ರಾಯಣ್ಣನ ದೇಶಭಕ್ತಿ ಅನನ್ಯ: ಮೃತ್ಯುಂಜಯಶ್ರೀ
•ಮಹಾಪುರುಷರು ಎಲ್ಲ ಸಮಾಜದ ಆಸ್ತಿ •ರಾಯಣ್ಣನ ದೇಶಪ್ರೇಮ ಯುವಕರಿಗೆ ಮಾದರಿ
Team Udayavani, Aug 18, 2019, 3:16 PM IST
ವಿಜಯಪುರ: ನಗರದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಧ್ವಜ ಯಾತ್ರೆಯ ಬಹಿರಂಗ ಸಮಾವೇಶಕ್ಕೆ ಬಸವಜಯ ಮೃತ್ಯುಂಜಯ ಶ್ರೀಗಳು ಚಾಲನೆ ನೀಡಿದರು.
ವಿಜಯಪುರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ನಾಡಿಗಾಗಿ ಬ್ರಿಟಿಷರ ವಿರುದ್ಧ ತೋರಿದ ಕೆಚ್ಚೆದೆಯ ದೇಶಭಕ್ತಿ ವರ್ಣಿಸಲು ಶಬ್ದಕೋಶಗಳಲ್ಲಿನ ಪದಗಳೇ ಸಾಲವು ಎಂದು ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.
ಶನಿವಾರ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಧ್ವಜ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣನ ಸ್ವಾಭಿಮಾನ ವರ್ಣನೆಗೆ ಮೀರಿದೆ. ಗಾಢ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನಂತ ಪರಾಕ್ರಮಿ ತನ್ನ ತಾಯಿಗಿಂತ ಹೆಚ್ಚಾಗಿ ಪ್ರೀತಿಸಿದ ಚನ್ನಮ್ಮಾಜಿ ಯಲ್ಲಿ ಇರಿಸಿದ್ದ ಅದಮ್ಯ ನಿಷ್ಠೆಯ ಭಕ್ತಿ, ಕಿತ್ತೂರು ನಾಡ ಉಳಿವಿಗಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಪರಾಕ್ರಮಗಳು ದೇಶದ ಇತಿಹಾಸ ಪುಟಗಳಲ್ಲಿ ಸುವರ್ಣ ಅಕ್ಷರ ಗಳಲ್ಲಿ ದಾಖಲಾಗಿವೆ ಎಂದು ವಿಶ್ಲೇಷಿಸಿದರು.
ವಿಶೇಷ ಉಪನ್ಯಾಸ ನೀಡಿದ ಮೋಹನ ಮೇಟಿ, ದೇಶಭಕ್ತಿ ಹಾಗೂ ನಂಬಿಕೆ-ವಿಶ್ವಾಸಕ್ಕೆ ಮತ್ತೂಂದು ಹೆಸರೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ದೇಶಾಭಿಮಾನದ ಪರ್ಯಾಯ ಹೆಸರೇ ಸಮರವೀರ ಸಂಗೊಳ್ಳಿ ರಾಯಣ್ಣ. ದೇಶಕ್ಕಾಗಿ ತನ್ನನ್ನು ಮುಡಿಪಾಗಿಸಿಕೊಂಡಿದ್ದ ರಾಯಣ್ಣ ಕೇವಲ ಹಾಲುಮತ ಸಮಾಜದ ಆಸ್ತಿಯಲ್ಲ, ಎಲ್ಲ ಸಮಾಜಗಳ ಆಸ್ತಿ. ರಾಷ್ಟ್ರದ ಹುತಾತ್ಮ ನಾಯಕ. ಹೀಗಾಗಿ ಇಂಥ ಮಹಾನ್ ಚೇತನವನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬಾರದು ಎಂದರು.
