ವರ್ಗಾವಣೆಯಿಂದ ಪಾರಾಗುವರೇ ಹೆಚ್ಚುವರಿ ಶಿಕ್ಷಕರು?
ಬಿಎಸ್‌ವೈ ಸೂಚನೆಯಿಂದ ಇಕ್ಕಟ್ಟಿನ ಸ್ಥಿತಿ•414 ಶಿಕ್ಷಕರು ಇದ್ದ ಶಾಲೆಯಲ್ಲೇ ವೃತ್ತಿ ಮುಂದುವರಿಕೆ
Team Udayavani, Jul 27, 2019, 11:00 AM IST
ಯಾದಗಿರಿ: ಸರ್ಕಾರದ ಮುಖ್ಯ ಕಾರ್ಯದರ್ಶಿ ನಿಯೋಜಿತ ಸಿಎಂ ನಿರ್ದೇಶನದಂತೆ ಹೊರಡಿಸಿರುವ ಸೂಚನೆ ಪ್ರತಿ.
ಯಾದಗಿರಿ: ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ರಾಜ್ಯದ 414 ಹೆಚ್ಚುವರಿ ಪ್ರೌಢಶಾಲೆ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದು, ಜು.26ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ಲಾ ಇಲಾಖೆ ಅಪರ, ಪ್ರಧಾನ ಕಾರ್ಯದರ್ಶಿಗೆ ನೀಡಿರುವ ಸೂಚನೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೂ ಅನ್ವಯವಾಗಲಿದೆಯೇ?
ಶಾಲಾ ಮಕ್ಕಳ ಆನ್‌ಲೈನ್ ದಾಖಲಾತಿ ಪ್ರಕಾರ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ಉಳಿಸಿಕೊಂಡು ಉಳಿದ ಶಿಕ್ಷಕರನ್ನು ಹೆಚ್ಚುವರಿಯೆಂದು ಪರಿಗಣಿಸಿ ಅವರನ್ನು ಜಿಲ್ಲಾ ಹಂತ ಹಾಗೂ ಅಂತರ್ ಜಿಲ್ಲಾ ಮಟ್ಟದಲ್ಲಿಯೂ ವರ್ಗಾವಣೆ ಮಾಡಲಾಗಿದೆ. ರಾಜ್ಯದಲ್ಲಿ ಮೊದಲೇ ಶಿಕ್ಷಕರ ಕೊರತೆ ಇದ್ದು, ಇದರ ಮಧ್ಯೆ ವರ್ಗವಾಗಿರುವ ಕಲಾ ಶಿಕ್ಷಕರೇ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ವಿಷಯವನ್ನು ಬೋಧನೆ ಮಾಡುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿತ್ತು ಎಂದು ಸ್ವತಃ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳೇ ಹೇಳುವ ಮಾತು.
ಪ್ರಮುಖವಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಕಲಬುರಗಿ ವಿಭಾಗದಲ್ಲಿ ಯಾದಗಿರಿ, ಕಲಬುರಗಿ, ರಾಯಚೂರು, ಬೀದರ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಒಟ್ಟು 99 ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಯಾದಗಿರಿ ಜಿಲ್ಲೆಯವರೇ ಅತಿ ಹೆಚ್ಚು ಅಂದರೆ 43 ಜನರಿದ್ದಾರೆ.
