ಗೈಡ್‌ಗಳು ಬಟ್ಟೆಯಲ್ಲಿ ಶಿಸ್ತು-ಹೊಟ್ಟೆಯಲ್ಲಿ ಸುಸ್ತು
ಲಕ್ಷಾಂತರ ಖರ್ಚು ಮಾಡಿ ಪ್ರವಾಸಿ ಮಾರ್ಗದರ್ಶಿಗಳ ತರಬೇತಿ ನೀಡಿದೆ ಸರ್ಕಾರ•ದೈನೇಸಿ ಬದುಕಿನ ಪ್ರವಾಸಿ ರಾಯಭಾರಿಗಳು
Team Udayavani, Sep 6, 2019, 1:34 PM IST
ವಿಜಯಪುರ: ವಿದೇಶಿ ಪ್ರವಾಸಿಗರಿಗೆ ಇಬ್ರಾಹೀಂ ರೋಜಾ ಸ್ಮಾರಕದಲ್ಲಿ ಇತಿಹಾಸ ಬಣ್ಣಿಸುತ್ತಿರುವ ಪ್ರವಾಸಿ ಮಾರ್ಗದರ್ಶಿ ರಾಜಶೇಖರ ಕಲ್ಯಾಣಮಠ
•ಜಿ.ಎಸ್.ಕಮತರ
ವಿಜಯಪುರ: ಯಾವುದೇ ದೇಶದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಅಲ್ಲಿನ ಪ್ರವಾಸಿ ಪರಿಸರ ಮಾತ್ರವಲ್ಲ ಪ್ರವಾಸಿ ಮಾರ್ಗದರ್ಶಿಗಳ ಪಾತ್ರವೂ ಮುಖ್ಯವಾಗಿದೆ. ಇದೇ ಕಾರಣಕ್ಕೆ ವಿಶ್ವದಲ್ಲಿ ಗೈಡ್ ಎಂದು ಕರೆಸಿಕೊಳ್ಳುವ ಪ್ರವಾಸಿ ಮಾರ್ಗದರ್ಶಿಗಳನ್ನು ದೇಶಗಳ ರಾಯಭಾರಿಗಳು ಎಂದು ಕರೆಯಲಾಗುತ್ತದೆ. ಈ ಮೂಲಕ ಟೂರಿಸ್ಟ್ ಗೈಡ್‌ಗಳಿಗೆ ವಿಶಿಷ್ಟವಾಗಿ ಗರಿಮೆ ನೀಡಿವೆ. ಆದರೆ ಇಂಥ ಪ್ರವಾಸಿ ರಾಯಭಾರಿಗಳ ಜೀವನ ನರಕಸದೃಶ್ಯವಾಗಿದೆ. ಸರ್ಕಾರ ಲಕ್ಷ ಲಕ್ಷ ರೂ. ಖರ್ಚು ಮಾಡಿ ನೂರಾರು ಜನರಿಗೆ ಗೈಡ್‌ಶಿಪ್ ತರಬೇತಿ ನೀಡಿ, ಉದ್ಯೋಗ ಭದ್ರತೆ ಇಲ್ಲದೇ ಬೀದಿಯಲ್ಲಿ ನಿಲ್ಲಿಸಿದೆ. ಪರಿಣಾಮ ಜಿಲ್ಲೆಯಲ್ಲಿ ಗೈಡ್ ತರಬೇತಿ ಪಡೆದ ಬಹುತೇಕರು ಹೊಟ್ಟೆಗೆ ಅನ್ನ ನೀಡದ ಈ ಉದ್ಯೋಗವನ್ನೇ ಬಿಟ್ಟು ಹೋಗಿದ್ದಾರೆ. ಇರುವ ಬೆರಳೆಣಿಕೆ ಗೈಡ್‌ಗಳು ನಿತ್ಯದ ಹೊಟ್ಟೆ ಪಾಡಿಗೆ ದೈನೇಶಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಪರಿಣಾಮಕಾರಿ ಅಭಿವೃದ್ಧಿ ಮಾಡುವ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯಲ್ಲಿ ಸುಮಾರು 50 ಜನರಿಗೆ ತರಬೇತಿ ನೀಡಿದ್ದರೂ ಗೈಡ್ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಕೇವಲ 8 ಜನರು