ನವರಸಪುರ ಉತ್ಸವಕ್ಕಿಲ್ಲ ಆಚರಣೆ ಭಾಗ್ಯ
ಈಡೇರದ ಎಂ.ಪಿ. ಪ್ರಕಾಶ ಆಶಯ •ಮೈಸೂರು ದಸರಾ ಉತ್ಸವದಿಂದ ಪ್ರವಾಸೋದ್ಯಮಕ್ಕೆ ಸಹಕಾರ
Team Udayavani, Sep 16, 2019, 12:29 PM IST
ವಿಜಯಪುರ: ನವರಸಪುರ ಉತ್ಸವ-2015 ಸಂದರ್ಭದಲ್ಲಿ ವೈವಿಧ್ಯಮಯ ವರ್ಣಗಳ ಬೆಳಕಿನಿಂದ ಕಂಗೊಳಿಸಿದ್ದ ಗಗನಮಹಲ್.
•ಜಿ.ಎಸ್.ಕಮತರ
ವಿಜಯಪುರ: ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಣಗಳಲ್ಲಿ ಪಾರಂಪರಿಕ ಉತ್ಸವ ನಡೆಸುವ ಮೂಲಕ ನಾಡಿನ ಸಾಂಸ್ಕೃತಿಕ ಹಿರಿಮೆ ಅನಾವರಣದ ಜೊತೆಗೆ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧ್ದಿಗೆ ಸಹಕಾರಿ ಆಗಲಿದೆ. ಇಂಥ ಸದಾಶಯದಿಂದಲೇ ಜನತಾ ಪರಿವಾರದ ಸರ್ಕಾರ ಇದ್ದಾಗ ಮೂರು ದಶಕಗಳ ಹಿಂದೆ ರಾಜ್ಯದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ರಾಜ್ಯದ ಐತಿಹಾಸಿಕ ಹಿನ್ನೆಲೆ ಸ್ಥಳಗಳಲ್ಲಿ ಅಯಾ ಹೆಸರಿನಲ್ಲೇ ಪಾರಂಪರಿಕ ಉತ್ಸವ ಆಚರಣೆಗೆ ಚಾಲನೆ ನೀಡಲಾಗಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ಹಾಗೂ ಸ್ಥಳೀಯರ ಅನಾದರದಿಂದ 60 ಲಕ್ಷ ರೂ. ಹಣ ಇದ್ದರೂ ಆದಿಲ್ ಶಾಹಿ ಅರಸರ ರಾಜಧಾನಿ ವಿಜಯಪುರದಲ್ಲಿ ನವರಸಪುರ ಉತ್ಸವ ಆಚರಣೆ ಮಾತ್ರ ನಾಲ್ಕು ವರ್ಷಗಳಿಂದ ನಡೆಯುತ್ತಲೇ ಇಲ್ಲ.
ಮೈಸೂರು ನಗರದಲ್ಲಿ ಪ್ರತಿ ವರ್ಷ ನಡೆಯುವ ಪಾರಂಪರಿಕ ದಸರಾ ಉತ್ಸವದಿಂದ ಒಂದೆಡೆ ನಾಡಿನ ವಿವಿಧ ಕಲೆಗಳ ಸಂಸ್ಕೃತಿಗಳ ಅನಾವರಣಕ್ಕೆ ಕಲಾವಿದರಿಗೆ, ಕ್ರೀಡಾ ಸ್ಪರ್ಧೆ ಮೂಲಕ ಕ್ರೀಡಾಪಟುಗಳಿಗೆ, ವಿವಿಧ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗುತ್ತದೆ. ಇದರಿಂದ ರಾಜ್ಯದ ಸಾಂಸ್ಕೃತಿಕ ಕಲೆಗಳ ಅನಾವರಣದ ಜೊತೆಗೆ ದೇಶ-ವಿದೇಶಗಳಲ್ಲಿ ನಿರ್ದಿಷ್ಟ ಸಮಯಕ್ಕೆ ನಡೆಯುವ ಉತ್ಸವದ ಮೂಲಕ ಪ್ರವಾಸಿಗರನ್ನು ಸೆಳೆಯುವಲ್ಲಿ ನೆರವಾಗಿದೆ.
