ನೆರೆ ಪರಿಹಾರ ಕಾರ್ಯ ಚುರುಕು
ರೈತರು-ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು: ಕೂರ್ಮಾರಾವ್
Team Udayavani, Aug 16, 2019, 11:16 AM IST
ಯಾದಗಿರಿ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಪೊಲೀಸ್ ಗೌರವ ವಂದನೆ ಸ್ವೀಕರಿಸಿದರು.
ಯಾದಗಿರಿ: ಸರ್ಕಾರದ ವತಿಯಿಂದ ನೆರೆ ಪರಿಹಾರ ಕಾರ್ಯ ಚುರುಕಾಗಿದ್ದು, ರೈತರು ಸೇರಿದಂತೆ ಸಂತ್ರಸ್ತ ಜನರಿಗಾಗಿ ತ್ವರಿತ ಗತಿಯಲ್ಲಿ ಎಲ್ಲ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ತಮ್ಮೊಂದಿಗಿದ್ದು, ರೈತರು ಹಾಗೂ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಪಡಬಾರದು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮನವಿ ಮಾಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಭಾವೈಕ್ಯತಾ ಸಮಿತಿ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ನೆರೆ ಹಾವಳಿಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿ ಅಪಾರ ಹಾನಿ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಅತಿವೃಷ್ಟಿ ಕಾರಣ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಗಳಲ್ಲಿ ಪ್ರವಾಹ ಉಂಟಾಗಿ ಹಲವು ಜನರು ಆಸ್ತಿ-ಮನೆ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ ಜಿಲ್ಲಾಡಳಿತದಿಂದ ಆಶ್ರಯ ಕಲ್ಪಿಸಲಾಗಿದೆ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು, ಮಾಧ್ಯಮದವರಿಂದ ಮತ್ತು ನಮ್ಮ ಜಿಲ್ಲೆಯಿಂದ ಅಷ್ಟೇ ಅಲ್ಲದೇ, ಬೇರೆ ಜಿಲ್ಲೆಗಳಿಂದಲೂ ಸಂತ್ರಸ್ತರಿಗಾಗಿ ವಿಶೇಷ ಸ್ಪಂದನೆ-ನೆರವು ಸಿಕ್ಕಿದೆ. ಆಸಕ್ತಿಯುಳ್ಳವರು ಮುಖ್ಯಮಂತ್ರಿಯವರ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ನೀಡಬೇಕು ಎಂದು ಕೋರಿದರು.
ಹಲವಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವದ ಹಂಗು ತೊರೆದು ಹೋರಾಟ ಮಾಡಿ ನಮಗೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಅಂತಹ ತ್ಯಾಗ- ಬಲಿದಾನ ಮಾಡಿದ ಅಸಂಖ್ಯಾತ ಮಹನೀಯರ ಹೋರಾಟ ನೆನೆದು ಸ್ವಾತಂತ್ರ್ಯದ ಮೂಲಕ ಸ್ವಾವಲಂಬನೆ ಸಾಧಿಸುವ ಪಣ ತೊಡೋಣ. ನಾವೆಲ್ಲ ಒಗ್ಗೂಡಿ ರಾಷ್ಟ್ರದ ಹಿತರಕ್ಷಣೆಗೆ ಸಂಕಲ್ಪ ಮಾಡುವ ಮೂಲಕ ಸ್ವಾತಂತ್ರ್ಯ ದಿನದ ಆಚರಣೆಯನ್ನು
ಅರ್ಥಪೂರ್ಣವಾಗಿಸೋಣ ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಮಹತ್ವಾಕಾಂಕ್ಷೆ ಯಾದಗಿರಿ ಜಿಲ್ಲೆಯು 2019ರ ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ಕೃಷಿ ಮತ್ತು ಜಲಸಂಪನ್ಮೂಲದ ಪ್ರಗತಿ ಆಧಾರದ ಮೇಲೆ ದೇಶದಲ್ಲಿ 1ನೇ ಸ್ಥಾನ ಪಡೆದಿದ್ದಕ್ಕಾಗಿ ನೀತಿ ಆಯೋಗದಿಂದ ಜಿಲ್ಲೆಗೆ 3 ಕೋಟಿ ರೂ. ಅನುದಾನ ಬಿಡುಗಡೆ ಆಗಿರುವುದು ಹೆಮ್ಮೆಯ ವಿಷಯ. ಈ ಅನ್‌ಟೈಡ್ ಫಂಡ್ ಸದ್ಬಳಕೆಯಾಗುವ ಕುರಿತಂತೆ ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಕೂಡ ಪ್ರಸ್ತಾವನೆ ಆಹ್ವಾನಿಸಲಾಗಿತ್ತು. ಈ ನಿಟ್ಟಿನಲ್ಲಿ ಕೆಲವು ಮಹತ್ವವಾದ ಪ್ರಸ್ತಾವನೆಗಳು ಸ್ವೀಕೃತವಾಗಿವೆ. ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳಿಂದ ಕೂಡ ಪ್ರಸ್ತಾವನೆಗಳು ಸ್ವೀಕೃತವಾಗಿರುವುದು ಸಂತೋಷವಾಗಿದೆ. ಅದರಂತೆ ಈಗ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಮಹತ್ವಾಕಾಂಕ್ಷೆ ಜಿಲ್ಲೆ ಕೆರೆ ಹೂಳೆತ್ತುವ ಯೋಜನೆಯಡಿ ಸಂಘ-ಸಂಸ್ಥೆಗಳು ಮತ್ತು ರೈತರ ಸಹಭಾಗಿತ್ವದಲ್ಲಿ ಜಿಲ್ಲೆಯ 23 ಕೆರೆಗಳ ಹಾಗೂ 1 ನಾಲಾ ಹೂಳೆತ್ತಲಾಗಿದೆ. ಭಾರತೀಯ ಜೈನ ಸಂಘ, ಯಾದಗಿರಿ ಸರಕಾರೇತರ ಸಂಸ್ಥೆ ಸಹಭಾಗಿತ್ವದಲ್ಲಿ ಕೈಗೊಂಡ ಕೆರೆ ಹೂಳೆತ್ತುವ ಯೋಜನೆ ರಾಷ್ಟ್ರಮಟ್ಟದಲ್ಲಿ ಸ್ಕಾಚ್ ಅವಾರ್ಡ್ ಸೆಮಿ ಫೈನಲ್ಗೆ ಆಯ್ಕೆಯಾಗಿರುವುದು ಸಂತೋಷದ ವಿಷಯ. ರೈತರು, ಸಾರ್ವನಿಕರಿಂದ ಹೆಚ್ಚಿನ ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಬಾಕಿ ಕೆರೆಗಳ ಹೂಳೆತ್ತಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಕ್ಕಳ ಅಪೌಷ್ಟಿಕತೆ ನಿವಾರಣೆ: ಅಂಗನವಾಡಿ ಕೇಂದ್ರಗಳ 6 ವರ್ಷದೊಳಗಿನ 1,15,113 ಮಕ್ಕಳಿಗೆ ಪೌಷ್ಟಿಕ ಆಹಾರದ ಜತೆಗೆ ಅಪೌಷ್ಟಿಕ ಮಟ್ಟ ನಿವಾರಿಸಲು ಮೊಟ್ಟೆ ನೀಡಲಾಗುತ್ತಿದೆ. ಅಲ್ಲದೇ, ಅಪೌಷ್ಟಿಕ ಮಕ್ಕಳಿಗೆ ವಾರದ 6 ದಿನ ಹಾಗೂ ಸಾಮಾನ್ಯ ಮಕ್ಕಳಿಗೆ ವಾರದ 5 ದಿನ ಕೆನೆಭರಿತ ಹಾಲು ನೀಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 8,836 ಮಕ್ಕಳ ಅಪೌಷ್ಟಿಕತೆ ನಿವಾರಿಸಲಾಗಿರುತ್ತದೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 15,568 ಯುವಕ-ಯುವತಿಯರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಪರಿಶಿಷ್ಟ ಜಾತಿ-3457, ಪರಿಶಿಷ್ಟ ಪಂಗಡ-1679, ಅಲ್ಪಸಂಖ್ಯಾತರು-2387, ಮಹಿಳೆಯರು-5113 ಹಾಗೂ 161 ಅಂಗವಿಕಲರು ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ ಸೂಕ್ತ ಸೌಕರ್ಯ ಹೊಂದಿರುವ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದಿರುವ 5 ತರಬೇತಿ ಸಂಸ್ಥೆಗಳ ಮೂಲಕ 2019-20ನೇ ಸಾಲಿನಲ್ಲಿ ಒಟ್ಟು 120 ಅಭ್ಯರ್ಥಿಗಳಿಗೆ ತರಬೇತಿ ಪೂರ್ಣಗೊಂಡಿದ್ದು, 60 ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ನೋಂದಾಯಿಸಿಕೊಂಡು ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
2018-19ನೇ ಸಾಲಿನಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ಆರ್ಥಿಕ ಪ್ರಗತಿಯಲ್ಲಿ ಜಿಲ್ಲೆ 2ನೇ ಸ್ಥಾನದಲ್ಲಿದೆ. 2019-20ನೇ ಸಾಲಿಗೆ ಸಲ್ಲಿಸಿದ ಕ್ರಿಯಾಯೋಜನೆಗೆ ಈಗಾಗಲೇ ಅನುಮೋದನೆ ದೊರಕಿದ್ದು, ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು. ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ತಾಪಂ ಅಧ್ಯಕ್ಷ ಭೀಮವ್ವ ಮಲ್ಲೇಶಪ್ಪ ಅಚೋಲ, ಜಿಪಂ ಸಿಇಒ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ರವಿಶಂಕರ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಡಿವೈಎಸ್‌ಪಿ ಯು. ಶರಣಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಇದ್ದರು. ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ ಹಾಡಿದರು. ಉಪನ್ಯಾಸಕಿ ಡಾ| ಜ್ಯೋತಿಲತಾ ತಡಿಬಿಡಿಮಠ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.