ವ್ಯತಿರಿಕ್ತ ಪರಿಣಾಮ: ಜಿಲ್ಲೆಯಿಂದ ಶಿಕ್ಷಕರು ಹುದ್ದೆಯ ಸಮೇತ ವರ್ಗವಾಗುತ್ತಿದ್ದಾರೆ. ಬರೀ ಶಿಕ್ಷಕರ ವರ್ಗವಾಗಿದ್ದರೇ ಆ ಸ್ಥಳಕ್ಕೆ ಯಾರಾದರೂ ಬರಬಹುದು. ಸುಮಾರು 18ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ತಮ್ಮ ಕುಟುಂಬ, ಮಕ್ಕಳ ಅಭ್ಯಾಸ ಸೇರಿದಂತೆ ಇಲ್ಲಿ ಹೊಂದಿಕೊಂಡಿರುತ್ತಾರೆ. ವರ್ಗದಿಂದ ತೊಂದರೆಯಾಗಲಿದೆ ಎನ್ನುತ್ತಾರೆ. ಅಲ್ಲದೇ ಪ್ರಮುಖವಾಗಿ ಕನ್ನಡ ಕಲಾ (ಸಮಾಜ ವಿಜ್ಞಾನ), ಉರ್ದು ಕಲಾ ( ಸಮಾಜ ವಿಜ್ಞಾನ) ಶಿಕ್ಷಕರು ವರ್ಗವಾಗಿದ್ದು, ವಿಷಯ ಶಿಕ್ಷಕರು ಇರದಿದ್ದರೂ ನಾವೇ ಪಾಠ ಬೋಧನೆ ಮಾಡುತ್ತಿದ್ದೆವು. ಈಗ ಏಕಾಏಕಿ ವರ್ಗದಿಂದ ಮಕ್ಕಳ ಅಭ್ಯಾಸದ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಶಿಕ್ಷಕರು.
ಹಿಂದುಳಿದ ಯಾದಗಿರಿ ಜಿಲ್ಲೆಯ ಎಸ್‌ಎಸ್‌ಎಲ್ಸಿ ಫಲಿತಾಂಶ ಪ್ರತಿವರ್ಷವೂ ಕೊನೆಯ ಸ್ಥಾನಕ್ಕೆ ಉಳಿದುಕೊಳ್ಳುತ್ತಿದ್ದು, 2017-18ರಲ್ಲಿ ಶೇ.37.05 ಲಭಿಸಿ 34ನೇ ಸ್ಥಾನ ಹಾಗೂ 2018-19ರಲ್ಲಿ ಶೇ.53.95ರಷ್ಟು ಫಲಿತಾಂಶ ಲಭಿಸಿ 34ನೇ ಸ್ಥಾನದಲ್ಲಿದೆ.
ಮುಂದಿನ ಸ್ಥಿತಿ ಏನು?: ಸದ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಎಲ್ಲ ಇಲಾಖೆಗಳ ಸರ್ಕಾರದ ಕಾರ್ಯದರ್ಶಿಗಳಿಗೆ ನಿಯೋಜಿತ ಮುಖ್ಯಮಂತ್ರಿಗಳು ಜುಲೈ 2019ರಲ್ಲಿ ವರ್ಗಾವಣೆ ಸಂಬಂಧಿಸಿದ ಪ್ರಸ್ತಾವಗಳ ಮೇಲೆ ಅನುಮೋದನೆಗೊಂಡು, ಜಾರಿಯಾಗದೇ ಇರುವ ಆದೇಶಗಳನ್ನು ಮುಂದಿನ ಆದೇಶದವರೆಗೆ ಜಾರಿ ಮಾಡದಂತೆ ಹಾಗೂ ಈಗಾಗಲೇ ಹೊರಡಿಸಿರುವ, ಆದರೆ ಚಾಲನೆಗೊಳ್ಳದಿರುವ ವರ್ಗಾವಣೆ ಸಂಬಂಧಿತ ಪ್ರಸ್ತಾವಗಳ ಮೇಲಿನ ಆದೇಶಗಳನ್ನು ಮುಂದಿನ ಆದೇಶದವರೆಗೆ ಚಾಲನೆಗೊಳಿಸದಂತೆ ಸರ್ಕಾರದ ಎಲ್ಲ ಇಲಾಖೆಗಳ ಅಪರ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲು ಸೂಚಿಸಿದ್ದರಿಂದ ಅವರು ನಿರ್ದೇಶನ ಪಾಲಿಸಲು ತಿಳಿಸಿದ್ದಾರೆ.
ಈ ಭಾಗದಲ್ಲಿ ಶೈಕ್ಷಣಿಕ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೂ ನಿಯೋಜಿತ ಮುಖ್ಯಮಂತ್ರಿಗಳ ನಿರ್ದೇಶನ ಅನ್ವಯವಾದರೇ ರಾಜ್ಯದಲ್ಲಿ ವರ್ಗವಾಗಿರುವ 414 ಶಿಕ್ಷಕರೂ ಪುನಃ ಅಲ್ಲಿಯೇ ಮುಂದುವರಿಯುವ ಅವಕಾಶವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.