“ಪ್ರಗತಿ ಸ್ಕೋರ್ ಇಳಿಕೆ ಉತ್ತಮ ಬೆಳವಣಿಗೆಯಲ್ಲ
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ಗಳ ನೋಂದಣಿಯಲ್ಲಿ ಪ್ರಗತಿ ಕುಂಠಿತ
Team Udayavani, Dec 12, 2019, 4:03 PM IST
ಯಾದಗಿರಿ: ಕೇಂದ್ರ ಸರ್ಕಾರದ ನೀತಿ ಆಯೋಗ ಗುರುತಿಸಿದ ಮಹತ್ವಾಕಾಂಕ್ಷೆ ಜಿಲ್ಲೆಗಳ ರ್‍ಯಾಂಕಿಂಗ್‌ನಲ್ಲಿ ಯಾದಗಿರಿ ಜಿಲ್ಲೆ ಸೆಪ್ಟೆಂಬರ್ ತಿಂಗಳಲ್ಲಿದ್ದ ಒಟ್ಟಾರೆ ಸ್ಕೋರ್ 48.9ರಿಂದ ಅಕ್ಟೋಬರ್‌ನಲ್ಲಿ 48.5ಕ್ಕೆ ಇಳಿಮುಖವಾಗಿದೆ. ಡೆಲ್ಟಾ ರ್‍ಯಾಂಕಿಂಗ್‌ನಲ್ಲಿ 90ನೇ ಸ್ಥಾನ ಪಡೆದಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ನವದೆಹಲಿ ಎಫ್‌ಎ, ಡಿಬಿಟಿ, ಎಂಒಇಎಸ್ ಆ್ಯಂಡ್ ಡಿಎಸ್‌ಟಿ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಮಹತ್ವಾಕಾಂಕ್ಷೆ ಜಿಲ್ಲೆ ನೋಡಲ್ ಅಧಿಕಾರಿ ಬಿ. ಆನಂದ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಬುಧವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯು ಪ್ರಥಮ ಸ್ಥಾನ ಪಡೆಯಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚಿಸಿದರು. ಕಾರ್ಯಕ್ರಮಗಳ ಅನುಷ್ಠಾನದ ಅಂಕಿ-ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸ್ಕೋರ್ ಮತ್ತು ಡೆಲ್ಟಾ ರ್‍ಯಾಂಕಿಂಗ್ ಮೇಲೆ ಜಿಲ್ಲೆಯ ಪ್ರಗತಿ ಪರಿಗಣಿಸಲಾಗುತ್ತದೆ. ಮೂಲಸೌಕರ್ಯದಲ್ಲಿ ಮಾತ್ರ ಸೆಪ್ಟೆಂಬರ್ ತಿಂಗಳಲ್ಲಿದ್ದ ಸ್ಕೋರ್ 60ರಿಂದ ಅಕ್ಟೋಬರ್‌ನಲ್ಲಿ 61.2ಕ್ಕೆ ಏರಿಕೆ ಕಂಡುಬಂದಿದೆ. ಶಿಕ್ಷಣದಲ್ಲಿ ಈ ಎರಡು ತಿಂಗಳ ಸ್ಕೋರ್ 42.9ಕ್ಕೆ ಸ್ಥಿರವಾಗಿದೆ. ಆದರೆ, ಆರೋಗ್ಯ ಮತ್ತು ಪೌಷ್ಟಿಕಾಂಶ ಪ್ರಗತಿಯಲ್ಲಿನ ಸ್ಕೋರ್ 76.5ರಿಂದ 75.2ಕ್ಕೆ ಇಳಿಮುಖವಾಗಿದೆ. ಕೃಷಿ ಮತ್ತು ಜಲಸಂಪನ್ಮೂಲ ವಿಭಾಗದಲ್ಲಿ 19.7ರಿಂದ 19.2ಕ್ಕೆ ಇಳಿಮುಖವಾಗಿದೆ.
ಆರ್ಥಿಕ ಹಾಗೂ ಕೌಶಲ ಅಭಿವೃದ್ಧಿಯಲ್ಲಿನ ಸ್ಕೋರ್ 25.2ರಿಂದ 24.9ಕ್ಕೆ ಇಳಿಮುಖವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯು ಪ್ರಗತಿಯತ್ತ ಸಾಗಬೇಕೇ ಹೊರತು ಇಳಿಮುಖ ಕಂಡುಬರಬಾರದು. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಜಿಲ್ಲೆಗಳ ಪ್ರಗತಿಯನ್ನು ಪ್ರತಿದಿನ ವೀಕ್ಷಣೆ ಮಾಡುತ್ತದೆ. ಪ್ರಧಾನಮಂತ್ರಿಗಳು ಕೂಡ ಖುದ್ದಾಗಿ ಪರಿಶೀಲಿಸುತ್ತಾರೆ. ಆದ್ದರಿಂದ ಜಿಲ್ಲೆಯ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಜತೆಗೆ ಟಾಟಾ ಟ್ರಸ್ಟ್, ಅಜೀಮ್ ಪ್ರೇಮ್‌ಜಿ ಫೌಂಡೇಶನ್, ಸೆಲ್ಕೊ, ಬಿಇಎಲ್, ಎಂಆರ್‌ಪಿಎಲ್, ಎಚ್‌ಪಿಸಿಎಲ್ ಸಂಸ್ಥೆಗಳ ಸಹಯೋಗದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯ ಕಾಲೇಜುಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಅವಶ್ಯಕತೆಯಿದ್ದಲ್ಲಿ ನಿರ್ದಿಷ್ಟ ಪ್ರಸ್ತಾವನೆ ಸಲ್ಲಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ಗಳ ನೋಂದಣಿಯಲ್ಲಿ ಜಿಲ್ಲೆ ಹಿಂದುಳಿದಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ಈ ಯೋಜನೆ ತುಂಬಾ ಉಪಯುಕ್ತವಾಗಿದೆ. ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಅದೇ ರೀತಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅನಿಮಿಯಮುಕ್ತ ಜಿಲ್ಲೆಗಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ ಕಡಿಮೆ ಫಲಿತಾಂಶ ಹೊಂದಿದ 230 ಶಾಲೆ ಗುರುತಿಸಲಾಗಿದೆ. ಈ ಶಾಲೆಗಳಲ್ಲಿ ಎಸ್‌ಎಸ್ ಎಲ್‌ಸಿ ಫಲಿತಾಂಶ ಹೆಚ್ಚಳಕ್ಕಾಗಿ ವಿಶೇಷ ತರಗತಿ ನಡೆಸಲಾಗುತ್ತಿದೆ. ಅಲ್ಲದೆ, ಕಾರ್ಯಾಗಾರ ಕೂಡ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಮಲ್ಲನಗೌಡ ಎಸ್.ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಸೇರಿದಂತೆ ಟಾಟಾ ಟ್ರಸ್ಟ್, ಅಜೀಂ ಪ್ರೇಮ್‌ಜಿ ಫೌಂಡೇಶನ್, ಸೆಲ್ಕೊ, ಬಿಇಎಲ್, ಎಂಆರ್‌ಪಿಎಲ್
-ಸಿಎಸ್‌ಆರ್, ಎಚ್‌ಪಿಸಿಎಲ್-ಸಿಎಸ್‌ಆರ್ ರಾಜ್ಯ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.