ಬಸವನಾಡಲ್ಲಿ ಯಾರಿಗೆ ಅಧಿಕಾರ ಭಾಗ್ಯ?
ಹೈಕಮಾಂಡ್ ಮಟ್ಟದಲ್ಲಿ ಬಸನಗೌಡ ಯತ್ನಾಳ ಉತ್ತಮ ಬಾಂಧವ್ಯಮುದ್ದೇಬಿಹಾಳ ಶಾಸಕ ನಡಹಳ್ಳಿ ಹ್ಯಾಟ್ರಿಕ್ ವೀರ
Team Udayavani, Jul 27, 2019, 10:44 AM IST
ಜಿ.ಎಸ್. ಕಮತರ
ವಿಜಯಪುರ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾದಲ್ಲಿ ಅಧಿಕಾರದ ಸುನಾಮಿ ಎಂಬಂತೆ ಆಡಳಿತ ಪಕ್ಷದ ಎಲ್ಲಾ ಐವರು ಶಾಸಕರಿಗೆ ಸಚಿವ ಸ್ಥಾನ ಹಾಗೂ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದ ಮೂಲಕ ಬಸವನಾಡಿಗೆ ಅಧಿಕಾರ ಸಿಕ್ಕಿತ್ತು. ಇದೀಗ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದ ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನದ ಅವಕಾಶ ಸಿಗಲಿದೆ ಎಂಬ ಕುರಿತು ಭಾರಿ ಚರ್ಚೆ ನಡೆದಿದೆ.
ವಿಜಯಪುರ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 3 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ ಕೂಡ ಮೂರು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದು, 2 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಹಿಂದಿನ ಮೈತ್ರಿ ಸರ್ಕಾರದಲ್ಲಿ ಮಿತ್ರ ಪಕ್ಷಗಳ ಐವರೂ ಶಾಸಕರಿಗೆ ಅಧಿಕಾರ ಸಿಕ್ಕಿತ್ತು. ಕುಮಾರಸ್ವಾಮಿ ನೇತೃತ್ವದ ಮಿತ್ರ ಪಕ್ಷಗಳ ಸರ್ಕಾರ ಪತನದ ಜೊತೆಗೆ ಜಿಲ್ಲೆಗೆ ಸಿಕ್ಕಿದ್ದ ಅಧಿಕಾರ ಭಾಗ್ಯವೂ ಕೈ ಚಲ್ಲಿದೆ.
ಕಾಂಗ್ರೆಸ್‌ನ ಶಿವಾನಂದ ಪಾಟೀಲ ಮೊದಲ ಹಂತದಲ್ಲೇ ಆರೋಗ್ಯ ಸಚಿವರಾದರೆ ಎರಡನೇ ಕಂತಿನಲ್ಲಿ ಎಂ.ಬಿ. ಪಾಟೀಲ ಗೃಹ ಖಾತೆಯಂತ ಪ್ರಮುಖ ಸಚಿವ ಸ್ಥಾನ ಪಡೆದಿದ್ದರು. ತೋಟಗಾರಿಕೆ ಸಚಿವರಾಗಿದ್ದ ಜೆಡಿಎಸ್ ಎಂ.ಸಿ. ಮನಗೂಳಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಪ.ಜಾ. ಮೀಸಲಾಗಿರುವ ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರಿಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ (ಶಿಕ್ಷಣ ಇಲಾಖೆ) ಖಾತೆ ದೊರಕಿತ್ತು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ಬೆನ್ನಲ್ಲೇ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದು ಜಿಲ್ಲೆಯ ಯಾವ ಶಾಸಕರಿಗೆ ಸಚಿವ ಸ್ಥಾನ ಭಾಗ್ಯ ದಕ್ಕಲಿದೆ ಎಂಬ ಚರ್ಚೆ ನಡೆದಿದೆ. ಎರಡು ಬಾರಿ ವಿಧಾನಸಭೆ, ಒಂದು ಬಾರಿ ಮೇಲ್ಮನೆ ಸದಸ್ಯರಾಗಿ, ಎರಡು ಬಾರಿ ಸಂಸದರಾಗಿ, ವಾಜಪೇಯಿ ಸಂಪುಟದಲ್ಲಿ ರೈಲ್ವೇ ಹಾಗೂ ಜವಳಿ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿರುವ ಬಸನಗೌಡ ಪಾಟೀಲ ಯತ್ನಾಳ ಹೆಸರು ಮುಂಚೂಣಿಯಲ್ಲಿದೆ. ಪಕ್ಷದ ಮೂಲಗಳ ಪ್ರಕಾರ ಕೇಂದ್ರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವ ಕಾರಣ ಸಹಜವಾಗಿ ಹೈಕಮಾಂಡ್ ಮಟ್ಟದಲ್ಲಿ ಯತ್ನಾಳ ಬಗ್ಗೆ ಒಲವಿದೆ. ಪಕ್ಷದ ಅಧ್ಯಕ್ಷ ಅಮಿತ್ ಶಾ, ಮುಖಂಡರಾದ ನಿತಿನ ಗಡ್ಕರಿ, ಅರುಣ ಜೇಟ್ಲಿ, ಪ್ರಕಾಶ ಜಾವಡೇಕರ, ಪಿಯೂಶ್ ಗೋಯಲ್ ಸೇರಿದಂತೆ ಹಲವು ನಾಯಕರ ಮಟ್ಟದಲ್ಲಿ ಯತ್ನಾಳ ಬಗ್ಗೆ ಒಳ್ಳೆ ಒಲವಿದೆ.
ಹಿಂದೆಲ್ಲ ವೈ ಮನಸ್ಸು ಹೊಂದಿದ್ದ ಯಡಿಯೂರಪ್ಪ ಅವರೊಂದಿಗೂ ಯತ್ನಾಳ ಇದೀಗ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ರಚನೆ ಘೋಷಣೆಯೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ, ಚುನಾವಣೆ ಪ್ರಚಾರ ನಡೆಸಿರುವುದು ಅವರಿಗೆ ಅಧಿಕಾರ ಕೊಡಿಸುವಲ್ಲಿ ನೆರವಾಗಲಿದೆ ಎಂಬ ನಂಬಿಕೆ ಬೆಂಬಲಿಗರಲ್ಲಿದೆ.
ಆದರೆ ಇದೇ ವೇಳೆ ಯತ್ನಾಳ ಅವರು ಪಕ್ಷದಲ್ಲಿ ದೊಡ್ಡ ಮಟ್ಟದ ವಿರೋಧಿ ಪಾಳೆಯನ್ನೂ ಸೃಷ್ಟಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರನ್ನು ವಾಚಾಮಗೋಚರ ಟೀಕಿಸಿದ ಫಲವಾಗಿ 2012ರಲ್ಲಿ ಪಕ್ಷದಿಂದ ಉಚ್ಛಾಟಿತರಾಗಿ, 2013ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸೇರಿ ವಿಜಯಪುರ ನಗರ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ಬಳಿಕ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಮತ್ತೆ ಬಿಜೆಪಿಗೆ ಬಂದರೂ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವಿಧಾನ ಪರಿಷತ್ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಅಂದು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕೇಂದ್ರ ಸಚಿವರಾಗಿದ್ದ ರಮೇಶ ಜಿಗಜಿಣಗಿ ವಿರುದ್ದ ಮಾತನಾಡಿ ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟಿದ್ದರು. 2018 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತ್ತೆ ಬಿಜೆಪಿ ಸೇರಿ, ಮೇಲ್ಮನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಗರ ಕ್ಷೇತ್ರ ಬಿಜೆಪಿ ಶಾಸಕರಾಗಿದ್ದಾರೆ.