ಮಾತ್ರ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಈ ಕಾರಣಕ್ಕಾಗಿಯೇ ಸರ್ಕಾರ ಗೈಡ್‌ಶಿಪ್ ತರಬೇತಿ ಕೊಡಿಸುತ್ತದೆ. ಪರಿಶಿಷ್ಟ ಜಾತಿ-ಪಂಗಡ, ಅಲ್ಪಸಂಖ್ಯಾತ-ಇತರೆ ಹಿಂದುಳಿದ ಹಾಗೂ ಮಹಿಳೆಯರು ಸೇರಿದಂತೆ 2008ರಲ್ಲಿ 23 ಜನರು ಹಾಗೂ 2014ರಲ್ಲಿ 25 ಜನರಿಗೆ ತರಬೇತಿ ಕೊಡಿಸಿದೆ. ಊಟ-ವಸತಿ ಸೇರಿದಂತೆ ತಲಾ 15 ಸಾವಿರ ರೂ.ದಂತೆ ಸುಮಾರು 7 ಲಕ್ಷ ರೂ. ಖರ್ಚು ಮಾಡಿದೆ. ತರಬೇತಿ ನೀಡಿದ ಮಾರ್ಗದರ್ಶಿಗಳಿಗೆ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ನೀಡಿದ್ದು ಬಿಟ್ಟರೆ ಸರ್ಕಾರ ಅವರಿಗೆ ಉದ್ಯೋಗ ಭದ್ರತೆ ಕಲ್ಪಿಸದೇ ನಡು ರಸ್ತೆಯಲ್ಲಿ ನಿಲ್ಲಿಸಿದೆ.
ಹೀಗಾಗಿಯೇ 2013ರಲ್ಲಿ ಸರ್ಕಾರ ಪರಿಶಿಷ್ಟ ಪಂಗಡದ 12 ಜನರಿಗೆ ಉಚಿತ ಗೈಡ್ ತರಬೇತಿ ನೀಡುತ್ತೇವೆಂದರೂ 7 ಸ್ಥಾನಗಳಿಗೆ ಅರ್ಜಿಗಳೇ ಬರಲಿಲ್ಲ. ನಮ್ಮಿಂದ ತರಬೇತಿ ಪಡೆದವರು ಏನಾದರೂ ಎಂದು ಒಮ್ಮೆಯೂ ಕರೆದು ಮಾತನಾಡಿಸುವ ಕನಿಷ್ಠ ಸೌಜನ್ಯವನ್ನೂ ಪ್ರವಾಸೋದ್ಯಮ ಇಲಾಖೆ ತೋರುವುದಿಲ್ಲ. ಹೀಗಾಗಾಗಿ ಗೈಡ್ ತರಬೇತಿ ಪಡೆದರೂ ಗಂಜಿಗೂ ಗತಿ ಇಲ್ಲದಂತಾಗುತ್ತೇವೆ ಎಂದು ತಿಳಿದವರು ತರಬೇತಿಗೆ ಆರ್ಜಿ ಹಾಕುವುದಿಲ್ಲ ಎನ್ನುತ್ತಾರೆ ತರಬೇತಿ ಪಡೆದರೂ ಗೈಡ್‌ಶಿಪ್ ಮಾಡದವರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ತರಬೇತಿ ಪಡೆದವಲ್ಲಿ ಸ್ನಾತಕ-ಸ್ನಾತಕೋತ್ತರ ಪದವೀಧರರಿಂದ ಪ್ರವಾಸೋದ್ಯಮ ಮಾರ್ಗದರ್ಶಿ ಪಿಜಿ ಡಿಪ್ಲೋಮಾ ಮಾಡಿದ ಶೈಕ್ಷಣಿಕ ಆರ್ಹತೆ ಇರುವ ಮಾರ್ಗದರ್ಶಕರಿದ್ದಾರೆ. ಆದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಹಾಗೂ ಗೈಡ್‌ಗಳ ಬಳಕೆ ಮಾಡಿಕೊಳ್ಳದ ಪ್ರವಾಸಿಗರ ಮನಸ್ಥಿತಿಯಿಂದಾಗಿ ತರಬೇತಿ ಪಡೆದ ಬಹುತೇಕ ಗೈಡ್‌ಗಳು ಈ ಸಹವಾಸ ಬೇಡ ಎಂದು ಬೇರೆ ಉದ್ಯೋಗ ಕಂಡುಕೊಂಡಿದ್ದಾರೆ.
