ಹೊಸ ಮತದಾರರ ಸೇರ್ಪಡೆ ಮಾಡಿ
ದೋಷರಹಿತ ಮತದಾರ ಪಟ್ಟಿ ತಯಾರಿಕೆಯಲ್ಲಿ ಬಿಎಲ್ಒ ಪಾತ್ರ ಹಿರಿದು: ಕೂರ್ಮಾರಾವ್
Team Udayavani, Aug 30, 2019, 11:37 AM IST
ಯಾದಗಿರಿ: ಯಾದಗಿರಿ ಮತ್ತು ಗುರುಮಠಕಲ್ ಕ್ಷೇತ್ರಗಳ ಬೂತ್ ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿದರು.
ಯಾದಗಿರಿ: ಅನರ್ಹ ಮತದಾರರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟು, ಅರ್ಹ ಮತದಾರರನ್ನು ಸೇರ್ಪಡೆ ಮಾಡುವ ಮೂಲಕ ದೋಷರಹಿತ ಮತದಾರ ಪಟ್ಟಿ ತಯಾರಿಕೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಗುರುವಾರ ಯಾದಗಿರಿ ಮತ್ತು ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಬೂತ್ ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಪರಿಷ್ಕರಣೆ ಅಗತ್ಯವಾಗಿದೆ. ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗೆ ಒಂದೇ ಪಾರ್ಟ್ ನೀಡಲಾಗುವುದು. ಅವರು ಸ್ಥಳೀಯವಾಗಿ ಸಂಪೂರ್ಣ ಮಾಹಿತಿ ಹೊಂದಿರಬೇಕು. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಸೇರ್ಪಡೆ ಮಾಡಲು ಮೊದಲು ಅವರೇ ಆ ವ್ಯಕ್ತಿಯ ಸಂಪೂರ್ಣ ಮಾಹಿತಿ ಪರಿಶೀಲಿಸಿ ಸೇರ್ಪಡೆಗೆ ಶಿಫಾರಸು ಮಾಡಬೇಕು. ಸ್ಥಳೀಯವಾಗಿ ಯಾರಾದರೂ ಮೃತಪಟ್ಟರೆ ಅಂತಹವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲು ಮಾಹಿತಿ ನೀಡಬೇಕು. 18 ವರ್ಷ ಪೂರ್ಣಗೊಳಿಸಿದ ಹೊಸ ಮತದಾರರನ್ನು ಸೇರ್ಪಡೆ ಮಾಡಬೇಕು. ಸ್ಥಳಾಂತರ ಹೊಂದಿದ ಮತದಾರರನ್ನು ಸೂಕ್ತ ಅರ್ಜಿ ನಮೂನೆ ಮೂಲಕ ಕೈ ಬಿಡಬೇಕು. ಬಿಎಲ್ಒಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ವಿಕಲಚೇತನ, ಮಹಿಳಾ ಮತ್ತು ಪುರುಷ ಮತದಾರರ ನಿಖರ ಅಂಕಿ-ಅಂಶ ತಿಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸೆಪ್ಟೆಂಬರ್ 1ರಿಂದ 30ರ ವರೆಗೆ ಮತದಾರರ ಮನೆಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು. ಜನವರಿ 1, 2020ಕ್ಕೆ 18 ವರ್ಷ ಪೂರೈಸುವ ಯುವಕ-ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು. ಅರ್ಹರಾಗಿರುವ ಯಾರೂ ಕೂಡ ಮತದಾರ ಪಟ್ಟಿಯಿಂದ ಹೊರಗುಳಿಯಬಾರದು. ಬಿಎಲ್ಒ ಅವರು ನೀಡಿದ ಮಾಹಿತಿಯನ್ನು ಮೇಲ್ವಿಚಾರಕರು ಪರಿಶೀಲನೆ ನಡೆಸವಬೇಕೆಂದು ಸೂಚಿಸಿದರು.