ಎಂ.ಪಿ. ಪ್ರಕಾಶ ಅವರು ರಾಮಕೃಷ್ಣ ಹೆಗೆಡೆ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ವಿವಿಧ ಪಾರಂಪರಿಕ ಉತ್ಸವ ಆಚರಣೆಗೆ ಮುಂದಾಗಿದ್ದರು. ಮೈಸೂರು ದಸರಾ ಮಾದರಿಯಲ್ಲಿ ಹಂಪಿ, ಬಾದಾಮಿ-ಪಟ್ಟದಕಲ್ಲುಗಳಲ್ಲಿ ಚಾಲುಕ್ಯ ಉತ್ಸವ, ರಾಯಚೂರಿನಲ್ಲಿ ಎಡೆದೊರೆ ಉತ್ಸವಗಳಿಗೆ ಚಾಲನೆ ನೀಡಿದಂತೆ ವಿಜಯಪುರ ಜಿಲ್ಲೆಯಲ್ಲಿ ನವರಸಪುರ ಉತ್ಸವ ಆಚರಣೆಗೆ ಮುಂದಾಗಿದ್ದರು.
ಮೂರು ದಶಕಗಳ ಹಿಂದೆ ಆರಂಭಗೊಂಡಿರುವ ವಿಜಯಪುರ ಜಿಲ್ಲೆಯ ನವರಸಪುರ ಉತ್ಸವ ಆಚರಣೆ ಐದಾರು ಬಾರಿ ಮಾತ್ರ ನಡೆದಿದೆ. ಕಳೆದ ಹಲವು ವರ್ಷಗಳಿಂದ ನವರಸಪುರ ಉತ್ಸವ ಆಚರಣೆಗೆಂದು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಸರ್ಕಾರದ ಅನುದಾನ ಹೊರತಾಗಿ ಉತ್ಸವ ಆಚರಣೆಗೆ ಹೆಚ್ಚಿನ ಹಣಕಾಸಿನ ವೆಚ್ಚದ ಕಾರಣ ಅರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಬರ-ನೆರೆ ಕಾರಣಗಳನ್ನು ನೀಡಿ ಮುಂದೂಡುತ್ತಲೇ ಬರಲಾಗುತ್ತಿದೆ.
ನವರಸಪುರ ಉತ್ಸವ ಆಚರಣೆಗೆಂದೇ ಸರ್ಕಾರ 2016 ಹಾಗೂ 2017ರಲ್ಲಿ ಪ್ರತಿ ವರ್ಷ 30 ಲಕ್ಷ ರೂ.ನಂತೆ ಬಿಡುಗಡೆ ಮಾಡಿದ 60 ಲಕ್ಷ ರೂ. ಅನುದಾನ ಜಿಲ್ಲಾಧಿಕಾರಿಗಳ ಹೆಸರಿನ ಬ್ಯಾಂಕ್ ಖಾತೆಯಲ್ಲಿ ಜಮೆ ಇದೆ. ಎರಡು ವರ್ಷ ನವರಸಪುರ ಉತ್ಸವ ಮಾಡಿ, ಹಣ ಬಳಕೆ ಕುರಿತು ಜಿಲ್ಲಾಡಳಿತ ಮಾಹಿತಿ ನೀಡಿಲ್ಲ. ಹೀಗಾಗಿ ಜಿಲ್ಲಾಡಳಿತಕ್ಕೆ ಉತ್ಸವ ನಡೆಸುವ ಕುರಿತು ಆಸಕ್ತಿ ಇಲ್ಲ ಎಂಬ ಕಾರಣಕ್ಕೆ 2018 ಹಾಗೂ 2019ರಲ್ಲಿ ಸರ್ಕಾರ ನವರಸಪುರ ಉತ್ಸವ ಆಚರಣೆಗೆ ಅನುದಾನವನ್ನೇ ನೀಡಿಲ್ಲ.
ಮೈಸೂರು ದಸರಾ ಮಾದರಿಯಲ್ಲಿ ಪ್ರತಿ ವರ್ಷ ನಿಗದಿತ ದಿನಗಳಂದು ನವರಸಪುರ ಉತ್ಸವ ನಡೆದಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವಲ್ಲಿ ಸಹಕಾರಿ ಆಗಲಿದೆ. ಉತ್ಸವ ನೆಪದಲ್ಲಿ ರಾಜ್ಯದ ವಿವಿಧ ಭಾಗಳ ಹಾಗೂ ದೇಶಿ ವಿವಿಧ ರಾಜ್ಯಗಳ ವಿವಿಧ ಕಲೆಗಳ ಕಲಾವಿರದನ್ನು ಅದರಲ್ಲೂ ಹಿರಿ-ಕಿರಿಯ ಕಲಾವಿದರನ್ನೆಲ್ಲ ಒಂದೇ ವೇದಿಕೆ ತರುವಲ್ಲಿ ಯಶಸ್ವಿಯಾಗಲಿದೆ. ಇದರಿಂದ ಸಾಂಸ್ಕೃತಿಕ ಮನಸ್ಥಿತಿಯ ಪ್ರವಾಸಿಗರಲ್ಲಿ ವಿಜಯಪುರ ಮಾತ್ರವಲ್ಲ ದೇಶಿ ಕಲೆ-ಸಂಸ್ಕೃತಿಗಳ ಕುರಿತು ವಿಶೇಷ ಆದರವೂ ಮೂಡುವಲ್ಲಿ ನೆರವಾಗುತ್ತದೆ. ಸಾಂಸ್ಕೃತಿಕ ವಿನಿಮಯಕ್ಕೂ ಸಹಕಾರಿ ಆಗಲಿದೆ ಎಂಬುದು ಸ್ಥಳೀಯರ ಭಾವನೆ.
ವಿಜಯಪುರ ಜಿಲ್ಲೆಯ ಮಟ್ಟಿಗೆ ಆದಿಲ್ ಆಹಿ ಅರಸರ ರಾಜಧಾನಿಯಾಗಿದ್ದ ಐತಿಹಾಸಿಕ ವಿಜಯಪುರ ಮಹಾನಗರದಲ್ಲಿ ನವರಸಪುರ ರಾಷ್ಟ್ರೀಯ ಉತ್ಸವದ ಹೆಸರಿನಲ್ಲಿ 1988ರಲ್ಲಿ ಮೊದಲ ಬಾರಿಗೆ ನವರಸಪುರ ಉತ್ಸವಕ್ಕೆ ಚಾಲನೆ ದೊರಕಿತ್ತು. ಇದಾದ ಬಳಿಕ 17 ವರ್ಷಗಳ ನಂತರ 2005ರಲ್ಲಿ ಎರಡನೇ ಬಾರಿಗೆ ನವರಸಪುರ ಉತ್ಸವ ಆಚರಿಸಿದ್ದು, ಇದರ ಸ್ಮರಣೆಗಾಗಿ ನವರಸ ಹೆಸರಿನಲ್ಲಿ ಸ್ಮರಣ ಸಂಚಿಕೆಯನ್ನೂ ಹೊರ ತಂದಿದ್ದರು.
ಇದಾದ ಬಳಿಕ ವಿಶ್ವ ಖ್ಯಾತಿಯ ಗೋಲಗುಮ್ಮಟದ 350ನೇ ವರ್ಷಾಚರಣೆ ವರ್ಷವಾದ 2006ರಲ್ಲಿ ಮೂರನೇ ನವರಸಪುರ ಉತ್ಸವ ಜರುಗಿತ್ತು. ಖ್ಯಾತ ಸಂಶೋಧಕ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಪ್ರಧಾನ ಸಂಪಾದಕತ್ವದಲ್ಲಿ ನವರಸ ಹೆಸರಿನಲ್ಲೇ ಮತ್ತೂಂದು ಸ್ಮರಣ ಸಂಚಿಕೆ ಹೊರ ತರಲಾಗಿತ್ತು.
ಇದಾದ 5 ವರ್ಷಗಳ ನವರಸಪುರ ಉತ್ಸವ ನಡೆಸಿರಲಿಲ್ಲ. 2011ರಲ್ಲಿ ನಾಲ್ಕನೇ ಬಾರಿಗೆ ನವರಸಪುರ ಉತ್ಸವ ಆಚರಿಸಲಾಗಿತ್ತು. ಸ್ಮರಣ ಸಂಚಿಕೆ ಹೆಸರಿನ ಬದಲಾಗಿ ಮಾಹಿತಿ ಕೋಶ ಎಂದು ವಿಜಾಪುರ ವೈಭವ ಎಂಬ ಕೃತಿಯನ್ನು ಮುದ್ರಿಸಲಾಗಿತ್ತು. ಅಂದಿನ ಎಸ್ಪಿ ಡಾ| ಡಿ.ಸಿ. ರಾಜಪ್ಪ ಪ್ರಧಾನ ಸಂಪಾದಕತ್ವದಲ್ಲಿ 8 ಜನರು ಸಂಪಾದಕ ಮಂಡಳಿಯಲ್ಲಿ ದೇಣಿಗೆ ಮೂಲಕ ಲಕ್ಷಾಂತರ ರೂ. ವೆಚ್ಚ ಮಾಡಿ ಮುದ್ರಿಸಿದ ವಿಜಾಪುರ ವೈಭವ ಹೆಸರಿನ ಸಂಚಿಕೆಗೆ ಬಿಡುಗಡೆ ಭಾಗ್ಯ ದೊರೆಯಲಿಲ್ಲ.