ಗೈಡ್ ಕೆಲಸದ ಹೊರತಾಗಿ ಬೇರೆ ಉದ್ಯೋಗ ಗೊತ್ತಿಲ್ಲದ ಹಾಗೂ ಇದನ್ನೇ ನಂಬಿರುವ ಕೆಲವೇ ಮಾರ್ಗದರ್ಶಿಗಳು ಮಾತ್ರ ಗೋಲಗುಮ್ಮಟ ಆವರಣದ ರಸ್ತೆಯಲ್ಲಿ ನಿಂತಿರುತ್ತಾರೆ. ನೂರು ಕೊಡಿ, ಇನ್ನೂರು ಕೊಡಿ ಎಂದು ಪ್ರವಾಸಿಗರ ದುಂಬಾಲು ಬೀಳುತ್ತಾರೆ. ಆದೂ ಟಂಟಂ, ಆಟೋ, ಟಾಂಗಾಗಳು ಸರತಿಯಲ್ಲಿ ನಿಂತು ತಮ್ಮ ಪಾಳಿಗೆ ಕಾಯುವಂತೆ ಗೈಡ್‌ಗಳು ಸರತಿಯಲ್ಲಿ ನಿಂತು ಪ್ರವಾಸಿಗರ ಮರ್ಜಿಗೆ ಕಾಯಬೇಕಿದೆ.
ಜಿಲ್ಲೆಗೆ ಬರುವ ಪ್ರವಾಸಿಗರಲ್ಲಿ ಮಾರ್ಗದರ್ಶಿಗಳನ್ನು ಪಡೆದು ಐತಿಹಾಸಿಕ ಮಹತ್ವ ಅರಿಯುವ ಆಸಕ್ತಿ ಇರುವುದಿಲ್ಲ. ಅದರಲ್ಲೂ ಬಡ-ಮಧ್ಯಮ ಜನರು ಗೈಡ್ ನೆರವು ಪಡೆಯುವ ವಿಷಯದಲ್ಲಿ ಆಸಕ್ತಿ ತೋರುವುದಿಲ್ಲ ಎನ್ನುವುದಕ್ಕಿಂತ ಗೈಡ್‌ಗಳಿದ್ದಾರೆ ಎಂಬುದೇ ಗೊತ್ತಿಲ್ಲದ ಅನಾಮಿಕ ಸ್ಥಿತಿ ಇದೆ. ಇನ್ನು ಶೈಕ್ಷಣಿಕ ಪ್ರವಾಸಕ್ಕೆ ಬರುವ ಶಿಕ್ಷಕರು ಮಕ್ಕಳನ್ನು ಸ್ಮಾರಕಗಳ ಮುಂದೆ ಮಕ್ಕಳನ್ನು ನಿಲ್ಲಿಸಿ ತಮ್ಮ ಪಠ್ಯದಲ್ಲಿ ಇರುವಂತೆ ಹೇಳಿಕೊಂಡು ಹೋಗುತ್ತಾರೆ. ಅಧ್ಯಯನ ಹಾಗೂ ಪಾರಂಪರಿಕ ಸ್ಮಾರಕಗಳ ಕುರಿತಾದ ಕುತೂಹಲದ ವೀಕ್ಷಣೆಗೆ ಬರುವ ದೇಶ-ವಿದೇಶಿ ಸುಶಿಕ್ಷಿತ ಪ್ರವಾಸಿಗರು ಮೊಬೈಲ್ನಲ್ಲಿ ಸರ್ಚ್ ಮಾಡಿ ಬೆರಳಲ್ಲೇ ಸ್ಮಾರಕ ವೀಕ್ಷಿಸುತ್ತಾರೆ. ಇಲ್ಲವೇ ಪ್ರವಾಸಿ ಕೃತಿ-ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಬರುವ ಕಾರಣ ವಿಜಯಪುರ ಜಿಲ್ಲೆಯಲ್ಲಿ ಗೈಡ್‌ಗಳ ವೃತ್ತಿ ಜೀವನ ಸಂಕಷ್ಟ ಎದುರಿಸುತ್ತಿದೆ.
