ಬದುಕಿನ ಬಂಡಿ ದೂಡದ ಟಾಂಗಾ
ಆಧುನಿಕ ಯಾಂತ್ರಿಕ ವ್ಯವಸ್ಥೆಯಲ್ಲಿ ಕುಂಟುತ್ತಿದೆ ಪಾರಂಪರಿಕ ಸಾರಿಗೆ ವ್ಯವಸ್ಥೆ
Team Udayavani, Oct 17, 2019, 11:54 AM IST
ಜಿ.ಎಸ್. ಕಮತರ
ವಿಜಯಪುರ: ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀ ಅವನು ಪೇಳªಂತೆ ಪಯಣಿಗರು, ಮದುವೆಗೋ, ಮಸಣಕೋ, ಹೋಗೆಂದ ಕಡೆ ಪದ ಕುಸಿಯೋ ಎಂಬುದು ಡಿ.ವಿ.ಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ. ಈ ಮಾತು ವಿಜಯಪುರ ನಗರದಲ್ಲಿರುವ ಪಾರಂಪರಿಕ ಸಾರಿಗೆ ಜಟಕಾ ಬಂಡಿ ನಂಬಿರುವ ನೂರಾರು ಕುಟುಂಗಳ ಬಾಳಿನಲ್ಲಿ ಸತ್ಯವಾಗಿದೆ. ತಲೆಮಾರುಗಳಿಂದ ಕುದುರೆ-ಜಟಕಾ ನಂಬಿರುವ ಕುಟುಂಬಗಳಿಗೆ ಕನಿಷ್ಠ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ವಿಧಿ ಎಂಬ ಸಾಹೇಬ ತೋರುವ ಮಾರ್ಗದಲ್ಲಿ ಸಾಗುತ್ತಿರುವ ಈ ಸಾರಿಗೆ ಪರಂಪರೆ ಇಲ್ಲಿಗೆ ಮುಗಿದು ಹೋಗುವ ಅಪಾಯ ಕಾಡುವಂತೆ ಮಾಡಿದೆ.
ಪಾರಂಪರಿಕ ನಗರಿ ವಿಜಯಪುರದಲ್ಲಿ ಹಲವು ವೈಶಿಷ್ಟ್ಯತೆಗಳಿದ್ದು, ಇದರಲ್ಲಿ ಪಾರಂಪರಿಕ ಸಾರಿಗೆ ಜಟಕಾ ಬಂಡಿಯೂ ಒಂದು. ಈ ಜಿಲ್ಲೆಗೆ ಗೋಲಗುಮ್ಮಟಕ್ಕೆ ಇರುವಂತೆ ಟಾಂಗಾ ಎಂದು ಕರೆಸಿಕೊಳ್ಳುವ ಪಾರಂಪರಿಕ ಸಾರಿಗೆಗೂ ವಿಶೇಷತೆ ಇದೆ. ಇದೇ ವೇಳೆ ಜಿಲ್ಲೆಯಲ್ಲಿ ಪಾರಂಪರಿಕ ಸ್ಮಾರಕಗಳು ನಿರ್ವಹಣೆ ಇಲ್ಲದ ನಿರ್ಲಕ್ಷ್ಯದಿಂದ ಅವಸಾನದ ಹಾದಿ ಹಿಡಿದಿರುವಂತೆ ಜಟಕಾ ಬಂಡಿಯ ಸಾರಿಗೆ ಪರಂಪರೆ ಕೂಡ ಕೆಲವೇ ದಿನಗಳಲ್ಲಿ ಮುಗಿದು ಹೋಗುವ ಭೀತಿ ಎದುರಿಸುತ್ತಿದೆ.