ಇದಾದ 4 ವರ್ಷಗಳ ನಂತರ 2015ರಲ್ಲಿ ಮತ್ತೂಂದು ನವರಸಪುರ ಉತ್ಸವ ನಡೆದು, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು. ಸದರಿ ವರ್ಷದ ಉತ್ಸವದಲ್ಲೂ ನವರಸ ಹೆಸರಿನಲ್ಲೇ 5 ಲಕ್ಷ ರೂ. ವೆಚ್ಚದಲ್ಲಿ ರೂಪಿಸಲಾದ ಕನ್ನಡ-ಹಿಂದಿ-ಇಂಗ್ಲಿಷ್ ಭಾಷೆಗಳಲ್ಲಿ ಮೌಲಿಕ ಲೇಖನಗಳ ಸ್ಮರಣ ಸಂಚಿಕೆ ರೂಪಿಸಲು ಮುಂದಾಗಿತ್ತು. ಇದಕ್ಕೆ ಮಹಿಳಾ ವಿಶ್ವವಿದ್ಯಾಲಯ ಉಪ ಕುಲಪತಿಯಾಗಿದ್ದ ಡಾ| ಮೀನಾ ಚಂದಾವರಕರ ಅವರ ಗೌರವ ಸಂಪಾದಕತ್ವ ಇತ್ತು. ಜಾಹೀರಾತು ರಹಿತ ನವರಸ ಸ್ಮರಣ ಸಂಚಿಕೆಯಲ್ಲಿ ಕನ್ನಡದಲ್ಲಿ 17, ಉರ್ದು ಹಾಗೂ ಇಂಗ್ಲಿಷ್‌ನಲ್ಲಿ ತಲಾ ಮೂವರು ಸಂಶೋಧಕ-ಲೇಖಕರು ಬರೆದ ಮೌಲಿಕ ಲೇಖನಗಳನ್ನು ಬಳಸಿಕೊಳ್ಳಲು ಉದ್ದೇಶಿತ ಯೋಜನೆ ಏನಾಯಿತು ಎಂಬುದು ಯಾರಿಗೂ ತಿಳಿಯಲೇ ಇಲ್ಲ.
ಜಿಲ್ಲೆಯವರಾದ ಗೋವಿಂದ ಕಾರಜೋಳ ಅವರು ಬಿಜೆಪಿ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ವಿಜಯಪುರದ ನವರಸಪುರ ಉತ್ಸವದನ್ನು ನಿರಂತರ ನಡೆಸಲು ನಿಯಮ ರೂಪಿಸಲಾಗುತ್ತದೆ. ಇದಕ್ಕಾಗಿ ಪ್ರತಿ ವರ್ಷ ಬಜೆಟ್‌ನಲ್ಲಿ ನಿರ್ದಿಷ್ಟ ಹಾಗೂ ಕಡ್ಡಾಯ ಅನುದಾನ ನೀಡಲು ಸರ್ಕಾರ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಕೆಲ ವರ್ಷ ಅನುದಾನ ಬಂದರೂ ಉತ್ಸವ ಮಾತ್ರ ನಡೆಯಲಿಲ್ಲ. ಇದಾದ ಬಳಿಕ 2015 ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಸಾರಥ್ಯದಲ್ಲಿ ನವರಸಪುರ ಉತ್ಸವ ನಡೆದಾಗಲೂ ಪ್ರತಿ ವರ್ಷ ನಡೆಸುವ ಕುರಿತು ಭರವಸೆ ನೀಡಿದ್ದರೂ ಜಾರಿಗೆ ಬರಲೇ ಇಲ್ಲ.