ಕರ್ನಾಟಕದ ಪ್ರವಾಸಿ ತಾಣಗಳಿಗೆ ದೇಶ-ವಿದೇಶಿಗರನ್ನು ಸೆಳೆಯುವ ಹಾಗೂ ಪ್ರವಾಸೋದ್ಯಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಸಂಪನ್ಮೂಲ ಸೃಷ್ಟಿಸುವಲ್ಲಿ ಗೈಡ್‌ಗಳ ಪಾತ್ರ ಗಣನೀಯವಾಗಿದೆ. ಇದನ್ನು ಒಪ್ಪುವ ಪ್ರವಾಸೋದ್ಯಮ ಇಲಾಖೆ ಹಾಗೂ ಸರ್ಕಾರ ತಮ್ಮ ಸದಾಶಯ ಈಡೇರಿಸಿದ ಪ್ರವಾಸಿ ಮಾರ್ಗದರ್ಶಕರ ವಿಷಯದಲ್ಲಿ ತೋರದೇ ನಿರ್ಲಕ್ಷ್ಯ ತಾಳಿದೆ. ಉದ್ಯೋಗ ಭದ್ರತೆ ಇಲ್ಲದ ಗೈಡ್‌ಗಳ ಕುಟುಂಬಗಳು ಕಣ್ಣೀರಲ್ಲಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿವೆ. ಆರೆ ಹೊಟ್ಟೆಗಿಂತ ಹಸಿದ ಹೊಟ್ಟೆಯಲ್ಲೇ ಬಣ್ಣದ ಬಟ್ಟೆ ಮುಚ್ಚಿಕೊಂಡು ನಗು ಮೊಗದಲ್ಲಿ ಜೀವಿಸುವ ಪ್ರವಾಸಿ ಗೈಡ್‌ಗಳ ಬದುಕು ದಯನೀಯ ಸ್ಥಿತಿಯಲ್ಲಿದೆ ಎಂಬುದು ಕಣ್ಣಿಗೆ ರಾಚುತ್ತದೆ.
ವಿಜಯಪುರ ಜಿಲ್ಲೆಯ ಮಟ್ಟಿಗೆ ಆಕ್ಟೋಬರ್‌ನಿಂದ ಜನೇವರಿವರೆಗೆ ಪ್ರವಾಸಿಗರು ಭೇಡಿ ನೀಡುವ ಕಾಲಮಾನ ಎಂದು ಗುರುತಿಸಲಾಗಿದೆ. ಈ 4 ತಿಂಗಳಲ್ಲಿ ದುಡಿತವೇ ಈ ಕುಟುಂಬಗಳ ವರ್ಷ ಅನ್ನ ಎಂಬುದು ನಿಜಕ್ಕೂ ಆಘಾತ ಮೂಡಿಸುತ್ತಿದೆ.