ಪ್ರಸಕ್ತ ಸಂದರ್ಭದಲ್ಲಿ ದೇಶ ಎದುರಿಸುತ್ತಿರುವ ಸಂಕಷ್ಟಗಳಿಗೆ ಮುಕ್ತಿ ನೀಡಲು ಮನೆ-ಮನೆಗಳಲ್ಲೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಂಥ ಪರಾಕ್ರಮಶಾಲಿ, ಅಪ್ಪಟ ದೇಶಪ್ರೇಮಿ ಮಕ್ಕಳು ಜನಿಸುವ ಅಗತ್ಯವಿದೆ. ಇದಕ್ಕಾಗಿ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ ಭಾರತ ಮಾತೆಯ ಕ್ರಾಂತಿಪುತ್ರ ರಾಯಣ್ಣನ ಆದರ್ಶಗಳು, ಕೆಚ್ಚೆದೆಯ ಬದುಕಿನ ರೀತಿ, ಬದ್ಧತೆಯ ದೇಶಪ್ರೇಮ ಇಂದಿನ ಪೀಳಿಗೆಗೆ ದಾರಿದೀಪ ಆಗಬೇಕಿದೆ ಎಂದು ಆಶಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷೆ ಶಿಲ್ಪಾ ಕುದರಗೊಂಡ ಮಾತನಾಡಿ, ಸಂಗೊಳ್ಳಿ ರಾಯಣ್ಣ ತನ್ನ ಜೀವನವನ್ನೇ ನಾಡಿನ ಸೇವೆಗಾಗಿ ಮುಡುಪಾಗಿಟ್ಟ ಅಪ್ರತಿಮ ಸ್ವಾತಂತ್ರ್ಯ ಪ್ರೇಮಿ. ದೇಶಕ್ಕಾಗಿ, ಇಂದಿನ ನಮ್ಮ ಸ್ವಾತಂತ್ರ್ಯದ ಉಸಿರಿಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ಅತಿ ವಿರಳರಲ್ಲಿ ವಿರಳ ಹುತಾತ್ಮ ನಾಯಕ. ಗಲ್ಲೇರಿ ಇನ್ನೇನು ಉಸಿರು ಹೋಗುತ್ತದೆ ಎಂಬ ಅಂತಿಮ ಕ್ಷಣದಲ್ಲೂ ದೃತಿಗೆಡದೇ, ನಾನು ದ್ರೋಹಿಯಲ್ಲ, ಬದಲಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಪ್ರಾಣ ತ್ಯಾಗ ಮಾಡುತ್ತಿದ್ದೇನೆ. ಹೀಗಾಗಿ ನನ್ನನ್ನು ಗಲ್ಲಿಗೇರಿಸುತ್ತಾರೆ ಎಂದು ನಾಡಿನ ಯಾರೂ ಕಣ್ಣೀರು ಸುರಿಸದೇ ನನ್ನನ್ನು ಸಂತೋಷದಿಂದ ಬೀಳ್ಕೊಡಿ ಎಂದು ಪರಾಕ್ರಮದ ಮಾತುಗಳು ರೋಮ ರೋಮಗಳಲ್ಲೂ ದೇಶಪ್ರೇಮ ಮೈಗೂಡಿಸುವ ಚೇತೋಹಾರಿ ಎಂದು ವಿಶ್ಲೇಷಿಸಿದರು.
ಹುಲಜಂತಿ ಮಾಳಿಂಗರಾಯ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸೋಮೇಶ್ವರ ಶ್ರೀಗಳು, ಅಮರೇಶ್ವರ ಮಹಾರಾಜರು, ರೇವಣಸಿದ್ದೇಶ್ವರ ಶ್ರೀಗಳು, ಶಾಂತಮಯ ಶ್ರೀಗಳು, ಸೋಮೇಶ್ವರ ಶ್ರೀಗಳು, ಬುರಾಣಪುರ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.
ಉಮೇಶ ವಂದಾಲ, ಶರಣು ಸಬರದ, ಶಿವಾನಂದ ಭುಯ್ನಾರ, ಸಲೀಂ ಉಸ್ತಾದ ವೇದಿಕೆಯಲ್ಲಿದ್ದರು. ಸಮಾವೇಶಕ್ಕೂ ಮುನ್ನ ನಗರದಲ್ಲಿ ರಾಯಣ್ಣನ ಬಾವುಟ ಯಾತ್ರೆಗೆ ಮಾಜಿ ಸಚಿವ ಎಂ.ಬಿ. ಪಾಟೀಲ ಚಾಲನೆ ನೀಡಿದರು. 1 ಕಿ.ಮೀ. ಉದ್ದ ರಾಯಣ್ಣನ ಧ್ವಜವನ್ನು ಹೊತ್ತು ಸಾವಿರಾರು ಯುವಕರು ಸಮಾವೇಶ ನಡೆಯುವ ದರ್ಬಾರ್ ಹೈಸ್ಕೂಲ್ ಮೈದಾನಕ್ಕೆ ತಲುಪಿ ಮುಕ್ತಾಯವಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.