ಯಾಂತ್ರೀಕರಣದಿಂದ ಮುರಿದು ಬಿದ್ದ ಟಾಂಗಾ ಗಾಲಿ: ಐತಿಹಾಸಿಕ ವಿಜಯಪುರ ನಗರದಲ್ಲಿ ಹಿಂದೆಲ್ಲ ಟಾಂಗಾಗಳಲ್ಲೇ ಅಬ್ಬರ. ಅರ್ಧ ಶತಮಾನದ ಹಿಂದೆ ಸೈಕಲ್ ರಿಕ್ಷಾಗಳು ರಸ್ತೆಗೆ ಇಳಿದಾಗಲೂ ಪಾರಂಪರಿಕ ಸಾರಿಗೆ ಜಟಕಾ ಬಂಡಿಗಳ ವೈಭವಕ್ಕೇನು ಕಡಿಮೆ ಆಗಿರಲಿಲ್ಲ. ಆದರೆ ಹಲವು ದಶಕಗಳ ಹಿಂದೆ ಇಂಧನ ಚಾಲಿತ ತ್ರಿಚಕ್ರವಾಹನ ಆಟೋಗಳು ವಿಜಯಪುರ ನಗರದಲ್ಲಿ ಸಂಚಾರ ಆರಂಭಿಸುತ್ತಲೇ ಟಾಂಗಾ ಸಾರಿಗೆಗೆ ಸಂಚಕಾರ ಆರಂಭಗೊಂಡಿತು. ಶತಮಾನಗಳಿಂದ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜಟಕಾ ಬಂಡಿಗಳ ಗಾಲಿಗಳು ಜಂಗು ಹಿಡಿಯಲಾರಂಭಿಸಿದವು.
ನಗರದ ಜನರಿಗೆ ಮಾತ್ರವಲ್ಲ ಪ್ರವಾಸಿಗರಿಗೆ ನಗರ ದರ್ಶನ ಮಾಡಿಸಿ, ವಿಜಯಪುರ ಪ್ರವಾಸೋದ್ಯಮಕ್ಕೆ ವಿಶಿಷ್ಟ ಸೇವೆ ನೀಡಿದ್ದ ಟಾಂಗಾಗಳ ಗಾಲಿಗಳು ಒಂದೊಂದಾಗಿ ಕಳಚಲು ಆರಂಭಿಸಿದವು. ಕೆಲವೇ ದಶಕಗಳ ಹಿಂದೆ ಸುಮಾರು ವಿಜಯಪುರ ನಗರದಲ್ಲಿ 400-500 ಟಾಂಗಾಗಳಿದ್ದು, ಈ ಕುಟುಂಬಗಳ ಸಾವಿರಾರು ಹೊಟ್ಟೆಗಳಿಗೆ ಅನ್ನ ಹಾಕುತ್ತಿದ್ದವು. ಆದರೆ ಆಧುನಿಕ ಭರಾಟೆಯ ಯಾಂತ್ರೀಕರಣದ ಫಲವಾಗಿ ಆಟೋಗಳು ಸಿರಿವಂತರು ಮಾತ್ರವಲ್ಲ, ಬಾಡಿಗೆ ವಾಹನ ವಿಜಯಪುರಕ್ಕೆ ಕಾಲಿಡಲು ಆರಂಭಿಸುತ್ತಲೇ ಹಲವು ತಲೆಮಾರುಗಳಿಂದ ನಗರದಲ್ಲಿ ಪ್ರಮುಖ ಸಾರಿಗೆ ವ್ಯವಸ್ಥೆ ಎನಿಸಿದ್ದ ಜಟಕಾ ಸಾರಿಗೆ ಮುರುಟತೊಡಗಿತು.