ಇಷ್ಟರ ಹೊರತಾಗಿಯೂ ಪ್ರವಾಸಿಗರನ್ನು ಆಕರ್ಷಿಸಲು ಶುಚಿತ್ವ, ಇಸ್ತಿ ಮಾಡಿದ ಬಟ್ಟೆ, ಗಡ್ಡ ಇಲ್ಲದ ಸೇವ್ ಮಾಡಿದ ಮುಖ ಹಾಗೂ ಶಿಸ್ತಿನಿಂದ ಬಾಚಿದ ತಲೆಗೂದಲು, ಸುವಾಸನೆ ಬೀರುವ ಸೇಂಟ್ ಲೇಪಿಸಿಕೊಂಡು ಗೋಲಗುಮ್ಮಟದ ಮುಂದೆ ಬೆಳಗ್ಗೆ 6-7ಕ್ಕೆಲ್ಲ ಹಾಜರಾಗಬೇಕು. ತಡವಾದರೆ ಇರುವ 8 ಜನರಲ್ಲೇ ಪ್ರವಾಸಿಗರನ್ನು ಪಡೆಯಲು ಪೈಪೋಟಿ ಇರುತ್ತದೆ. ಇಂಥ ಸ್ಥಿತಿಯಲ್ಲಿ ಬಹುತೇಕ ಒಂದು-ಎರಡು ವಾರಗಳ ವರೆಗೆ ಪ್ರವಾಸಿಗರಿಗೆ ಗೈಡ್‌ಶಿಪ್ ಮಾಡದೇ ಬರಿಗೈಲಿ ಮನೆಗೆ ಹೋಗಬೇಕು.
ಒಂದೊಮ್ಮೆ ಗೈಡ್‌ಗಳ ಅದೃಷ್ಟಕ್ಕೆ ಪ್ರವಾಸಿಗರು ಸಿಕ್ಕರು ಎಂದಾದರೆ 100-200 ರೂ.ಗೆ ಎಷ್ಟು ಪ್ರವಾಸಿಗರು ಗೈಡ್‌ಗಳನ್ನು ಬಯಸುತ್ತಾರೆ ಅಷ್ಟು ಬಾರಿ 7 ಮಹಡಿಯ 205 ಆಡಿಗೂ ಎತ್ತರದ ಗುಮ್ಮಟವನ್ನು ಪ್ರವಾಸಿಗರೊಂದಿಗೆ ಪ್ರತಿ ಬಾರಿಯೂ ಗೈಡ್‌ಗಳೂ ಹತ್ತಿ ಇಳಿಯಬೇಕು. ಒಂದು ಬಾರಿ ಹತ್ತಿ-ಇಳಿದ ಪ್ರವಾಸಿ ಸುಸ್ತಾಗುವ ಸ್ಥಿತಿಯಲ್ಲಿ ಇರುವ ಇಲ್ಲಿನ ಸ್ಮಾರಕಗಳನ್ನು ನಿತ್ಯವೂ ಹಲವು ಬಾರಿ ಹತ್ತಿ-ಇಳಿಯುವ ಗೈಡ್‌ಗಳ ಸ್ಥಿತಿ ಹೇಗಿರಬೇಡ. ಹೀಗಾಗಿಯೇ ಹಲವು ಗೈಡ್‌ಗಳಿಗೆ ಮೊಣಕಾಲು ನೋವು ಕಾಣಿಸಿಕೊಂಡಿದ್ದರೂ ಹಸಿವು ಹಾಗೂ ತಮ್ಮನ್ನು ನಂಬಿರುವ ಕುಟುಂಬ ಸದಸ್ಯರ ಮುಖಗಳು ಕಣ್ಮುಂದೆ ಬಂದು ಅನಿವಾರ್ಯವಾಗಿ ಮತ್ತೆ ಗುಮ್ಮಟ ಏರುತ್ತಿದ್ದಾರೆ. ಉದ್ಯೋಗದ ಭದ್ರತೆಯೇ ಇಲ್ಲದ ನಮಗೆ ಆರೋಗ್ಯ ವಿಮೆ ಸೇವೆ ಪಡೆಯುವ ಸೌಭಾಗ್ಯ ಎಲ್ಲಿಂದ ಬರಬೇಕು ಎಂದು ಕಣ್ಣೀರು ಹಾಕುತ್ತಾರೆ ಗೈಡ್‌ಗಳು.
ದಶಕದ ಹಿಂದೆ ಜನಾದರ್ನರೆಡ್ಡಿ ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿರುವ ಅಧಿಕೃತ ಹಾಲಿ ಪ್ರವಾಸಿ ಮಾರ್ಗದರ್ಶಿ ಕೆಲಸ ಮಾಡುವ ಗೈಡ್‌ಗಳಿಗೆ ಮಾಸಿಕ 5 ಸಾವಿರ ರೂ. ಗೌರವ ಧನ ನೀಡುವ ಭರವಸೆ ನೀಡಿದ್ದರು. ಆದರೆ ಅವರು ಅಧಿಕಾರ ಕಳೆದುಕೊಳ್ಳುತ್ತಲೇ ಈ ಚಿಂತನೆ ಅಲ್ಲಿಗೆ ಕಮರಿ ಹೋಗಿದೆ.
