ಬೆಲೆ ಸಿಕ್ಕಾಗ ಕೃಷಿ ಉತ್ಪನ್ನ ಮಾರಾಟ ಮಾಡಿ
ಕಚೇರಿಯಲ್ಲಿ ಕುಳಿತು ಕಾಗದದ ಮೇಲೆ ಪ್ರಗತಿ ತೋರಿಸಿದರೆ ಪ್ರಯೋಜನವಿಲ್ಲ: ಬೆಳಗುರ್ಕಿ
Team Udayavani, Sep 27, 2019, 1:39 PM IST
ಯಾದಗಿರಿ: ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ರಾಶಿ ಮಾಡಿದ ತಕ್ಷಣ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿ ಹಾನಿ ಅನುಭವಿಸುವುದನ್ನು ತಪ್ಪಿಸಲು ಜಾರಿಗೆ ತಂದಿರುವ ಕೃಷಿ ಉತ್ಪನ್ನ ಅಡಮಾನ ಸಾಲ ಯೋಜನೆಯಡಿ ಬ್ಯಾಂಕ್‌ಗಳು ಸಾಲ ವಿತರಿಸಬೇಕು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮಾರುಕಟ್ಟೆ, ಖರೀದಿ ಹಾಗೂ ಬೆಳೆಗಳ ವಿಚಾರದ ಬಗ್ಗೆ ತಜ್ಞರು, ರೈತರು ಮತ್ತು ಸಂಬಂಧಿಸಿದ ಇಲಾಖಾ ಅಧಿ ಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಎಪಿಎಂಸಿ, ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು ಅಥವಾ ರಾಜ್ಯ-ಕೇಂದ್ರ ಸರ್ಕಾರಗಳ ಉಗ್ರಾಣ ನಿಗಮಗಳ ಗೋದಾಮುಗಳಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಬಹುದು. ದಾಸ್ತಾನು ಮಾಡಿದ ಬೆಳೆಗಳ ಮೌಲ್ಯದ ಕುರಿತು ರಸೀದಿ ತಂದರೆ ಬ್ಯಾಂಕ್ ಗಳು ಬೆಳೆ ಸಾಲಕ್ಕೆ ವಿಧಿಸುವ ದರದಲ್ಲಿ ಅಡಮಾನ ಸಾಲವನ್ನು ವಿತರಿಸಬೇಕು. ಮಾರುಕಟ್ಟೆಯಲ್ಲಿ ಬೆಲೆ ಬಂದಾಗ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಪಡೆಯುವ ಜೊತೆಗೆ ಸಾಲವನ್ನು ಮರಳಿಸುತ್ತಾರೆ. ಇದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡುವುದು ತಪ್ಪುತ್ತದೆ.
ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನ ಕುರಿತಂತೆ ಆಯೋಗಕ್ಕೆ ವರದಿ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎ. ಕೃಷ್ಣಾ ಅವರಿಗೆ ಸೂಚಿಸಿದರು.