ಪರಿಣಾಮ ಸದ್ಯ ನಗರದಲ್ಲಿ ನೂರಕ್ಕೂ ಹೆಚ್ಚು ಜಟಕಾ ಬಂಡಿಗಳಿದ್ದರೂ ರಸ್ತೆಯಲ್ಲಿ ಓಡಾಡುವುದು ಕೇವಲ 67-70 ಜಟಕಾ ಬಂಡಿಗಳು ಮಾತ್ರ. ಹಾಗಂತ ಓಡಾಡುವಷ್ಟು ಜಟಕಾ ಬಂಡಿ ನಂಬಿರುವ ಕುಟುಂಬಗಳು ನೆಮ್ಮದಿಯಿಂದ ಜೀವಿಸುತ್ತಿಲ್ಲ. ಪ್ರಸ್ತುತ ಜಟಕಾ ಬಂಡಿ ಓಡಿಸುವ ಬಹುತೇಕರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು, ಶಿಕ್ಷಣ ಸೌಲಭ್ಯ ಇಲ್ಲದ ಹಾಗೂ ಪರ್ಯಾಯ ಯಾವುದೇ ಉದ್ಯೋಗ ಗೊತ್ತಿಲ್ಲದವರು.
ಹೀಗಾಗಿ ಆಧುನಿಕತೆಯ ವಾಹನಗಳ ಭರಾಟೆಯಲ್ಲಿ ಜಟಕಾ ಏರಲು ಜನರು ಬಾರದ ಕಾರಣ ವಾರದಲ್ಲಿ ನಾಲ್ಕಾರು ದಿನಗಳು ಕೂಡ ಜಟಕಾ ಚಾಲಕರಿಗೆ ನೂರು ರೂ. ಕೂಡ ಕೂಲಿ ಬಾಡಿಗೆ ದೊರೆಯುವುದಿಲ್ಲ. ಹಲವು ಜಟಕಾ ಚಾಲಕರಿಗೆ ಸ್ವಂತ ಜಟಕಾ ಇಲ್ಲದೇ ಬಾಡಿಗೆ ಓಡಿಸುತ್ತಿದ್ದು, ಎಷ್ಟೋ ಸಂದರ್ಭದಲ್ಲಿ ದುಡಿದ ಹಣ ಜಟಕಾ ಬಾಡಿಗೆ ಕಟ್ಟುವುದಕ್ಕೂ ಸಾಲುವುದಿಲ್ಲ.
ಲಕ್ಷಾಂತರ ಬಂಡವಾಳ ಹಾಕಿದರೂ ಗಂಜಿಗೆ ಗತಿಯಿಲ್ಲ: ಇಂಥ ದುಸ್ತರ ಹಾಗೂ ಬೆಲೆ ಏರಿಕೆ ಸಂದರ್ಭದಲ್ಲಿ ಒಂದು ಜಟಕಾ ಬಂಡಿ ಮಾಡಿಲು ಕನಿಷ್ಠ 1 ಲಕ್ಷ ರೂ. ಬೇಕು. ಬಲಿಷ್ಠ ಕುದುರೆ ಕೊಳ್ಳಲು ಕನಿಷ್ಠ 3-4 ಲಕ್ಷ ರೂ. ಬೇಕು. ಲಕ್ಷಾಂತರ ಬಂಡವಾಳ ಬೇಡುವ ಜಟಕಾ ಚಾಲಕರಿಗೆ ಖಾಸಗಿ ಅಥವಾ ಭದ್ರತೆ ಇಲ್ಲದೆ ಬ್ಯಾಂಕ್ ಸಾಲವೂ ಸಿಗುವುದಿಲ್ಲ. ಹೇಗೋ ಮಾಡಿ ಕುದುರೆ, ಟಾಂಗಾ ಸೇರಿ 4-5 ಲಕ್ಷ ರೂ. ಬಂಡವಾಳ ಹಾಕಿದರೂ ನಿತ್ಯ ಸಾವಿರಾರು ರೂ. ದುಡಿಯುವ ಭರವಸೆ ಇಲ್ಲ. ಹೀಗಾಗಿ ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಬದಲಾಗಿ ಪಾರಂಪರಿಕ ಸ್ಮಾರಕಗಳ ಮುಂದೆ ಪ್ರವಾಸಿಗರೇ ಟಾಂಗಾ ಚಾಲಕರಿಗೆ ಆಸರೆ.