ಪ್ರವಾಸಿ ಮಾರ್ಗದರ್ಶಿಗಳಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಪ್ರವಾಸೋದ್ಯಮ ಸಮಿತಿಯಿಂದ ಮಾಸಿಕ ಗೌರವ ಧನ ನೀಡಿ ಎಂಬ ಬೇಡಿಕೆ ಈಡೇರಿಲ್ಲ. ಆದರೆ ಕಳೆದ ನಾಲ್ಕಾರು ವರ್ಷಗಳಿಂದ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡುತ್ತಿದೆ. ಇದನ್ನೇ ಗೈಡ್‌ಗಳು ಲಕ್ಷ ಲಕ್ಷ ರೂ. ಮೌಲ್ಯದ ಬೋನಸ್-ಗಿಫ್ಟ್ ಪಡೆದಷ್ಟು ಸಂಭ್ರಮದಿಂದ ಹೇಳಿಕೊಳ್ಳುವ ಪರಿ ನಿಜಕ್ಕೂ ಅಯ್ಯೋ ಎನಿಸುತ್ತಿದೆ.
ಪ್ರವಾಸಿಗರಿಂದ ಸೌಲಭ್ಯದ ಹೆಸರಿನಲ್ಲಿ ಮನಬಂದಂತೆ ಬಾಡಿಗೆ ಹಾಗೂ ಊಟ-ಉಪಾಹಾರ ಹೆಸರಿನಲ್ಲಿ ಹಣ ಪಡೆಯುವ ಹೊಟೇಲ್ ಉದ್ಯಮಿಗಳಿಗೆ ಸರ್ಕಾರ ಕೋಟಿ ಕೋಟಿ ರೂ. ರಿಯಾಯ್ತಿ ನೀಡುತ್ತದೆ. ಜಿಲ್ಲೆಯಲ್ಲಿ ಸುಮಾರು 85 ಹೊಟೇಲ್ಗಳಿದ್ದು, 35 ಹೊಟೇಲ್ ನಿರ್ಮಾಣಕ್ಕೆ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಮೂಲಕವೇ ಶೇ. 40 ರಿಯಾಯ್ತಿ ಹಣ ನೀಡಿದೆ.
ಆದರೆ ತನ್ನ ಪ್ರವಾಸೋದ್ಯಮ ಹಾಗೂ ದೇಶದ ಇತಿಹಾಸ ಪಾರಂಪರಿಕ ಸಾಂಸ್ಕೃತಿಕ ಚಿತ್ರಣ ನೀಡುವ ಗೈಡ್‌ಗಳನ್ನು ಮಾತ್ರ ಮರೆತು ಕುಳಿತಿದೆ. ಜಿಲ್ಲೆಗೆ ಸಚಿವರು, ಸರ್ಕಾರಿ ಆಧಿಕಾರಿಗಳು, ವಿದೇಶಿ ರಾಯಭಾರಿಗಳು ಭೇಟಿ ನೀಡಿದಾಗ ಅವರಿಗೆ ಗೈಡ್ ಮಾಡಲು ಇದ್ದಕ್ಕಿದ್ದಂತೆ ಪ್ರವಾಸಿ ಮಾರ್ಗದರ್ಶಿಗಳನ್ನು ನೆನಪು ಮಾಡಿಕೊಳ್ಳುವ ಪ್ರವಾಸೋದ್ಯಮ ಇಲಾಖೆ, ಅವರ ಬದುಕು ಹೇಗಿದೆ ಎಂದು ಕನಿಷ್ಠ ಕಾಳಜಿ ತೋರಿಸುವುದಿಲ್ಲ. ಸರ್ಕಾರ-ಜಿಲ್ಲಾಡಳಿತಕ್ಕೆ ಗೈಡ್‌ಗಳಿಗೆ ಮಾಸಿಕ ಭತ್ಯೆ ನೀಡಲು ಸಾಧ್ಯವಿಲ್ಲ ಎಂದಾದರೆ ಪ್ರವಾಸೋದ್ಯಮ ಇಲಾಖೆಯಿಂದ ಸೌಲಭ್ಯ ಪಡೆಯುವ ಪ್ರತಿ ಹೊಟೇಲ್ನಲ್ಲಿ ಗೈಡ್‌ಗಳ ನೇಮಕ ಕಡ್ಡಾಯ ಮಾಡಿದಲ್ಲಿ ಹಲವು ರೀತಿಯಿಂದ ಅನುಕೂಲವಾಗಲಿದೆ.
