ಅನ್ನದಾತರ ಚಿತ್ತ ಮಳೆರಾಯನತ್ತ!
ಕೈ ಕೊಟ್ಟ ರೋಹಿಣಿ-ಮೃಗಶಿರದ ಮೇಲೆ ಭಾರಿ ನಿರೀಕ್ಷೆ•ದಯೆ ತೋರುತ್ತಾನಾ ವರುಣ ದೇವ?
Team Udayavani, Jun 9, 2019, 10:21 AM IST
ವಿಜಯಪುರ: ಮುಂಗಾರು ಬಿತ್ತನೆಗಾಗಿ ಜಮೀನು ಹದಗೊಳಿಸುತ್ತಿರುವ ಅನ್ನದಾತ.
ಜಿ.ಎಸ್. ಕಮತರ
ವಿಜಯಪುರ: ಕಳೆದ ನಾಲ್ಕಾರು ವರ್ಷಗಳಿಂದ ನಿರಂತರ ಬರ ಪರಿಸ್ಥಿತಿ ಎದುರಿಸಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ ವರ್ಷವೂ ರೋಹಿಣಿ ಮಳೆ ಕೈಕೊಟ್ಟು ಹೆಸರು ಬಿತ್ತನೆಗೆ ಅನ್ನದಾತ ಹಿಂದೇಟು ಹಾಕುತ್ತಿದ್ದಾನೆ. ಇದರ ಹೊರತಾಗಿಯೂ ಪ್ರಸಕ್ತ ವರ್ಷದ ಮುಂಗಾರು ಪ್ರವೇಶ ವಿಳಂಬವಾದರೂ ಉತ್ತಮ ಮಳೆ ಸುರಿಯುವ ನೀರಿಕ್ಷೆ ಇದೆ. ಹೀಗಾಗಿ ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 4.30 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಂಡಿದ್ದು, ತೊಗರಿ ಬೆಳೆ ಈ ವರ್ಷವೂ ಅಗ್ರಸ್ಥಾನದಲ್ಲಿದೆ.
ವಿಜಯಪುರ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 594 ಎಂಎಂ ಮಳೆ ಆಗುವ ವಾಡಿಕೆ ಇದ್ದು, ಮುಂಗಾರು ಮಳೆ ಜೂನ್-85 ಮಿ.ಮೀ., ಜುಲೈ-73 ಮಿ.ಮೀ. ಆಗಸ್ಟ್-78 ಮಿ.ಮೀ. ಹಾಗೂ ಸೆಪ್ಟೆಂಬರ್‌ನಲ್ಲಿ 152 ಮಿ.ಮೀ. ಸೇರಿದಂತೆ ಒಟ್ಟು 388 ಮಿ.ಮೀ. ವಾಡಿಕೆ ಮಳೆ ಇದೆ. ಪ್ರಸಕ್ತ ವರ್ಷದ ಮುಂಗಾರು ಕರಾವಳಿ ಭಾಗಕ್ಕೆ ಜೂನ್ 6ಕ್ಕೆ ಪ್ರವೇಶ ಮಾಡಬೇಕಿದ್ದರೂ 8 ಅಥವಾ 10ರಂದು ಪ್ರವೇಶ ಮಾಡಲಿದೆ. ಕಾರಣ ವಿಜಯಪುರ ಜಿಲ್ಲೆಗೆ ಜೂ. 10ರಂದು ಪ್ರವೇಶಿಸಬೇಕಿದ್ದ ಮುಂಗಾರು ಸಹಜವಾಗಿ 3-4 ದಿನ ವಿಳಂಬವಾಗಲಿದೆ.