ಎಷ್ಟೋ ಸಂದರ್ಭದಲ್ಲಿ ಒಬ್ಬರೂ ಪ್ರವಾಸಿಗರು ಟಾಂಗಾ ಕಡೆ ಮುಖ ಮಾಡದ ಕಾರಣ ನೂರು ರೂ. ದುಡಿಯಲಾಗದೇ ಕುದುರೆ ಸಹಿತ ತಾನೂ ಕೂಡ ಉಪವಾಸ ಮನೆಗೆ ಹೋಗಬೇಕು. ಮನೆಗಳಲ್ಲಿರುವ ಮಕ್ಕಳು ಅಪ್ಪ ಏನಾದರೂ ತನಗೆ ತಂದಾನು ಎಂಬ ಭರವಸೆ, ಒಲೆ ಹೊತ್ತಿಸಲು ಗಂಡ ಏನಾದರೂ ದಿನಸಿ ತಂದಾನು ಎಂಬ ಎಂದು ಹೆಂಡತಿ ಕಾಯ್ದು ಕುಳಿತಿರು ತ್ತಾರೆ. ಇಂಥ ಸಂದರ್ಭದಲ್ಲಿ ಬರಿಗೈಲಿ ಮನೆಗೆ ಬರುವ ಜಟಕಾ ಚಾಲಕ ಮುಖ ಬಾಡಿಸಿಕೊಂಡು ತಲೆ ತಗ್ಗಿಸಿ ಕೊಂಡೇ ಬರಬೇಕು. ಪರಿಣಾಮ ಟಾಂಗಾ ನಂಬಿರುವ ಕುಟುಂಬಗಳಿಗೆ ಗಂಜಿಗೂ ಗತಿ ಇಲ್ಲದ ದುಸ್ಥಿತಿ ಇದೆ. ಕುದುರೆಗೆ ಮೇವು ಹಾಕಲಾಗದ ಸ್ಥಿತಿ: ತನ್ನ ಕುಟುಂಬ ಉಪವಾಸದ ಕಥೆ ಒಂದೆಡೆಯಾದರೆ ಪ್ರಸ್ತುತ ಸಂದರ್ಭದಲ್ಲಿ ಮೇವು ದೊರೆಯುತ್ತಿಲ್ಲ.
ಕುದುರೆಯ ಇಷ್ಟದ ಆಹಾರ ಗೋಧಿ, ಗೋಧಿ ತೌಡು ಸಿಗದ ಸ್ಥಿತಿ. ಒಂದೊಮ್ಮೆ ಮೇವು ದೊರೆತರೂ ಬೆಲೆ ಏರಿಕೆಯಿಂದ ಕೊಳ್ಳುವ ಶಕ್ತಿ ಕುದುರೆ ಮಾಲೀಕರಿಗೆ ಇಲ್ಲ. ತಾನು ಉಪವಾಸ ಬಿದ್ದರೂ ತನಗೆ ಅನ್ನ ಹಾಕುವ ಕುದುರೆ ಉಪವಾಸ ಹಾಕಬಾರದು ಎಂದು ಸಾಲ ಮಾಡಿಕೊಂಡು ಮೇವು ಕೊಂಡು ಕುದುರೆ ಪಾಲನೆ ಮಾಡಲಾಗದ ದಯನೀಯತೆ ಎದುರಿಸುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳನ್ನು ಎದುರಿಸಿ ಜಟಕಾ ಬಂಡಿ ನಡೆಸಲಾಗದ ಪಾರಂಪರಿಕವಾಗಿ ಜಟಕಾ ಬಂಡಿಯನ್ನೇ ನಂಬಿದ್ದ ಕುಟುಂಬಗಳ ಹೊಸ ತಲೆಮಾರಿನ ಜನರು ಪರ್ಯಾಯ ಉದ್ಯೋಗದತ್ತ ಮುಖ ಮಾಡುತ್ತಿವೆ.
