ಜಲಾಶಯಗಳಿಂದ ಹಳ್ಳಿಗಳಿಗೆ ಶುದ್ಧೀಕರಿಸಿದ ನೀರು: ಕೃಷ್ಣ ಬೈರೇಗೌಡ
ಸಮಗ್ರ ಅಧ್ಯಯನದ ಬಳಿಕವೇ ಜಲಧಾರೆ ಅನುಷ್ಠಾನ ವಿಜಯಪುರ, ಮಂಡ್ಯ, ಕೋಲಾರ, ರಾಯಚೂರು ಪೈಲೆಟ್ ಯೋಜನೆಗೆ ಆಯ್ಕೆ
Team Udayavani, Jul 6, 2019, 10:44 AM IST
ವಿಜಯಪುರ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು.
ವಿಜಯಪುರ: ಗ್ರಾಮೀಣ ಜನವಸತಿಗಳಿಗೆ ಜಲಾಶಯಗಳ ನೀರನ್ನು ಶುದ್ಧೀಕರಿಸಿ ಪೂರೈಸುವ ಮಹತ್ವಾಕಾಂಕ್ಷೆಯ ಜಲಧಾರೆ ಯೋಜನೆಯ ನೀಲನಕ್ಷೆ ಸಮಗ್ರವಾಗಿ ಅಧ್ಯಯನ ಮಾಡಲಾಗುತ್ತದೆ. ನಂತರವೇ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.
ಶುಕ್ರವಾರ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಲಧಾರೆ ಯೋಜನೆಯ ನೀಲನಕ್ಷೆ ತಯಾರಿಕೆ ಕುರಿತ ಸಮಾಲೋಚನಾ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ಜಲಧಾರೆ ಯೋಜನೆ ಒಂದು ಮಹತ್ವಾಕಾಂಕ್ಷೆಯ ಯೋಜನೆ. ವಿಜಯಪುರ, ಮಂಡ್ಯ, ಕೋಲಾರ ಹಾಗೂ ರಾಯಚೂರು ಜಿಲ್ಲೆಗಳನ್ನು ಮಾತ್ರ ಜಲಧಾರೆ ಪೈಲೆಟ್ ಯೋಜನೆಗೆ ಆಯ್ಕೆ ಮಾಡಲಾಗಿದೆ. ಜಲಧಾರೆ ಮೂಲಕ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವಲ್ಲಿ ರಾಜ್ಯ ಸರ್ಕಾರ ಆಶಯ ಹೊಂದಿದೆ. ಇದಕ್ಕಾಗಿ ಅತ್ಯಂತ ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು. ವಿಜಯಪುರ ಜಿಲ್ಲೆಯ ಜಲಧಾರೆ ಯೋಜನೆ ಅನುಷ್ಠಾನದ ಕರಡು ನೀಲನಕ್ಷೆ ಸಿದ್ದವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸರ್ವೇ ಕಾರ್ಯ ಆರಂಭಗೊಂಡಿದೆ. ಪ್ರಾಥಮಿಕ ಕರಡು ಮಾಹಿತಿ ವರದಿ ಹಾಗೂ ಯೋಜನೆ ಸಿದ್ಧಗೊಂಡಿದೆ. ಇದರಲ್ಲಿ ಇನ್ನೂ ಅಳವಡಿಸಬೇಕಿರುವ ಅಂಶಗಳ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ. ಸದರಿ ನೀಲ ನಕ್ಷೆಯ ಆಮೂಲಾಗ್ರ ಅಧ್ಯಯನದ ಬಳಿಕವೇ ಸಮಗ್ರ ವರದಿ ರೂಪಿಸುವುದಾಗಿ ಸ್ಪಷ್ಟಪಡಿಸಿದರು.
ಪ್ರಸಕ್ತ ಸಂದರ್ಭದಲ್ಲಿ ಜಲಮೂಲಗಳು ಸಂಪೂರ್ಣ ಬತ್ತಿ ಹೋಗಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. ಗ್ರಾಮೀಣ ಭಾಗದಲ್ಲಿ ಕೆರೆ-ಬಾವಿಗಳಲ್ಲೂ ನೀರಿಲ್ಲವಾಗಿದೆ. ಭವಿಷ್ಯದ ವರ್ಷಗಳಲ್ಲಿ ಜನಸಂಖ್ಯೆ ಆಧರಿಸಿ ರೂಪಿತವಾದ ಅನೇಕ ಯೋಜನೆಗಳಿಂದ ಕುಡಿಯುವ ನೀರು ಸಮಸ್ಯೆ ಗಂಭೀರವಾಗುತ್ತಲೇ ಇದೆ. ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ, ಖಾಸಗಿ ಬೋರ್‌ವೆಲ್ ಒಡಂಬಡಿಕೆ ಮಾಡಿಕೊಳ್ಳುವಂಥ ಪ್ರಯತ್ನಗಳು ನಡೆಯುತ್ತಿವೆ. ಆದರೆ ಪದೇ ಪದೇ ಭೀಕರ ಬರಗಾಲ ಮುಂದುವರಿಯುವ ಸಾಧ್ಯತೆಯ ಲಕ್ಷಣಗಳಿವೆ. ಹೀಗಾಗಿ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲೇಬೇಕಿದೆ. ಇದಕ್ಕಾಗಿ ಜಲಧಾರೆ ಯೋಜನೆ ರೂಪಿಸಲಾಗಿದೆ ಎಂದು ವಿಶ್ಲೇಷಿಸಿದರು. ಅಂತಿಮ ನೀಲ ನಕ್ಷೆ, ಸಚಿವ ಸಂಪುಟದಲ್ಲಿ ಅನುಮೋದನೆ, ಟೆಂಡರ್ ಸೇರಿದಂತೆ ಪ್ರಕಿಯೆಗಳು ಪೂರ್ಣಗೊಳ್ಳಲು ಕೆಲ ಸಮಯ ಬೇಕು. ಹೀಗಾಗಿ ಫೆಬ್ರವರಿ, ಮಾರ್ಚ್ ಹಂತದವರೆಗೆ ಯೋಜನೆ ಆರಂಭವಾಗುವ ನಿರೀಕ್ಷೆ ಇದೆ. 30 ತಿಂಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುವ ವಿಶ್ವಾಸವಿದೆ. ಜಲಾಶಯದ ನೀರನ್ನೇ ಶುದ್ಧೀಕರಿಸಿ ಪೈಪ್‌ಲೈನ್ ಮೂಲಕ ಸರಬರಾಜು ಮಾಡುವ ಈ ಯೋಜನೆಗೆ 60 ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂದು ವಿವರಿಸಿದರು. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಡಾ| ದೇವಾನಂದ ಚವ್ಹಾಣ, ಸೋಮನಗೌಡ ಪಾಟೀಲ ಸಾಸನೂರು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಸಿಇಒ ವಿಕಾಸ ಸುರಳಕರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.