ಮತದಾರರ ವಿಶೇಷ ನೋಂದಣಿ ಅಭಿಯಾನವನ್ನು ನವೆಂಬರ್ 2, 3 ಮತ್ತು 9, 10ರಂದು ನಡೆಸಲಾಗುವುದು. ಡಿಸೆಂಬರ್ 15ರೊಳಗೆ ಸೇರ್ಪಡೆ ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುವುದು. ಡಿಸೆಂಬರ್ 25ರೊಳಗೆ ಅಂತಿಮ ಪಟ್ಟಿ ಪ್ರಕಟಣೆಗೆ ಆಯೋಗದ ಅನುಮತಿ ಪಡೆಯಲಾಗುವುದು. ಡಿಸೆಂಬರ್ 31ರೊಳಗೆ ಮತದಾರರ ಪಟ್ಟಿ ಮುದ್ರಣಗೊಳ್ಳಲಿದೆ. 2020ರ ಜನವರಿ 1ರಿಂದ ಜ.15ರೊಳಗೆ ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಅವರು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಮಾತನಾಡಿ, ಪ್ರತಿ ಮತಗಟ್ಟೆಗೆ ಒಬ್ಬರಂತೆ ಬಿಎಲ್ಒ ಅವರನ್ನು ನೇಮಕ ಮಾಡಲಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ನಮೂದಿಸಲು ಪ್ರತಿಯೊಬ್ಬರು ತಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಮತದಾರರ ಪಟ್ಟಿ ಪಾರದರ್ಶಕವಾಗಿರಲು ಬಿಎಲ್ಒ ಅವರಲ್ಲಿ ಪ್ರತಿ ಮತದಾರರ ಬಗ್ಗೆ ಮಾಹಿತಿ ಇರಬೇಕು. ಶುದ್ಧ ಮತದಾರರ ಪಟ್ಟಿ ತಯಾರಿಸುವಲ್ಲಿ ಮತದಾರರ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ದೂರು, ಆಕ್ಷೇಪಣೆಗಳು ಬರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಎಲ್ಒಗಳು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಅರ್ಜಿ ನಮೂನೆ 6, 7, 8 ಹಾಗೂ 8ಎ ಕುರಿತು ಮಾಹಿತಿ ಹೊಂದಿರಬೇಕು. ಹಾಗೂ ಮತದಾರರ ಭಾವಚಿತ್ರದ ಪರಿಶೀಲನೆ, ಭೌತಿಕ ವಿವರಗಳ ನಮೂದು ಸೇರಿದಂತೆ ಭಾಗವಾರು ಜನಸಂಖ್ಯೆಯ ಮಾಹಿತಿ ಸಂಗ್ರಹಿಸುವುದು ಅವರ ಕಾರ್ಯವಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಹಫೀಜ್ ಪಟೇಲ್ ಮಾತನಾಡಿ, ಅಚ್ಚುಕಟ್ಟಾದ ಮತದಾರರ ಪಟ್ಟಿ ತಯಾರಿಕೆಗೆ ಬಿಎಲ್ಒ ಅವರ ಪಾತ್ರ ಅಗತ್ಯವಾಗಿದ್ದು, ಅನರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುವುದು, ಸ್ಥಳಾಂತರ, ಸೇರ್ಪಡೆ, ಮತದಾರರ ವಿವರ ತಿದ್ದುಪಡಿ, ಕುಟುಂಬದ ಸದಸ್ಯರ ವಿವರ ಪಡೆದು ಪಟ್ಟಿಯಲ್ಲಿ ನಮೂದಿಸಬೇಕು. ಮನೆ ಮನೆಗೆ ಭೇಟಿ ನೀಡುವಾಗ ಬಿಎಲ್ಒ ಅವರಿಗೆ ಒದಗಿಸಿದ ನಮೂನೆ 1ರಿಂದ 8ರಲ್ಲಿ ಸರಿಯಾದ ಮಾಹಿತಿ ಪಡೆದು ಸಹಾಯಕ ಮತದಾರರ ನೋಂದಣಾಧಿಕಾರಿ ಅವರ ಕಚೇರಿಗೆ ಸಲ್ಲಿಸಬೇಕು ಎಂದು ಹೇಳಿದರು.
ವೋಟರ್ ಹೇಲ್ಪ್ಲೈನ್, ಮೊಬೈಲ್ ಆ್ಯಪ್, ಎನ್‌ವಿಎಸ್‌ಪಿ ಪೋರ್ಟ್‌ಲ್, ಕಾಮನ್ ಸರ್ವೀಸ್ ಸೆಂಟರ್, ಮತದಾರರ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿರುವ ವೋಟರ್ ಫೆಸಿಲಿಟೇಷನ್ ಕೇಂದ್ರದಲ್ಲಿ ಮತದಾರರು ತಮ್ಮ ಹೆಸರನ್ನು ಪಟ್ಟಿಯಲ್ಲಿ ಇರುವ ಕುರಿತು ಖಚಿತಪಡಿಸಿಕೊಳ್ಳಲು ತಿಳಿಸಬೇಕು ಎಂದರು.
ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಅರುಣಕುಮಾರ ಕುಲಕರ್ಣಿ, ತಹಶೀಲ್ದಾರ್ ಚನ್ನಮಲ್ಲಪ್ಪ ಗಂಟಿ, ಚುನಾವಣಾ ಶಾಖೆ ಶಿರಸ್ತೇದಾರ್ ಪರಶುರಾಮ, ಖಲೀಲ್ ಸಾಬ್, ಮೇಲ್ವಿಚಾರಕರು ಹಾಗೂ 391 ಬೂತ್ ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.