ರೈತರು ಫಸಲು ದಾಸ್ತಾನು ಮಾಡಿದ ರಸೀದಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತಂದುಕೊಟ್ಟರೆ ಮುಂಗಡ ಸಾಲ ನೀಡಲಾಗುತ್ತದೆ. ಒಬ್ಬ ರೈತನಿಗೆ ಬೆಳೆದ ಫಸಲಿನಲ್ಲಿ ಶೇ. 60ರಷ್ಟು ಅಥವಾ ಗರಿಷ್ಠ 2 ಲಕ್ಷ ರೂ.ಗಳ ವರೆಗೆ ಸಾಲ ವಿತರಿಸಲು ಅವಕಾಶವಿದೆ. ಈ ಸಾಲಕ್ಕೆ 90 ದಿನಗಳವರೆಗೆ ಯಾವುದೇ ಬಡ್ಡಿ ಇರುವುದಿಲ್ಲ. ಆ ನಂತರದ ಅವ ಧಿಗೆ ಸಾಲದ ಮೊತ್ತಕ್ಕೆ ಅನುಗುಣವಾಗಿ ಶೇ. 4ರಿಂದ ಶೇ. 10ರ ವರೆಗೆ ಬಡ್ಡಿ ವಿಧಿ ಸಲಾಗುತ್ತದೆ. ಸಾಲ ಮರು ಪಾವತಿಗೆ 180 ದಿನಗಳ ಕಾಲಾವಕಾಶ ಇರುತ್ತದೆ. ರೈತರು ಈ ಬಗ್ಗೆ ತಿಳಿದುಕೊಂಡು ಲಾಭ ಪಡೆದುಕೊಳ್ಳಬೇಕು ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಒಂದೆಡೆ ಪ್ರವಾಹದಿಂದಾಗಿ ಬೆಳೆಹಾನಿ ಸಂಭವಿಸಿದರೆ, ಮತ್ತೂಂದೆಡೆ ಮಳೆ ಕೊರತೆಯಿಂದಾಗಿ ಬೆಳೆ ಹಾನಿಯಾಗುತ್ತಿವೆ. ಕೃಷಿಗೆ ಸಂಬಂಧಪಟ್ಟ ವಿವಿಧ ಇಲಾಖೆ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ರೈತರ ಹೊಲಗಳಿಗೆ ಕೊಂಡೊಯ್ಯಬೇಕು. ಕಚೇರಿಯಲ್ಲಿ ಕುಳಿತು ಅಥವಾ ಕಾಗದದ ಮೇಲೆ ಪ್ರಗತಿ ತೋರಿಸಿದರೆ ಪ್ರಯೋಜನವಾಗುವುದಿಲ್ಲ. ಹೈನುಗಾರಿಕೆಗೆ, ರೇಷ್ಮೆ, ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ತೊಗರಿಗೆ ಭಾರತ ಸರ್ಕಾರದ ಅಂಗ ಸಂಸ್ಥೆ ಜಿಯಾಲಾಜಿಕಲ್ ಇಂಡಿಕೇಶನ್ ರಿಜಿಸ್ಟ್ರಿಯು ಭೌಗೋಳಿಕ ವಿಶೇಷ ಮಾನ್ಯತೆ (ಜಿಐ ಇಂಡಿಕೇಶನ್) ನೀಡಿದೆ. ಜಿಐ ಮಾನ್ಯತೆ ಸಿಕ್ಕಿರುವುದರಿಂದ ಈ ಭಾಗದ ತೊಗರಿಯನ್ನು ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿ ಗುರುತಿಸಲಾಗುತ್ತದೆ. ಇದರ ಪ್ರಯೋಜನಗಳು ಕುರಿತಂತೆ ರೈತರಿಗೆ ಕಾರ್ಯಾಗಾರ ಆಯೋಜಿಸಬೇಕು. ಬೇಳೆ ಕಾಳುಗಳ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನ ಪಡೆದಿರುವುದಕ್ಕಾಗಿ ಕೇಂದ್ರ ಸರ್ಕಾರದಿಂದ 1 ಕೋಟಿ ರೂ. ಸಿಕ್ಕಿರುವುದು ಸಂತಸದ ಸಂಗತಿಯಾಗಿದೆ. ಇದನ್ನು ಬೇಳೆಕಾಳುಗಳ ಕಣಜವಾಗಿರುವ ಕಲ್ಯಾಣ ಕರ್ನಾಟಕಕ್ಕೆ ನೀಡಲು ಮನವಿ ಮಾಡುವುದಾಗಿ ಎಂದು ತಿಳಿಸಿದರು.