ಈ ಹಂತದಲ್ಲೂ ಕೂಡ ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವರಾಗಿದ್ದ ರಮೇಶ ಜಿಗಜಿಣಗಿ ಅವರ ಪರ ಪ್ರಚಾರ ಮಾಡಲಾರೆ ಎಂದು ಮುನಿಸಿಕೊಂಡು ವಿಜಯಪುರ ಕ್ಷೇತ್ರದ ಹೊರತಾದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸಿದ್ದರು. ಹೀಗಾಗಿ ಕೇಂದ್ರದಲ್ಲಿ ಇದೀಗ ಪ್ರಧಾನಿ ಮೋದಿ ಬಳಗದಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ತಮ್ಮನ್ನು ಸೋಲಿಸಲು ಯತ್ನಿಸಿದ ಯತ್ನಾಳ ಸಚಿವ ಸ್ಥಾನ ನೀಡದಂತೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ದೂರು ನೀಡುವ ಸಾಧ್ಯತೆ ಇಲ್ಲ.
ಈ ಮಧ್ಯೆ ಯತ್ನಾಳ ಅವರನ್ನು ಸೋಲಿಸುವ ಮೂಲಕ ದೇವರಹಿಪ್ಪರಗಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದ ಎ.ಎಸ್. ಪಾಟೀಲ ನಡಹಳ್ಳಿ ಇದೀಗ ಮುದ್ದೇಬಿಹಾಳ ಬಿಜೆಪಿ ಶಾಸಕ. ದೇವರಹಿಪ್ಪರಗಿ ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಎ.ಎಸ್.ಪಾಟೀಲ ನಡಹಳ್ಳಿ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿ ಮುದ್ದೇಬಿಹಾಳ ಕ್ಷೇತ್ರದಿಂದ ಆಯ್ಕೆಯಾಗಿ ಹ್ಯಾಟ್ರಿಕ್ ವೀರ ಎಂಬ ಹಿರಿಮೆಯೊಂದಿಗೆ ವಿಧಾನಸೌಧದ ಮೆಟ್ಟಿಲೇರಿದ್ದಾರೆ. ಮೂರು ಬಾರಿ ಶಾಸಕನಾಗಿರುವ ಹಿರಿತನ ಇದ್ದರೂ ಪಕ್ಷದಲ್ಲಿ ಯಡಿಯೂರಪ್ಪ ಹೊರತಾಗಿ ಇತರೆ ನಾಯಕರ ಬೆಂಬಲ ಇಲ್ಲ. ಆದರೆ ಯತ್ನಾಳ ವಿರೋಧಿ ಬಣ ನಡಹಳ್ಳಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ತೆರೆಮರೆಯಲ್ಲಿ ಮಾತ್ರವಲ್ಲ ಅಗತ್ಯ ಬಿದ್ದರೆ ಬಹಿರಂಗವಾಗಿಯೇ ಧ್ವನಿ ಎತ್ತುವ ಸಾಧ್ಯತೆ ಇಲ್ಲದಿಲ್ಲ.
ಇನ್ನು ಮೊದಲ ಬಾರಿಗೆ ಶಾಸಕರಾಗಿರುವ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಸಾಧ್ಯವಿಲ್ಲ. ಆದರೆ ರಾಜಕೀಯ ಮೇಲಾಟದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ದಕ್ಕಿಸಿಕೊಂಡರೆ ಆಶ್ಚರ್ಯವಿಲ್ಲ.
ಕೇಂದ್ರ ಮಟ್ಟದಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಯತ್ನಾಳ, ಯತ್ನಾಳ ವಿರೋಧಿ ಪಾಳೆಯದ ಬೆಂಬಲ ಹಾಗೂ ರಾಜ್ಯದ ಮಟ್ಟದ ಕೆಲವು ನಾಯಕರ ಬೆಂಬಲದೊಂದಿಗೆ ನಡಹಳ್ಳಿ ಇಬ್ಬರೂ ಸಚಿವರಾದರೂ ಅಚ್ಚರಿ ಪಡಬೇಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.