ಹೊಟೇಲ್ ಉದ್ಯಮಿಗಳು ಕನಿಷ್ಠ 8-10 ಸಾವಿರ ರೂ. ವೇತನ ನೀಡಿದರೂ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರನ್ನು ಹೊಟೇಲ್ ಉದ್ಯಮ ಸೆಳೆಯುವಲ್ಲಿ, ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯಲ್ಲೂ ಗೈಡ್‌ಗಳ ಸೇವೆ ಸಹಕಾರಿ ಆಗಲಿದೆ. ಜಿಲ್ಲೆಯಲ್ಲಿ ವಾಸ್ತವಿಕವಾಗಿ ಗೈಡ್ ಕೆಲಸದಲ್ಲಿ ನಿರತವಾಗಿರುವ 8 ಜನರ ಹೊರತಾಗಿ ತರಬೇತಿ ಪಡೆದಿರುವ ಇನ್ನು 30-40 ಜನರು ಮಾತ್ರ ಇದ್ದಾರೆ. ಆಸಕ್ತ ಗೈಡ್‌ಗಳಿಗೆ ಹೊಟೇಲ್ಗಳಲ್ಲಿ ಉದ್ಯೋಗ ಕಲ್ಪಿಸಿದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ರಾಜ್ಯಕ್ಕೆ ಮಾದರಿ ಎನಿಸಲಿದೆ.
ಸರ್ಕಾರದ ಕಾನೂನು, ನೀತಿ-ನಿಯಮ ಎಂಬೆಲ್ಲ ಗೆರೆಗಳನ್ನು ಮೀರಿ ಸರ್ಕಾರ-ಜಿಲ್ಲಾಡಳಿತ ಮಾನವೀಯತೆ ಎಂಬ ಕಣ್ಣಿನಿಂದ ನೋಡಬೇಕಿದೆ. ಸರ್ಕಾರಕ್ಕೆ ತನ್ನಿಂದ ಗೈಡ್‌ಗಳಿಗೆ ನೆರವಾಗಲು ಅಸಾಧ್ಯ ಎನಿಸಿದರೆ ಪ್ರವಾಸೋದ್ಯಮ ಇಲಾಖೆ ಅನುದಾನ ಪಡೆಯುವ ಎಲ್ಲ ಹೊಟೇಲ್ಗಳಲ್ಲಿ ಗೈಡ್ ನೇಮಕ ಕಡ್ಡಾಯ ಮಾಡಲಿ. ಪ್ರವಾಸೋದ್ಯಮ ಇಲಾಖೆಯ ತರಬೇತಿ ಹಾಗೂ ಗುರುತಿನ ಚೀಟಿ ಹೊಂದಿರುವ ಗೈಡ್‌ಗಳನ್ನು ನೇಮಿಸುವುದು ಕಡ್ಡಾಯ ಮಾಡುವ ಕನಿಷ್ಠ ಬೇಡಿಕೆಯನ್ನಾದರೂ ಈಡೇರಸಲಿ ಎಂದು ಆಸೆ ಕಂಗಳಿಂದ ಕಾಯುತ್ತಿದ್ದಾರೆ ದೇಶದ ಹಸಿದ ಹೊಟ್ಟೆಯ ಪ್ರವಾಸಿ ರಾಯಭಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.