ನುಡಿದಂತೆ ನಡೆಯುವುದೇ ಶರಣರ ತತ್ವವಾಗಿತ್ತು
ವಚನ ಸಾಹಿತ್ಯ ಸಾಗರವಿದ್ದಂತೆ : ಗಂಗಾಧರ
Team Udayavani, Aug 30, 2019, 4:15 PM IST
ಯಾದಗಿರಿ: ನಗರದ ಲಿಂಗೇರಿ ಕೋನಪ್ಪ ಮಹಿಳಾ ಪಿಯು ಪದವಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಸುತ್ತೂರು ಜಗದ್ಗುರು ಪೂಜ್ಯ ಶ್ರೀ ಲಿಂ. ಡಾ| ರಾಜೇಂದ್ರ ಸ್ವಾಮೀಜಿ ಜನ್ಮದಿನ ಹಾಗೂ ವಚನ ದಿನ ಕಾರ್ಯಕ್ರಮವನ್ನು ಜಿಲ್ಲಾ ಶಸಾಪ ಅಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ ಉದ್ಘಾಟಿಸಿದರು.
ಯಾದಗಿರಿ: ವಚನ ಸಾಹಿತ್ಯವೆಂದರೆ ಅದೊಂದು ಸಾಗರವಿದ್ದಂತೆ, ಅದರ ಆಳ-ಅಗಲು ಅರಿಯಲು ಇಡೀ ಜೀವನ ಸವೆಸಬೇಕಾಗುತ್ತದೆ ಎಂದು ಪ್ರಾಚಾರ್ಯ ಗಂಗಾಧರ ಬಡಿಗೇರ ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಗರದ ಲಿಂಗೇರಿ ಕೋನಪ್ಪ ಮಹಿಳಾ ಪಿಯು ಪದವಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಸುತ್ತೂರು ಜಗದ್ಗುರು ಪೂಜ್ಯ ಶ್ರೀ ಲಿಂ. ಡಾ| ರಾಜೇಂದ್ರ ಸ್ವಾಮೀಜಿ ಜನ್ಮದಿನ ಹಾಗೂ ವಚನ ದಿನ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಸಮಾಜದ ಮನಸ್ಸುಗಳು ಚಿಂದಿ ಚಿಂದಿಯಾಗಿವೆ. ಅವನ್ನು ಕೂಡಿಸಿ, ಜೋಡಿಸಿ ಹೊಲಿದು ಕೌದಿಯಾಗಿಸಿ ಮರು ಜೋಡಣೆ ಮಾಡಬೇಕಿದೆ. ಇದಕ್ಕೆ ವಚನಗಳ ನೆರವು ಪಡೆಯಬೇಕಿದೆ ಎಂದವರು, ನುಡಿದಂತೆ ನಡೆಯುವುದೇ ಶರಣರ ತತ್ವವಾಗಿತ್ತು. ಇಂದು ನುಡಿ ಮಾತ್ರ ಯತೇಚ್ಛವಾಗಿ ಮೂಡಿ ಬರುತ್ತಿದೆ. ಆದರೆ ನಡೆಯನ್ನು ಗುರ್ತಿಸಲೂ ಆಗದಷ್ಟು ಅದೃಷ್ಯವಾಗಿದೆ. ಈ ಕಾರಣದಿಂದಾಗಿ ಇಂದು ಅರಾಜಕತೆ, ಅನೀತಿ, ಅಸಂತೋಷಗಳು ಮನೆ ಮಾಡವೆ ಎಂಬುದನ್ನು ಪ್ರತಿಯೊಬ್ಬರು ಅರಿತಾಗ ಸುಜ್ಞಾನ, ಸುನೀತಿ, ಸುರಾಜಕತೆಗಳು ಬರಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾ ಮಠದ ಪೂಜ್ಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ವಚನ ದಿನವಾಗಿ ಶ್ರೀ ಲಿಂ. ಸ್ವಾಮೀಜಿ ಅವರ ಜನ್ಮದಿನದಂದು ಆಯೋಜಿಸಿದ್ದ ಕಾರ್ಯಕ್ರಮ ಮಾದರಿಯಾಗಿದ್ದು, ಶ್ರೀಗಳ ಜನ್ಮದಿನವೇ ಶರಣ ಸಾಹಿತ್ಯ ಪರಿಷತ್ತು ಜನ್ಮ ತಾಳಿದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜೀವನ ಸಾಧನೆ ಕುರಿತು ಲಿಂ.ಕೋ. ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ| ವೆಂಕಟೇಶ ಕಲಾಲ ಮಾತನಾಡಿದರು.
ಲಿಂ.ಕೋ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿದ್ರಾಮಪ್ಪ ಚೇಗುಂಟಾ ಕಾರ್ಯಕ್ರಮ ಉದ್ಘಾಟಿಸಿದರು. ಯಾದಗಿರಿ ತಾಲೂಕು ಅಧ್ಯಕ್ಷ ಗುರಪ್ಪ ವಿಶ್ವಕರ್ಮ, ಸುರಪುರ ತಾಲೂಕು ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಸಾಪ ಏರ್ಪಡಿಸಿದ್ದ ವಚನ ಪಠಣ ಸ್ಪರ್ಧೆ ವಿಜೇತರಾದ ಪಿಯು ವಿಭಾಗದಲ್ಲಿ ಅನುಕ್ರಮವಾಗಿ ಚೆನ್ನಮ್ಮ, ಅಂಕಿತಾ, ಶಿಲ್ಪಾ, ಪದವಿ ವಿಭಾಗದಲ್ಲಿ ಶೋಭಾ ದಳವಾಯಿ, ನೇತ್ರಾವತಿ ಅಂಬಿಕಾರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು.
ಜ್ಯೋತಿ ಪತ್ತಾರ, ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು. ನಿವೇದಿತಾ ಸ್ವಾತಿ ಪ್ರಾರ್ಥನೆ, ವಚನ ಗೀತೆ ಹಾಡಿದರು. ಉಪನ್ಯಾಸಕ ಸತೀಶ ಹವಲ್ದಾರ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.