ಕಳೆದ ಐದು ವರ್ಷಗಳಲ್ಲಿ ಮತ್ತೆ ಒಂದೇ ಒಂದು ಬಾರಿ ನವರಸಪುರ ಉತ್ಸವ ನಡೆಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಕಾಳಜಿ ತೋರಲಿಲ್ಲ. ಉತ್ಸವ ನಡೆಸದಿರುವುದಕ್ಕೆ ರಾಜ್ಯದಲ್ಲಿ ಹಿಂದಿನ ಐದು ವರ್ಷ ಬರ ಹಾಗೂ ನೆರೆಯ ಕಾರಣ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ಭೀಕರ ಬರ ಹಾಗೂ ಕಂಡು ಕೇಳರಿಯದ ನಿರಂತರ ಪ್ರವಾಹ ಹೀಗೆ ಪ್ರಕೃತಿ ವಿಕೋಪಗಳು ನಡೆದರೂ ಮೈಸೂರಿನಲ್ಲಿ ನಡೆಯುತ್ತಿರುವ ಪಾರಂಪರಿಕ ದಸರಾ ಉತ್ಸವಕ್ಕೆ ಮಾತ್ರ ಯಾವುದೇ ಬಾಧೆ ಆಗಲಿಲ್ಲ.
ಮೈಸೂರು ಜಿಲ್ಲೆಗೆ ಹೊಂದಿಕೊಂಡಿರುವ ಕೊಡಗು ಜಿಲ್ಲೆ ಕಳೆದ ವರ್ಷದ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು, ಈ ವರ್ಷವೂ ಕೊಡಗು ಮಾತ್ರವಲ್ಲ ಕರ್ನಾಟಕದ 22 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ನೆರೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಈ ಬಾರಿ ಸರಳ ರೀತಿಯಲ್ಲಿ ದಸರಾ ಆಚರಣೆ ಮಾಡಲಾಗುತ್ತಿದ್ದು, ಇದೇ ಮಾದರಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಲಭ್ಯ ಇರುವ 60 ಲಕ್ಷ ರೂ. ಹಣದಲ್ಲಿ ಕನಿಷ್ಠ ಎರಡು ದಿನಗಳ ಕಾಲ ಸರಳ ರೀತಿಯಲ್ಲಿ ನವರಸಪುರ ಉತ್ಸವ ಆಚರಿಸಲು ಇರುವ ಅಡ್ಡಿಗಳೇನು? ಮೈಸೂರಿನ ದಸರಾ ಉತ್ಸವಕ್ಕೆ ಇಲ್ಲದ ಬರ-ನೆರೆ ನೆಪ ವಿಜಯಪುರ ಜಿಲ್ಲೆಯ ನವರಸಪುರ ಉತ್ಸವಕ್ಕೆ ಮಾತ್ರ ಏಕೆ ಎಂಬ ಜಿಲ್ಲೆಯ ಜನರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಲೇ ಇಲ್ಲ. ಮೈಸೂರು ದಸರಾ ಮಾದರಿಯಲ್ಲಿ ನವರಸಪುರ ಉತ್ಸವವನ್ನು ಕೂಡ ಯಾವುದೇ ಸಂದರ್ಭದಲ್ಲಿ ನಿಲ್ಲದಂತೆ ಪ್ರತಿ ವರ್ಷ ನಿರ್ದಿಷ್ಟ ದಿನಗಳಂದು ಸರಳವೋ, ಅದ್ಧೂರಿಯೋ ಒಟ್ಟಾರೆ ಉತ್ಸವ ನಡೆಸಬೇಕು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜಯಪುರ ಜಿಲ್ಲೆಯ ಪಾರಂಪರಿಕ ಉತ್ಸವದಲ್ಲಿ ಪಾಲ್ಗೊಳ್ಳಲು ದೇಶ-ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಇದು ಸಾಂಸ್ಕೃತಿಕ ಹಿರಿಮೆ ಅನಾವರಣದ ಜೊತೆಗೆ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂಬ ಕೂಗು ಕೇಳಿ ಬರುತ್ತಲೇ ಇರುತ್ತದೆ. ಈ ಕೂಗು ಆಡಳಿತಗಾರರ ಕಿವಿಗೆ ಮುಟ್ಟಿದ್ದರೂ, ಕಣ್ಣು ತೆರೆಸುವಲ್ಲಿ ಮಾತ್ರ ಯಶಸ್ವಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.