ನೈಜ ಪತ್ರಿಕಾ ಧರ್ಮ ಉಳಿಸಲು ಒಗ್ಗಟ್ಟಿನ ಪ್ರಯತ್ನ ಅಗತ್ಯ
ಪತ್ರಕರ್ತರ ಸಂಘದ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸಲಿ
Team Udayavani, Jul 8, 2019, 4:52 PM IST
ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಮಾತನಾಡಿದರು.
ಯಾದಗಿರಿ: ನೈಜ ಪತ್ರಿಕಾ ಧರ್ಮ ಉಳಿಸಲು ಪತ್ರಕರ್ತರು ಒಗ್ಗೂಡಿ ಶ್ರಮಿಸಬೇಕಾದ ಅಗತ್ಯ ಇಂದು ಹೆಚ್ಚಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಜಿ. ಸಿದ್ದೇಶ್ವರಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ರವಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ, ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಇಂದು ಸಂಕೀರ್ಣ ಕಾಲಘಟ್ಟದಲ್ಲಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ಆದಾಗ್ಯೂ ಸಹ ಪತ್ರಿಕೆಗೆ ತನ್ನದೇ ಆದ ಮಹತ್ವ ಉಳಿಸಿಕೊಂಡಿದೆ. ಪ್ರಸ್ತುತ ನಾಯಿಕೊಡೆಗಳಂತೆ ಹಬ್ಬಿರುವ ಮಾಧ್ಯಮಗಳ ಹೆಸರಿನ ಕೆಲವು ಖೊಟ್ಟಿ ವ್ಯಕ್ತಿಗಳು ಮಾಧ್ಯಮದವರು ಎಂದು ಹೇಳಿ ನುಸುಳಿ ಮಾಧ್ಯಮಗಳ ವಾತಾವರಣ ಕೆಡಿಸುವ ಯತ್ನದಲ್ಲಿರುವವರ ಕುರಿತು ಎಲ್ಲರೂ ಜಾಗೃತರಾಗಿರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ. ಜಗದೀಶ ಮಾತನಾಡಿ, ಸಮಸ್ಯೆಗಳನ್ನು ವಾರ್ತಾ ಇಲಾಖೆಗೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡಿದರು.
ಪತ್ರಿಕಾ ಭವನ 70 ಲಕ್ಷ ರೂ. ವೆಚ್ಚ ಮಾಡಿ ಕಟ್ಟಿಸಿದ್ದು ಸಾರ್ಥಕವಾಗಬೇಕಾದರೆ ಇನ್ನಷ್ಟು ಅದಕ್ಕೆ ಆಧುನಿಕ ಸ್ಪರ್ಷ ನೀಡಲು ಆಗುವ ವೆಚ್ಚವನ್ನು ಜಿಲ್ಲಾಡಳಿತ ವಾರ್ತಾ ಇಲಾಖೆ ಭರಿಸಿ ತಕ್ಷಣ ಕಾರ್ಯಕ್ಕೆ ಚಾಲನೆ ನೀಡಬೇಕು. ಪತ್ರಕರ್ತರ ಸಂಘದ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸಬೇಕೆಂದು ಮನವಿ ಮಾಡಿದರು.
ಹಿರಿಯ ಪತ್ರಕರ್ತ ಅನಿಲ ದೇಶಪಾಂಡೆ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಧರ ಸಿನ್ನೂರು ಇತರರು ಇದ್ದರು. ವೈಜನಾಥ ಹಿರೇಮಠ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು. ಕುಮಾರಸ್ವಾಮಿ ಕಲಾಲ್ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.