ಜಟಕಾ ಬಂಡಿಯನ್ನೇ ನಂಬಿರುವವರು ಪರ್ಯಾಯ ಉದ್ಯೋಗವೂ ಇಲ್ಲದೇ ಹೋಟೆಲ್‌ಗಳಲ್ಲಿ ಕೂಲಿ ಮಾಡತೊಡಗಿದ್ದಾರೆ. ದೈಹಿಕ ಶಕ್ತಿ ಇಲ್ಲದ ವೃದ್ಧ ಚಾಲಕರು ವಾಹನಗಳಲ್ಲಿ ನಗರಕ್ಕೆ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಸ್ಮಾರಕಗಳಿಗೆ ಕರೆದೊಯ್ಯುವ ಮಾರ್ಗ ತೋರಿಸುವಂಥ ಕೆಲಸ ಮಾಡುತ್ತಾರೆ. ಇಂಥ ಸಣ್ಣಪುಟ್ಟ ಕೆಲಸ ಮಾಡಿ ಪುಡಿಗಾಸು ಸಂಪಾದಿಸುವ ಹಂತ ತಲುಪಿದ್ದಾರೆ.
ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ: ಇಂತಹ ದುಸ್ಥಿತಿಯಲ್ಲಿ ಹತಾಷರಾದ ಕೆಲವು ಜಟಕಾ ಬಂಡಿ ಚಾಲಕರು ನಗರ ದರ್ಶನದ ಕುರಿತು ಪ್ರವಾಸಿಗರೊಂದಿಗೆ ಮಾಡಿಕೊಂಡ ಮೌಖೀಕ ಒಪ್ಪಂದವನ್ನು ಪ್ರವಾಸದ ಮಧ್ಯದಲ್ಲಿ ಮುರಿದು ತಕರಾರು ತೆಗೆದು ಹೆಚ್ಚಿನ ಹಣ ವಸೂಲಿ ಮಾಡಿದ ಪ್ರಕರಣಗಳೂ ವರದಿಯಾಗಿವೆ. ಇದರಿಂದ ಜಿಲ್ಲೆಗೆ ಬರುವ ಪ್ರವಾಸಿಗರು ಜಟಕಾ ಬಂಡಿ ಸಹವಾಸದಿಂದ ದೂರ ಉಳಿಯುವ ಸ್ಥಿತಿಯೂ ಇದೆ ಎಂಬುದನ್ನು
ಪ್ರಾಮಾಣಿಕ ಜಟಕಾ ಚಾಲಕರು ಒಪ್ಪಿಕೊಳ್ಳುತ್ತಾರೆ.
ಟಾಂಗಾ ನಿಲ್ದಾಣಕ್ಕೆ 37 ಲಕ್ಷ ರೂ. ಯೋಜನೆ: ಇಷ್ಟೆಲ್ಲ ಸಂಕಷ್ಟ ಅನುಭವಿಸುವ ಟಾಂಗಾ ಚಾಲಕರಿಗೆ ನಗರದಲ್ಲಿ ಏಳೆಂಟು ಕಡೆಗಳಲ್ಲಿ ನಿಲ್ದಾಣ ಇದ್ದರೂ ಟಾಂಗಾ ಕುದುರೆ ನಿಲ್ಲಲು ನೆರಳಿಲ್ಲ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಗರದಲ್ಲಿ ಪಾರಂಪರಿಕ ಸಾರಿಗೆ ಟಾಂಗಾ ನಿಲ್ದಾಣ ನಿರ್ಮಾಣ ಯೋಜನೆಗೆ ಅನುಮೋದನೆ ಪಡೆಯಲು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು 8 ತಿಂಗಳಾದರೂ ಪ್ರತಿಕ್ರಿಯೆ ಬಂದಿಲ್ಲ.