ಸಾಮಾನ್ಯವಾಗಿ ವಿಜಯಪುರ ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ 77.4 ಮಿ.ಮೀ. ಮಳೆ ಆಗಬೇಕಿದ್ದು, ಈ ವರ್ಷ ಕೇವಲ 36.7ರಷ್ಟು ಮಾತ್ರ ಸುರಿದಿರುವ ಕಾರಣ ಮೇ ತಿಂಗಳಲ್ಲಿ ಶೇ .65 ಮಳೆ ಕೊರತೆಯಾಗಿದೆ. ಆದರೆ ಜೂನ್ ಅಂತ್ಯಕ್ಕೆ 95 ಮಿ.ಮೀ. ಮಳೆ ಆಗಬೇಕಿದ್ದು, ಮೊದಲ ವಾರದಲ್ಲಿ ಜೂ. 4ರಂದು ಜಿಲ್ಲೆಯಾದ್ಯಂತ ಸುರಿದ ಮಳೆ 23 ಮಿ.ಮೀ. ದಾಖಲಾಗಿದ್ದು, ಜೂ. 3ರಂದು ಸುರಿದ 8 ಮಿ.ಮೀ. ಮಳೆ ಸುರಿದಿದೆ. ಈವರೆಗೆ 35.4 ರಷ್ಟು ಮಳೆಯಾಗಿದ್ದು, ಅನ್ನದಾತ ಭವಿಷ್ಯದಲ್ಲಿ ನಿರೀಕ್ಷಿತ ಮಳೆ ಸುರಿಯುವ ಆಶಾಭಾವ ಇರಿಸಿಕೊಂಡಿದ್ದಾನೆ. ಮೃಗಶಿರದ ಮೂಲಕ ಮುಂಗಾರು ಪ್ರವೇಶ ವಿಳಂಬವಾದರೂ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಸುರಿಯಬೇಕಿದ್ದ ಮಳೆ ಪೂರ್ಣ ಪ್ರಮಾಣದಲ್ಲಿ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಇದರ ಮಧ್ಯೆ ರೋಹಿಣಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಪ್ರಸಕ್ತ ವರ್ಷದಲ್ಲಿ ಹೆಸರು-ಉದ್ದು ಬೆಳೆ ಬಿತ್ತನೆಗೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಇದರ ಹೊರತಾಗಿಯೂ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷೆಯಲ್ಲಿ ಹೆಸರು-ಉದ್ದು ಬಿತ್ತನೆಗೆ 100 ಕ್ವಿಂಟಲ್ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಇದಲ್ಲದೇ ಮುಂಗಾರು ತ್ತಮ ಎಂಬ ಕಾರಣಕ್ಕೆ ಇತರೆ ಬೆಳೆಗಳೂ ಕೂಡ ಈ ಬಾರಿ ಉತ್ತಮವಾಗಿಯೇ ಬರುವ ನಿರೀಕ್ಷೆಯಲ್ಲಿ ಅನ್ನದಾತ ಜಮೀನು ಹಸನು ಮಾಡಿಕೊಂಡು ವರುಣನ ಆಗಮನಕ್ಕೆ ಕಾಯುತ್ತಿದ್ದಾನೆ.
ಈ ವರ್ಷ ಕೃಷಿ ಇಲಾಖೆ ಮುಂಗಾರು ಹಂಗಾಮಿನಲ್ಲಿ 4.30 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇರಿಸಿಕೊಂಡಿದೆ. ಬಿತ್ತನೆಗಾಗಿ ಬೇಕಿರುವ ಬೀಜಕ್ಕಾಗಿ ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ರಾಷ್ಟ್ರೀಯ ಬೀಜ ನಿಮಗಮದ ಸಹಯೋಗದಲ್ಲಿ ಜಿಲ್ಲೆಯಲ್ಲಿ ಸುಮಾರು 7 ಸಾವಿರ ಕ್ವಿಂಟಲ್ ಬೀಜ ದಾಸ್ತಾನು ಮಾಡಿಕೊಂಡಿದೆ. ಇದರಲ್ಲಿ 2.75 ಲಕ್ಷ ಹೆಕ್ಟೇರ್ ಪ್ರದೇಶವನ್ನು ತೊಗರಿ ಆವರಿಸುವ ನಿರೀಕ್ಷೆ ಇದೆ, 4000 ಕ್ವಿಂಟಲ್ ತೊಗರಿ ಬೀಜ ದಾಸ್ತಾನು ಮಾಡಿಕೊಂಡಿದ್ದು, ಜಿಲ್ಲೆಯ 20 ರೈತ ಸಂಪರ್ಕ ಕೇಂದ್ರಗಳಿಗೆ ಬೀಜ ಪೂರೈಕೆ ಆರಂಭಗೊಂಡಿದೆ. ಜೂ. 10ರೊಳಗೆ ಎಲ್ಲ ರೈತ ಸಂಕರ್ಪ ಕೇಂದ್ರಗಳಿಗೆ ಸರಬರಾಜು ಕೆಲಸ ಮುಗಿಯಲಿದೆ.
