ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿವಿಎಸ್ ಧರಣಿ
Team Udayavani, Aug 29, 2017, 5:41 PM IST
ಶಹಾಪುರ: ತಾಲೂಕಿನ ಸಮಾಜ ಕಲ್ಯಾಣ ಬಿಸಿಎಂ ಇಲಾಖೆಗಳ ಅಡಿಯಲ್ಲಿ ನಡೆಯುತ್ತಿರುವ ವಸತಿ ನಿಲಯಗಳಿಗೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ನಗರದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿತು. ತಾಲೂಕಿನ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಎಸ್‌ಸಿ-ಎಸ್‌ಟಿ ವಸತಿ ನಿಲಯಗಳು ಮೂಲ ಸೌಲಭ್ಯವಿಲ್ಲದೆ ನರಳುತ್ತಿವೆ ಎಂದು ಆರೋಪಿಸಿದರು. ವಸತಿ ನಿಲಯಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸಮರ್ಪಕ ವಿದ್ಯುತ್ ಸರಬರಾಜು ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದೆ ಪ್ರತಿ ವಸತಿ ನಿಲಯದಲ್ಲಿ ವಾಸಿಸುವ ವಿದ್ಯಾರ್ಥಿಗಳು ಮೂಲ ಸೌಕರ್ಯದಿಂದ ವಂಚಿತಗೊಂಡಿದ್ದಾರೆ. ಈ ಕುರಿತು ಮೇಲ್ವಿಚಾರಕರಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸಾಬೂನು, ಎಣ್ಣೆ ಯಾವುದೇ ವಸ್ತುಗಳು ಸಮರ್ಪಕವಾಗಿ ವಿತರಿಸುವುದಿಲ್ಲ. ಊಟದಲ್ಲೂ ತಾರತಮ್ಯ ಇದೆ. ಒಟ್ಟಾರೆ ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ನಗರದ ಹೊರವಲಯಗಳಲ್ಲಿರುವ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಕಾಲೇಜಿಗೆ ಬರವದಾದಲ್ಲಿ ಮಾಸಿಕ ನೂರಾರು ರೂಗಳನ್ನು ಖರ್ಚು ಮಾಡಬೇಕಾದಂತ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಬಹುತೇಕ ವಸತಿ ನಿಲಯಗಳು ಅವ್ಯವಸ್ಥೆಗಳ ಆಗರವಾಗಿವೆ ಎಂದು ಆರೋಪಿಸಿದರು. ಅಲ್ಲದೆ ಪ್ರಸಕ್ತ ವರ್ಷದಲ್ಲಿ ಭೀಮರಾಯನ ಗುಡಿಗೆ ಮಂಜೂರಾದ ವಸತಿ ನಿಲಯವನ್ನು ಸ್ಥಳೀಯವಾಗಿ ನಗರದಲ್ಲಿಯೇ ನಿರ್ಮಾಣ ಮಾಡಬೇಕು. ಮತ್ತು ಬಹುತೇಕ ವಸತಿ ನಿಲಯಗಳಿಗೆ ಸ್ವಂತ ಕಟ್ಟಡವಿರದ ಕಾರಣ ತೊಂದರೆಯಾಗಿದೆ. ಕಾರಣ ಕೂಡಲೇ ಸರ್ಕಾರಿ ವಸತಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ತಾಲೂಕಿನ ಎಲ್ಲಾ ವಸತಿ ನಿಲಯಗಳಿಗೆ ಕುಡಿಯುವ ನೀರು, ಶೌಚಾಲಯ ಮತ್ತು ಗ್ರಂಥಾಲಯಗಳ ಅನುಕೂಲ ಕಲ್ಪಿಸಬೇಕು. ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತವಾಗಿ ವಿತರಿಸಬೇಕೆಂದು ಮನವಿ ಮಾಡಿದರು.
ಮುಂಚಿತವಾಗಿ ವಿದ್ಯಾರ್ಥಿಗಳು ಸಿಬಿ ಕಮಾನದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು. ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಸೋಮಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಿ.ವಿ.ಎಸ್. ಜಿಲ್ಲಾ ಸಂಯೋಜಕ ಪರಶುರಾಮ. ಜಿಲ್ಲಾ ಉಪಾಧ್ಯಕ್ಷ ಸೈಯದ್ ಮೂಸಾ, ಜಿಲ್ಲಾಧ್ಯಕ್ಷ ಸಿದ್ದಣ್ಣ ಪೂಜಾರಿ, ಗುರುಲಿಂಗಪ್ಪ, ಅಮಾತೆಪ್ಪ ನಾಟೇಕಾರ, ಸಂತೋಷ ಗುಡಿಮನಿ, ಶ್ರೀನಿವಾಸ ಗೊಬ್ಬೂರ, ಶ್ರವಣಕುಮಾರ, ಮೈನೋದ್ದೀನ್, ಶಕುಂತಲಾ, ಮಲ್ಲಣ್ಣ, ಶರಣು ಮದ್ರಿಕಿ, ಮಲ್ಲು ಸಲಾದಪುರ, ಮಲ್ಲು ಆರಬೋಳ, ಸಂತೋಷ ದೋರನಳ್ಳಿ ಸೇರಿದಂತೆ ವಿವಿಧ ವಸತಿ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.