ನವ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚನ್ನಾರೆಡ್ಡಿಗೌಡ ಮಾತನಾಡಿ, ಜಿಲ್ಲೆಯಾದ್ಯಂತ ಹೆಸರು ರಾಶಿ ಆಗಿದೆ. ಹೆಚ್ಚಿನ ರೈತರು ತಾವು ಮಾಡಿದ ಬಾಕಿ ಅಥವಾ ಸಾಲ ಮರು ಪಾವತಿಗಾಗಿ ಬಂದಷ್ಟು ಬೆಲೆಗೆ ಈಗಾಗಲೇ ಮಾರಾಟ ಮಾಡಿದ್ದಾರೆ. ಆದರೆ, ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿಗೆ ಜಿಲ್ಲೆಯಲ್ಲಿ ಇದುವರೆಗೆ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಈಗ ತೆರೆದರೆ ಮಧ್ಯವರ್ತಿಗಳಿಗೆ ಲಾಭ ದೊರೆಯುತ್ತದೆ. ಬಡ ರೈತರಿಗೆ ಆಸರೆಯಾಗುವುದಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಆಯೋಗದ ಅಧ್ಯಕ್ಷರು ಮಾತನಾಡಿ, ಜಿಲ್ಲಾಡಳಿತದಿಂದ ಹೆಸರು ಖರೀದಿ ಕೇಂದ್ರ ತೆರೆಯುವುದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಲ್ಲಿ ಯಾವುದೇ ವಿಳಂಬವಾಗಿಲ್ಲ. ಸರ್ಕಾರದ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯುವ ಕುರಿತು ನಿರ್ಧಾರವಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಸ್ಥಾಪನೆ ಬಗ್ಗೆ ಸರ್ಕಾರದಿಂದ ಆದೇಶ ಬಂದಿದೆ. ಅದರಂತೆ ಜಿಲ್ಲೆಯಲ್ಲಿ ಹೆಚ್ಚು ಉತ್ಪಾದನೆ ಇರುವ ಪ್ರದೇಶಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರತಿ ವರ್ಷ ಬೆಂಬಲ ಬೆಲೆಯಲ್ಲಿ ಹೆಸರು, ಉದ್ದು, ತೊಗರಿ ಖರೀದಿಗೆ ಉತ್ಪನ್ನಗಳು ಮಾರುಕಟ್ಟೆಗೆ ಬರುವುದಕ್ಕೆ ಮುಂಚಿತವಾಗಿಯೇ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಸರ್ಕಾರದಿಂದ ಆದೇಶ ಬರುವುದು ತಡವಾದರೆ ರೈತರಿಗೆ ತಾವು ಬೆಳೆದ ಫಸಲುಗಳನ್ನು ಕಾಯ್ದಿಟ್ಟುಕೊಳ್ಳಲು ಸಮಸ್ಯೆ ಉಂಟಾಗುತ್ತದೆ. ಖರೀದಿ ಕೇಂದ್ರ ಆರಂಭದ ನಂತರವೂ ಖಾಲಿ ಚೀಲಗಳ ಕೊರತೆ, ಖರೀದಿ ಕೇಂದ್ರಗಳಲ್ಲಿ ಆನ್‌ಲೈನ್ ನೋಂದಣಿ ಸಮಸ್ಯೆ ಕಂಡು ಬರುತ್ತದೆ ಎಂದು ಗಮನಕ್ಕೆ ತಂದರು.
ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ಕೃಷಿ ಇಲಾಖೆ ಉಪನಿರ್ದೇಶಕ ಸಮದ್ ಪಟೇಲ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾಬು, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಭೀಮರಾಯ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಅಬ್ದುಲ್ ನಯೀಮ್ ಚೌಧರಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ನಿಯಮಿತ ವ್ಯವಸ್ಥಾಪಕ ಮಾರಣ್ಣ ಎನ್. ಎಚ್. ಉಪಸ್ಥಿತರಿದ್ದರು.
ರೈತ ಮುಖಂಡರಾದ ಶಿವಕುಮಾರ ಮಂಡಗಳ್ಳಿ, ಮಲ್ಕಣ್ಣ ಮಂಡಗಳ್ಳಿ, ಮಾರ್ಥಂಡಪ್ಪ ಡಿ. ಮಾನೇಗಾರ, ಭೀಮರಾಯ ಠಾಣಗುಂದಿ, ಶಿವರಾಜ ನಗನೂರ, ಶರಣರಡ್ಡಿ ಹತ್ತಿಗುಡೂರ, ಬಿ.ಎಲ್. ಬಿಜಾಸ್ಪುರಕರ್ ಸೇರಿದಂತೆ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.