ಪಿಯು ಪೂರಕ ಪರೀಕ್ಷೆ ಸುಸೂತ್ರವಾಗಿ ನಡೆಸಿ
ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು 5,409•ಸೂಕ್ತ ಪೊಲೀಸ್ ಬಂದೋಬಸ್ತ್
Team Udayavani, Jun 5, 2019, 11:01 AM IST
ಯಾದಗಿರಿ: ಪಿಯುಸಿ ಪೂರಕ ಪರೀಕ್ಷೆ ಕುರಿತು ಪೂರ್ವಸಿದ್ಧತಾ ಸಭೆ ನಡೆಯಿತು.
ಯಾದಗಿರಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಜೂನ್ 11ರಿಂದ 20ರ ವರೆಗೆ ಜಿಲ್ಲೆಯ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಯಲು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾದಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜು, ನ್ಯೂ ಕನ್ನಡ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಗುರುಮಠಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜು, ಸುರಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸುರಪುರ ಪ್ರಭು ಪದವಿ ಪೂರ್ವ ಕಾಲೇಜು, ಶಹಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಶಹಾಪುರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿವೆ. ಈ 8 ಪರೀಕ್ಷಾ ಕೇಂದ್ರಗಳಿಗೆ ಜಿಲ್ಲೆಯ ಒಟ್ಟು 83 ಪದವಿ ಪೂರ್ವ ಕಾಲೇಜುಗಳಲ್ಲಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಜೋಡಿಸಲಾಗಿದ್ದು, ಒಟ್ಟು 5,409 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಅರ್ಹ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಈಗಾಗಲೇ ಆನ್‌ಲೈನ್ ಮೂಲಕ ಎಲ್ಲಾ ಕಾಲೇಜುಗಳಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದ ಸಂಪೂರ್ಣ ಜವಾಬ್ದಾರಿ ಮುಖ್ಯ ಅಧಿಧೀಕ್ಷಕರಾಗಿ ನೇಮಕಗೊಂಡ ಅಧಿಕಾರಿಯದ್ದಾಗಿರುತ್ತದೆ. ಅಭ್ಯರ್ಥಿಗಳಿಗೆ ಆಸನ ವ್ಯವಸ್ಥೆಯನ್ನು ಕೊಠಡಿಯಿಂದ ಹೊರಗೆ, ಕಾರಿಡಾರ್ ಅಥವಾ ನೆಲದ ಮೇಲೆ ಕುಳಿತು ಪರೀಕ್ಷೆಗಳನ್ನು ಬರೆಸುವಂತಿಲ್ಲ. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಎಂದು ಘೋಷಿಸಲಾಗುವುದು. ಪರೀಕ್ಷಾ ಕಾರ್ಯಗಳಿಗಾಗಿ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಕೇಂದ್ರದಲ್ಲಿ ಉಪಸ್ಥಿತರಿರಬೇಕು. ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು. ಅನ್ಯ ವ್ಯಕ್ತಿಗಳು ಕೇಂದ್ರದೊಳಗೆ ಕಂಡು ಬಂದಲ್ಲಿ ಮುಖ್ಯ ಅಧೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಡಿವೈಎಸ್‌ಪಿ ಯು.ಶರಣಪ್ಪ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಖಜಾನಾಕಾರಿಗಳಾದ ಶೇಖ ಮಹಿಬೂಬಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗುರುಲಿಂಗಪ್ಪ ಮಿಣಜಗಿ, ತಹಶೀಲ್ದಾರ್‌ರಾದ ಶಿವರಾಜ, ಸಂಗಮೇಶ ಜಿಡಗೆ ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಮೊಬೈಲ್ ಬಳಕೆ ನಿಷೇಧ
ಪರೀಕ್ಷಾ ಕೇಂದ್ರದ ಹೊರಗೆ ಸುರಕ್ಷತೆಗಾಗಿ ಪೊಲೀಸ್ ಬಂದೋಬಸ್ತ್ನ್ನು ಹತ್ತಿರದ ಠಾಣೆಗಳಿಂದ ಪಡೆಯಲು ಮುಂಚಿತವಾಗಿ ಕ್ರಮ ಕೈಗೊಂಡಿರಬೇಕು. ಜಿಲ್ಲೆಯಲ್ಲಿ ಒಟ್ಟು 6 ಜಾಗೃತದಳಗಳನ್ನು ರಚಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಾಗಲಿ, ಸಿಬ್ಬಂದಿಯವರಾಗಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ವಾಟರ್ ಬಾಯ್‌ಗಳ ನೇಮಕವನ್ನು ರದ್ದುಪಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು 2, 3 ಕೊಠಡಿಗಳ ಅಂತರದಲ್ಲಿ ಕೊಠಡಿಯ ಹೊರಗೆ ವ್ಯವಸ್ಥೆ ಮಾಡಬೇಕು. ಆಯಾ ದಿನದ ವಿಷಯ ಪರೀಕ್ಷೆಗಳು ಮುಗಿದ ತಕ್ಷಣವೇ ಉತ್ತರ ಪತ್ರಿಕೆಗಳನ್ನು ಕ್ರೂಢೀಕರಿಸಿ ಬಂಡಲುಗಳನ್ನು ಸೀಲು ಮಾಡಿ ರವಾನಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.