ಮೋದಿ ಪ್ರಶ್ನಿಸುವ ಶಕ್ತಿ ನೀಡಿದ್ದೀರಿ: ಮಲ್ಲಿಕಾರ್ಜುನ ಖರ್ಗೆ
Team Udayavani, Apr 15, 2019, 10:21 AM IST
ಯಾದಗಿರಿ: ಕೊಂಕಲ್ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಜನರು.
ಯಾದಗಿರಿ: ಲೋಕಸಭೆಯಲ್ಲಿ ಪ್ರಧಾನ ಮಂತ್ರಿ ಮೋದಿ ಅವರನ್ನು ಪ್ರಶ್ನಿಸುವ ಶಕ್ತಿಯನ್ನು ಕಲಬುರಗಿ ಕ್ಷೇತ್ರದ ಜನತೆ ನೀಡಿದ್ದು, ಅವರ ವಿಶ್ವಾಸ ಉಳಿಸಿಕೊಂಡು ಈ ಭಾಗಕ್ಕೆ ಕೀರ್ತಿ ತಂದಿದ್ದೇನೆ ಎಂದು ಕಲಬುರಗಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ಲೋಕಸಭೆ ಕ್ಷೇತ್ರದ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಕೊಂಕಲ್ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಲೋಕಸಭೆಯಲ್ಲಿಯೂ ಪ್ರಧಾನಿ ಮೋದಿ ಅವರನ್ನು ವೈಯಕ್ತಿಕವಾಗಿ ಟೀಕಿಸಿಲ್ಲ. ಅವರು ನಮ್ಮ ಪಕ್ಷದ ವಿರುದ್ಧ ಟೀಕಿಸಿದರೆ ನಾವು ಅವರ ತತ್ವಗಳನ್ನು ವಿರೋಧಿಸಿದ್ದೇವೆ ಮತ್ತು ಪ್ರಶ್ನಿಸಿದ್ದೇವೆ. ಆದರೂ ಗಲ್ಲಿಯಿಂದ ದಿಲ್ಲಿ ವರೆಗೆ ತಮ್ಮನ್ನು ಸೋಲಿಸಲು ಹೊರಟಿದ್ದಾರೆ ಎಂದು ಹೇಳಿದರು.
ಕಲಬುರಗಿ ಮತ್ತು ಗುರುಮಿಠಕಲ್ ಜನರ ಆಶೀರ್ವಾದದಿಂದ ಎಂಟು ಬಾರಿ ವಿಧಾನಸಭೆ, ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು, ತಮ್ಮನ್ನು ಎರಡನೇ ಅಂಬೇಡ್ಕರ್, ಇಂದ್ರ-ಚಂದ್ರ ಎಂದು ಹೊಗಳುತ್ತಿದ್ದವರು ಸೋತವರ ಸಂಘಕಟ್ಟಿ ತಮ್ಮನ್ನು ಸೋಲಿಸಲು ಹೊರಟಿದ್ದಾರೆ ಎಂದು ಟಾಂಗ್ ನೀಡಿದರು.
ಕೇಂದ್ರೀಯ ವಿವಿ, ಇಎಸ್‌ಐ ಆಸ್ಪತ್ರೆ, ರಾಷ್ಟ್ರೀಯ ಹೆದ್ದಾರಿಗಳು, ಹೈಕ ಭಾಗಕ್ಕೆ ಸಂವಿಧಾನದ 371ನೇ(ಜೆ) ಕಲಂ ತಿದ್ದುಪಡಿ ಮಾಡಿ ಉದ್ಯೋಗ, ಶಿಕ್ಷಣಕ್ಕೆ ಅನುಕೂಲ ಅಲ್ಲದೆ, ಗುರುಮಠಕಲ್‌ಗೆ ಭೀಮಾ ನದಿಯಿಂದ ಕುಡಿಯುವ ನೀರು, ಕೆರೆಗಳು ತುಂಬುವ ಯೋಜನೆ ಇಷ್ಟೆಲ್ಲ ಕೆಲಸ ಮಾಡಿದ್ದಕ್ಕೆ ತಮ್ಮನ್ನು ಸೋಲಿಸಬೇಕಾ ಎಂದು ಪ್ರಶ್ನಿಸಿದರು.
ಈ ಸಲದ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ದೇಶದ 130 ಕೋಟಿ ಜನರ ಭವಿಷ್ಯ ರೂಪಿಸುವ ಚುನಾವಣೆಯಾಗಿದೆ. ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವ ಉಳಿವಿನ ಚುನಾವಣೆಯಾಗಿದೆ. ಯುವಕರನ್ನು ತಪ್ಪು ದಾರಿಗೆಳೆಯುವ ಕೆಲಸವಾಗುತ್ತಿದೆ. ಮತದಾರರು ಎಚ್ಚರವಹಿಸಿ ಮತದಾನ ಮಾಡಬೇಕು ಎಂದು ಹೇಳಿದರು.
ಪ್ರಚಾರಕ್ಕೆ ಬಾರದ ಕಂದಕೂರು
ಕಲಬುರಗಿ ಲೋಕಸಭೆ ವ್ಯಾಪ್ತಿಯ ಗುರುಮಿಠಕಲ್ ವಿಧಾನಸಭೆಯಲ್ಲಿ ಸ್ವತಃ ಡಾ| ಖರ್ಗೆ ಪ್ರಚಾರ ನಡೆಸಿದರೂ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಸೇರಿದಂತೆ ಜೆಡಿಎಸ್ ಪಕ್ಷದ ಯಾವೊಬ್ಬ ಮುಖಂಡರು ಭಾಗಿಯಾಗಿರಲಿಲ್ಲ. ಖರ್ಗೆ ವಿರುದ್ಧ ರಾಜಕೀಯವಾಗಿ ಸುಮಾರು ವರ್ಷಗಳಿಂದ ಹೋರಾಡಿದ್ದ ನಾಗನಗೌಡರ ಮುನಿಸು ಇನ್ನೂ ಕರಗಿದಂತೆ ಕಂಡು ಬಂದಿಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಇಲ್ಲಿನ ಜೆಡಿಎಸ್ ಶಾಸಕರು ಪ್ರಚಾರಸಭೆಯಲ್ಲಿ ಭಾಗವಹಿಸದಿರುವುದು ಗುಸುಗುಸು ಚರ್ಚೆಗೆ ಕಾರಣವಾಯಿತು. ಇದೆಲ್ಲದರ ಮಧ್ಯೆಯೂ ಕಾಂಗ್ರೆಸ್ ಪ್ರಚಾರ ಸಭೆ ಬ್ಯಾನರ್‌ನಲ್ಲಿ ಎಚ್. ಡಿ. ಕುಮಾರಸ್ವಾಮಿ ಮತ್ತು ಗುರುಮಿಠಕಲ್ ಶಾಸಕ ನಾಗನಗೌಡರ ಭಾವಚಿತ್ರ ಹಾಕಲು ಕಾಂಗ್ರೆಸ್‌ನವರು ಮರೆತಿರಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.