲ್ಲೆಯ ಮೊದಲಿಗ ಎಂಬ ಕೀರ್ತಿಯೂ ಜಿಗಜಿಣಗಿ ಮುಡಿಗೆ ಏರಲಿದೆ.
ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.