ಒಟ್ಟು ಬಿತ್ತನೆ ಗುರಿಯಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ನಿರೀಕ್ಷೆಯಿಂದ 150 ಕ್ವಿಂಟಲ್ ಬೀಜ ಸಂಗ್ರಹ ಮಾಡಿಕೊಂಡಿದ್ದರೆ, 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಬಿತ್ತನೆಗಾಗಿ 350 ಕ್ವಿಂಟಲ್ ಬೀಜ ಹಾಗೂ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಗುರಿಗಾಗಿ 2,500 ಕ್ವಿಂಟಲ್ ಬೀಜ ದಾಸ್ತಾನು ಮಾಡಿಕೊಂಡಿದೆ ಎಂದು ಕೃಷಿ ಇಲಾಖೆ ಬೀಜ ವಿಭಾಗದ ಅಧಿಕಾರಿ ಮಹಾದೇವ ಏವೂರ ವಿವರಿಸುತ್ತಾರೆ.
ಸಾಮಾನ್ಯವಾಗಿ ಮಾರಾಟವಾಗುತ್ತಿದ್ದ ಕ್ವಿಂಟಲ್ಗೆ 1,300 ರೂ. ಬೆಲೆ ಇದ್ದ ಗೋವಿನಜೋಳ ಕಳೆದ ವರ್ಷ ಸರ್ಕಾರದ ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿಗೆ ಮುಂದಾಗಿತ್ತು. ಕಾರಣ ಈ ವರ್ಷ ಗೋವಿನಜೋಳದ ಬಿತ್ತನೆ ಪ್ರದೇಶ ಹೆಚ್ಚಳವಾಗುವ ನಿರೀಕ್ಷೆ ಇರಿಸಿಕೊಂಡಿದೆ.
ಪ್ರಸಕ್ತ ವರ್ಷದಲ್ಲಿ ಮುಂಗಾರು ಪ್ರವೇಶ ವಿಳಂಬವಾದರೂ, ವಾಡಿಕೆಯಂತೆ ಮಳೆ ಸುರಿಯುವ ನಿರೀಕ್ಷೆ ಇದೆ. ಕರಾವಳಿ ಭಾಗಕ್ಕೆ ಸುಮಾರು 4 ದಿನ ತಡವಾಗಿ ಮುಂಗಾರು ಪ್ರವೇಶುತ್ತಿರುವುದರಿಂದ ವಿಜಯಪುರ ಜಿಲ್ಲೆಗೂ ಸಹಜವಾಗಿ ವಿಳಂಬವಾಗಿ ಪ್ರವೇಶ ಮಾಡಲಿದೆ.
•ಡಾ| ಶಂಕರ ಕುಲಕರ್ಣಿ,
ತಾಂತ್ರಿಕ ಅಧಿಕಾರಿ, ಹವಾಮಾನ ಶಾಸ್ತ್ರ ವಿಭಾಗ, ಕೃಷಿ ಮಹಾ ವಿದ್ಯಾಲಯ, ಹಿಟ್ನಳ್ಳಿ
ಜಿಲ್ಲೆಯಲ್ಲಿ 4.30 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಇರುವ ಕಾರಣ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 7 ಸಾವಿರ ಕ್ವಿಂಟಲ್ ಬೀಜ ದಾಸ್ತಾನು ಮಾಡಿಕೊಂಡಿದ್ದೇವೆ. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಗೆ ಬೀಜ ಪೂರೈಕೆ ಆರಂಭಗೊಂಡಿದೆ.
•ಮಹದೇವ ಏವೂರ
ಬೀಜ ವಿಭಾಗದ ಅಧಿಕಾರಿ, ಕೃಷಿ ಇಲಾಖೆ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.