ಮಹಾನಗರ ಪಾಲಿಕೆ ಕಳೆದ ಜನೆವರಿ ತಿಂಗಳಲ್ಲೇ ನಗರದ 6 ಪ್ರಮುಖ ಸ್ಥಳಗಳಲ್ಲಿ ಟಾಂಗಾ ನಿಲ್ದಾಣ ನಿರ್ಮಿಸುವ 37.30 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಿದೆ. ಗೋಲ ಗುಮ್ಮಟ-12.24 ಲಕ್ಷ ರೂ. ಗಾಂಧಿಚೌಕ್ 3.35, ಶಿವಾಜಿ ಚೌಕ್-6.12 ಲಕ್ಷ ರೂ., ತಾಜ್ ಬಾವಡಿ-6.12 ಲಕ್ಷ ರೂ., ಇಬ್ರಾಹೀಂ ರೋಜಾ-3.35 ಲಕ್ಷ ರೂ. ಜಾಮೀಯಾ ಮಜೀದ್-6.12 ಲಕ್ಷ ರೂ. ವೆಚ್ಚದಲ್ಲಿ ಟಾಂಗಾ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿ ವರ್ಷವಾಗುತ್ತ ಬಂದರೂ ಅನುಷ್ಠಾನಕ್ಕೆ ಬಂದಿಲ್ಲ.
ಕೋಟಿ ಬೇಡ ಹೊಟ್ಟೆಗೆ ಗಂಜಿ ಕೊಟ್ಟರೂ ಸಾಕು: ರಾಜ್ಯದ ಕೆಲವೇ ಕೆಲವು ನಗರಗಳಲ್ಲಿ ಕಾಣಸಿಗುವ ಪಾರಂಪರಿಕ ಸಾರಿಗೆ ಸೇವೆ ನೀಡುವ ಜಟಕಾ ಬಂಡಿ ಪರಂಪರೆ ಉಳಿಸಬೇಕಿದೆ. ಮೈಸೂರು ಸೇರಿದಂತೆ ಇತರೆ ಪ್ರವಾಸಿ ತಾಣಗಳಲ್ಲಿ ಇರುವಂತೆ ಸುಸ್ಥಿತಿ ಹಾಗೂ ಸುಂದರ ಟಾಂಗಾ ವ್ಯವಸ್ಥೆಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಬೇಕಿದೆ. ಕೋಟಿ ಕೋಟಿ ಹಣದ ಒಡೆಯರಾಗಬೇಕು ಎಂದೇನೂ ಬಯಸದ ಟಾಂಗಾ ಚಾಲಕರು ಕನಿಷ್ಠ ಹೊಟ್ಟೆಗೆ ಗಂಜಿ ಕುಡಿಯಲು ಸೌಲಭ್ಯವಾದರೂ ಸಾಕು ಎಂದು ದೈನೇಸಿ ಪಡುತ್ತಿದ್ದಾರೆ. ಟಾಂಗಾ ನಿರ್ವಹಣೆ ಹಾಗೂ ಕುದುರೆ ಸಾಕಾಣಿಕೆಗೆ ಕನಿಷ್ಠ ಮಟ್ಟದಲ್ಲಿ ವಿಶೇಷ ನೆರವಿನ ಯೋಜನೆ ರೂಪಿಸಿ, ಪಾರಂಪರಿಕ ಸಾರಿಗೆ ಪ್ರೋತ್ಸಾಹಿಸಬೇಕಿದೆ. ಇದರಿಂದ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಟಾಂಗಾ ಪ್ರಯಾಣದ ಮೂಲಕ ನಗರ ಸ್ಮಾರಕ ವೀಕ್ಷಣೆ ಮಾಡುವ ವಿಶಿಷ್ಟ ಅನುಭವ ಪಡೆಯಲು ಸಹಕಾರಿ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.